ADVERTISEMENT

ಬೆರಗಿನ ಬೆಳಕು | ಸಜ್ಜನರ ನಡೆ

ಡಾ. ಗುರುರಾಜ ಕರಜಗಿ
Published 22 ಜೂನ್ 2020, 21:01 IST
Last Updated 22 ಜೂನ್ 2020, 21:01 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ವಾರಾಣಸಿಯ ರಾಜ ಬ್ರಹ್ಮದತ್ತ ಧರ್ಮದಿಂದ ರಾಜ್ಯಪಾಲನೆ ಮಾಡುತ್ತಿದ್ದ. ಒಂದು ದಿನ ಅವನ ಮಂತ್ರಿಗಳು ಮಾತನಾಡುತ್ತ ಬೇರೆ ಬೇರೆ ರಾಜರು ಕಟ್ಟಿಸಿಕೊಂಡ ಅರಮನೆಗಳ ಬಗ್ಗೆ ವರ್ಣಿಸುತ್ತಿದ್ದರು. ಕೆಲವರು ಹಲವು ಅಂತಸ್ತಿನ ಮನೆಗಳನ್ನು ಕಟ್ಟಿಸಿದರೆ ಹಲವರು ಅನೇಕ ಕಂಭಗಳಿದ್ದ ಅರಮನೆಗಳನ್ನು ನಿರ್ಮಿಸಿಕೊಂಡಿದ್ದರೆಂದು ಹೇಳುತ್ತಿದ್ದರು. ಅದನ್ನು ಕೇಳಿದ ರಾಜ ಬ್ರಹ್ಮದತ್ತನ ಮನದಲ್ಲಿ ಆಲೋಚನೆಯೊಂದು ಮೂಡಿತು. ನಾನು ಒಂದೇ ಕಂಭದ ಮೇಲೆ ಮನೆಯನ್ನು ಕಟ್ಟಿಸಿ ಉಳಿದ ರಾಜರಿಗಿಂತ ವಿಶೇಷನಾಗುತ್ತೇನೆ ಎಂದುಕೊಂಡ.

ತಕ್ಷಣ ತನ್ನ ದೇಶದ ಅತ್ಯುತ್ತಮ ಬಡಗಿಗಳನ್ನು ಕರೆಸಿ ತನ್ನ ಮನದ ಆಲೋಚನೆಯನ್ನು ತಿಳಿಸಿ ಒಂದೇ ಕಂಭದ ಮೇಲೆ ವಿಶಾಲವಾದ ಅರಮನೆಯನ್ನು ಕಟ್ಟಲು ಆಜ್ಞೆ ಮಾಡಿದ. ಅವರೆಲ್ಲ ಒಪ್ಪಿ ಕಾಡಿಗೆ ನಡೆದರು. ಕಾಡೆಲ್ಲ ಸುತ್ತಿ ದಪ್ಪನಾದ, ನೇರವಾದ ಅನೇಕ ಪುರಾತನ ಮರಗಳನ್ನು ನೋಡಿದರು. ಆದರೆ ಅದು ತುಂಬ ಏರು, ಇಳಿವಿನ ಜಾಗೆಯಾದ್ದರಿಂದ ಮರಗಳನ್ನು ಕತ್ತರಿಸಿ ನಗರಕ್ಕೆ ತರುವುದು ಅಸಾಧ್ಯ. ಅದನ್ನು ಅವರು ರಾಜನಿಗೆ ಒಂದು ಹೇಳಿದಾಗ ಆತ, ‘ಹಾಗಾದರೆ ನಮ್ಮ ರಾಜೋದ್ಯಾನದಲ್ಲಿಯೇ ಅನೇಕ ಪುರಾತನವಾದ ಮರಗಳಿವೆ. ಅವುಗಳಲ್ಲಿಯೇ ನಿಮಗೆ ಯಾವುದು ಸರಿಯೆನ್ನಿಸುತ್ತದೆಯೋ ಅದನ್ನೇ ಕತ್ತರಿಸಿಕೊಂಡು ತನ್ನಿ’ ಎಂದು ಆಜ್ಞೆ ಮಾಡಿದ. ರಾಜೋದ್ಯಾನದ ಎಲ್ಲ ಮರಗಳನ್ನು ನೋಡಿ ಅದರಲ್ಲಿ ತುಂಬ ಚೆನ್ನಾಗಿ ಬೆಳೆದಿದ್ದ, ಆದರೆ ಸುತ್ತಲಿನ ನೂರು ಗ್ರಾಮಗಳ ಗ್ರಾಮಸ್ಥರಿಂದ, ತಲೆತಲಾಂತರದಿಂದ ರಾಜರಿಂದ ಪೂಜೆ, ಬಲಿ ಪಡೆಯುತ್ತಿದ್ದ ಶಾಲವೃಕ್ಷ ಅವರಿಗೆ ಇಷ್ಟವಾಯಿತು. ಅದನ್ನು ರಾಜನಿಗೆ ತಿಳಿಸಿದಾಗ ಆತ, ‘ಏನಡ್ಡಿಯಿಲ್ಲ. ಅದು ನಮ್ಮ ಉದ್ಯಾನದ್ದೇ ಮರ. ಅದನ್ನು ಕತ್ತರಿಸಿ’ ಎಂದು ಅಪ್ಪಣೆ ಕೊಟ್ಟ. ಮರುದಿನ ಬಡಗಿಗಳು ಪುರೋಹಿತರೊಂದಿಗೆ ಗಂಧ, ಮಾಲೆಗಳು ಮತ್ತು ಸುಮಂಗಲ ವಸ್ತುಗಳನ್ನು ತಂದು ಮರಕ್ಕೆ ಪೂಜೆ ಮಾಡಿ, ಬಿಳೀದಾರವನ್ನು ಅದರ ಕಾಂಡಕ್ಕೆ ಸುತ್ತಿ, ದೀಪ ಹಚ್ಚಿ ಪ್ರದಕ್ಷಿಣೆ ಹಾಕಿದರು. ನಂತರ ಮರಕ್ಕೆ ಪ್ರಾರ್ಥಿಸಿದರು, ‘ಇಂದಿನಿಂದ ಏಳನೇ ದಿವಸ ನಾವು ನಿನ್ನನ್ನು ಕತ್ತರಿಸುತ್ತೇವೆ. ನೀನು ಸಹಕರಿಸಬೇಕು. ಈ ಮರದಲ್ಲಿರುವ ದೇವತೆಗಳು ಬೇರೆ ಕಡೆಗೆ ಹೋಗಿಬಿಡಲಿ’.

