ADVERTISEMENT

ಬೆರಗಿನ ಬೆಳಕು: ವಿಪರೀತದ ಆಸೆ

ಡಾ. ಗುರುರಾಜ ಕರಜಗಿ
Published 19 ಜುಲೈ 2022, 19:30 IST
Last Updated 19 ಜುಲೈ 2022, 19:30 IST
   

ಅಪರಿಮಿತವೇನಲ್ಲ ಜೀವನಕೆ ಲಭ್ಯ ಸುಖ
ಚಪಲದಿಂ ಕಣ್ಣನತ್ತಿತ್ತಲಲಸುತಿರೆ ||
ಸ್ವಪರಿಸ್ಥಿತಿಯ ಧರ್ಮ ನಷ್ಟವಹುದೊಂದೆ ಫಲ |
ವಿಫಲ ವಿಪರೀತಾಸೆ – ಮಂಕುತಿಮ್ಮ || 675 |
ಪದ-ಅರ್ಥ: ಅಪರಿಮಿತವೇನಲ್ಲ=ಅಪರಿಮಿತವು(ಮಿತಿಇಲ್ಲದ್ದು)+ಏನಲ್ಲ, ಲಭ್ಯ=ದೊರೆತ,
ಕಣ್ಣನತ್ತಿತ್ತಲಲಸುತಿರೆ=ಕಣ್ಣನು+ಅತ್ತಿ ತ್ತಲು+ಅಲಸುತಿರೆ, ನಷ್ಟವಹುದೊಂದೆ=ನಷ್ಟವಹುದು+ಒಂದೆ, ವಿಪರೀತಾಸೆ=ವಿಪರೀತದಆಸೆ.

ವಾಚ್ಯಾರ್ಥ: ಬದುಕಿಗೆ ದೊರೆತ ಸುಖ ಮಿತಿ ಇಲ್ಲದ್ದೇನಲ್ಲ. ಆದರೆ ಚಪಲತೆಯಿಂದ, ಆಸೆಯಿಂದ ಕಣ್ಣನ್ನು ಆ ಕಡೆಗೆ ಈ ಕಡೆಗೆ ಚಲಿಸುತ್ತಿದ್ದರೆ ದೊರೆ ಯುವುದು ಒಂದೇ ಫಲ. ಅದು ಇರುವ ಪರಿಸ್ಥಿತಿಯ ನಷ್ಟ.ವಿಪರೀತದಆಸೆಎಂದಿಗೂ ವಿಫಲವೆ.

