ADVERTISEMENT

ಬೆರಗಿನ ಬೆಳಕು: ಕಾಡಿನಲ್ಲಿ ವಸತಿಯ ಶೋಧ

ಡಾ. ಗುರುರಾಜ ಕರಜಗಿ
Published 29 ಜೂನ್ 2021, 19:30 IST
Last Updated 29 ಜೂನ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ವೆಸ್ಸಂತರ ಎಷ್ಟು ಸಂತೈಸಿದರೂ ರಾಜಪ್ರಮುಖರು, ನಗರದ ಜನ ತಂಡತಂಡವಾಗಿ ಧರ್ಮಶಾಲೆಯ ಮುಂದೆ ಬಂದು ನೆರೆದರು. ನೀವು ಯಾವಾಗಲೂ ಶುಭಶಕುನ, ನೀವು ಕಾಲಿಟ್ಟೆಡೆಗೆ ಮಂಗಳವಾಗುತ್ತದೆ. ನೀವು ಅನಾಯಾಸವಾಗಿ ಇಲ್ಲಿಗೆ ಬಂದಿದ್ದೀರಿ. ನಿಮ್ಮನ್ನು ನಾವು ಬಿಟ್ಟು ಕೊಡಲಾರೆವು. ನೀವೇ ಈ ದೇಶದ ರಾಜರಾಗಿ, ನಮ್ಮನ್ನು ಆಳಿ ಅಥವಾ ನೀವು ಒಪ್ಪಿಗೆ ಕೊಟ್ಟರೆ ನಾವೆಲ್ಲ ದಂಡೆತ್ತಿ ಸಿವಿರಾಜ್ಯಕ್ಕೆ ಹೋಗಿ ರಾಜನನ್ನು ಸೋಲಿಸಿ ಆ ರಾಜ್ಯವನ್ನು ತಮಗೆ ಕೊಡಿಸುತ್ತೇನೆ.

ನೀವು ಎರಡೂ ದೇಶಗಳನ್ನು ಆಳಿ ಎಂದು ಕೂಗಾಡತೊಡಗಿದರು. ಆಗ ವೆಸ್ಸಂತರ ಎದ್ದು ನಿಂತು ಎತ್ತರದ ಧ್ವನಿಯಲ್ಲಿ ಸ್ಪಷ್ಟವಾಗಿ ಹೇಳಿದ, ‘ಚೆತಿಯ ದೇಶದ ಪ್ರಜೆಗಳೇ, ದಯವಿಟ್ಟು ನನ್ನ ಮಾತು ಕೇಳಿ. ನಾನು ಸಿವಿ ದೇಶದಿಂದ ಭ್ರಷ್ಟನಾಗಿ ಬಂದಿದ್ದೇನೆ. ನೀವು ನನಗೆ ಆಶ್ರಯಕೊಟ್ಟರೆ, ನನ್ನನ್ನೇ ರಾಜನನ್ನಾಗಿ ಮಾಡಿದರೆ ಅವರಿಗೆ ಕೋಪ ಬರುತ್ತದೆ. ಅದಲ್ಲದೆ ನಾನು ಇನ್ನು ಮುಂದೆ ಯಾವ ರಾಜ್ಯವನ್ನು ಆಳಬಾರದೆಂದು ತೀರ್ಮಾನ ಮಾಡಿದ್ದೇನೆ. ನೀವು ನನಗೆ ಆದರ, ಅತಿಥ್ಯ, ಸತ್ಕಾರಗಳನ್ನು ನೀಡಿ ಉಪಕಾರ ಮಾಡಿದ್ದೀರಿ. ನನ್ನ ಈಗಿನ ಉದ್ದೇಶ ವಂಕಪರ್ವತಕ್ಕೆ ಹೋಗುವುದು. ಅಲ್ಲಿ ತಮಗೆ ತಿಳಿದ ಯೋಗ್ಯ ಸ್ಥಳ ಯಾವುದಾದರೂ ಇದ್ದರೆ ದಯವಿಟ್ಟು ತಿಳಿಸಿ. ಅಲ್ಲಿಗೆ ಹೋಗುವುದಕ್ಕೆ ಮಾರ್ಗದರ್ಶನ ಮಾಡಿ’. ಅನಿವಾರ್ಯವಾಗಿ ಅವರೆಲ್ಲ, ಅವನ ಮಾತನ್ನು ಒಪ್ಪಿ, ಅಂದಿನ ದಿನ ಅವನಿಗೆ ವಿಧವಿಧವಾದ ಸತ್ಕಾರಗಳನ್ನು ಮಾಡಿ, ಶ್ರೇಷ್ಠ ಭೋಜನ ಮಾಡಿಸಿದರು. ಅರವತ್ತು ಸಾವಿರ ಕ್ಷತ್ರಿಯರು ಅವನೊಡನೆ ಹದಿನೈದು ಯೋಜನ ದೂರ ನಡೆದು ಹೋದರು. ಕಾಡು ತಲುಪುತ್ತಲೇ ಅಲ್ಲಿ ನಿಂತು, ಮುಂದೆ ಹದಿನೈದು ಯೋಜನ ನಡೆದು ಹೋಗುವ ದಾರಿಯನ್ನು ತಿಳಿಸಿದರು.