ಆ ಮರದಲ್ಲಿ ವಾಸವಾಗಿದ್ದ ದೇವಪುತ್ರ ತನ್ನ ಬಗ್ಗೆ ಹೆಚ್ಚು ಚಿಂತಿಸಲಿಲ್ಲ. ಮರ ಕಡಿಯುವ ಆತುರದಲ್ಲಿ ತನ್ನ ಸುತ್ತಮುತ್ತ ಇದ್ದ ಚಿಕ್ಕಪುಟ್ಟ ಮರಗಳಿಗೆಲ್ಲ ಪೆಟ್ಟಾಗುತ್ತದೆಯೇ ಎಂದು ಚಿಂತಿಸಿದ. ಅಂದು ರಾತ್ರಿ ರಾಜನ ಶಯನಮಂದಿರವನ್ನು ಪ್ರವೇಶಿಸಿ ತನ್ನ ದಿವ್ಯತೇಜದಿಂದ ಬೆಳಗಿದ. ರಾಜ ಕಣ್ಣು ತೆರೆದಾಗ ಮುಂದೆ ಒಬ್ಬ ದಿವ್ಯರೂಪದಿಂದ ಅಳುತ್ತ ನಿಂತಿದ್ದುದು ಕಂಡಿತು. ‘ನೀನು ಯಾರು? ನೀನು ಒಬ್ಬ ದೇವತೆಯಂತೆ ಕಾಣುತ್ತೀ, ಅಳುವುದಕ್ಕೆ ಕಾರಣವೇನು?’ ಎಂದು ಕೇಳಿದ. ಅದಕ್ಕೆ ದೇವಪುತ್ರ, ‘ರಾಜಾ, ನನ್ನ ಹೆಸರು ಬದ್ಧಸಾಲ. ಅರವತ್ತು ಸಾವಿರ ವರ್ಷಗಳಿಂದ ನಿಮ್ಮ ಮನೆತನದ ಹಿರಿಯರು ನನ್ನನ್ನು ಪೂಜೆ ಮಾಡುತ್ತ ಬಂದಿದ್ದಾರೆ. ಯಾರೂ ನನ್ನನ್ನು ಕತ್ತರಿಸಲು ಯೋಜಿಸಿರಲಿಲ್ಲ. ನನ್ನದು ಒಂದೇ ಬೇಡಿಕೆ. ನನ್ನನ್ನು ಒಂದೇ ಸಲ ಬುಡದಿಂದ ಕತ್ತರಿಸಿ ಉರುಳಿಸಬೇಡ. ಮೇಲಿನಿಂದ ಚೂರು ಚೂರಾಗಿ ಕತ್ತರಿಸಲು ಹೇಳು’ ಎಂದು. ಅದು ಏಕೆ ಎಂದು ಕೇಳಿದಾಗ, ‘ನನ್ನ ಸುತ್ತ ಸಾವಿರಾರು ಚಿಕ್ಕಪುಟ್ಟ ಮರಗಳಿವೆ. ನನ್ನನ್ನು ಬುಡದಿಂದ ಕತ್ತರಿಸಿದರೆ, ನಾನು ಬೀಳುವಾಗ ಅನೇಕ ಮರಗಳು ನಾಶವಾಗುತ್ತವೆ. ಅವುಗಳಿಗೆ ತೊಂದರೆಯಾಗುವುದು ಬೇಡ’. ರಾಜ ಈ ಮರದ ಕರುಣೆಗೆ ಬೆರಗಾದ. ಆ ಮರವನ್ನು ಕತ್ತರಿಸದಂತೆ ಆಜ್ಞೆ ಮಾಡಿದ.

ADVERTISEMENT

ತನಗೆ ಕಷ್ಟವಾದರೂ, ಅದರಿಂದ ತನ್ನ ನಂಬಿದವರಿಗೆ ತೊಂದರೆಯಾಗದಂತೆ ನೋಡುವುದು ಅತ್ಯಂತ ಕರುಣಿಗಳಾದ ಸಜ್ಜನರ ನಡತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.