ADVERTISEMENT

ಗುರುರಾಜ ಕರಜಗಿ ಅಂಕಣ- ಬೆರಗಿನ ಬೆಳಕು| ಯಾವುದೂ ವ್ಯರ್ಥವಲ್ಲ

ಡಾ. ಗುರುರಾಜ ಕರಜಗಿ
Published 30 ಮಾರ್ಚ್ 2022, 19:30 IST
Last Updated 30 ಮಾರ್ಚ್ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಗರಡಿ ಸಾಮಿಂದೆ ನೀನೆದುರಾಳ ಗೆಲದೊಡೇಂ? |
ಬರದಿಹುದೆ ನಿನಗನಿತು ಕಾಯಾಂಗಪಟುತೆ? ||
ವರ ಸಧ್ಯಕ್ಕಿಲ್ಲದೊಡೆ ಬರಿದಾಗುವುದೆ ಪೂಜೆ? |
ಪರಿಶುದ್ಧ ಮನವೆ ವರ - ಮಂಕುತಿಮ್ಮ || 596 ||

ಪದ-ಅರ್ಥ: ಸಾಮಿಂದೆ=ವ್ಯಾಯಾಮದಿಂದೆ, ನೀನೆದುರಾಳ=ನೀನು+ಎದುರಾಳ (ಎದುರಾಳಿ), ಗೆಲದೊಡೇಂ=ಗೆಲ್ಲದಿದ್ದರೇನಾಯಿತು, ನಿನಗನಿತು=ನಿನಗೆ+ಅನಿತು(ಸ್ವಲ್ಪ), ಕಾಯಾಂಗಪಟುತೆ=ದೇಹದ ಅಂಗಗಳ ಸಾಮರ್ಥ್ಯ, ಬರಿದಾಗುವುದೆ=ಬರಿದು+ಆಗುವುದೆ.

ವಾಚ್ಯಾರ್ಥ: ಗರಡಿಯಲ್ಲಿ ಮಾಡಿದ ವ್ಯಾಯಾಮದಿಂದ ನೀನು ಕುಸ್ತಿಯಲ್ಲಿ ಎದುರಾಳಿಯನ್ನು ಗೆಲ್ಲದಿದ್ದರೆ ಏನಾಯಿತು? ವ್ಯಾಯಾಮದಿಂದ ನಿನ್ನ ದೇಹಶಕ್ತಿಯಾದರೂ ವೃದ್ಧಿಯಾಯಿತಲ್ಲ. ತಕ್ಷಣಕ್ಕೆ ವರ ಸಿಕ್ಕದಿದ್ದರೆ, ಪೂಜೆ ವ್ಯರ್ಥವೆ? ಮನಸ್ಸು ಪರಿಶುದ್ಧವಾಗುವುದೆ ವರ.

