ADVERTISEMENT

ಕುಮಾರನ ಬುದ್ದಿ ಪರೀಕ್ಷೆ

ಡಾ. ಗುರುರಾಜ ಕರಜಗಿ
Published 3 ಫೆಬ್ರುವರಿ 2021, 19:30 IST
Last Updated 3 ಫೆಬ್ರುವರಿ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ತಾವು ಯೋಜಿಸಿದ ಮೊದಲನೆಯ ಪರೀಕ್ಷೆಯಲ್ಲಿ ಮಹೋಷಧಕುಮಾರ ಶಕ್ತಿಯಿಂದ ಗೆದ್ದದ್ದನ್ನು ಕಂಡು ನಾಲ್ಕು ಜನ ಅಮಾತ್ಯರು ಮತ್ತೊಂದು ಪರೀಕ್ಷೆಯನ್ನು ಮಾಡುವುದಾಗಿ ತೀರ್ಮಾನಿಸಿದರು. ಅವರ ಯೋಜನೆಯಂತೆ ನಡೆದದ್ದು ಈ ಘಟನೆ.

ಮಿಥಿಲೆಯ ಮಧ್ಯಭಾಗದ ಪ್ರಾಚೀನ ನಿಗಮದಲ್ಲಿ ಯುವಕನೊಬ್ಬ ಕೃಷಿ ಮಾಡಿಕೊಂಡಿದ್ದ. ನಾಳೆ, ನಾಡಿದ್ದು ಮಳೆ ಬರುವ ಲಕ್ಷಣವಿದ್ದುದರಿಂದ, ಮಳೆಯಾದ ಮೇಲೆ ಬಿತ್ತನೆ ಮಾಡಲು ಯೋಜನೆ ಹಾಕಿದ್ದ. ಅದಕ್ಕಾಗಿ ಬೇರೆ ಹಳ್ಳಿಗೆ ಹೋಗಿ ಜಾತ್ರೆಯಲ್ಲಿ ಒಂದು ಸೊಗಸಾದ ಎರಡು ಎತ್ತುಗಳನ್ನು ಕೊಂಡುಕೊAಡ. ಅವುಗಳನ್ನು ಮನೆಗೆ ತಂದು ಕಟ್ಟಿದ. ಮರುದಿನ ಎತ್ತುಗಳನ್ನು ಮೇಯಿಸಲು ಹುಲ್ಲುಗಾವಲಿಗೆ ಹೊರಟ. ಒಂದು ಎತ್ತಿನ ಬೆನ್ನಿನ ಮೇಲೆಯೇ ಕುಳಿತು ಹುಲ್ಲುಗಾವಲಿಗೆ ಬಂದ. ಹಿಂದಿನ ದಿನ ರಾತ್ರಿ ಆತನಿಗೆ ಸರಿಯಾಗಿ ನಿದ್ರೆ ಬರದಿದ್ದರಿಂದಲೂ, ಈಗ ಎತ್ತಿನ ಮೇಲೆ ಕುಳಿತು ಪ್ರವಾಸ ಮಾಡಿ ಆಯಾಸವಾದ್ದರಿಂದಲೂ ನಿದ್ರೆ ಎಳೆಯುತ್ತಿತ್ತು. ಆತ ಎತ್ತುಗಳನ್ನು ಉದ್ದವಾದ ಹಗ್ಗದಿಂದ ಕಟ್ಟಿ ಹುಲ್ಲು ತಿನ್ನಲು ಅನುವು ಮಾಡಿದ. ನಂತರ ತಾನು ಮರದ ಕೆಳಗೆ ಮಲಗಿ ನಿದ್ರೆ ಹೋದ.

ಮರದ ಕೆಳಗೆ ನಿದ್ರೆ ಮಾಡುತ್ತಿದ್ದ ತರುಣ ಹಾಗು ಎರಡು ಎತ್ತುಗಳನ್ನು ಕಂಡ ಕಳ್ಳನೊಬ್ಬ ಮೆಲ್ಲನೆ ಎತ್ತುಗಳ ಹಗ್ಗಗಳನ್ನು ಬಿಚ್ಚಿ ಹೊಡೆದುಕೊಂಡು ಹೊರಟೇ ಬಿಟ್ಟ. ಸ್ವಲ್ಪ ಹೊತ್ತಿನ ನಂತರ ನಿದ್ರೆ ತಿಳಿದು ಎದ್ದ ಯುವಕ ಎತ್ತುಗಳನ್ನು ಕಾಣದೆ ಗಾಬರಿಯಾದ. ಅಲ್ಲಿ ಇಲ್ಲಿ ಓಡಾಡಿ ಹುಡುಕಾಡತೊಡಗಿದ. ದಾರಿಯಲ್ಲಿ ಸಿಕ್ಕಸಿಕ್ಕವರನ್ನು ಕೇಳಿದ. ಒಬ್ಬರು ಮಾತ್ರ ತಾವು ದಾರಿಯಲ್ಲಿ ಒಬ್ಬ ಮನುಷ್ಯ ಎರಡು ಎತ್ತುಗಳನ್ನು ಎಳೆದುಹೋಗುತ್ತಿದ್ದುದನ್ನು ಕಂಡೆ ಎಂದು ಹೇಳಿದಾಗ ಆತ ಆ ದಿಕ್ಕಿಗೆ ಓಡಿದ. ಸ್ವಲ್ಪ ದೂರದಲ್ಲಿ ಕಳ್ಳ ಎತ್ತುಗಳೊಂದಿಗೆ ಹೋಗುತ್ತಿರುವುದು ಕಾಣಿಸಿತು. ಈತ ಹೋಗಿ ಅವನನ್ನು ತರಾಟೆಗೆ ತೆಗೆದುಕೊಂಡ. “ಇವು ನನ್ನ ಎತ್ತುಗಳು. ನಿನ್ನೆ ತಾನೇ ಜಾತ್ರೆಯಲ್ಲಿ ಕೊಂಡಿದ್ದೇನೆ” ಎಂದ ಯುವಕ. “ಯಾರು ಹೇಳಿದರು? ಈ ಎತ್ತುಗಳು ನನ್ನವು. ನನ್ನ ಕೊಟ್ಟಿಗೆಯಲ್ಲೇ ಹುಟ್ಟಿ ಬೆಳೆದವು” ಎಂದ ಕಳ್ಳ.

