ADVERTISEMENT

ತಿರುಗಿಬಂದ ಬಾಣ

ಡಾ. ಗುರುರಾಜ ಕರಜಗಿ
Published 28 ಮಾರ್ಚ್ 2021, 19:30 IST
Last Updated 28 ಮಾರ್ಚ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಮಹೋಷಧಕುಮಾರ ಅಮರಾದೇವಿಯನ್ನು ಮದುವೆಯಾಗಿ ಅರಮನೆಗೆ ಕರೆತಂದ ಮೇಲೆ ಉಳಿದ ಪಂಡಿತರಿಗೆ ಬಹಳ ಸಂಕಟವಾಯಿತು. ಮೊದಲೇ ಅಸಾಮಾನ್ಯ ಪಂಡಿತನಾಗಿದ್ದ ಮಹೋಷಧಕುಮಾರ ಮತ್ತಷ್ಟು ಬುದ್ಧಿವಂತಳಾದ ಹೆಂಡತಿಯನ್ನು ಕರೆತಂದಿದ್ದಾನೆ. ಅವರಿಬ್ಬರ ಬಗ್ಗೆ ರಾಜನಿಗೆ ತುಂಬ ಒಳ್ಳೆಯ ಅಭಿಪ್ರಾಯವಿದೆ. ಅವರ ನಡುವೆ ಒಡಕು ಉಂಟುಮಾಡುವ ತನಕ ತಮಗೆ ಸುಖವಿಲ್ಲವೆಂದುಕೊಂಡರು. ಅದನ್ನು ಹೇಗೆ ಮಾಡುವುದು? ಇಂಥ ಮನಸ್ಸುಗಳನ್ನು ಒಡೆಯುವ ಕೆಲಸದಲ್ಲಿ ಸೆನೆಕ ಪಂಡಿತನಿಗಿಂತ ಚತುರರು ಯಾರೂ ಇಲ್ಲ, ನೀವೇ ಇದಕ್ಕೆ ಪರಿಹಾರ ನೀಡಿ ಎಂದು ಉಳಿದ ಪಂಡಿತರು ಸೆನೆಕನನ್ನು ಕೇಳಿದರು. ಆತ ಹೇಳಿದ, ‘ಸರಿ, ನನ್ನ ಬಳಿ ಒಂದು ಉಪಾಯವಿದೆ. ನಾನು ಹೋಗಿ ರಾಜನ ಚೂಡಾಮಣಿಯನ್ನು ಕದ್ದು ತರುತ್ತೇನೆ. ಪಕ್ಕುಸ ನೀನು ಸ್ವರ್ಣಮಾಲೆಯನ್ನು ತಾ, ಕಾವಿಂದ ನೀನು ರಾಜನ ವಿಶೇಷವಾದ ಕಂಬಳಿಯನ್ನು ತೆಗೆದುಕೊಂಡು ಬಾ, ದೇವಿಂದ ನೀನು ಸ್ವರ್ಣಪಾದುಕೆಗಳನ್ನು ಕದ್ದು ತಾ. ನಾನು ಮುಂದೆ ವ್ಯವಸ್ಥೆ ಮಾಡುತ್ತೇನೆ’. ಅವರು ಅಂತೆಯೇ ಮಾಡಿದರು.

ಅವುಗಳನ್ನು ಯಾರಿಗೂ ತಿಳಿಯದಂತೆ ಮಹೋಷಧಕುಮಾರನ ಮನೆಗೆ ತಲುಪಿಸುವ ಯೋಜನೆಯಾಯಿತು. ಸೆನೆಕ ಚೂಡಾಮಣಿಯನ್ನು ಮಜ್ಜಿಗೆಯ ಗಡಿಗೆಯಲ್ಲಿ ಹಾಕಿ ದಾಸಿಗೆ ಕೊಟ್ಟು ಹೇಳಿದ, ‘ಈ ಗಡಿಗೆಯನ್ನು ಯಾರಿಗೂ ಕೊಡದೆ ಮಹೋಷಧಕುಮಾರನ ಮನೆಯಲ್ಲಿ ಮಾತ್ರ ಯಾರಿಗಾದರೂ ಕೊಟ್ಟು ಬಾ’. ಆಕೆ ಗಡಿಗೆಯನ್ನು ಹೊತ್ತುಕೊಂಡು ‘ಮಜ್ಜಿಗೆ ಬೇಕೇ?’ ಎಂದು ಕೇಳುತ್ತಾ ಕುಮಾರನ ಮನೆಯ ಮುಂದೆಯೇ ಸುತ್ತಾಡುತ್ತಿದ್ದಳು. ಅಮರಾದೇವಿ ಆಕೆಯನ್ನು ನೋಡಿ, ಈಕೆ ಮಜ್ಜಿಗೆಯನ್ನು ಬೇರೆ ಯಾರ ಮನೆಯ ಮುಂದೆ ಒಯ್ಯದೇ ಕೇವಲ ನಮ್ಮ ಮನೆಯ ಮುಂದೆ ಓಡಾಡುತ್ತಿದ್ದಾಳೆ ಎಂದುಕೊಂಡು ತಾನೇ ಆ ದಾಸಿಯಿಂದ ಗಡಿಗೆಯನ್ನು ಪಡೆದಳು.