ವಿವರಣೆ: ಪುರಾಣ, ಇತಿಹಾಸ ಮತ್ತು ವರ್ತಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಹಾ ಮಹಾ ಶಕ್ತಿಶಾಲಿಗಳು, ಎತ್ತರಕ್ಕೆ ಏರಬಹುದಾಗಿದ್ದವರು ದೊಪ್ಪನೆ ಕೆಳಗೆ ಬಿದ್ದು ತಮ್ಮ ಜೀವಿತದಲ್ಲಿ ಶಕ್ತಿಹೀನವಾಗಿ, ಅವಮಾನಿತರಾಗಿದ್ದನ್ನು ಕಾಣಬಹುದು. ಮಹಾ ಶಕ್ತಿಶಾಲಿಯಾಗಿದ್ದ ಯಯಾತಿಗೆ ಭೋಗದ ಅಪೇಕ್ಷೆ. ತನ್ನ ಕಾಮಾಪೇಕ್ಷೆಯನ್ನು ತೀರಿಸಿಕೊಳ್ಳಲು ಮಗನಿಂದಲೇ ಯೌವನವನ್ನು ಪಡೆಯುತ್ತಾನೆ. ಭೋಗದಿಂದ ಭೋಗವನ್ನು ಗೆಲ್ಲುವುದು ಅಸಾಧ್ಯವೆಂದು ತಿಳಿದು ಮಗನಿಗೆ ಯೌವನವನ್ನು ಮರಳಿಸುತ್ತಾನೆ. ಅತಿ ಕಾಮದ ಅಪೇಕ್ಷೆ ಯಯಾತಿಯನ್ನು ಹಣ್ಣು ಮಾಡಿತು. ಗ್ರೀಕ್ ಪುರಾಣಗಳಲ್ಲಿ ಬರುವ ರಾಜ ಮಿಡಾಸ್‌ನ ಕಥೆ ರೋಚಕವಾದದ್ದು. ದೇವಕರುಣೆಯಿಂದ ವರ ಪಡೆದವ ಮಿಡಾಸ್. ತಾನು ಅಪರಿಮಿತ
ಶ್ರೀಮಂತನಾಗಬೇಕೆಂದುಕೊಂಡು, ಮುಟ್ಟಿದ್ದೆಲ್ಲ ಬಂಗಾರವಾಗಲಿ ಎಂಬ ವರ ಕೇಳಿದ. ಈ ಅತಿಯಾಸೆ ಒಳ್ಳೆಯದನ್ನು ಮಾಡಿತೆ? ಆತ ಕುಡಿಯಬೇಕೆಂದಿದ್ದ ನೀರು, ತಿನ್ನಬೇಕೆಂದಿದ್ದ ಹಣ್ಣು, ಆಹಾರಗಳು ಚಿನ್ನವಾದವು. ಅವನನ್ನು ಪ್ರೀತಿಯಿಂದ ಓಡಿಬಂದು ತಬ್ಬಿದ ಮಗಳು ಕೂಡ ಚಿನ್ನದ ವಿಗ್ರಹವಾದಳು. ಅವನ ಜೀವನದಲ್ಲಿ ಸಂತೋಷ ಕರಗಿ ಹೋಯಿತು. ಇಡೀ ಜಗತ್ತಿನ
ಮೇಲೆ ತನ್ನ ಅಧಿಕಾರವನ್ನು ಚಲಾಯಿಸಬೇಕೆಂಬ ಮಹಾತ್ವಾಕಾಂಕ್ಷೆಯಿಂದ ಹೊರಟ ಹಿರಣ್ಯಕಶಿಪುವಿಗೆ ಏನಾಯಿತೆಂಬುದು ಎಲ್ಲರಿಗೂ ತಿಳಿದದ್ದೇ. ಪ್ರಪಂಚದಲ್ಲಿ ಶಾಶ್ವತವಾದ ಮನ್ನಣೆಯನ್ನು ಪಡೆಯಲೆಂದು ಗುರುಗಳ ವೇಷ ಧರಿಸಿ, ಕೆಲಕಾಲ ಜನರನ್ನು ತಮ್ಮ ಮಾತಿನಿಂದ, ಆಕರ್ಷಣೆಗಳಿಂದ ಮರುಳು ಮಾಡಿ, ನಂತರ, ಅವರ ಕಣ್ಣಿನಲ್ಲಿ ಚಿಕ್ಕವರಾಗಿ, ಜೈಲು ಸೇರಿಯೋ, ಕೊಲೆಯಾಗಿಯೋ ಮರೆಯಾದವರ ಕಥೆಗಳು ಅನೇಕವಿವೆ. ನಮ್ಮ ಅಪೇಕ್ಷೆಗಳಿಗೆ ಮಿತಿ ಇಲ್ಲ. ಅದು ದೇಹಕಾಮವಾಗಬಹುದು, ಅಧಿಕಾರವಾಗಬಹುದು, ಖ್ಯಾತಿಯಾಗಬಹುದು, ಚಿರಂಜೀವಿತ್ವವಾಗಬಹುದು, ಹಣವಾಗಬಹುದು. ಮನುಷ್ಯ ಜೀವನದಲ್ಲಿ ಎಲ್ಲವನ್ನೂ ಒಂದು ಹದದಲ್ಲಿ ಬಳಸಲು ಸಾಧ್ಯವಿದೆ. ಆದರೆ ಅದು ಮಿತವಾದದ್ದು ಎಂಬ ಅರಿವು ಇರುವವರೆಗೆ ಎಲ್ಲವೂ ಚೆನ್ನ. ಕಗ್ಗ ಅದನ್ನು ಒತ್ತಿ ಹೇಳುತ್ತದೆ.

ADVERTISEMENT

ಜೀವನಕ್ಕೆ ದೊರೆಯುವ ಸುಖ ಅಮಿತವಾದದ್ದಲ್ಲ. ಆದರೆ ಅತಿಯಾಸೆಯಿಂದ ದೃಷ್ಟಿ ಯನ್ನು ಆಚೀಚೆ ತಿರುಗಿಸುತ್ತ, ಅಸಾಧ್ಯವಾದುದಕ್ಕೆ ಕೈಚಾಚಿದರೆ ಆಗುವುದು ಏನು? ಅಮಿತವಾದದ್ದು ದೊರೆಯುವುದಿಲ್ಲ ಮತ್ತು ಇರುವಷ್ಟು ಸುಖವೂ ಕಳೆದುಹೋಗುತ್ತದೆ. ವಿಪರೀತದಆಸೆ ಎಂದಿಗೂಸಫಲವಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.