ADVERTISEMENT

ಬೆರಗಿನ ಬೆಳಕು: ಜೀವನ್ಮುಕ್ತ

ಡಾ. ಗುರುರಾಜ ಕರಜಗಿ
Published 18 ಜನವರಿ 2023, 23:29 IST
Last Updated 18 ಜನವರಿ 2023, 23:29 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ - |
ಲೆಲ್ಲೆಲ್ಲಿಯುಂ ನೋಡಿ ನಡೆದು ನಗುತಳುತ ||
ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ |
ಬಲ್ಲವನೆ ಮುಕ್ತನಲ - ಮಂಕುತಿಮ್ಮ || 803 ||

ಪದ-ಅರ್ಥ: ಎಲ್ಲರೊಳು=ಎಲ್ಲರಲ್ಲಿ, ತನ್ನೊಳಗೆಲ್ಲರಿರುವವೋಲೆಲ್ಲೆಲ್ಲಿಯುಂ=ತನ್ನೊಳಗೆ+ ಎಲ್ಲರೂ+ಇರುವವೋಲ್(ಇರುವಂತೆ)+ಎಲ್ಲೆಲ್ಲಿಯುಂ(ಎಲ್ಲೆಡೆಗೂ), ತಾ=ತಾನು.

ವಾಚ್ಯಾರ್ಥ: ಎಲ್ಲರಲ್ಲಿ ತನ್ನನ್ನು ಮತ್ತು ತನ್ನಲ್ಲಿ ಎಲ್ಲರೂ ಇರುವಂತೆ ಎಲ್ಲೆಡೆಗೆ ನೋಡಿ ನಡೆದು, ಅವರೊಂದಿಗೆ ನಗುತ್ತ, ಅಳುತ್ತ, ಲೋಕಕ್ಕೆ ಸಂತಸ ನೀಡುವ ಬೆಲ್ಲವಾಗಿ, ತನ್ನ ಮಟ್ಟಿಗೆ ತಾನು ಕಲ್ಲಿನಂತೆ ಧೃಡವಾಗಿ ಇರಬಲ್ಲವನೇ ಮುಕ್ತ.

ADVERTISEMENT

ವಿವರಣೆ: ಬಸವಣ್ಣ, ಕಲ್ಯಾಣವೆಂಬ ಸಾಮಾನ್ಯ ರಾಜ್ಯಕ್ಕೆ ದೈವೀಕಳೆಯನ್ನು ತಂದು ಕೊಟ್ಟವರು. ಅದನ್ನೊಂದುಕೈಲಾಸದಂತೆ ಮಾಡಲು ಕಾರ್ಯಯೋಗವನ್ನು ಕೈಕೊಂಡು ಅಹರ್ನಿಶಿ ದುಡಿದರು. ಸಮಾನತೆಗಾಗಿ ಒದ್ದಾಡಿದರು, ಜಾತಿ ಮತಗಳ ಭೇದಗಳನ್ನು ತೊಡೆದು ಹಾಕಲು ಶ್ರಮಿಸಿದರು. ಅವೆಲ್ಲ ಸುಲಭವಾಗಿ ಆಗುವಂಥವುಗಳೇ? ಶತಮಾನಗಳಿಂದ ಬಂದ ಜಿಡ್ಡನ್ನು ತೆಗೆದು ಹಾಕಲು ಹಗಲು ರಾತ್ರಿ ಪರಿಶ್ರಮ ಪಟ್ಟರು. ಅವರ ಸತತವಾದ ಪ್ರಯತ್ನದಿಂದ ಕಲ್ಯಾಣ ಭೂಕೈಲಾಸವಾಗಿತ್ತು. ಅವರ ಮಹಾಮನೆ ಶ್ರದ್ಧಾಕೇಂದ್ರವಾಗಿತ್ತು. ಆದರೂ ಅವರಿಗೊಂದು ಜವಾಬ್ದಾರಿ. ಅದು ಬಿಜ್ಜಳನ ಮಂತ್ರಿಯ ಕಾಯಕ. ತಮ್ಮ ಕಾರ್ಯನಿರ್ವಹಣೆಯಲ್ಲಿ ಯಾವ ಕೊರೆಯೂ ಆಗದಂತೆ ರಾಜ್ಯದ ಕ್ಷೇಮಕ್ಕಾಗಿ ದುಡಿದರು. ಅವರನ್ನು ಕಂಡರೆ ಎಲ್ಲರಿಗೂ, ರಾಜನಿಗೂ ಸಹಿತ, ಅಪಾರ ಗೌರವ, ಪ್ರೀತಿ. ಹೀಗೆ ಕಲ್ಯಾಣ, ಬಸವಣ್ಣನವರನ್ನು ಗಟ್ಟಿಯಾಗಿ ಹಿಡಿದಪ್ಪಿಕೊಂಡಿತ್ತು. ಆದರೆ ಏನೋ ಒಂದು ಅಹಿತಕರ ಘಟನೆ ನಡೆಯಿತು. ಅಪವಾದ ಬಂದಿತು.

