ADVERTISEMENT

ಬೆರಗಿನ ಬೆಳಕು | ಪರತತ್ವ ದರ್ಶನದ ದಾರಿ

ಡಾ. ಗುರುರಾಜ ಕರಜಗಿ
Published 5 ಆಗಸ್ಟ್ 2020, 19:30 IST
Last Updated 5 ಆಗಸ್ಟ್ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಪಂಚಕವೊ, ಪಂಚಪಂಚಕವೊ, ಮಾಭೂತಗಳ |
ಹಂಚಿಕೆಯನರಿತೇನು? ಗುಣವ ತಿಳಿದೇನು? ||
ಕೊಂಚ ಕೊಂಚಗಳರಿವು ಪೂರ್ಣದರಿವಾದೀತೆ?||
ಮಿಂಚದುದು ಪರತತ್ವ – ಮಂಕುತಿಮ್ಮ || 320 ||

ಪದ-ಅರ್ಥ: ಪಂಚಕ=ಐದು, ಪಂಚಪಂಚಕ (ಇಪ್ಪತ್ತೈದು), ಮಾಭೂತಗಳ=ಮಹಾಭೂತಗಳ, ಹಂಚಿಕೆಯನರಿತೇನು=ಹಂಚಿಕೆಯನು+ಅರಿತೇನು, ಕೊಂಚಕೊಂಚಗಳರಿವು=ಕೊಂಚಕೊಂಚಗಳ+ಅರಿವು, ಪೂರ್ಣದರಿವಾದೀತೆ=ಪೂರ್ಣದ+ಅರಿವು+ಆದೀತೆ, ಮಿಂಚದದು=ಹೊಳೆಯದದು.

ವಾಚ್ಯಾರ್ಥ: ಮಹಾಭೂತಗಳು ಐದೋ, ಇಪ್ಪತೈದು, ಅವುಗಳ ಹಂಚಿಕೆಗಳನ್ನು ತಿಳಿದರೆ ಏನು ಪ್ರಯೋಜನ? ಅವುಗಳ ಗುಣಗಳನ್ನು ತಿಳಿದರೇನು ಫಲ? ಸ್ವಲ್ಪ ಸ್ವಲ್ಪದ ತಿಳಿವಿನಿಂದ ಪೂರ್ಣದ ತಿಳಿವು ದೊರಕೀತೇ? ಪರತತ್ವ ಹಾಗೆ ಹೊಳೆಯದು.

ADVERTISEMENT

ವಿವರಣೆ: ನಮ್ಮ ಪ್ರಪಂಚವನ್ನು ಸೃಷ್ಟಿಸಿರುವ ಮಹಾಭೂತಗಳು ಯಾವುವು? ಎಷ್ಟು? ಅವು ಐದೋ, ಇಪ್ಪತ್ತೈದೋ ಯಾರಿಗೆ ಗೊತ್ತು? ಅವು ಸೃಷ್ಟಿಯಲ್ಲಿ ಯಾವ ಪ್ರಮಾಣದಲ್ಲಿ ಹಂಚಿಕೆಯಾಗಿವೆ ಎಂಬುದನ್ನು ತಿಳಿದರೆ ಏನು ಪ್ರಯೋಜನ? ಆ ಮಹಾಭೂತಗಳ ಮೂಲ ಗುಣಗಳನ್ನು ತಿಳಿಯುವುದರಿಂದ ಯಾವ ಲಾಭ ನಮಗೆ? ಎಂಬ ಪ್ರಶ್ನೆಗಳು ನಮ್ಮ ಮುಂದೆ ಬರುತ್ತವೆ.

ಆದರೆ ಮನಸ್ಸು ಸ್ವಲ್ಪ ಹದವಾದಾಗ, ಪ್ರಪಂಚದ ಮೂಲವನ್ನು ತಿಳಿಯಬೇಕೆಂಬ ಆಸೆ, ಕುತೂಹಲ ಮೂಡುತ್ತದೆ. ಈ ಮನಸ್ಸಿನ ಕೆಲಸ ಜಗತ್ತನ್ನು ಪರಿಶೀಲಿಸಿ ತಿಳಿದುಕೊಳ್ಳುವುದು. ಆದರೆ ಮನಸ್ಸಿನ ಜೊತೆಗೆ ಬುದ್ಧಿಯೊಂದಿದೆಯಲ್ಲ! ಅದರ ಕೆಲಸ ಮನಸ್ಸು ನೀಡಿದ ತಿಳುವಳಿಕೆಯನ್ನು ಪರೀಕ್ಷಿಸಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತೀರ್ಮಾನಿಸುವುದು. ಇವೆರಡರ ಜೊತೆಗೆ ಅಂತರಂಗದಲ್ಲಿ ಅಹಂಕಾರವೊಂದಿದೆ. ಅದು ಪ್ರತಿಯೊಂದು ವಿಷಯದಲ್ಲೂ, ‘ಇದರಿಂದ ನನಗೇನು ಪ್ರಯೋಜನ?’ ‘ಇದನ್ನು ಯಾಕೆ ತಿಳಿಯಬೇಕು?’ ಎಂಬ ದೃಷ್ಟಿಯಲ್ಲಿ ಮೂಲವನ್ನು ಕಾಣುವ ಪ್ರಯತ್ನಕ್ಕೆ ಅಡ್ಡವಾಗುತ್ತದೆ.

