ADVERTISEMENT

ಬೆರಗಿನ ಬೆಳಕು: ಮಕ್ಕಳ ಕಷ್ಟಪರಂಪರೆ

ಡಾ. ಗುರುರಾಜ ಕರಜಗಿ
Published 9 ಆಗಸ್ಟ್ 2021, 19:30 IST
Last Updated 9 ಆಗಸ್ಟ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬೋಧಿಸತ್ವ ಎರಡು ವಿರುದ್ಧ ಚಿಂತನೆಗಳ ನಡುವೆ ಹೊಯ್ದಾಡಿ ಹಣ್ಣಾದ. ತನ್ನ ಪುಟ್ಟ ಮಕ್ಕಳು ಮುದುಕನ ಕ್ರೂರತೆಗೆ ಸಿಕ್ಕು ಕಷ್ಟಪಡುವುದು ಅತ್ಯಂತ ಅನುಚಿತವಾದದ್ದು ಮತ್ತು ದುಃಖಕರವಾದದ್ದು. ಆದರೆ ಸತ್ತುರುಷರ ಧರ್ಮದಂತೆ, ದಾನನೀಡಿ ನಂತರ ಅದನ್ನು ಹಿಂದೆ ಪಡೆಯುವುದೂ ಅಧರ್ಮ.

ಬೋಧಿಸತ್ವ ತನ್ನ ಪರಂಪರೆಯನ್ನು ನೆನೆದ. ಹಿಂದೆ ಎಲ್ಲ ಮಹಾನುಭಾವರು ಧನತ್ಯಾಗ, ಅಂಗತ್ಯಾಗ, ಸಂತಾನತ್ಯಾಗ, ಭಾರ್ಯತ್ಯಾಗಗಳನ್ನು ಮಾಡಿದವರು. ಈ ಐದೂ ತ್ಯಾಗಗಳನ್ನು ಮಾಡದೆ ಬುದ್ಧರಾದವರು ಒಬ್ಬರೂ ಇಲ್ಲ. ಅವರಲ್ಲಿ ನಾನೂ ಒಬ್ಬ. ಮಕ್ಕಳನ್ನು ತ್ಯಾಗ ಮಾಡದೆ ನಾನು ಬುದ್ಧನಾಗಲಾರೆ. ಆದ್ದರಿಂದ ಬ್ರಾಹ್ಮಣನನ್ನು ಬೆನ್ನತ್ತಿ ಹೋಗಿ ಕೊಲ್ಲುವುದನ್ನು ಯೋಚಿಸುವುದೂ ಪಾಪ. ದಾನಕೊಟ್ಟಮೇಲೆ ಮಕ್ಕಳು ನನ್ನ ವಸ್ತುಗಳಲ್ಲ. ಮುದುಕ ಬ್ರಾಹ್ಮಣ ಏನಾದರೂ ಮಾಡಿಕೊಳ್ಳಲಿ. ಹೀಗೆ ಚಿಂತಿಸಿ, ನಿಶ್ಚಯಿಸಿಕೊಂಡು ಪರ್ಣಕುಟಿಯಿಂದ ಹೊರಗೆ ಬಂದು ಅದರ ದ್ವಾರದ ಪಕ್ಕದಲ್ಲಿದ್ದ ಕಲ್ಲುಬಂಡೆಯ ಮೇಲೆ ಕುಳಿತು ಧ್ಯಾನಮಗ್ನನಾದ. ಒಂದೆರಡು ಕ್ಷಣಗಳಲ್ಲಿ ಆತ ಅಲುಗಾಡದೆ ಸ್ಥಿರವಾಗಿ ಸ್ವರ್ಣಮೂರ್ತಿಯಂತೆ ಕಂಡ.

