ADVERTISEMENT

ಬೆರಗಿನ ಬೆಳಕು: ಅರಗಿಸಿಕೊಂಡದ್ದೆಷ್ಟು ?

ಡಾ. ಗುರುರಾಜ ಕರಜಗಿ
Published 21 ಜುಲೈ 2022, 15:36 IST
Last Updated 21 ಜುಲೈ 2022, 15:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಎಷ್ಟು ನೀನುಂಡರೇ? ಪುಷ್ಟಿ ಮೈಗಾಗುವುದು |
ಹೊಟ್ಟೆ ಜೀರ್ಣಿಸುವಷ್ಟೆ! ಮಿಕ್ಕುದೆಲ್ಲ ಕಸ ||
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು ? |
ಮುಷ್ಟಿಪಿಷ್ಟವು ತಾನೆ? – ಮಂಕುತಿಮ್ಮ || 677 ||

ಪದ-ಅರ್ಥ: ನೀನುಂಡರೇ=ನೀನು+ಉಂಡರೇ(ಉಂಡರೇನು), ಗಳಿಸಿಟ್ಟೊಡಂ=ಗಳಿಸಿ+ಇಟ್ಟೊಡಂ (ಇಟ್ಟರೂ), ಮುಷ್ಟಿಪಿಷ್ಟ=ಹಿಡಿ ಹಿಟ್ಟು.
ವಾಚ್ಯಾರ್ಥ: ನೀನು ಎಷ್ಟು ಊಟ ಮಾಡಿದರೇನು? ಮೈಗೆ ಶಕ್ತಿ ದೊರಕುವುದು ಹೊಟ್ಟೆ ಜೀರ್ಣಿಸಿದಷ್ಟೇ. ಉಳಿದದ್ದೆಲ್ಲ ಕಸವೇ. ಅಂತೆಯೇ ಎಷ್ಟು ಆಸ್ತಿ, ಹಣ ಗಳಿಸಿದರೂ ನಿನಗೆ ದಕ್ಕುವುದು ಎಷ್ಟು? ನೀನುಂಡ ಮುಷ್ಟಿ ಹಿಟ್ಟು ತಾನೇ?

ವಿವರಣೆ: ಮಹಾದೇವ ಭೂಪಾಲ ಕಾಶ್ಮೀರದ ಅರಸು. ಅವನ ಹೆಂಡತಿ ಗಂಗಾದೇವಿ. ಶ್ರೀಮಂ ತಿಕೆಯಲ್ಲಿಯೇ ಬದುಕಿದವರು. ಬಸವಣ್ಣನ ಮಹಿಮೆಯನ್ನು ಕೇಳಿ ಕಲ್ಯಾಣಕ್ಕೆ ಬಂದರು. ರಾಜ ವೈಭವಗಳನ್ನೆಲ್ಲ ತೊರೆದು ಶರಣ ಜೀವನವನ್ನು ಮೋಳಿಗೆ ಮಾರಯ್ಯ ಮಹಾದೇವಿ ಎಂಬ ಹೆಸರುಗಳಿಂದ ಸಾಗಿಸಿದರು. ಕಟ್ಟಿಗೆ ಮಾರುವ ಕಾಯಕವನ್ನು ಅಪ್ಪಿಕೊಂಡರು. ಶ್ರೀಮಂತಿಕೆಗೆ ಅರ್ಥವಿಲ್ಲ, ಎಷ್ಟು ಗಳಿಸಿದರೂ ಅದಕ್ಕೆ ತೃಪ್ತಿ ಇಲ್ಲ, ಅದರಿಂದ ಪ್ರಯೋಜನವೂ ಇಲ್ಲ ಎಂಬುದನ್ನು ನಡೆದು ತೋರಿದವರು ಈ ದಂಪತಿಗಳು. ಮಾರಯ್ಯನ ವಚನವೊಂದು ಹೀಗಿದೆ. ಆನೆ ಕುದುರೆ ಭಂಡಾರವಿರ್ದಡೇನೊ ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ. ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ? ಕೈವಿಡಿದ ಮಡದಿ ಪರರಸಂಗ, ಪ್ರಾಣ ವಾಯುವಿನ ಸಂಗ. ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿ: ಕಳಂಕ ಮಲ್ಲಿಕಾರ್ಜುನಾ.

ADVERTISEMENT

ಆನೆ, ಕುದುರೆ, ಬಂಗಾರದ ಕೋಶ ಎಷ್ಟಿದ್ದರೆ ಏನು ಪ್ರಯೋಜನ? ನಮ್ಮ ದೇಹಕ್ಕೆ ಬೇಕಾದದ್ದು ಒಂದು ಮುಷ್ಟಿ ಅಕ್ಕಿ, ಒಂದು ಗುಟುಕು ಹಾಲು, ಉಳಿದದ್ದು ಹೊರೆ. ಆ ಹೊರೆಗೆ ಅಷ್ಟೊಂದು ಒದ್ದಾಟ. ಹೊಟ್ಟೆಗೆ ಹಾಕಿದ್ದೆಲ್ಲ ದಕ್ಕೀತೇ? ಎಷ್ಟು ಜೀರ್ಣವಾಗುತ್ತದೋ ಅದು ಮಾತ್ರ ಪುಷ್ಟಿಯನ್ನು ಕೊಟ್ಟೀತು. ಉಳಿದದ್ದೆಲ್ಲ ಕಸವೆ. ಮಾರಯ್ಯ ಹೇಳುತ್ತಾನೆ, ಇಷ್ಟು ಕಷ್ಟಪಟ್ಟು ದುಡ್ಡು ಸೇರಿಸಿದರೂ ಕೊನೆಗೆ ಆಗುವುದೇನು? ದೇಹ ಮಣ್ಣಿಗೆ, ಒಡವೆಗಳು ಯಾರಿಗೋ, ಹೆಂಡತಿ ಪರರ ಪಾಲು, ಪ್ರಾಣ ಗಾಳಿಯ ಪಾಲು. ನಿನ್ನದೆನ್ನುವುದು ಉಳಿದದ್ದೇನು?

ಕಗ್ಗ ಕೇಳುವುದು ಅದನ್ನೇ. ನೀನು ಎಷ್ಟು ತಿಂದರೂ ಒಂದು ಮುಷ್ಟಿ ಹಿಟ್ಟು ಜೀರ್ಣವಾಗಿ ಶಕ್ತಿ ನೀಡೀತು. ಉಳಿದದ್ದೆಲ್ಲ ವ್ಯರ್ಥ. ಈ ಮಾತು ಕೇವಲ ಅನ್ನಕ್ಕೆ ಮತ್ತು ಹಣಕ್ಕೆ ಸಂಬಂಧಿಸಿದ್ದಲ್ಲ. ಸಾವಿರಾರು ಗ್ರಂಥಗಳನ್ನು ಓದಬಹುದು, ನೂರಾರು ಉಪನ್ಯಾಸ ಮಾಡಬಹುದು. ಆದರೆ ಓದಿದ್ದನ್ನು, ಮಾತನಾಡಿದ್ದನ್ನುಜೀರ್ಣಿಸಿಕೊಂಡು ಬದುಕಿಗೆ ಅನ್ವಯ ಮಾಡಿಕೊಂಡಿದ್ದೆಷ್ಟು? ಅರಗಿಸಿಕೊಂಡು ಜ್ಞಾನವಾದದ್ದು ಬದುಕಿಗೊಂದು ಸುಗಂಧ, ಉಳಿದದ್ದು ಗಾಳಿಯ ವಾಸನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.