ADVERTISEMENT

ಬೆರಗಿನ ಬೆಳಕು: ನಂಬಿಕೆಯ ಹಂಗೇಕೆ ?

ಡಾ. ಗುರುರಾಜ ಕರಜಗಿ
Published 29 ಮೇ 2022, 19:31 IST
Last Updated 29 ಮೇ 2022, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ನಂಬು ದೇವರ, ನಂಬು, ನಂಬೆನ್ನುವುದು ಲೋಕ |
ಕಂಬನಿಯನಿಡುವ ಜನ ನಂಬಲೊಲ್ಲದರೇಂ? ||
ಹಂಬಲನೆ ತೊರೆದಂಗೆ ನಂಬಿಕೆಯ ಹಂಗೇಕೆ? |
ತುಂಬು ವಿರತಿಯ ಮನದಿ - ಮಂಕುತಿಮ್ಮ ||638||

ಪದ-ಅರ್ಥ: ನಂಬೆನ್ನುವುದು=ನಂಬು+ಎನ್ನುವುದು, ಕಂಬನಿಯನಿಡುವ=ಕಂಬನಿಯನು+ಇಡುವ, ನಂಬಲೊಲ್ಲದರೇಂ=ನಂಬಲು+ಒಲ್ಲದರೇಂ(ಇಷ್ಟಪಡರೇ), ಹಂಬಲನೆ=ಆಸೆಯನೆ, ತೊರೆದಂಗೆ=ಬಿಟ್ಟವನಿಗೆ, ವಿರತಿ=ವೈರಾಗ್ಯ.

ವಾಚ್ಯಾರ್ಥ: ನಂಬು, ದೇವರನ್ನು ನಂಬು ಎನ್ನುತ್ತಿದೆ ಜಗತ್ತು. ಆದರೆ ಕಷ್ಟದಲ್ಲಿದ್ದು ಕಣ್ಣೀರಿಡುವ ಜನರು ಏಕೆ ನಂಬುವುದಿಲ್ಲ? ಎಲ್ಲ ಅಪೇಕ್ಷೆಗಳನ್ನೇ ಬಿಟ್ಟವನಿಗೆ ನಂಬಿಕೆಯ ಮುಲಾಜೇಕೆ? ಮನಸ್ಸಿನಲ್ಲಿ ವೈರಾಗ್ಯವನ್ನು ತುಂಬಿಕೊ.

ADVERTISEMENT

ವಿವರಣೆ: ಬದುಕು ನಿಂತಿರುವುದೇ ನಂಬಿಕೆಯ ಮೇಲೆ. ತಂದೆ, ತಾಯಿ, ಸಹೋದರಿ, ಸಹೋದರ, ಜೊತೆಯ ಕೆಲಸಗಾರ, ವಾಹನ ಚಾಲಕ, ಹೊಟೆಲ್ಲಿ ನಲ್ಲಿ ಅಡುಗೆ ಮಾಡುವವ, ಹೀಗೆ ಯಾರ ಜೊತೆಗೆ ನಮ್ಮ ಸಂಪರ್ಕ ಬರುತ್ತದೋ, ಅವರಲ್ಲಿ ನಂಬಿಕೆ ಇರಬೇಕು, ಇರದಿದ್ದರೆ ಗತ್ಯಂತರವಿಲ್ಲ. ಹೀಗೆ ಬದುಕು ಮತ್ತೊಬ್ಬರನ್ನು ನಂಬಿಯೇ ಸಾಗುತ್ತದೆ. ಪ್ರಪಂಚದಲ್ಲಿ ಎಲ್ಲರೂ ನಂಬಿಕೆಯ ಬಗ್ಗೆಯೇ ಹೇಳುತ್ತಾರೆ. ಅದೇ ಬಾಳಿನ ಸ್ಥಿರತೆಗೆ ಕಾರಣ ಎನ್ನುತ್ತಾರೆ. ಆದರೆ ಬಹಳ ಬಾರಿ ನಮ್ಮ ನಂಬಿಕೆ, ಅಪೇಕ್ಷೆಯ ಮೇಲೆ ನಿಂತಿರುತ್ತದೆ. ಕಷ್ಟಗಳು ಬಂದಾಗ ದೇವರ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಸಾಹೇಬರ ಮೇಲೆ ನಂಬಿಕೆ, ಅವರಿಂದ ಪ್ರಯೋಜನವಾಗುತ್ತದೆ ಎಂಬ ಆಸೆಯ ಮೇಲೆ ನಿಂತಿದೆ. ಅವರಿಂದ ಏನೂ ಪ್ರಯೋಜನವಿಲ್ಲವೆಂದಾಗ ನಂಬಿಕೆ ಕರಗಿ ಹೋಗುತ್ತದೆ. ಅದಕ್ಕೇ ಜೀವನದಲ್ಲಿ ದೊಡ್ಡ ತೊಂದರೆ, ಅನಾಹುತವಾದರೆ, ಜನ, ‘ದೇವರೆಲ್ಲಿದ್ದಾನೆ?’ ‘ಅವನು ಕಣ್ಣು ಮುಚ್ಚಿಕೊಂಡಿದ್ದಾನೆ’ ‘ಅವನಿಗೆ ನಮ್ಮಂಥವರ ಕೂಗು ಕೇಳಿಸುವುದಿಲ್ಲ’ ‘ಅವನನ್ನು ನಂಬಿಯೇ ಹಾಳಾದೆವು’ ‘ದೇವರನ್ನು ನಂಬಿ ಸುಖವಿಲ್ಲ’ ಎನ್ನುತ್ತಾರೆ. ಇದನ್ನೇ ಕಗ್ಗ ಧ್ವನಿ ಸುತ್ತದೆ. ಪ್ರಪಂಚದಲ್ಲಿ ಎಲ್ಲರೂ ನಂಬು, ದೇವರ ನಂಬು ಎನ್ನುತ್ತಾರೆ, ಆದರೆ ಕಣ್ಣೀರಿಡುವ ಜನ ಮಾತ್ರ ನಂಬುವುದಿಲ್ಲವಲ್ಲ? ಅಪೇಕ್ಷೆಯಿಂದ ತಾನೆ ನಂಬಿಕೆ ಹುರಿಗೊಳ್ಳುವುದು? ಅಪೇಕ್ಷೆಯೇ ಇಲ್ಲದೆ ಹೋದರೆ ನಂಬಿಕೆಯ ಅವಶ್ಯಕತೆ ಎಲ್ಲಿದೆ?

