ADVERTISEMENT

ಮಾತೃ ಹೃದಯ

ಡಾ. ಗುರುರಾಜ ಕರಜಗಿ
Published 18 ಮಾರ್ಚ್ 2020, 2:33 IST
Last Updated 18 ಮಾರ್ಚ್ 2020, 2:33 IST
   

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ನಗರದ ಒಂದು ಮನೆಯಲ್ಲಿ ಮಗ ತಾಯಿಯನ್ನು ಬಹಳ ಚೆನ್ನಾಗಿ ದೇವತೆಯಂತೆ ನೋಡಿಕೊಳ್ಳುತ್ತಿದ್ದ. ತಾಯಿಯ ಬಗ್ಗೆ ಆತನಿಗೆ ಅಪಾರ ಪ್ರೀತಿ. ತಾಯಿಯೇ ಒತ್ತಾಯ ಮಾಡಿ ಮಗನಿಗೆ ಮದುವೆ ಮಾಡಿಸಿದಳು. ಕೆಲಕಾಲ ಸೊಸೆಯೂ ಅತ್ತೆಯನ್ನು ಪ್ರೀತಿಯಿಂದ ನೋಡಿಕೊಂಡಳು.

ದಿನ ಕಳೆದಂತೆ ಸೊಸೆಗೆ ಮುದುಕಿ ಅತ್ತೆ ಇರುವ ತನಕ ಗಂಡ ತನ್ನ ಕಡೆ ಗಮನ ಹರಿಸಲಾರ ಎನ್ನಿಸಿತು. ಆದ್ದರಿಂದ ಮಗ ಹೊರಗೆ ಕೆಲಸಕ್ಕೆ ಹೋದಾಗ ಅತ್ತೆಗೆ ತುಂಬ ಕಿರುಕುಳ ನೀಡತೊಡಗಿದಳು. ಗಂಡ ಮನೆಗೆ ಬಂದೊಡನೆ, ಅತ್ತೆ ಹಾಗೆ ಮಾಡಿದರು, ಹೀಗೆ ಮಾಡಿದರು ಎಂದು ತಕರಾರು ಹೇಳಲು ಪ್ರಾರಂಭಿಸಿದಳು. ಮೊದಮೊದಲು ಗಂಡ ಹೆಂಡತಿಯ ಮಾತನ್ನು ನಂಬದೆ ಆಕೆಯನ್ನೇ ಬೈದ. ಆದರೆ ದಿನನಿತ್ಯವೂ ಸುಳ್ಳನ್ನೇ ಹೇಳುತ್ತಿದ್ದರೆ ಒಂದು ದಿನ ಅದು ಸತ್ಯವೆನ್ನಿಸುವುದಿಲ್ಲವೆ? ಹಾಗೆಯೇ ಮಗನಿಗೂ ತಾಯಿಯದೇ ಎಲ್ಲ ತೊಂದರೆ ಎಂದು ಮನವರಿಕೆಯಾಗಿ ಆಕೆಯನ್ನು ಮನೆಯಿಂದ ಹೊರಗೆ ಹಾಕಿಬಿಟ್ಟ. ಪಾಪ! ಮುದುಕಿ ಊರೆಲ್ಲ ಅಡ್ಡಾಡುತ್ತ, ಭಿಕ್ಷೆ ಬೇಡುತ್ತ ದೇವಸ್ಥಾನದ ಮುಂದಿದ್ದ ಅನಾಥಾಶ್ರಮದಲ್ಲಿ ಉಳಿದಳು.

ಮುಂದೆ ಒಂದು ವರ್ಷದಲ್ಲಿ ಸೊಸೆ ಗರ್ಭಿಣಿಯಾದಳು. ‘ಆ ಅಮಂಗಳದ ಅತ್ತೆ ಮನೆಯಲ್ಲಿ ಇರುವವರೆಗೆ ತಾನು ಗರ್ಭವತಿಯಾಗಲಿಲ್ಲ, ಆಕೆ ಹೊರಗೆ ಹೋದ ಮೇಲೆ ಭಗವಂತನ ಕೃಪೆಯಾಯಿತು’ ಎಂದು ನೆರೆಹೊರೆಯಲ್ಲಿ ಸುದ್ದಿಯನ್ನು ಹಬ್ಬಿಸಿದಳು. ನಂತರ ಮಗ ಹುಟ್ಟಿದ ಮೇಲಂತೂ, ‘ಆ ದರಿದ್ರದ ಅತ್ತೆ ಹೊರಗೆ ಹೋಗುವವರೆಗೆ ನಮ್ಮ ವಂಶ ಬೆಳೆಯುವಂತಿರಲಿಲ್ಲ. ಈಗ ನೋಡಿ ಹೇಗೆ ಅಭಿವೃದ್ಧಿಯಾಗುತ್ತಿದೆ? ಮನೆಯಲ್ಲಿ ಶಾಂತಿ, ಸಂತೋಷ ತುಂಬಿದೆ’ ಎಂದು ಗಂಡನಿಗೂ ಹೇಳಿ ಊರೆಲ್ಲ ಈ ಮಾತು ಮುಟ್ಟುವಂತೆ ನೋಡಿಕೊಂಡಳು. ಈ ವಿಷಯ ಅತ್ತೆಗೆ ತಿಳಿದು ಮನಸ್ಸಿಗೆ ಬಹಳ ನೋವಾಯಿತು. ನಾನು ಸೊಸೆಗೆ ಯಾವ ಅನ್ಯಾಯವನ್ನು ಮಾಡಿರಲಿಲ್ಲ. ಆಕೆ ಸುಮ್ಮನೆ ನನ್ನ ಮೇಲೆ ಅಪಾದನೆ ಹೊರಿಸಿದಳು. ಇಷ್ಟಾದರೂ ನಾನೇ ಅಮಂಗಳೆ, ನಾನು ಮನೆಯಿಂದ ಹೊರಗೆ ಬಂದ ಮೇಲೆಯೇ ಎಲ್ಲವೂ ಚೆನ್ನಾಗಿ ಬೆಳೆಯಿತೆನ್ನುವುದಾದರೆ ಧರ್ಮ ಸತ್ತು ಹೋಗಿರಬೇಕು. ಈ ಸತ್ತ ಧರ್ಮ ನನಗೇಕೆ ಬೇಕು? ಅದರ ಶ್ರಾದ್ಧ ಮಾಡಿಬಿಡುತ್ತೇನೆ ಎಂದು ತೀರ್ಮಾನಿಸಿದಳು.