ನಮ್ಮ ಕಣ್ಣಿಗೆ ಮಂಜು ಕವಿದಂತೆ ಬುದ್ಧಿಗೂ ತೆರೆ ಕವಿಯುತ್ತದೆ. ಇದಕ್ಕೆ ಪೂರ್ವಜನ್ಮದ ವಾಸನೆಗಳು ಒಂದು ಕಾರಣವಾದರೆ ಜಗತ್ತಿನ ಮಿಂಚು, ಅಬ್ಬರ, ರುಚಿ ಮತ್ತೊಂದು ಕಾರಣವಾಗುತ್ತದೆ. ಇದರೊಂದಿಗೆ ಬೆಳೆದು ಬಂದ ಅಭ್ಯಾಸಗಳು, ಹೊಸದಾಗಿ ಬಂದ ತರ್ಕ, ವಿತರ್ಕಗಳು ಬುದ್ಧಿಯ ಕಿರಣಗಳನ್ನು ಅಶಕ್ತಗೊಳಿಸುತ್ತವೆ. ಮೊದಲೇ ಮನುಷ್ಯನ ಬುದ್ಧಿ ಅಮಿತವಾದದ್ದಲ್ಲ. ಅದರಲ್ಲಿ ಅದು ಮತ್ತಷ್ಟು ಕುಂಠಿತವಾದಾಗ ಅದು ನೋಡುವ ಜಗತ್ತು ಸ್ಪಷ್ಟವಾಗಿ ಗೋಚರವಾಗದು. ಹೀಗೆ ಅರೆಕುರುಡು ದೃಷ್ಟಿಗೆ ಪ್ರಪಂಚದ ಯಥಾಸ್ಥಿತಿ ಹೇಗೆ ಅರ್ಥವಾದೀತು?

ಇದಿಷ್ಟೇ ಅದರೆ ಚೆನ್ನಾಗಿತ್ತು. ಆದರೆ ಪ್ರಕೃತಿಯಲ್ಲಿರುವ ಸತ್ವ, ರಜಸ್ಸು, ತಮಸ್ಸುಗಳೆಂಬ ಮೂರು ಗುಣಗಳು ಮತ್ತಷ್ಟು ಮಬ್ಬು ಕವಿಸುತ್ತವೆ. ಪರತತ್ವ ಈ ಮೂರು ಗುಣಶಕ್ತಿಗಳನ್ನು ಮೀರಿದ್ದು. ಎಲ್ಲ ಮುಸುಕುಗಳಿಂದಾಗಿ ನಮಗೆ ದೊರೆಯುವುದು ಕೊಂಚಕೊಂಚವಾದ ಅರಿವು. ಅದನ್ನೇ ಪೂರ್ಣಜ್ಞಾನ ಎನ್ನುವುದು ಸಾಧ್ಯವಾದೀತೇ?

ಪರಿಪೂರ್ಣವಾದ ಪರತತ್ವವನ್ನು ತಿಳಿಯಬೇಕಾದರೆ, ವಿಷಯವನ್ನು ತಿಳಿದವರಿಂದ ಕೇಳಿ ಕಲಿಯಬೇಕು, ಕೇಳಿದ್ದರೆ ಸಾಲದು, ಅದನ್ನು ಬುದ್ಧಿಯಿಂದ ಗ್ರಹಿಸಬೇಕು, ಬುದ್ಧಿಗ್ರಹಿಕೆ ಮಾತ್ರ ಸಾಕಾಗದು, ಮನಸ್ಸು ಗ್ರಹಿಸಿ ತಾನೂ, ಆ ಚಿಂತನೆಯೂ ಒಂದಾಗಬೇಕು. ವಿಷಯದೊಡನೆ ಒಂದಾಗುವುದೇ - ಪೂರ್ಣಾನುಭವ. ಆಗ ಮೊದಲಿದ್ದ ಪ್ರಶ್ನೆಗಳೆಲ್ಲ ಮಾಯವಾಗುತ್ತವೆ, ಮನಸ್ಸು ನಿಚ್ಚಳವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.