ಒಂದು ಮಾತನ್ನೂ ಆಡದೆ, ಬಸವಣ್ಣನವರು ತಾವೇ ಕಟ್ಟಿ ನಿಲ್ಲಿಸಿದ್ದ ಸುಂದರ ಕಲ್ಯಾಣವನ್ನು ಬಿಟ್ಟು ನಗುನಗುತ್ತ ಕೂಡಲಸಂಗನತ್ತ ನಡೆದೇಬಿಟ್ಟರು. ತನಗಾಗಿ, ತನ್ನದೆನ್ನುವ ಯಾವ ವಸ್ತುವನ್ನೂ ಮುಟ್ಟದೆ ನಿರಾಭಾರಿಯಾಗಿ ಹೊರಟುಬಿಟ್ಟರು.

ಇದು ಪರಮ ನಿರ್ಲಿಪ್ತತೆ. ಎಲ್ಲವೂ ತನ್ನದೆ, ಎಲ್ಲರೂ ತನ್ನವರೇ ಎಂದು ಹಗಲಿರುಳು ದುಡಿದದ್ದು ಸುಳ್ಳಲ್ಲ. ಆದರೆ ಯಾವುದೂ ತನ್ನದಲ್ಲ ಎಂಬ ನಿರ್ಮೋಹದಿಂದ ಹೊರಟದ್ದೂ ಸುಳ್ಳಲ್ಲ. ಈ ನಿರ್ಲಿಪ್ತತೆಯನ್ನು ಹೊಂದಿದ ಮುಕ್ತನ ಬಗ್ಗೆ ಕಗ್ಗ ಹೇಳುತ್ತದೆ. ಆತ ಎಲ್ಲರೂ ತನ್ನೊಳಗೇ ಇರುವರೆಂದು ಭಾವಿಸುತ್ತ, ತಾನೂ ಎಲ್ಲರೊಳಗೆ ಒಂದಾಗಿ ಇರುತ್ತ, ಅವರ ಸುಖ, ದುಃಖಗಳಿಗೆ ಪ್ರತಿಧ್ವನಿಯಾಗುತ್ತ, ಲೋಕದ ಜನರಿಗೆಲ್ಲ ಸಂತಸದ ಬೆಲ್ಲವನ್ನು ಹಂಚುತ್ತಾನೆ. ಆದರೆ ತನ್ನ ಕೆಲಸಗಳಿಂದ ಸ್ವಂತಕ್ಕೆ ಯಾವ ಲಾಭವನ್ನೂ ಅಪೇಕ್ಷಿಸುವುದಿಲ್ಲ. ಅವನು ಬ್ರಹ್ಮವನ್ನು ಕಂಡವನು. ಎಲ್ಲದರಲ್ಲೂ, ಎಲ್ಲರಲ್ಲೂ ತನ್ನನ್ನೇ, ಬ್ರಹ್ಮವನ್ನೇ ಕಾಣುತ್ತಾನೆ.ಅವನೇ ಜೀವನ್ಮುಕ್ತ. ಆ ಮುಕ್ತ, ಜಗತ್ತಿನಲ್ಲಿ ಶಾಶ್ವತವಾಗಿ ಇರುವವನಂತೆ, ಜಗತ್ತಿನಲ್ಲಿ ಬದುಕಿರುವಷ್ಟು ಕಾಲ ದುಡಿಯುತ್ತಾನೆ. ಆದರೆ ಯಾವುದಕ್ಕೂ ಅಂಟಿಕೊಳ್ಳದೆ ನಿರ್ಲಿಪ್ತನಾಗಿರುತ್ತಾನೆ. ಅದನ್ನೇ ಕಗ್ಗ, “ಬೆಲ್ಲ ಲೋಕಕ್ಕಾಗಿ, ತನಗೆ ತಾಂ ಕಲ್ಲಾದವನು” ಎಂದು ವರ್ಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.