ADVERTISEMENT

ಬೆರಗಿನ ಬೆಳಕು: ಪಾಪದ ವೃಕ್ಷ

ಡಾ. ಗುರುರಾಜ ಕರಜಗಿ
Published 2 ಡಿಸೆಂಬರ್ 2021, 19:45 IST
Last Updated 2 ಡಿಸೆಂಬರ್ 2021, 19:45 IST
ಡಿ.ವಿ.ಗುಂಡಪ್ಪ
ಡಿ.ವಿ.ಗುಂಡಪ್ಪ   

ನರಕ ತಪ್ಪಿತು ಧರ್ಮಜಂಗೆ, ದಿಟ, ಆದೊಡೇಂ? |
ನರಕದರ್ಶನ ದುಃಖ ತಪ್ಪದಾಯಿತಲ? ||
ದುರಿತ ತರುವಾರು ನೆಟ್ಟುದೊ, ನಿನಗಮುಂಟು ಫಲ |
ಚಿರಋಣದ ಲೆಕ್ಕವದು –ಮಂಕುತಿಮ್ಮ || 511 ||

ಪದ-ಅರ್ಥ: ದಿಟ=ಸತ್ಯ, ದುರಿತತರುವಾರು=ದುರಿತ(ಪಾಪ)+ತರು(ಮರ)+ಆರು, ನಿನಗಮುಂಟು=ನಿನಗಂ(ನಿನಗೆ)+ಉಂಟು,

ವಾಚ್ಯಾರ್ಥ: ಧರ್ಮರಾಜನಿಗೆ ನರಕ ತಪ್ಪಿದರೂ, ನರಕದರ್ಶನ ತಪ್ಪಲಿಲ್ಲ. ಪಾಪದ ಮರವನ್ನು ಯಾರು ನೆಟ್ಟರೋ, ಆದರೆ ಅದರ ಫಲ ನಿನಗೆ ತಪ್ಪದು. ಇದು ನಮಗರ್ಥವಾಗದ ಶಾಶ್ವತ ಋಣದ ಲೆಕ್ಕ.

ADVERTISEMENT

ವಿವರಣೆ: ಇದೊಂದು ಮಹಾಭಾರತದ ಧರ್ಮಸೂಕ್ಷ್ಮ ಪ್ರಸಂಗ. ಇದು ಧರ್ಮರಾಜನಿಗೆ ಬಂದ ನೀತಿ ಪರೀಕ್ಷೆ. ದ್ರೋಣಾಚಾರ್ಯರ ಅಧಿಪತ್ಯದಲ್ಲಿ ಯುದ್ಧ ಭೀಕರವಾಗಿ ನಡೆಯುತ್ತಿದೆ. ಆಚಾರ್ಯರು ಅಂದು ಕಾಲಭೈರವರಾಗಿದ್ದಾರೆ. ಆ ಸಮಯದಲ್ಲಿ ಕೃಷ್ಣ ಹೇಳಿದ, ‘ಈಗ ಎಲ್ಲರೂ ಜಯವನ್ನು ಮಾತ್ರ ಗಮನಿಸಿ. ಧರ್ಮಕ್ಕೆ ಈಗ ಎರಡನೆಯ ಸ್ಥಾನ. ಹಾಗೆ ಆಗದೆ ಹೋದರೆ ಎಲ್ಲರೂ ಧ್ವಂಸರಾಗಿ ಹೋಗುತ್ತಾರೆ. ದ್ರೋಣರು ಯುದ್ಧ ನಿಲ್ಲಿಸಬೇಕಾದರೆ ಅಶ್ವತ್ಥಾಮ ಸಾಯಬೇಕು. ನಿಮ್ಮಲ್ಲಿ ಯಾರಾದರೂ ಕೂಗಿಬಿಡಿ, ‘ಅಶ್ವತ್ಥಾಮ ಸತ್ತ’ ಎಂದು. ಅರ್ಜುನ ಅದಕ್ಕೆ ಒಪ್ಪಲಿಲ್ಲ. ಭೀಮ ಮಾತನ್ನು ಅರೆಸತ್ಯ ಮಾಡಲು, ಅಶ್ವತ್ಥಾಮ ಎಂಬ ಹೆಸರಿನ ಆನೆಯನ್ನು ಕೊಂದು ಅಶ್ವತ್ಥಾಮ ಸತ್ತ ಎಂದು ಕೂಗಿ ಆಚಾರ್ಯರಿಗೆ ಪುತ್ರ ಮರಣದ ಶಂಕೆಯನ್ನುಂಟು ಮಾಡಿದ. ಅವನ ಮಾತನ್ನು ನಂಬದೆ ಆಚಾರ್ಯರು ಯುಧಿಷ್ಠರನನ್ನು ಕೇಳಿದರು, ‘ಅಹತಂ ವಾ ಹತಂ ವಾ?’ ನನ್ನ ಮಗ ಸತ್ತನೆ, ಇಲ್ಲವೆ? ಧರ್ಮರಾಜ ಎಂದಿಗೂ ಸುಳ್ಳು ಹೇಳಲಾರ ಎಂಬ ನಂಬಿಕೆ ದ್ರೋಣಾಚಾರ್ಯರಿಗೆ. ಧರ್ಮರಾಯನಿಗೆ ಉಭಯಸಂಕಟ. ಅವನಿಗೆ ಸುಳ್ಳು ಹೇಳಲು ಭಯ ಆದರೆ ಜಯದಲ್ಲಿ ಆಸಕ್ತಿ. ಯೋಚಿಸಿ,