‘ಮಹಾರಾಜಾ, ಮುಂದೆ ಗಂಧಮಾದನ ಪರ್ವತದಲ್ಲಿ ನೀವು ನೆಲೆಸುವುದು ವಾಸಿ. ಇಲ್ಲಿಂದ ನೇರವಾಗಿ ಉತ್ತರದ ಕಡೆಗೆ ಸಾಗಿ, ಅಲ್ಲಿ ಅತ್ಯಂತ ಸುಂದರವಾದ, ತಂಪಾದ ಮರಗಳುಳ್ಳ ಪರ್ವತ ಕಾಣುತ್ತದೆ. ಮುಂದೆ ಕೇತುಮತಿಯೆಂಬ ಪರ್ವತದಿಂದ ಹರಿದು ಬರುವ ನದಿ ದೊರಕುತ್ತದೆ. ಅಲ್ಲಿ ಸ್ನಾನ ಮಾಡಿ ವಿಶ್ರಾಂತಿ ತೆಗೆದುಕೊಳ್ಳಿ. ನೀವು ಪರ್ವತದ ಶಿಖರವನ್ನು ಏರಿದಾಗ ಮನೋಹರವಾದ, ವಿಶಾಲವಾದ ಆಲದ ಮರ ಸಿಗುತ್ತದೆ. ಅದರ ಉತ್ತರದಲ್ಲಿ ಮುಚಲಿಂದ ಕೊಳವಿದೆ. ಅಲ್ಲಿ ಅತ್ಯಂತ ಸುಗಂಧಿತವಾದ ಕಮಲಗಳು ಅರಳಿ ನಿಂತಿರುತ್ತವೆ. ಸ್ವಲ್ಪ ಮುಂದೆ ಸಾಗಿದರೆ ತುಂಬ ಮನೋಹರವಾದ, ಪರಿಶುದ್ಧವಾದ ನೀರಿನಿಂದ ತುಂಬಿದ ಪುಷ್ಕರಿಣಿ ದೊರಕುತ್ತದೆ. ಅದರ ಉತ್ತರ ಪೂರ್ವದಲ್ಲಿ ನಿಮ್ಮ ಪರ್ಣಕುಟಿಯನ್ನು ನಿರ್ಮಿಸಿಕೊಳ್ಳಿ. ಅದರ ಸುತ್ತಮುತ್ತಲೂ ಬೇಕಾದಷ್ಟು ರುಚಿಯಾದ ಹಣ್ಣುಗಳ ಮರಗಳಿವೆ. ಅಲ್ಲಿಯೇ ನೀವು ಅಪೇಕ್ಷಿಸಿದ ಸನ್ಯಾಸಿ ಜೀವನವನ್ನು ನಡೆಸಬಹುದು’. ಇಷ್ಟು ವಿಸ್ತಾರವಾದ ವಿವರಣೆಯನ್ನು ನೀಡಿ, ಅವರನ್ನು ಮುಂದೆ ಕಳುಹಿಸಿದರು. ನಂತರ ಒಬ್ಬ ಚತುರನಾದ, ಸುಶಿಕ್ಷಿತ ತರುಣನನ್ನು ಈ ಕಾಡಿನ ದ್ವಾರದಲ್ಲಿ ಕಾವಲುಗಾರನನ್ನಾಗಿ ಕೂಡ್ರಿಸಿದರು. ಮತ್ತೆ ಯಾರಾದರೂ ಅವರನ್ನು ಬೆನ್ನು ಹತ್ತಿ ಬಂದು ತೊಂದರೆಮಾಡದಂತೆ ಎಚ್ಚರವಾಗಿರುವಂತೆ ತಿಳಿಸಿ ತಮ್ಮ ನಾಡಿಗೆ ತೆರಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.