ADVERTISEMENT

ಪರಸತ್ವದ ಇರುವಿಕೆಯ ಸಾಕ್ಷ್ಯ

ಡಾ. ಗುರುರಾಜ ಕರಜಗಿ
Published 6 ಡಿಸೆಂಬರ್ 2019, 17:56 IST
Last Updated 6 ಡಿಸೆಂಬರ್ 2019, 17:56 IST

ಸೌಂದರ್ಯ ಬಾಂಧವ್ಯಗಳು ಸತ್ಯವಲ್ಲದೊಡೆ |
ಕುಂದುವಡೆಯದ ಸತ್ಯವಿಳೆಯೊಳಿನ್ನೆಲ್ಲಿ ? ||
ಗಂಧಾನಿಲಂಗಳವು ಪರಸತ್ತ್ವಪುಷ್ಪದವು |
ಸಂದೇಹವೇನಲವೊ – ಮಂಕುತಿಮ್ಮ || 220 ||

ಪದ-ಅರ್ಥ: ಕುಂದುವಡೆಯದ =ಕುಂದು ತೋರದ, ಸತ್ಯವಿಳೆಯೊಳಿನ್ನೆಲ್ಲಿ= ಸತ್ಯ+ಇಳೆಯೊಳು(ಭೂಮಿಯಲ್ಲಿ)+ಇನ್ನೆಲ್ಲಿ, ಗಂಧಾನಿಲಂಗಳವು=ಗಂಧ+ಅನಿಲಂಗಳು(ಅನಿಲಗಳು)+ಅವು, ಸಂದೇಹವೇನಲವೊ=ಸಂದೇಹವೇನು+ಎಲವೊ
ವಾಚ್ಯಾರ್ಥ: ಸೌಂದರ್ಯ, ಬಾಂಧವ್ಯಗಳು ಸತ್ಯವಲ್ಲ ಎನ್ನುವುದಾದರೆ ಕೊರತೆಯನ್ನು ತೋರದ ಸತ್ಯ ಈ ಜಗದಲ್ಲಿ ಇರುವುದೆಲ್ಲಿ? ಈ ಎಲ್ಲ ಗಂಧ, ಪರಿಮಳಗಳು ಪರಸತ್ವವೆಂಬ ಹೂವಿನವು. ಅದರಲ್ಲಿ ಸಂದೇಹವೇಕೆ?

