ADVERTISEMENT

ಬೆರಗಿನ ಬೆಳಕು: ಸರ್ವಾತ್ಮ ಭಾವ

ಡಾ. ಗುರುರಾಜ ಕರಜಗಿ
Published 8 ಜನವರಿ 2023, 19:30 IST
Last Updated 8 ಜನವರಿ 2023, 19:30 IST
   

ಮೊಳೆವ ಸಸಿಯೊಳು ನಾನು, ತೊಳಗುವಿನನೊಳು ನಾನು |
ಬೆಳೆವ ಶಿಶುವೊಳು ನಾನು, ಕೆಳೆನೋಟ ನಾನು ||
ಕಳಕಳಿಸುವೆಲ್ಲಮುಂ ನಾನೆಂದು ಭಾವಿಸುತೆ |
ಒಳಗೂಡು ವಿಶ್ವದಲಿ - ಮಂಕುತಿಮ್ಮ || 795 ||

ಪದ-ಅರ್ಥ: ಮೊಳೆವ=ಮೊಳೆಯುವ, ತೊಳಗುವಿನನೊಳು=ತೊಳಗುವ(ಬೆಳಗುವ)+ಇನಂನ(ಸೂರ್ಯನ)+ಒಳು(ಒಳಗೆ), ಕೆಳೆನೋಟ=ಸ್ನೇಹದ ನೋಟ, ಕಳಕಳಿಸುವೆಲ್ಲಮುಂ=ಕಳಕಳಿಸುವ(ಹರ್ಷಿಸುವ, ಮನೋಹರವಾಗಿ ಶಬ್ದಮಾಡುವ)
+ಎಲ್ಲಮುಂ(ಎಲ್ಲವೂ), ಒಳಗೂಡು=ಸೇರಿಕೋ.

ವಾಚ್ಯಾರ್ಥ: ಚಿಗುರುವ ಸಸಿಯಲ್ಲಿ ನಾನು, ಬೆಳಗುವ ಸೂರ್ಯನಲ್ಲಿ ನಾನು, ಬೆಳೆಯುವ ಮಗುವಿನಲ್ಲಿ, ಸ್ನೇಹದ ನೋಟದಲ್ಲಿ, ಹರ್ಷಿಸುವ ಪ್ರತಿಯೊಂದರಲ್ಲಿ ನಾನು ಇದ್ದೇನೆ ಎಂದು ಭಾವಿಸುತ್ತ ವಿಶ್ವದಲ್ಲಿ ಸೇರಿಕೋ.