ADVERTISEMENT

“ಸುಳ್ಳು. ನೀನು ಕಳ್ಳ”
“ನೀನು ಹೇಳುವುದು ಸುಳ್ಳು, ನೀನು ಮೋಸಮಾಡಲು ಬಂದಿದ್ದೀಯಾ”.
ಇಬ್ಬರ ಜಗಳವೂ ತಾರಕಕ್ಕೇರಿದಾಗ ಜನ ಸೇರಿದರು. ಯಾರ ಮಾತು ಸತ್ಯ ಎಂದು ತೀರ್ಮಾನಿಸಲು ಮಹೋಷಧಕುಮಾರನೇ ಸರಿಯಾದ ವ್ಯಕ್ತಿ ಎಂದು ತೀರ್ಮಾನಿಸಿ ಅವನಲ್ಲಿಗೆ ಎಲ್ಲರನ್ನು ಕರೆತಂದರು. ಕಳ್ಳನ ಮುಖ ನೋಡಿದಾಗಲೇ ಕುಮಾರನಿಗೆ ಇದು ತನಗೊಂದು ಪರೀಕ್ಷೆ ಎಂದು ಖಚಿತವಾಯಿತು. ಇಬ್ಬರೂ ಎತ್ತುಗಳು ತಮ್ಮವೇ ಎಂದು ವಾದ ಮಾಡುತ್ತಿದ್ದರು. ಕುಮಾರ ಕಳ್ಳನಿಗೆ ಕೇಳಿದ, “ನೀನು ಈ ಎತ್ತುಗಳಿಗೆ ಇಂದು ಏನು ತಿನ್ನಿಸಿದೆ ಮತ್ತು ಏನು ಕುಡಿಸಿದೆ?”

ಕಳ್ಳ ಹೇಳಿದ, “ನಾನು ಯಾವಾಗಲೂ ಎತ್ತುಗಳ ಆರೈಕೆಯನ್ನು ಚೆನ್ನಾಗಿ ಮಾಡುತ್ತೇನೆ. ಎರಡು ತಾಸಿನ ಹಿಂದೆ ಅವುಗಳಿಗೆ ಅಕ್ಕಿಯ ಗಂಜಿ, ಎಳ್ಳಿನ ಉಂಡೆ ಮತ್ತು ಉದ್ದು ತಿನ್ನಿಸಿದ್ದೇನೆ. ಎತ್ತುಗಳನ್ನು ಕಳೆದುಕೊಂಡ ಯುವಕನಿಗೂ ಅದೇ ಪ್ರಶ್ನೆ ಕೇಳಿದ ಕುಮಾರ. ತರುಣ ಹೇಳಿದ, “ಸ್ವಾಮಿ, ನಾನು ಬಡವ, ಅವನ್ನೆಲ್ಲ ಎಲ್ಲಿ ತರಲಿ? ಬರೀ ಹುಲ್ಲು ತಿನ್ನಿಸಿದ್ದೇನೆ”. ಕುಮಾರ ಸೇವಕರನ್ನು ಕರೆದು ಸಾಸಿವೆಯ ಎಲೆಗಳನ್ನು ತರಿಸಿ, ಒರಳಿನಲ್ಲಿ ಕುಟ್ಟಿಸಿ, ಉಪ್ಪು ಹಾಕಿಸಿ, ಎತ್ತುಗಳಿಗೆ ಒತ್ತಾಯ ಮಾಡಿ ಕುಡಿಸಿದ. ಐದು ನಿಮಿಷದಲ್ಲಿ ಎತ್ತುಗಳು ತಿಂದದ್ದನ್ನೆಲ್ಲ ವಾಂತಿ ಮಾಡಿಕೊಂಡವು. ಬಿದ್ದದ್ದೆಲ್ಲ ಹುಲ್ಲೇ, ಕುಮಾರ ಕಳ್ಳನನ್ನು ಹಿಡಿಸಿ ಶಿಕ್ಷೆ ಕೊಟ್ಟು ತರುಣನಿಗೆ ಎತ್ತುಗಳನ್ನು ಕೊಟ್ಟು ಕಳುಹಿಸಿದ. ಮತ್ತೊಂದು ಪರೀಕ್ಷೆಯಲ್ಲಿ ಕುಮಾರ ತೇರ್ಗಡೆಯಾದದ್ದು ಅಮಾತ್ಯರಿಗೆ ಚಿಂತೆಯನ್ನು ತಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.