ADVERTISEMENT

ಬೆರಗಿನ ಬೆಳಕು: ನಗು–ಅಳು

ಡಾ. ಗುರುರಾಜ ಕರಜಗಿ
Published 30 ಜೂನ್ 2021, 19:30 IST
Last Updated 30 ಜೂನ್ 2021, 19:30 IST
   

ನಗುವೊಂದು ರಸಪಾಕವಳುವೊಂದು ರಸಪಾಕ |
ನಗುವಾತ್ಮಪರಿಮಳವ ಪಸರಿಸುವ ಕುಸುಮ ||
ದುಗುಡವಾತ್ಮವ ಕಡೆದು ಸತ್ತ್ವವೆತ್ತುವ ಮಂತು |
ಬಗೆದೆರಡನುಂ ಭುಜಿಸು – ಮಂಕುತಿಮ್ಮ || 434 ||

ಪದ-ಅರ್ಥ: ನಗುವಾತ್ಮ= ನಗುವು+ ಆತ್ಮ, ದುಗುಡವಾತ್ಮವ= ದುಗುಡವು (ಆತಂಕ, ದುಃಖ)+ಆತ್ಮವ, ಸತ್ತ್ವವೆತ್ತುವ= ಸತ್ತ್ವವ+ ಎತ್ತುವ, ಮಂತು= ಕಡೆಗೋಲು, ಬಗೆದೆರಡನುಂ= ಬಗೆದು+ ಎರಡನುಂ(ಎರಡನ್ನೂ), ಭುಜಿಸು= ಸ್ವೀಕರಿಸು, ಅನುಭವಿಸು.

ವಾಚ್ಯಾರ್ಥ: ನಗುವು ಒಂದು ಅನುಭವದ ಪಾಕ, ಅಳುವೂ ಒಂದು ರಸಪಾಕ. ನಗುವು ಆತ್ಮದ ಪರಿಮಳವನ್ನು ಹರಡುವ ಹೂವು. ಅಂತೆಯೆ, ದುಗುಡ, ದು:ಖಗಳು ಆತ್ಮದ ಮಂಥನ ಮಾಡಿ, ಸತ್ವವನ್ನು ಹೊರತೆಗೆಯುವ ಕಡೆಗೋಲು. ಇದನ್ನು ತಿಳಿದು ಎರಡನ್ನೂ ಅನುಭವಿಸು.

ADVERTISEMENT

ವಿವರಣೆ: ಪ್ರಪಂಚದೊಂದಿಗಿನ ನಮ್ಮ ವ್ಯವಹಾರ ಕೆಲವೊಮ್ಮೆ ಮುದವನ್ನು ನೀಡುತ್ತದೆ. ಮತ್ತೆ ಕೆಲವೊಮ್ಮೆ ಆಘಾತವನ್ನು ನೀಡಿ ದುಃಖವನ್ನು ಕೊಡುತ್ತದೆ. ಈ ಅನುಭವಗಳು ಪಾಕವಿದ್ದಂತೆ. ಪಾಕ ಎಂಬ ಶಬ್ದಕ್ಕೆ ಬೇಯಿಸು, ಹಣ್ಣಾಗು ಎಂಬ ಅರ್ಥಗಳು ಮೂಡುತ್ತವೆ. ಅದೊಂದು ಪಕ್ವವಾಗುವ ಪರಿ. ಬದುಕಿನಲ್ಲಿ ಸಂತಸದ, ತೃಪ್ತಿಯ, ಸಾಧನೆಯ ಗಳಿಗೆಗಳು ಬಂದಾಗ ಮನಸ್ಸು ಸಂತೋಷಗೊಳ್ಳುತ್ತದೆ. ಅದರ ವ್ಯಕ್ತರೂಪವೆ ನಗು. ನಗು ಒಂದು ಪರಿಮಳವನ್ನು ಸೂಸುವ ಹೂವಿದ್ದಂತೆ. ಅದನ್ನು ಕಂಡು, ಆಸ್ವಾದಿಸಿ ಯಾರಾದರೂ ಬೇಸರ ಮಾಡಿಕೊಳ್ಳುತ್ತಾರೆಯೇ? ಅರಳಿ ನಿಂತು ಸುವಾಸನೆಯನ್ನು ಪಸರಿಸುವ ಹೂವು ಹತ್ತಿರದ ವ್ಯಕ್ತಿಯ ಮನಸ್ಸನ್ನು ಅರಳಿಸುತ್ತದೆ, ದಂದುಗವನ್ನು ಮರೆಸುತ್ತದೆ. ಹಾಗೆಯೇ ಸಂತೋಷದಲ್ಲಿ, ನಗುನಗುತ್ತ ಇರುವ ವ್ಯಕ್ತಿ ತನ್ನ ಸುತ್ತಲೂ ಧನಾತ್ಮಕವಾದ, ಉತ್ಸಾಹಪೂರಿತ ವಾತಾವರಣವನ್ನು ಹರಡುತ್ತಾನೆ. ಇದರಂತೆಯೇ ಅಳು ಕೂಡ ಒಂದು ಪಾಕ.