ADVERTISEMENT

ವಿವರಣೆ: ಅನೇಕ ಉಪನಿಷತ್ತುಗಳ ಸಾರವನ್ನು ನಾಲ್ಕೇ ಸಾಲುಗಳಲ್ಲಿ ವರ್ಣಿಸುವ ಈ ಕಗ್ಗ ಬಹುದೊಡ್ಡ ತತ್ವವೊಂದನ್ನು ತಿಳಿಸುತ್ತದೆ. ಉಪನಿಷತ್ತುಗಳಲ್ಲೆಲ್ಲ ಒಂದು ಊಹನೆ ಸುಸ್ಪಷ್ಟವಾಗಿದೆ. ಅಸ್ವಿತ್ವವುಳ್ಳ ಪ್ರತಿಯೊಂದೂ, ಅದು ದ್ರವ್ಯವಾಗಲಿ, ಚೇತನವಾಗಲಿ, ಯಾವುದೇ ಜೀವಿಯಾಗಲಿ, ಆಕಾಶಕಾಯಗಳಾಗಲಿ ಒಂದೇ ತಳಹದಿಯನ್ನು ಹೊಂದಿವೆ. ಈ ತಳಹದಿ ಇಂದ್ರಿಯಾನುಭವವನ್ನು ಮೀರಿದ್ದು, ಅಪರಿಮಿತವಾದದ್ದು. ನಿಜಾರ್ಥದಲ್ಲಿ, ಅಸ್ತಿತ್ವವುಳ್ಳದ್ದು ಎಂದರೆ ಇದು ಮಾತ್ರ. ಇದನ್ನೇ ಬ್ರಹ್ಮ ಎಂದು ದೃಷ್ಟಾರರು ಕರೆದರು. ಇದಕ್ಕೆ ನಿರೂಪಣೆ ಕೊಡುವುದು ಅಸಾಧ್ಯ. ಯಾಕೆಂದರೆ ಇದುಭಾಷೆಯನ್ನು ಮೀರಿದ್ದು. ಈ ಅತೀತದ ನೆಲೆಗಟ್ಟು ಅಸ್ತಿತ್ವದ ಪ್ರತಿಯೊಂದರಲ್ಲೂ ಒಂದೇ ಆಗಿದೆ. ಛಾಂದೋಗ್ಯ ಉಪನಿಷತ್ತು, “ಸಯ ಏಷೋ s ಣಿಮಾ ಐತದಾತ್ಮ್ಯಂಮಿದಂ ಸರ್ವಂ ತತ್ ಸತ್ಯಂ ಸ ಆತ್ಮಾ ತತ್ವಂ ಮಸಿ ಶ್ವೇತಕೇತೋ” ಎನ್ನುತ್ತದೆ. “ಯಾವುದು ಸೂಕ್ಷ್ಮತಮವಾದ ಈ ಜಗತ್ತಿನ ಮೂಲವೊ, ಅದರಿಂದಲೇ ಈ ಜಗತ್ತೆಲ್ಲ ಆತ್ಮವಂತವಾಗಿದೆ. ಅದು ಸತ್ಯ. ಅದು ಆತ್ಮ. ಓ ಶ್ವೇತಕೇತು, ನೀನು ಅದೇ ಆಗಿರುವೆ”. ಈ ಹೇಳಿಕೆ ಉಪನಿಷತ್ತಿನಲ್ಲಿ ಒಂಭತ್ತು ಬಾರಿ ಬರುತ್ತದೆ. ಇದರ ಒಟ್ಟು ಅರ್ಥ, ಜಗತ್ತಿನ ಹಿಂದಿರುವ ಸತ್ಯವೇ ಪ್ರತಿಯೊಂದು ಅಸ್ತಿತ್ವದ ಹಿಂದೆ ಇದೆ. ಅವೆರಡೂ ಸ್ವರೂಪತ: ಒಂದೇ, ಬೇರೆಯಲ್ಲ. ನಾವು ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಕಂಡಾಗ ಮೊದಲು ಸ್ಥೂಲ ರೂಪ ಕಾಣುತ್ತದೆ. ಅದನ್ನು ವಿಶ್ಲೇಷಿಸುತ್ತ ಹೋದರೆ ಅದು ಪರಮಾಣುಗಳಿಂದ ಕೂಡಿರುವುದಾಗಿ ತಿಳಿಯುತ್ತದೆ. ಆ ಪರಮಾಣುಗಳನ್ನು ವಿಶ್ಲೇಷಿಸುತ್ತ ಹೋದರೆ ಅವು ಶಕ್ತಿಕಣಗಳಿಂದಾಗಿವೆ (energy particles) ಎಂದು ಗೋಚರವಾಗುತ್ತದೆ. ಅಂದರೆ ನಮ್ಮ ಇಂದ್ರಿಯಗಳಿಗೆ ಗೋಚರವಾಗುವ ಪ್ರತಿಯೊಂದು ವಸ್ತುವೂ, ನಾವೂ, ಒಂದೇ ಚೈತನ್ಯತತ್ವದಿಂದ ಆದವರು. ಒಬ್ಬ ನಟ ಬೇರೆ ಬೇರೆ ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡುತ್ತಾನೆ. ಅವನು ವಹಿಸುವ ಪಾತ್ರಗಳ ವೇಷಭೂಷಣಗಳನ್ನು ತೆಗೆದುಬಿಟ್ಟರೆ ಉಳಿಯುವವನು ಒಬ್ಬನೇ ನಟ. ಅವನ ಪರಿಚಯವಿರುವವರು ಅವನ ಬೇರೆ ಬೇರೆ ಪಾತ್ರಗಳನ್ನು ನೋಡುತ್ತಾರೆ ಮತ್ತು ಪಾತ್ರಗಳ ಹಿಂದಿರುವ ನಟನನ್ನು ನೋಡುತ್ತಾರೆ.

ಈ ತತ್ವವನ್ನು ಕಗ್ಗ ತುಂಬ ಸರಳವಾಗಿ ಹೇಳುತ್ತದೆ. ಮೊಳೆಯುವ ಸಸಿಯಲ್ಲಿ, ಬೆಳಗುವ ಸೂರ್ಯನಲ್ಲಿ, ಬೆಳೆಯುವ ಮಗುವಿನಲ್ಲಿ, ಸ್ನೇಹಿತರಲ್ಲಿ, ಸಂತೋಷಗೊಳಿಸುವ ಪ್ರತಿಯೊಂದರಲ್ಲಿ ಇರುವುದು ನಾನೇ. ಇದೇ ಏಕಾತ್ಮಭಾವ. ಎಲ್ಲವೂ ನಾನೇ, ನಾನೇ ಎಲ್ಲದರಲ್ಲೂ ಎಂಬ ಸರ್ವೈಕ್ಯವನ್ನು ಸಾಧಿಸಿದಾಗ ವಿಶ್ವಜೀವನ ಸುಂದರಮಯ ವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.