ADVERTISEMENT

ಬುದ್ಧನ ಜಾತಕ ಕಥೆಗಳು: ಲೋಭದ ಸೆಳೆತ

ಡಾ. ಗುರುರಾಜ ಕರಜಗಿ
Published 29 ಸೆಪ್ಟೆಂಬರ್ 2020, 20:30 IST
Last Updated 29 ಸೆಪ್ಟೆಂಬರ್ 2020, 20:30 IST
ಗೌತಮ ಬುದ್ಧ
ಗೌತಮ ಬುದ್ಧ   

ಅಂಗರಾಜ ಮತ್ತು ಮಗಧ ರಾಜರ ನಡುವೆ ಆಗಾಗ ಯುದ್ಧಗಳು ಆಗುತ್ತಲೇ ಇದ್ದವು. ಕೆಲವೊಮ್ಮೆ ಈತ, ಕೆಲವೊಮ್ಮೆ ಆತ ಗೆಲ್ಲುತ್ತಿದ್ದರು. ಅವರಿಬ್ಬರ ರಾಜ್ಯದ ನಡುವೆ ಚಂಪಾ ಎಂಬ ನದಿ ಹರಿಯುತ್ತಿತ್ತು. ಅದರಡಿಯಲ್ಲಿ ಒಂದು ನಾಗಭವನವಿತ್ತು. ಅದನ್ನು ಚಂಪಯ್ಯನೆಂಬ ನಾಗರಾಜ ಆಳುತ್ತಿದ್ದ. ಒಂದು ಬಾರಿ ಯುದ್ಧದಲ್ಲಿ ಮಗಧರಾಜ ಸೋತ. ಅಪಮಾನ ತಡೆಯಲಾರದೆ ನದಿಯಲ್ಲಿ ಮುಳುಗಿ ಸಾಯುತ್ತೇನೆಂದು ತೀರ್ಮಾನಿಸಿ ಕುದುರೆಯೊಂದಿಗೆ ಚಂಪಾ ನದಿಯಲ್ಲಿ ಹಾರಿದ.

ಅವನು ಹಾಗೆ ಮುಳುಗುವಾಗ ನಾಗರಾಜ ಚಂಪಯ್ಯ ಅವನನ್ನು ಕರೆದೊಯ್ದು ಆದರಿಸಿ, ‘ನಿನಗೆ ನಾನು ಸಹಾಯ ಮಾಡುತ್ತೇನೆ. ಮುಂದಿನ ಯುದ್ಧದಲ್ಲಿ ನೀನೇ ಎರಡೂ ದೇಶಕ್ಕೆ ರಾಜನಾಗುತ್ತೀ’ ಎಂದು ಹೇಳಿದ. ಅದರಂತೆ ಮರುಯುದ್ಧದಲ್ಲಿ ಮಗಧರಾಜ ಅಂಗರಾಜನನ್ನು ಕೊಂದು ಎರಡೂ ದೇಶಗಳಿಗೆ ರಾಜನಾದ. ಅಂದಿನಿಂದ ಆತ ನಾಗರಾಜನಿಗೆ ಋಣಿಯಾಗಿ ಪೂಜೆ ಮಾಡತೊಡಗಿದ.

ಗುರುರಾಜ ಕರಜಗಿ

ಆ ಸಮಯದಲ್ಲಿ ಬೋಧಿಸತ್ವ ಅತ್ಯಂತ ದರಿದ್ರ ಮನೆತನದಲ್ಲಿ ಹುಟ್ಟಿದ್ದ. ಒಂದು ಸಲ ನದಿತೀರಕ್ಕೆ ಬಂದಾಗ ನಾಗರಾಜನ ವೈಭವವನ್ನು ನೋಡಿ ಅವನಲ್ಲಿ ಲೋಭವುಂಟಾಯಿತು. ಆ ಲೋಭ ಚಿಂತನೆಯಿಂದ ಚಂಪಯ್ಯ ನಾಗರಾಜ ತೀರಿದ ಏಳನೆಯ ದಿವಸ ಅವನ ಹಾಸಿಗೆಯ ಮೇಲೆಯೇ ಸರ್ಪವಾಗಿ ಹುಟ್ಟಿದ. ಅವನ ದೇಹ ಹೂವಿನ ಮಾಲೆಯಂತಿತ್ತು. ಅದನ್ನು ಕಂಡು ಸುಮನಾ ಎಂಬ ನಾಗಕನ್ಯೆ ಇಂದ್ರನೇ ಸರ್ಪರಾಜನಾಗಿ ಬಂದಿದ್ದಾನೆಂದು ಸಾರಿಸಿ ಉಳಿದ ನಾಗಕನ್ಯೆಯರನ್ನು ಕರೆದು ತಂದಳು. ಬೋಧಿಸತ್ವ ಕೊರಗಿದ.