ಸಿದ್ಧಾರ್ಥ ಮನೆ ಬಿಟ್ಟು ಮಧ್ಯರಾತ್ರಿ ಸಮ್ಯಗ್ ಜ್ಞಾನಾಪೇಕ್ಷಿಯಾಗಿ ಹೊರಟ. ಎಲ್ಲ ವೃತಗಳನ್ನು ಮಾಡಿದ, ದೇಹವನ್ನು ಅತಿಯಾಗಿ ದಂಡಿಸಿದ. ಗುರುವನ್ನರಸಿ ಸುತ್ತಾಡಿದ. ಮನಸ್ಸಿಗೆ ಶಾಂತಿ ದೊರಕಲಿಲ್ಲ. ರಾಜಮಹಲಿನಲ್ಲಿ ಶಾಂತಿ ಸಿಗಲಿಲ್ಲ, ಶಾಂತಿಯನ್ನರಸಿ ವನ, ವನ ಸುತ್ತಿದರೂ ಶಾಂತಿ ಯಿಲ್ಲ ಎಂದುಕೊಳಂಡು ಅತೃಪ್ತಿಯಿಂದ ನದಿಯ ಸ್ನಾನಕ್ಕೆ ಹೋದ. ಆಗ ನಿರಂಜನಾ ನದಿಯಲ್ಲಿ ನೀರು ಕಡಿಮೆ ಇತ್ತು, ಸೆಳವೂ ಕಡಿಮೆ. ಆದರೆ ಸಿದ್ಧಾರ್ಥನ ದೇಹ ಬೆಂಡಿನಂತಾಗಿತ್ತು. ಆ ಸೆಳವಿ ನಲ್ಲೇ ದೇಹ ಕೊಚ್ಚಿಕೊಂಡು ಹೊರಟಿತು. ಆಯ್ತು, ನನ್ನ ಜೀವದ ಅವಧಿ ಮುಗಿಯಿತು ಎಂದು ಕೊಂಡು ಜೀವಭಯದಿಂದ ಅಚೀಚೆ ಕೈಚಾಚಿದ. ಯಾವುದೋ ಮರದ ಬೇರು ಸಿಕ್ಕಿತು. ಅದನ್ನು ಹಿಡಿದುಕೊಂಡು ನೇತಾಡುತ್ತಿದ್ದ. ಒಂದು ಕ್ಷಣ ಯೋಚಿಸಿದ. ‘ಅರಮನೆಯಲ್ಲಿ ಶಾಂತಿಯನ್ನು ಬಯಸಿದೆ, ಇಲ್ಲಿ ಮುಕ್ತಿಯನ್ನು ಬಯಸಿದೆ, ಎರಡೂ ಬಯಕೆಗಳೇ ಅಲ್ಲವೆ? ಈ ಜಗದ ಆಸೆ ಬಿಟ್ಟವನಿಗೆ, ಆ ಜಗದ ಆಸೆಯಾದರೂ ಯಾಕೆ ಬೇಕು?’ ಎಂದು ಮುಕ್ತಿಯ ಆಸೆಯನ್ನೂ ತೊರೆದ. ಆಸೆ ಕರಗಿದ ತಕ್ಷಣವೇ ಜ್ಞಾನೋದಯವಾಯಿತು. ಆತ ಹೇಳಿದ, ‘ನಮ್ಮ ಎಲ್ಲ ದುಃಖಗಳಿಗೆ, ತೊಂದರೆಗಳಿಗೆ ಆಸೆಯೇ ಮೂಲ ಕಾರಣ’.ಕಗ್ಗ ಹೇಳುತ್ತದೆ, ‘ಎಲ್ಲ ಹಂಬಲಗಳನ್ನೇ ತೊರೆದ ವನಿಗೆ ನಂಬಿಕೆಯಾದರೂ ಯಾಕೆ ಬೇಕು? ಅದಕ್ಕೆ ಮನಸ್ಸಿನಲ್ಲಿ ಆಸೆಯನ್ನು ತೊರೆದು ವೈರಾಗ್ಯ ವನ್ನು ತುಂಬು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.