ADVERTISEMENT

ಬೆರಗಿನ ಬೆಳಕು: ಮರುಜನ್ಮ ಹೊಸ ಛತ್ರ

ಡಾ. ಗುರುರಾಜ ಕರಜಗಿ
Published 5 ಮಾರ್ಚ್ 2023, 19:30 IST
Last Updated 5 ಮಾರ್ಚ್ 2023, 19:30 IST
   

ಮೃತ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ಪ |
ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ||
ಸಾತ್ವ್ತಿಕದಿ ಬಾಳ್ದವಂಗೆತ್ತಲೇಂ ಭಯವಿಹುದು? |
ಸತ್ರ ಹೊಸದಿಹುದು ನಡೆ – ಮಂಕುತಿಮ್ಮ || 835 ||

ಪದ-ಅರ್ಥ: ದೇಶಾಂತರಕ್ಕೊಯ್ಪ=ದೇಶಾಂತರಂಕ್ಕೆ+ಒಯ್ಪ, ಮಿತ್ರನಾತಂ=ಮಿತ್ರನು+ಆತಂ(ಆತನು),ಹೊಸದಿರ್ಪುದಲ್ಲಿ=ಹೊಸದು+ಇರ್ಪುದು(ಇದೆ)+ಅಲ್ಲಿ,ಬಾಳ್ದವಂಗೆತ್ತಲೇಂ=ಬಾಳ್ದವಂಗೆ(ಬಾಳಿದವನಿಗೆ)+ಎತ್ತಲೇಂ(ಎಲ್ಲಿದರೇನು), ಸತ್ರ=ಛತ್ರ.

ವಾಚ್ಯಾರ್ಥ: ಸಾವಿನ ಭಯವೇಕೆ? ಆತ ನಮ್ಮ ಬೇರೆ ದೇಶಗಳಿಗೆ ಕರೆದೊಯ್ಯುವ ಮಿತ್ರ. ಹೊಸ ಸ್ಥಳದಲ್ಲಿ ಹೊಸದೇ ಚಿತ್ರವಿದೆ. ಸಾತ್ವಿಕವಾದ ಜೀವನ ನಡೆಸಿದವನಿಗೆ ಯಾವ ಭಯ? ಅದೊಂದು ಹೊಸ ಛತ್ರ, ನಡೆ.

ADVERTISEMENT

ವಿವರಣೆ: ಹಿಂದೂ ಧರ್ಮದಲ್ಲಿ, ಉಪನಿಷತ್ಕಾಲದಲ್ಲೇ ಮೂಡಿದಒಂದು ಸಿದ್ಧಾಂತ ಪುನರ್ಜನ್ಮದ ಕಲ್ಪನೆ. ಇದು ಭಾರತಕ್ಕೆ ವಿಶಿಷ್ಟವೆನಿಸಿದ ‘ಕರ್ಮಸಿದ್ಧಾಂತ’. ಆತ್ಮನು ಒಂದು ಶರೀರವನ್ನು ತೊರೆದು ಇನ್ನೊಂದು ಶರೀರವನ್ನು ಪಡೆಯುವುದು, ಹುಟ್ಟುಸಾವುಗಳ ಆವರ್ತನೆಯಲ್ಲಿ ಸಿಕ್ಕಿಹಾಕಿಕೊಳ್ಳುವುದು, ಇದನ್ನು ಸಂಸಾರಚಕ್ರ ಎಂದು ಕರೆದರು. ಬ್ರಹ್ಮಾನುಭೂತಿಯನ್ನು ಪಡೆದ ಜೀವಕ್ಕೆ ಮಾತ್ರ ಇದರಿಂದ ಬಿಡುಗಡೆ. ಶರೀರವನ್ನು ತೊರೆದ ಆತ್ಮಕ್ಕೆ ಮುಂದಿನ ಜನ್ಮದಲ್ಲಿ ದೊರೆಯುವ ಶರೀರವೆಂಥದ್ದು? ಇದು ನಿರ್ಧಾರಿತವಾಗುವುದು ಜೀವಿಯ ಕರ್ಮದಿಂದ. ಕರ್ಮಸಿದ್ಧಾಂತ ಹೇಳುವುದಿಷ್ಟೇ. ಪ್ರತಿಯೊಂದು ಕ್ರಿಯೆಗೂ ಒಂದು ಪ್ರತಿಕ್ರಿಯೆ ಇರುತ್ತದೆ. ಪ್ರತಿಯೊಂದು ಕೆಲಸಕ್ಕೂ ಅದರ ಫಲ ಅಥವಾ ಪರಿಣಾಮವಿದೆ. ಕೈಯಿಂದ ಮಾಡಿದ ಕೆಲಸಗಳಷ್ಟೇ ಅಲ್ಲ, ನಾವು ಮಾಡುವ
ವಿಚಾರಗಳು ಮತ್ತು ಚಿಂತನೆಗಳೂ ಕರ್ಮಗಳೇ. ಹಿಂದೂ ಧರ್ಮಗ್ರಂಥಗಳಲ್ಲಿ ಕರ್ಮಸಿದ್ಧಾಂತದ ಬಗ್ಗೆ ಹೇಳಿಕೆ ಮೊಟ್ಟಮೊದಲು ಬರುವುದು, ಅತ್ಯಂತ ಹಳೆಯದಾದ ಬೃಹದಾರಣ್ಯಕ ಉಪನಿಷತ್ತಿನಲ್ಲಿ. ಅದು ಹೇಳುತ್ತದೆ, ಕರ್ಮವೇ ಜನನ-ಮರಣಗಳ ಚಕ್ರಕ್ಕೆ ಕಾರಣ.

