ADVERTISEMENT

ಬೆರಗಿನ ಬೆಳಕು: ಕುಸಿದ ಮನದ ಸೌಧ

ಡಾ. ಗುರುರಾಜ ಕರಜಗಿ
Published 12 ನವೆಂಬರ್ 2020, 19:30 IST
Last Updated 12 ನವೆಂಬರ್ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ರಾಮಾಯಣದ ಬಾಲಕಾಂಡದಲ್ಲಿ ಹಾಗೂ ಮಹಾಭಾರತದ ಅರಣ್ಯಪರ್ವದಲ್ಲಿ ಬರುವ ಋಷ್ಯಶೃಂಗನ ಕಥೆ ಹೇಗೆ ಬದಲಾವಣೆಗಳೊಂದಿಗೆ ಜಾತಕ ಕಥೆಗಳಲ್ಲಿ ಬಂದಿದೆ ಎಂಬುದು ಸುಂದರವಾದ ಆಶ್ಚರ್ಯ.

ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಕಾಶೀ ನಗರದ ಒಬ್ಬ ಬ್ರಾಹ್ಮಣನ ಮಗನಾಗಿ ಹುಟ್ಟಿ, ಸಕಲ ವಿದ್ಯೆಗಳಲ್ಲಿ ಪಾರಂಗತನಾಗಿ ಪ್ರವ್ರಜಿತನಾಗಿ ಕಾಡಿನಲ್ಲಿ ವಾಸವಾಗಿದ್ದ. ಇವನ ಆಶ್ರಮದ ಸುತ್ತ ಮುತ್ತ ಒಂದು ಹೆಣ್ಣು ಜಿಂಕೆ ಓಡಾಡಿಕೊಂಡಿತ್ತು. ಅವನು ಮೂತ್ರ ಮಾಡಿದ ಸ್ಥಳದಲ್ಲಿ ಬೆಳೆದ ಹುಲ್ಲನ್ನು ತಿನ್ನುತ್ತಿತ್ತು. ಅದಕ್ಕೆ ಅವನಲ್ಲಿ ಆಸಕ್ತಿ ಮೂಡಿತು ಮತ್ತು ಗರ್ಭಿಣಿಯೂ ಆಯಿತು. ಜಿಂಕೆ ಗಂಡು ಮಗುವಿಗೆ ಜನ್ಮವಿತ್ತಿತು. ಬೋಧಿಸತ್ವ ಅದನ್ನು ಅತ್ಯಂತ ಪ್ರೀತಿಯಿಂದ ಬೆಳೆಸಿದ. ಮಗುವಿಗೆ ಋಷ್ಯಶೃಂಗ ಎಂದು ಹೆಸರಿಟ್ಟ. ಆತ ಬೆಳೆದು ದೊಡ್ಡವನಾದ ಮೇಲೆ ಅವನನ್ನೂ ಪ್ರವ್ರಜಿತನನ್ನಾಗಿ ಮಾಡಿದ. ತನಗೆ ವಯಸ್ಸಾದ ಮೇಲೆ ಋಷ್ಯಶೃಂಗನನ್ನು ಕರೆದು, “ಮಗೂ ಹಿಮಾಲಯದ ಪ್ರದೇಶದ ಹೆಂಗಸರು ತುಂಬ ಸುಂದರಿಯರು. ಅವರು ಹೂವುಗಳಂತೆ ಬಂದು ಆಕರ್ಷಣೆ ಮಾಡುತ್ತಾರೆ. ಒಂದು ಬಾರಿ ಅವರ ವಶನಾದರೆ ನಿನ್ನನ್ನು ಸಮೂಲ ನಾಶಮಾಡಿಬಿಡುತ್ತಾರೆ. ಆದ್ದರಿಂದ ನೀನು ಇಂದ್ರ‍್ರಿಯ ನಿಗ್ರಹ ಮಾಡು. ಅವರಿಗೆ ವಶವಾಗಬೇಡ”.

ಋಷ್ಯಶೃಂಗ ಘೋರ ತಪಸ್ವಿಯಾದ, ಇಂದ್ರಿಯಗಳನ್ನು ಒಂದು ರೀತಿಯಲ್ಲಿ ದಮನ ಮಾಡಿಬಿಟ್ಟಿದ್ದ. ಇವನ ತಪಸ್ಸಿನ ತೇಜದಿಂದ ಇಂದ್ರನ ಮನೆ ಕಂಪಿಸಿತು. ಇಂದ್ರನಿಗೆ ಭಯವಾಯಿತು. ಈತ ಎಲ್ಲಿ ತನ್ನ ತಪಸ್ಸಿನಿಂದ ತನ್ನನ್ನು ಇಂದ್ರಪದವಿಯಿಂದ ತಳ್ಳಿಬಿಡುತ್ತಾನೋ ಎಂದು ಚಿಂತಿಸಿ ಅವನ ಶೀಲಭಂಗ ಮಾಡಬೇಕೆಂದು, ತನ್ನ ಬಳಿ ಇದ್ದ ಎರಡೂವರೆ ಕೋಟಿ ಸುಂದರಿಯರಲ್ಲಿ ಅಲಂಬುಸಳನ್ನು ಆರಿಸಿ, ಆಕೆಗೆ ಋಷಿಯ ಶೀಲಭಂಗ ಮಾಡುವಂತೆ ಆಜ್ಞೆ ಮಾಡಿದ.