ಮುದುಕನ ಜೊತೆಗೆ ಹೊರಟ ಮಕ್ಕಳ ಪರಿಸ್ಥಿತಿ ಕಷ್ಟವಾಗಿತ್ತು. ಮುದುಕ ಮಾತು ಮಾತಿಗೆ ಮಕ್ಕಳನ್ನು ಹೊಡೆಯುತ್ತಿದ್ದ. ಕುಮಾರ ಆ ಹಿಂಸೆಯನ್ನು ತಾಳದೆ ಪ್ರಲಾಪ ಮಾಡಿದ. ‘ತಂಗೀ, ಹಿರಿಯರು ಸರಿಯಾಗಿಯೇ ಹೇಳಿದ್ದಾರೆ. ತಾಯಿಯನ್ನು ಕಳೆದುಕೊಂಡವರು ಬದುಕಿದ್ದರೂ ಒಂದೇ, ಸತ್ತರೂ ಒಂದೇ. ಬಾ ಕೃಷ್ಣಾಜಿನ, ನಾವಿಬ್ಬರೂ ಸತ್ತು ಹೋಗೋಣ. ಬದುಕುವುದರಲ್ಲಿ ಯಾವ ಅರ್ಥವೂ ಇಲ್ಲ. ನಮ್ಮ ತಂದೆ ನಮ್ಮನ್ನು ಈ ಧನಲೋಭಿ ಕ್ರೂರ ಬ್ರಾಹ್ಮಣನಿಗೆ ಕೊಟ್ಟುಬಿಟ್ಟಿದ್ದಾನೆ. ಆತ ನಮ್ಮನ್ನು ಹೊಡೆಯುವುದು ಮಾತ್ರವಲ್ಲ, ಮುಂದೆ ಯಾವ ಶಿಕ್ಷೆಗಳನ್ನು ಕೊಡುತ್ತಾನೋ ತಿಳಿದಿಲ್ಲ’ ಎಂದ. ಆಗ ತಂಗಿ ಕೃಷ್ಣಾಜಿನ, ‘ಅಣ್ಣಾ, ನಡೆದು, ನಡೆದು ಪಾದಗಳು ಬಿರುಕು ಬಿಟ್ಟಿವೆ. ಈ ಬ್ರಾಹ್ಮಣ ಬಹಳ ಶೀಘ್ರವಾಗಿ ನಡೆಸುತ್ತಾನೆ. ನಡೆಯಲಾಗದಿದ್ದರೆ ಹೊಡೆಯುತ್ತಾನೆ’ ಎಂದು ಬಿಕ್ಕಳಿಸಿದಳು.

ADVERTISEMENT

ಮಕ್ಕಳ ಪರಿತಾಪವನ್ನು ಕಂಡು ಹಿಮವಂತವಾಸೀ ದೇವತೆಗಳ ಹೃದಯ ಕರಗಿತು. ಮಕ್ಕಳ ತಾಯಿ ಮಾದ್ರಿ ಮನೆಗೆ ಬಂದಾಗ, ತನ್ನ ಗಂಡ ಮಕ್ಕಳನ್ನು ಬ್ರಾಹ್ಮಣನಿಗೆ ದಾನವಾಗಿ ಕೊಟ್ಟ ಎಂಬುದನ್ನು ತಿಳಿದು, ಆಕೆ ತಕ್ಷಣ ಅವರನ್ನು ಹಿಂಬಾಲಿಸುತ್ತಾಳೆ ಮತ್ತು ದುಃಖಪಡುತ್ತಾಳೆ ಎಂಬುದನ್ನು ಯೋಚಿಸಿ, ಅವರು ಮೂರು ದೇವಪುತ್ರರನ್ನು ಕರೆದರು. ‘ನೀವು ಸಿಂಹ, ಹುಲಿ ಮತ್ತು ಚಿರತೆಯ ರೂಪಗಳನ್ನು ಧರಿಸಿ, ಸಂಜೆ ಮಾದ್ರಿ ಆಶ್ರಮಕ್ಕೆ ಹೋಗುವ ದಾರಿಯಲ್ಲಿದ್ದು, ಆಕೆ ಆಶ್ರಮಕ್ಕೆ ಹೋಗದಂತೆ ತಡೆಯಬೇಕು.

ಸೂರ್ಯಾಸ್ತವಾಗುವವರೆಗೂ ಆಕೆ ಮುಂದುವರೆಯದಂತೆ ನೋಡಿಕೊಂಡು, ನಂತರ ಬೆಳದಿಂಗಳಿನಲ್ಲಿ ಆಶ್ರಮಕ್ಕೆ ಹೋಗಲು ಅವಕಾಶ ಮಾಡಿಕೊಡಿ. ಆದರೆ ಆಕೆಗೆ ಕಾಡಿನ ಯಾವ ಮೃಗಗಳಿಂದಲೂ ತೊಂದರೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ಆಜ್ಞೆ ಮಾಡಿದರು.

ಮೂವರೂ ಉಗ್ರ ಪ್ರಾಣಿಗಳ ರೂಪಗಳನ್ನು ಧರಿಸಿಕೊಂಡು ಮಾದ್ರಿದೇವಿ ಬರುವ ದಾರಿಯಲ್ಲಿ ಕಾಯ್ದುಕುಳಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.