ADVERTISEMENT

ಮರುದಿನ ಆಕೆ ಬಿಳಿ ಎಳ್ಳು, ಅಕ್ಕಿ, ಬೇಯಿಸಲು ಪಾತ್ರೆ, ಸೌಟು ಎಲ್ಲವನ್ನು ತೆಗೆದುಕೊಂಡು ಸ್ಮಶಾನಕ್ಕೆ ಬಂದಳು. ಮೂರು ತಲೆಬುರುಡೆಗಳನ್ನಿಟ್ಟು ಒಲೆ ಮಾಡಿದಳು. ನಂತರ ನದಿಗೆ ಹೋಗಿ ತಲೆಯ ಮೇಲೆ ನೀರು ಹಾಕಿಕೊಂಡು, ಕೂದಲನ್ನು ಒರೆಸಿಕೊಳ್ಳದೆ, ತಲೆ ಕೆದರಿಕೊಂಡು, ಎಳ್ಳನ್ನು ತೊಳೆದು ಬೇಯಿಸತೊಡಗಿದಳು.

ಆಗ ಬೋಧಿಸತ್ವ ದೇವೇಂದ್ರ ಶಕ್ರನಾಗಿದ್ದ. ತನ್ನ ದಿವ್ಯದೃಷ್ಟಿಯಿಂದ ಇದನ್ನು ಗಮನಿಸಿ, ಅತ್ತೆಯ ದುಃಖವನ್ನು ಕಂಡು ಕೆಳಗಿಳಿದು ಬಂದ. ‘ಅಮ್ಮ ಸ್ಮಶಾನದಲ್ಲಿ ಏಕೆ ಎಳ್ಳಿನ ಅನ್ನವನ್ನು ಮಾಡುತ್ತಿದ್ದೀರಿ?’ ಎಂದು ಕೇಳಿದ. ಆಕೆ ‘ಅಯ್ಯಾ, ದೇವೇಂದ್ರ ಧರ್ಮಸತ್ತು ಹೋಗಿದೆಯಲ್ಲ, ಅದಕ್ಕೆ ಶ್ರಾದ್ಧ ಮಾಡದಿದ್ದರೆ ಸದ್ಗತಿ ದೊರಕುವುದಿಲ್ಲ’ ಎಂದು ತನ್ನ ಕಥೆಯನ್ನು ವಿವರವಾಗಿ ಹೇಳಿದಳು. ಆಗ ಶಕ್ರ, ‘ಹಾಗಾದರೆ ಈ ಕೂಡಲೆ ನಿನ್ನ ಮಗ, ಸೊಸೆ ಹಾಗೂ ಮೊಮ್ಮಗ ಮೂವರನ್ನೂ ಸುಟ್ಟು ಭಸ್ಮ ಮಾಡಿಬಿಡುತ್ತೇನೆ’ ಎಂದ. ತಕ್ಷಣ ತಾಯಿಯ ಹೃದಯ ಕರಗಿತು, ‘ಅಯ್ಯಾ ಶಕ್ರ, ಹಾಗೆ ಮಾಡಬೇಡ,ನನ್ನ ಮಗ ಮತ್ತವನ ಪರಿವಾರ ಚೆನ್ನಾಗಿರಲಿ, ಅವರಿಗೆ ತೊಂದರೆಯಾಗುವುದು ಬೇಡ’ ಎಂದಳು. ಶಕ್ರ ಆಕೆಯ ಮಗ, ಸೊಸೆಯರನ್ನು ಕರೆದು ಬುದ್ಧಿ ಹೇಳಿ ಮತ್ತೆ ಅವರನ್ನು ಒಂದುಗೂಡಿಸಿದ.

ತನಗೆಷ್ಟು ಅನ್ಯಾಯ ಮಾಡಿದರೂ ತಾಯಿಯ ಹೃದಯ ಮಗನಿಗೆ ಕೊಂಚವೂ ತೊಂದರೆಯಾಗುವುದನ್ನು ಸಹಿಸುವುದಿಲ್ಲವಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.