ವಿವರಣೆ: ಈ ಜಗತ್ತು ಸತ್ಯ. ನಾವು ಇರುವವರೆಗೂ ಸತ್ಯ. ಅಂತೆಯೇ ಬದುಕಿನ ಸೌಂದರ್ಯಗಳು, ಬಾಂಧವ್ಯಗಳೂ ಸತ್ಯ. ನನಗೆ ಪರಿಚಯವಿರುವ, ಹಿರಿಯ ರಾಜಕಾರಣಿಯೊಬ್ಬರಿದ್ದಾರೆ. ಅವರು ರಾಜ್ಯದ, ದೇಶದ ಅನೇಕ ಖಾತೆಗಳಿಗೆ ಮಂತ್ರಿಗಳಾಗಿ, ಅನೇಕ ಹುದ್ದೆಗಳನ್ನು ನಿರ್ವಹಿಸಿ ಹೆಸರುವಾಸಿಯಾದವರು. ಅವರೇ ಕಟ್ಟಿ ಬೆಳೆಸಿದ ಅನೇಕ ಸಾಮಾಜಿಕ ಹಾಗು ಶಿಕ್ಷಣ ಸಂಸ್ಥೆಗಳಿವೆ. ಅವರೊಮ್ಮೆ ನನ್ನನ್ನು ಕೇಳಿದರು, ‘ನೋಡಿ, ನಾನು ಯಾವುಯಾವುದೋ ಮಹತ್ವದ ಜವಾಬ್ದಾರಿಗಳನ್ನು ನಡೆಸಿದ್ದೇನೆ, ಏನೇನೋ ಸಾಧನೆ ಮಾಡಿದ್ದೇನೆ ಎಂದುಕೊಂಡಿದ್ದೇನೆ. ಆದರೆ ಮನಸ್ಸಿಗೆ ಶಾಂತಿ, ಸಮಾಧಾನಗಳು ತೋರಲಿಲ್ಲ. ಇದಕ್ಕೇನು ಉಪಾಯ?’ ನಾನು ಅವರದೇ ಆದ ಪ್ರಾಥಮಿಕ ಶಾಲೆಗೆ ಕರೆದುಕೊಂಡು ಹೋದೆ. ಅಲ್ಲಿ ಮರದ ಕೆಳಗೆ ಇದ್ದ ಕಲ್ಲುಬೆಂಚಿನ ಮೇಲೆ ಕೂಡಲು ಹೇಳಿದೆ, ‘ಸರ್, ಇಲ್ಲಿ ಪುಟ್ಟ ಮಕ್ಕಳು ಬೆಳಿಗ್ಗೆ ಆಡಲು ಬರುತ್ತವೆ. ನೀವು ಪೇಪರ್ ಓದುತ್ತಾ ಇಲ್ಲಿಯೇ ಕುಳಿತು ಅವರ ಆಟಗಳನ್ನು ನೋಡುತ್ತಿರಿ’ ಎಂದೆ ಒಂದು ವಾರದ ನಂತರ ಅವರು ನನ್ನನ್ನು ಕಂಡು, ‘ನನಗೀಗ ತುಂಬಾ ತೃಪ್ತಿಯಾಗಿದೆ. ಆ ಮಕ್ಕಳು ಬಂದು, ‘ತಾತಾ, ತಾತಾ, ಇದನ್ನು ನೋಡು, ಅದನ್ನು ನೋಡು’ ಎನ್ನುತ್ತಾ ನನ್ನ ಶಾಲನ್ನು ಎಳೆಯುತ್ತಾರೆ, ಆಟಕ್ಕೆ ಬಾ ಎಂದು ಕರೆಯುತ್ತಾರೆ. ಅವರು ನನ್ನನ್ನು ನನ್ನ ಸ್ಥಾನದಿಂದ, ಹಣದಿಂದ, ಹಿಂದಿನ ಅಧಿಕಾರದಿಂದ ಗುರುತಿಸುವುದಿಲ್ಲ. ಅವರು ನನ್ನನ್ನು ಕೇವಲ ಮನುಷ್ಯನೆಂದು ಗಣಿಸುತ್ತಾರೆ. ಅಧಿಕಾರ, ಸ್ಥಾನ, ಗೌರವಗಳನ್ನು ಮರೆತು ಅವರ ಪ್ರೇಮ ಬಾಂಧವ್ಯದಲ್ಲಿ ಕಳೆದುಹೋಗಿ ಹೊಸಜನ್ಮ ಪಡೆದಿದ್ದೇನೆ’.
ಇದು ಸತ್ಯವಲ್ಲವೇ? ಆ ಅಕಾರಣವಾದ ಪ್ರೇಮ ಹಿರಿಯರ ಹೃದಯವನ್ನು ತಟ್ಟಿದ್ದು ಸತ್ಯವಲ್ಲವೇ? ಈ ಪ್ರೇಮದ, ಆತ್ಮೀಯತೆಯ ಬಂಧಗಳು ನಿಜವಾಗಿ ಆ ಪರಸತ್ವವೆಂಬ ನಿತ್ಯಸುಗಂಧವನ್ನು ಪಸರಿಸುವ ಪುಷ್ಪದ ಗಂಧವಿದ್ದಂತೆ, ಆ ಪುಷ್ಪದ ಪರಿಮಳವನ್ನು ಹೊತ್ತು ತರುವ ತಂಗಾಳಿ ಇದ್ದಂತೆ.

ADVERTISEMENT

ಇದಕ್ಕೆ ಯಾವ ಸಂದೇಹವೂ ಬೇಡ. ಮನುಷ್ಯರಲ್ಲಿ ಆಗಾಗ ಕಂಡು ಬರುವ ಈ ಮಹನೀಯ ಗುಣಗಳು ಆ ಪರಸತ್ವದ ಇರುವಿಕೆಯ ಲಕ್ಷಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.