‘ನೀನು ಯಾರ ದಾಸಿ?’ ಎಂದು ಕೇಳಿದಳು. ಆಕೆ, ‘ನಾನು ಸೆನೆಕ ಪಂಡಿತನ ದಾಸಿ’ ಎಂದಳು. ಅಮರಾದೇವಿ ಆಕೆಯ ಮತ್ತು ಅವಳ ತಂದೆ-ತಾಯಿಯರ ಹೆಸರು ಕೇಳಿ ಕಳುಹಿಸಿದಳು. ನಂತರ ಗಡಿಗೆಯಲ್ಲಿ ಕೈ ಹಾಕಿ ಚೂಡಾಮಣಿಯನ್ನು ಕಂಡು, ತೆಗೆದಿಟ್ಟುಕೊಂಡಳು. ಸೆನೆಕಪಂಡಿತನ, ಇಂತಹ ದಾಸಿ ಈ ಉಡುಗೊರೆಯನ್ನು ಕೊಟ್ಟಳು ಎಂದು ಬರೆದಿಟ್ಟುಕೊಂಡಳು. ಪಕ್ಕುಸ ಮಲ್ಲಿಗೆ ಹೂವಿನ ಬುಟ್ಟಿಯಲ್ಲಿ ಸ್ವರ್ಣಮಾಲೆ ಕಳುಹಿಸಿದ, ಕಾವಿಂದ ವೀಳ್ಯದೆಲೆಯ ಬುಟ್ಟಿಯಲ್ಲಿ ಕಂಬಳಿ ಕಳುಹಿಸಿದ, ದೇವಿಂದ ಜಮೆಗೋಧಿ ಹುಲ್ಲಿನೊಳಗೆ ಸ್ವರ್ಣಪಾದುಕೆ ಕಳುಹಿಸಿದ. ಆಕೆ ಅವುಗಳನ್ನೆಲ್ಲ ಸಾಕ್ಷಿಸಮೇತ ತೆಗೆದಿಟ್ಟುಕೊಂಡಳು.

ADVERTISEMENT

ಮರುದಿನ ಅಮಾತ್ಯರು ರಾಜನಿಗೆ ಆಭರಣಗಳನ್ನು ಹಾಕಿಕೊಳ್ಳುವಂತೆ ಕೇಳಿದಾಗ ಅವು ಯಾವುವೂ ದೊರೆಯಲಿಲ್ಲ. ಅವುಗಳನ್ನು ಯಾರು ಕಳ್ಳತನ ಮಾಡಿರಬೇಕು ಎಂದು ಚಿಂತಿಸುವಾಗ ಸೆನೆಕ, ‘ಸ್ವಾಮೀ, ಅವೆಲ್ಲ ಮಹೋಷಧಕುಮಾರನ ಮನೆಯಲ್ಲಿ ಇವೆಯಂತೆ. ಅವನೇ ಅವುಗಳನ್ನು ಧರಿಸಿ ರಾಜನಂತೆ ಮೆರೆಯುತ್ತಾನಂತೆ’ ಎಂದು ಕಿವಿಯೂದಿದ. ರಾಜ ಯೋಚನೆ ಮಾಡದೆ ಕುಮಾರನನ್ನು ಬಂಧಿಸಲು ಆಜ್ಞೆ ಮಾಡಿದ. ದೂತರಿಂದ ವಿಷಯ ತಿಳಿದ ಕುಮಾರ ಅದರಿಂದ ಪಾರಾಗಲು ವೇಷ ಮರೆಸಿಕೊಂಡು ಹೋಗಿ ದೂರದ ನಗರಕ್ಕೆ ಬಂದು ಕುಂಬಾರನ ಕೆಲಸ ಮಾಡತೊಡಗಿದ. ಅಮರಾದೇವಿ ದಾಸಿಯ ಜೊತೆಗೆ ರಾಜನ ಮುಂದೆ ಬಂದು. ಈ ನಾಲ್ಕೂ ಪಂಡಿತರು ಕಳುಹಿಸಿಕೊಟ್ಟ ವಸ್ತುಗಳನ್ನು ತೋರಿಸಿ, ‘ಪ್ರಭು, ಮಹೋಷಧಪಂಡಿತ ಕಳ್ಳನಲ್ಲ. ಈ ನಾಲ್ವರು ಪಂಡಿತರು ಕಳ್ಳರು’ ಎಂದು ತಿಳಿಸಿದಳು. ರಾಜನಿಗೆ ಪಶ್ಚಾತ್ತಾಪವಾಯಿತು. ಆದರೆ ಮಹೋಷಧಕುಮಾರನನ್ನು ಕರೆತರುವುದು ಹೇಗೆ? ಆ ಜವಾಬ್ದಾರಿಯನ್ನು ಆತ ಆ ನಾಲ್ಕು ಜನ ಪಂಡಿತರಿಗೇ ವಹಿಸಿ, ಅವರು ಕುಮಾರನನ್ನು ಕರೆತರದಿದ್ದರೆ ಭಯಂಕರ ಶಿಕ್ಷೆ ಕೊಡುವುದಾಗಿ ಹೆದರಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.