ADVERTISEMENT

‘ನಾನು ಎಲ್ಲ ಕಾಮ, ಲೋಭಗಳನ್ನು ಗೆದ್ದು ಮುಕ್ತಿಯನ್ನು ಪಡೆಯಬೇಕೆಂದವನು ಇಲ್ಲಿ ಕೀಟವಾಗಿ ಹುಟ್ಟಿದೆನಲ್ಲ. ಇಲ್ಲಿಂದ ಮುಕ್ತನಾಗಿ ಮನುಷ್ಯ ಲೋಕಕ್ಕೆ ಹೋಗಿ ಸತ್ಯ ಜ್ಞಾನಗಳನ್ನು ಪಡೆದು ದುಃಖವನ್ನು ಕೊನೆಗೊಳಿಸುತ್ತೇನೆ’ ಎಂದು ವ್ರತ ಮಾಡತೊಡಗಿದ. ಆಗ ನಾಗಕನ್ಯೆಯರು ಅವನನ್ನು ಸುತ್ತುವರೆದು ಆಕರ್ಷಿಸಿದರು. ಅವನ ಶೀಲ ಮುರಿದು ಹೋಯಿತು. ಮತ್ತೆರಡು ಬಾರಿ ಹೀಗಾದಾಗ ಆತ ನಾಗಭವನವನ್ನು ಬಿಟ್ಟು ಗಡಿಪ್ರಾಂತ್ಯದ ಕಾಡಿನಲ್ಲಿ ಒಂದು ಹುತ್ತದ ಬಳಿ ಧ್ಯಾನ ಮಾಡುತ್ತ ಕುಳಿತ. ಹೊರಡುವಾಗ ಸುಮನಾ ಕೇಳಿದಳು, ‘ನಿಮಗೆ ತೊಂದರೆಯಾದರೆ ನಮಗೆ ಹೇಗೆ ಗೊತ್ತಾಗುತ್ತದೆ?’ ಬೋಧಿಸತ್ವ ಹೇಳಿದ, ‘ನನಗೆ ಯಾರಾದರೂ ದೈಹಿಕ ಹಿಂಸೆ ಮಾಡಿದರೆ ಪುಷ್ಕರಿಣಿಯ ನೀರು ಕೊಳಕಾಗುತ್ತದೆ. ಹಾವಾಡಿಗ ಹಿಡಿದರೆ ನೀರು ಕೆಂಪಾಗುತ್ತದೆ. ಗರುಡ ಹಿಡಿದರೆ ನೀರು ಒಣಗಿಹೋಗುತ್ತದೆ’.

ಬೋಧಿಸತ್ವ ಹುತ್ತದ ಹತ್ತಿರ ಕುಳಿತಾಗ ಒಬ್ಬ ಮಾಂತ್ರಿಕ ಬಂದು ಅವನನ್ನು ಹಿಡಿದ. ಬೋಧಿಸತ್ವ ಅಹಿಂಸೆಯ ವ್ರತ ಹಿಡಿದಿದ್ದರಿಂದ ಏನೂ ಮಾಡಲಿಲ್ಲ. ಮಾಂತ್ರಿಕ ಅಸಾಧ್ಯ ನೋವು ಕೊಟ್ಟ. ಅವನನ್ನು ಬುಟ್ಟಿಯಲ್ಲಿ ಹಾಕಿಕೊಂಡು ನಗರಗಳಲ್ಲಿ ಪ್ರದರ್ಶನ ಮಾಡುತ್ತಿದ್ದ. ಹೆಚ್ಚು ಹಣ ಪಡೆಯುವ ಆಸೆಯಿಂದ ವಾರಾಣಸಿಯ ಉಗ್ರಸೇನನ ಮುಂದೆ ಪ್ರದರ್ಶನ ಮಾಡಿದ. ಆಗ ಅಲ್ಲಿಗೆ ಬಂದ ಸುಮನಾ, ರಾಜನಿಗೆ ಬೋಧಿಸತ್ವನ ನಿಜವಾದ ಶಕ್ತಿಯನ್ನು ತಿಳಿಸಿ, ಆತ ಮನಸ್ಸು ಮಾಡಿದರೆ ಇಡೀ ನಗರವನ್ನು ಭಸ್ಮ ಮಾಡಬಲ್ಲ. ಆದರೆ ಅಹಿಂಸೆಯ ವ್ರತದಿಂದ ಎಲ್ಲ ಕಾಟವನ್ನು ತಾಳಿಕೊಂಡಿದ್ದಾನೆ ಎಂದು ಹೇಳಿದಳು. ಆಗ ರಾಜ ಬೋಧಿಸತ್ವನನ್ನು ಬಿಡುಗಡೆ ಮಾಡಿಸಿದ. ಬೋಧಿಸತ್ವ ಹಿಮಾಲಯಕ್ಕೆ ಸರಿದು ಹೋಗಿ ಉಪೋಸಥ ವೃತ ಮಾಡಿ ಉನ್ನತಲೋಕಗಳನ್ನು ಪಡೆದ.

ಒಂದು ಲೋಭದ ಸೆಳೆತ ಯಾವ ಪ್ರಪಾತಕ್ಕೆ ಎಳೆದೊಯ್ಯುತ್ತದೋ ತಿಳಿಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.