ADVERTISEMENT

ವಿವರಣೆ: ಟೆಕೋ ಜಪಾನಿನ ಟೋಕಿಯೊದ ಹೊರಭಾಗದ ಕೊಳಚೆ ಪ್ರದೇಶದಲ್ಲಿ ಬೆಳೆದ ಹುಡುಗ. ಬಡತನ ಯಾವ ಮಟ್ಟದ್ದೆಂದರೆ ಆತ ಪ್ರತಿದಿನ ಹದಿನಾಲ್ಕು ಗಂಟೆ ಕೆಲಸ ಮಾಡದಿದ್ದರೆ ಮನೆ ನಡೆಯುತ್ತಿರಲಿಲ್ಲ. ಮನೆಯಲ್ಲಿ ತಾಯಿ ಮತ್ತು ತಂಗಿ ಇಬ್ಬರೇ. ಮೂವರ ಹೊಟ್ಟೆಗೆ ಬೇಕಾಗುವಷ್ಟನ್ನು ದುಡಿಯುವುದರಲ್ಲಿ ಟೆಕೋನ ದಿನಗಳು ಮುಗಿದು ಹೋಗುತ್ತಿದ್ದವು. ಆತನಿಗೆ ಶಾಲೆಗೆ ಹೋಗುವುದಕ್ಕೆ ಸಾಧ್ಯವೇ ಆಗಲಿಲ್ಲ. ಮನೆಯಲ್ಲಿ ತಾಯಿಗೆ ಅದು ಹೇಗೋ ಸಾಹಿತ್ಯದಲ್ಲಿ ಆಸಕ್ತಿ. ಅವಳ ನೆನಪಿನ ಶಕ್ತಿಯೂ ಅಗಾಧ. ಆಕೆ ಅನೇಕ ಜಪಾನೀ ಕವಿಗಳ ಕಾವ್ಯಗಳನ್ನು ನೆನಪಿನಿಂದ ಹೇಳಬಲ್ಲವಳಾಗಿದ್ದಳು. ಆಕೆಯ ಜಪಾನೀ ಭಾಷೆ ತುಂಬ ಶುದ್ಧವಾದದ್ದು ಮತ್ತು ಸ್ಪಷ್ಟವಾದದ್ದು. ಆಕೆಯ ಮಾತು ಕೇಳಿ ಕೇಳಿ ಟೆಕೋನ ಜಪಾನೀ ಮಾತುಗಾರಿಕೆಯೂ ಬಹಳ ಚೆನ್ನಾಗಿದ್ದು ಮೆಚ್ಚುಗೆ ಪಡೆದಿತ್ತು. ಅವನು ಒಬ್ಬರ ಮನೆಗೆಲಸಕ್ಕೆ ಸೇರಿಕೊಂಡ. ಅವರು ಬ್ರಿಟಿಷ್‌ ದಂಪತಿಗಳು. ಅವರಿಗೆ ಜಪಾನೀ ಭಾಷೆ ಬರದು. ಈತ ಹರಕುಮುರುಕು ಇಂಗ್ಲಿಷ್‌ನಲ್ಲಿ ಅವರಿಗೆ ಜಪಾನೀ ಭಾಷೆ ಕಲಿಸಿದ. ಬದಲಾಗಿ ಅವನಿಗೆ ಅವರು ಇಂಗ್ಲಿಷ್ ಭಾಷೆಯನ್ನು ಕಲಿಸಿದರು. ಅವನು ಅದರಲ್ಲಿ ಎಷ್ಟು ಆಸಕ್ತಿ ವಹಿಸಿದನೆಂದರೆ ಅವನೊಬ್ಬ ಇಂಗ್ಲಿಷ್ ಪ್ರಾಧ್ಯಾಪಕರಂತೆ ಮಾತನಾಡುತ್ತಿದ್ದ. ಇದರಿಂದ ಏನು ಪ್ರಯೋಜನ ಎಂದು ಜನ ತಮಾಷೆ ಮಾಡುತ್ತಿದ್ದರು. ಮುಂದೆ ಆತ ಮನೆಗೆಲಸ ಮಾಡುವುದನ್ನು ಬಿಟ್ಟು ಇಂಗ್ಲೀಷ್ ಮಾತನಾಡುವ ಪ್ರವಾಸಿಗಳಿಗೆ ಜಪಾನ್ ತೋರಿಸುವ ಮಾರ್ಗದರ್ಶಿಯಾದ. ಅವನು ಕಲಿತ ಇಂಗ್ಲಿಷ್ ಭಾಷೆಯ ಸೊಗಸಿಗೆ ಬಹುಮಾನವೆಂದಂತೆ ಅವನನ್ನು ಜಪಾನಿನ ರಾಜರಾಗಿದ್ದ ಹಿರೋಹಿಟೋರವರಿಗೆ ದುಭಾಷಿಯೆಂದು ನೇಮಕ ಮಾಡಿದರು. ಆತ ಕೇವಲ ದುಭಾಷಿಯಾಗದೆ ರಾಜರಿಗೆ ಇಂಗ್ಲಿಷ್‌ ಕಲಿಸುವ ಪ್ರಾಧ್ಯಾಪಕನೂ, ಆತ್ಮೀಯನೂ ಆದ.

ಈ ಕಗ್ಗ ಹೇಳುತ್ತದೆ, ಕುಸ್ತಿಯನ್ನು ಅಭ್ಯಾಸ ಮಾಡಲು ಗರಡಿಗೆ ಹೋಗಿ ಸಾಮುವರಸೆಗಳನ್ನೆಲ್ಲ ಮಾಡಿದರೂ ಕುಸ್ತಿಯ ಪಂದ್ಯದಲ್ಲಿ ಸೋತರೆ ನಷ್ಟವೇನಿಲ್ಲ. ಪ್ರಶಸ್ತಿ ಬರದಿರಬಹುದು, ಆದರೆ ಕುಸ್ತಿಯ ಪ್ರಯತ್ನದಿಂದಾಗಿ ನಿನ್ನ ದೇಹ ಬಲಶಾಲಿಯಾಗಿಲ್ಲವೆ? ಟೆಕೋ ಇಂಗ್ಲೀಷ್ ಕಲಿತದ್ದು ಯಾವ ಪ್ರಯೋಜನಕ್ಕೆ ಎಂದು ತಮಾಷೆ ಮಾಡಿದ್ದರು. ಆದರೆ ಅವನ ಇಂಗ್ಲೀಷನಲ್ಲಿ ಪರಿಶ್ರಮ ರಾಜನ ಬಳಿಗೆ ಕರೆದೊಯ್ದಿತು. ಯಾವ ಪ್ರಯತ್ನವೂ ತಕ್ಷಣವೇ ಫಲ ನೀಡುವುದಿಲ್ಲ. ಫಲ ಬರಲಿಲ್ಲವೆಂದು ಪೂಜೆ ಮಾಡಿದ್ದು ವ್ಯರ್ಥವೆ? ಪೂಜೆ ಮಾಡಿದರೆ ಫಲ ತಡವಾಗಿ ಬಂದೀತು: ಮಾಡದೆ ಹೋದರೆ ಫಲದ ಆಸೆಯೇ ಇಲ್ಲವಲ್ಲ. ಪೂಜೆ ಮಾಡುವಾಗ ಮನಸ್ಸಾದರೂ ಶುದ್ಧವಾಗಿತ್ತಲ್ಲ. ಫಲ ದೊರಕದೆ ಹೋದರೂ ಮನಸ್ಸು ಶುದ್ಧವಾಗಿ ಉಳಿದದ್ದೇ ಪೂಜೆಯ ವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.