ADVERTISEMENT

ಆಕೆ ಮನಸ್ಸಿಲ್ಲದ ಮನಸ್ಸಿನಿಂದ ಋಷ್ಯಶೃಂಗ ವಾಸಿಸುತ್ತಿದ್ದ ಕಾಡಿನ ಪ್ರದೇಶಕ್ಕೆ ಬಂದಳು. ಅವನು ತಪೋಮಂದಿರದಿಂದ ಹೊರಗೆ ಬರುತ್ತಿರುವಾಗ ಅವನ ಮುಂದೆ ತನ್ನ ನಯನಮನೋಹರವಾದ ರೂಪದಿಂದ ಸುಳಿದಾಡಿದಳು. ಇದುವರೆಗೂ ಹೆಣ್ಣನ್ನೇ ಕಂಡಿರದ ಋಷ್ಯಶೃಂಗ ಬೆರಗಾಗಿ ಹೋದ. ಆ ಲಾವಣ್ಯ, ಆ ವೈಯಾರ, ಆ ದೇಹ ಭಂಗಿ ಅವನೆಂದೂ ಕಾಣದ ಅಪೂರ್ವ ಅವಸರ. ಆಕೆಯ ಬಳಿಗೆ ಬಂದು, “ನೀನು ಯಾರು? ಯಾರ ಮಗಳು? ನಿನ್ನನ್ನು ನಾನು ಏನೆಂದು ತಿಳಿಯಲಿ?” ಎಂದು ಕೇಳಿದ. ಆಗ ಆಕೆ, “ನಾನು ಯಾರು ಎಂಬುದನ್ನು ತಿಳಿದು ಏನು ಮಾಡುತ್ತೀ? ನಿನ್ನ ತೃಪ್ತಿಗೋಸ್ಕರ ಒಲಿದು ಬಂದ ಹೆಣ್ಣು ನಾನು. ನಾವಿಬ್ಬರೂ ಈ ಕಾಡಿನಲ್ಲಿ ವಿಹರಿಸೋಣ. ನಾನು ನಿನ್ನನ್ನು ಗುಹ್ಯ ರತಿಯಲ್ಲಿ ಪಾರಂಗತನನ್ನಾಗಿ ಮಾಡಿಬಿಡುತ್ತೇನೆ” ಎಂದು ಸುಂದರವಾಗಿ ನಕ್ಕಳು. ಅವಳ ಹಿಂದೆ ಆತ ಹೋದಾಗ ಆತನನ್ನು ತಬ್ಬಿಕೊಂಡಳು. ಋಷ್ಯಶೃಂಗನಿಗೆ ಬೇರೊಂದು ಜಗತ್ತಿಗೆ ಹೋದಂತಾಯಿತು. ಮುಂದೆ ಮೂರು ವರ್ಷಗಳನ್ನು ಅವಳೊಂದಿಗೆ ಕಳೆದ ಋಷ್ಯಶೃಂಗನಿಗೆ ಮೂರು ನಿಮಿಷ ಕಳೆದಂತಾಯಿತು. ಒಂದು ದಿನ ಕಣ್ತೆರದು ನೋಡಿದ, ತಾನು ಯಜ್ಞಕಾರ್ಯ ಮಾಡುತ್ತಿದ್ದ ಸ್ಥಳದಲ್ಲಿ ಹುಲ್ಲು ಮರಗಳು ತುಂಬಿವೆ. ಜಪ, ಯಜ್ಞಗಳು ನಿಂತು ಹೋಗಿವೆ. ತನ್ನ ಇಂದ್ರಿಯಗಳ ಸೆಳೆತದಿಂದ ಇದಾಯಿತು ಎಂದು ತಿಳಿದು ಮತ್ತೆ ಮನಸ್ಸನ್ನು ಕಟ್ಟಿಕೊಂಡು ಅತ್ಯಂತ ಘೋರ ತಪಸ್ಸಿಗೆ ಇಳಿದ. ಆತ ತನಗೆಲ್ಲ ಶಾಪಕೊಡುತ್ತಾನೋ ಎಂದು ಅಲಂಬುಸ ಹೆದರಿದಳು. ಆತ ಶಾಂತವಾಗಿ, “ನಿನಗೆ ದೇವೇಂದ್ರ ಕೊಟ್ಟ ಕೆಲಸ ಮುಗಿಯಿತು, ಹೊರಡು” ಎಂದ. ಆಕೆ ಸ್ವರ್ಗಕ್ಕೆ ಹೋಗಿ ಇಂದ್ರನಿಗೆ ಬೇಡಿದಳು, “ಒಡೆಯ ಇಂದ್ರ, ನೀನು ನನಗೆ ವರವನ್ನು ಕೊಡುವುದಾದರೆ ಇಂತಹ ಅತ್ಯಂತ ಪ್ರಭಾವಶಾಲಿಯಾದ ಋಷಿಯನ್ನು ಮೋಹಗೊಳಿಸುವ ಕೆಲಸವನ್ನು ಮಾತ್ರ ಕೊಡಬೇಡ”.

ಮನಸ್ಸನ್ನು ಕಟ್ಟಲು ದಶಕಗಳು ಬೇಕು, ಆದರೆ ಕುಸಿದು ಬೀಳಲು ಕ್ಷಣ ಮಾತ್ರ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.