ಒಳ್ಳೆಯದನ್ನು ಮಾಡುವವ ಒಳ್ಳೆಯ ಜನ್ಮ ಪಡೆಯುತ್ತಾನೆ, ಪಾಪ ಮಾಡುವವ ನೀಚ ಜನ್ಮ ಪಡೆಯುತ್ತಾನೆ. ಆತ್ಮದ ಅಸ್ತಿತ್ವದಲ್ಲಿ ನಂಬಿಕೆ ಇಲ್ಲದಿದ್ದರೂ ಬೌದ್ಧಧರ್ಮ ಪುನರ್ಜನ್ಮವನ್ನು ನಂಬುತ್ತದೆ.ಬಹುಶ: ಈ ಸಿದ್ಧಾಂತದ ಮೂಲ ಆಶಯ ನೈತಿಕ ಆಚರಣೆಗೆ ಪ್ರೋತ್ಸಾಹ ನೀಡುವುದು ಎನ್ನಿಸುತ್ತದೆ. ಈಗ ಚೆನ್ನಾಗಿ ಬದುಕಿದರೆ ಮುಂದೆ ಒಳ್ಳೆಯ ಜನ್ಮ ದೊರಕೀತು ಎಂಬ ಆಸೆಯ
ಗಜ್ಜರಿಯನ್ನು ಮುಂದೆ ಹಿಡಿದಂತೆ ತೋರಿದರೂ ಪಾಪಕರ್ಮಗಳನ್ನು ಮಾಡಿದರೆ ಮರುಜನ್ಮದಲ್ಲಿ ಸಂಕಟ ತಪ್ಪದು ಎಂಬ ಹೆದರಿಕೆಯನ್ನೂ ಇಟ್ಟಿದೆ. ಇದೇ ಕೊನೆಯ ಬದುಕು ಅಲ್ಲವೆಂದ ಮೇಲೆ ಸಾವಿನ ಭಯವೇಕೆ? ಒಂದು ರೀತಿಯಲ್ಲಿ ಸಾವು ನಮ್ಮನ್ನು ಈ ಬದುಕಿನಿಂದ ಮತ್ತೊಂದು ಜಗತ್ತಿಗೆ ಕರೆದೊಯ್ಯುತ್ತದೆ.

ಅದು ಮತ್ತೊಂದು ಸುಂದರ ಅವಕಾಶ, ಹೊಸ ಜಗತ್ತು. ಸಾತ್ವಿಕದಲ್ಲಿ ಬದುಕಿದವನಿಗೆ ಒಳ್ಳೆಯ ಬದುಕೇ ದೊರೆಯುವುದರಿಂದ ಹೆದರಿಕೆ ಏಕೆ? ಹೊಸ ಜನ್ಮ, ಹೊಸ ಛತ್ರವಿದ್ದಂತೆ. ಅದನ್ನು ಆನಂದಿಸೋಣ, ಮತ್ತಷ್ಟು ಸತ್ವದಲ್ಲಿ ಬದುಕಿ ಪ್ರಯಾಣ ಮುಂದುವರೆಸೋಣ ಎಂಬುದು ಕಗ್ಗದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.