‘ಅಶ್ವತ್ಥಾಮಾ ಹತ ಇತಿ ಶಬ್ದ ಮುಚ್ಚೈಶ್ಚಕಾರ ಹ |
ಅವ್ಯಕ್ತಮಬ್ರವೀದ್ ರಾಜನ್ ಹತಃ ಕುಂಜರ ಇತ್ಯುತ||

ಎಂದುಬಿಟ್ಟ. ಹಾಗೆಂದರೆ ‘ಅಶ್ವತ್ಥಾಮ ಸತ್ತ’ ಎಂದು ಗಟ್ಟಿಯಾಗಿ ಹೇಳಿ ಯಾರಿಗೂ ಕೇಳಿಸದಂತೆ ಮೆಲುವಾಗಿ ‘ಸತ್ತದ್ದು ಆನೆ’ ಎಂದ.

ಇದೊಂದು ಧರ್ಮದ್ವೈಧ. ಎರಡು ಧರ್ಮಗಳ ನಡುವೆ ಸಾಧಿಸಬೇಕಾದ ಸಮನ್ವಯತೆಯ ಸೂತ್ರ. ದ್ರೋಣರನ್ನು ಯುದ್ಧದಿಂದ ಬಿಡಿಸುವುದು ಮುಖ್ಯ ಧರ್ಮ. ಅದಾಗದಿದ್ದರೆ ಅಧರ್ಮಿಗಳಾಗಿದ್ದ ಕೌರವರಿಗೆ ಜಯ. ಈ ಧರ್ಮವನ್ನು ನಡೆಸಲು ಬೇಕಾದ ಉಪಾಯ ಸಹಕಾರಿ ಧರ್ಮ. ಕೆಲವೊಮ್ಮೆ ದೊಡ್ಡ ಧರ್ಮವನ್ನು ಕಾಪಾಡುವ ಅವಸರದಲ್ಲಿ ಒಂದು ಸಣ್ಣ ಧರ್ಮವನ್ನು ಬಿಡಬೇಕಾದೀತು. ದೊಡ್ಡ ಅಧರ್ಮವನ್ನು ತಡೆಗಟ್ಟಲು ಒಂದು ಸಣ್ಣ ಅಧರ್ಮವನ್ನು ಸಹಿಸಬೇಕು. ಕೊಳೆಯನ್ನು ಬಳಿದು ತೆಗೆಯುವಾಗ ಕೈಗೆ ಕೊಳೆ ಅಂಟಿಕೊಳ್ಳುವುದು ಸಹಜ.

ಅಂತೆಯೇ ಕೊನೆಗೆ ಧರ್ಮರಾಜನನ್ನು ಇಂದ್ರ ಸ್ವರ್ಗಕ್ಕೆ ಕರೆದುಕೊಂಡು ಹೋಗುವಾಗ, ನರಕದ ಮಾರ್ಗದಲ್ಲಿ ರಥವನ್ನು ನಡೆಸಿ ನರಕದರ್ಶನ ಮಾಡಿಸುತ್ತಾನೆ. ನರಕವಾಸ ತಪ್ಪಿದರೂ, ನರಕದರ್ಶನ ತಪ್ಪಲಿಲ್ಲ. ಅದು ಹೇಳಿದ ಸುಳ್ಳಿಗೆ ಪ್ರತಿಫಲ. ಈ ಮಾತನ್ನು ಕಗ್ಗ ತುಂಬ ಕಾವ್ಯಾತ್ಮಕವಾಗಿ ಹೇಳುತ್ತದೆ. ಪಾಪದ ವೃಕ್ಷವನ್ನು ಯಾರು, ಯಾವಾಗ ನೆಟ್ಟರೋ? ಅದರ ಫಲಗಳು ತಿಂದವನಿಗೆ ಮಾತ್ರವಲ್ಲ. ಬುಡದಲ್ಲಿ ಕುಳಿತವನಿಗೂ ತಟ್ಟುತ್ತವೆ. ಇದೊಂದು ಋಣದ ಜಾಲ, ಅದು ಅನಂತವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.