ಕಷ್ಟ, ದುಗುಡಗಳಲ್ಲಿ ಬೆಂದು ಬರುವುದು ಪಾಕವೇ ಸರಿ. ಅದೊಂದು ಅಗ್ನಿಪರೀಕ್ಷೆ. ಬೆಂಕಿಯಲ್ಲಿ ಹಾದು ಬಂದವರು ಪುಟವಿಟ್ಟ ಬಂಗಾರದಂತೆ ಪರಿಶುದ್ಧರಾಗುತ್ತಾರೆ. ಆದರೆ ಅದಕ್ಕೆ ಧೈರ್ಯ ಬೇಕು, ಆತ್ಮವಿಶ್ವಾಸಬೇಕು. ಬೆಂದರೆ ಬೇಂದ್ರೆಯಾಗುತ್ತಾರೆ ಎನ್ನುವ ಮಾತು ಕ್ಲೀಷೆಯಾಗುವಷ್ಟು ಬಳಕೆಯಾಗಿತ್ತು. ಒಂದು ಬಾರಿ ಅವರನ್ನು ಪರಿಚಯಿಸುವವರು ಆ ಮಾತನ್ನು ಹೇಳಿದಾಗ ಬೇಂದ್ರೆ ಕೋಪದಿಂದ ಸಿಡಿದರು. ‘ಬೆಂದ್ರ ಬೇಂದ್ರೆ ಆಗತಾರೇನು? ಒಳಗ ಹಸೀ ಇಲ್ಲಾಂದ್ರ ಸುಟ್ಟು ಬೂದಿ ಆಗತಾರ’. ಅದು ಸತ್ಯದ ಮಾತು. ಬರೀ ಬೇಂದ್ರೆಯವರಿಗೆ ಮಾತ್ರ ಅನ್ವಯಿಸುವುದಿಲ್ಲ. ಒಳಗೆ ಆತ್ಮವಿಶ್ವಾಸದ ಹಸಿ ಇಲ್ಲದಿದ್ದರೆ ಕಷ್ಟಗಳು ಮನುಷ್ಯನನ್ನು ಬೂದಿ ಮಾಡುತ್ತವೆ. ಆದರೆ ಛಲ, ವಿಶ್ವಾಸವಿದ್ದರೆ ಬಂಗಾರವನ್ನು ಬೆಂಕಿಗೆ ಹಾಕಿದಾಗ ಕಸರು ಮಾತ್ರ ಸುಟ್ಟು ಬಂಗಾರ ಮತ್ತಷ್ಟು ಹೊಳಪಾಗುವಂತೆ ವ್ಯಕ್ತಿತ್ವದ ಸತ್ವ ಮೇಲೆದ್ದು ಬರುತ್ತದೆ. ಇದನ್ನು ಕಗ್ಗ ಸುಂದರವಾಗಿ ಹೇಳುತ್ತದೆ. ನಗು ಎನ್ನುವುದು ಆತ್ಮದ ಪರಿಮಳವಾದರೆ, ದುಃಖವನ್ನು ತೋರಿಸುವ ಅಳು, ಆತ್ಮವನ್ನು ಮಥಿಸಿ, ಅಂತರ್ಗತವಾದ ಸತ್ವನ್ನು ಹೊರತೆಗೆಯುವ ಕಡೆಗೋಲು ಇದ್ದಂತೆ. ಎರಡೂ ನಮಗೆ ಪ್ರಯೋಜನವಾದವುಗಳೇ, ಅವಶ್ಯವಾದವೇ. ಅವೆರಡನ್ನು ಸಮಾನವಾಗಿ ತೆಗೆದುಕೊಂಡು, ಬದುಕಿನ ಔನ್ನತ್ಯಕ್ಕೆ ಪ್ರಯತ್ನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.