ADVERTISEMENT

ಬದುಕು ಕಟ್ಟುವ ಬುದ್ಧಿವಂತಿಕೆ

ಡಾ. ಗುರುರಾಜ ಕರಜಗಿ
Published 12 ಜುಲೈ 2018, 19:30 IST
Last Updated 12 ಜುಲೈ 2018, 19:30 IST

ಬೋಧಿಸತ್ವ ಒಬ್ಬ ಶ್ರೇಷ್ಠಿಯಾಗಿದ್ದ. ಒಮ್ಮೆ ರಸ್ತೆಯಲ್ಲಿ ಹೋಗುವಾಗ ಸತ್ತ ಇಲಿ ನೋಡಿದ. ಯಾವನಾದರೂ ಬುದ್ಧಿವಂತ ಇದರಿಂದ ಜೀವನವನ್ನೇ ಕಟ್ಟಿಕೊಂಡಾನು ಎಂದ. ಇವನ ಮಾತನ್ನು ಕೇಳಿದ ತರುಣನೊಬ್ಬ ಆ ಇಲಿಯನ್ನು ಒಂದು ಅಂಗಡಿಯ ಬೆಕ್ಕಿಗೆ ಆಹಾರವಾಗಿ ಕೊಟ್ಟು ಮಾಲಿಕನಿಂದ ಅರ್ಧ ಕಹಾಪಣ ಪಡೆದುಕೊಂಡ. ಅದರಿಂದ ಒಂದಷ್ಟು ಬೆಲ್ಲ ಕೊಂಡು ಕಾಡಿನಿಂದ ಬರುತ್ತಿದ್ದ ಹೂವಾಡಿಗರಿಗೆ ನೀರಿನೊಡನೆ ಕೊಟ್ಟ. ಅವರು ಹಿಡಿ ಹೂಗಳನ್ನು ಕೊಟ್ಟರು. ಅವುಗಳನ್ನು ಮಾರಿ ಮರುದಿನ ಮತ್ತಷ್ಟು ಬೆಲ್ಲ - ನೀರು ನೀಡಿದಾಗ ಹೆಚ್ಚಿನ ಹೂ ದೊರಕಿ ಎಂಟು ಕಹಾಪಣ ಬಂದಿತು.

ಒಂದು ದಿನ ಬಿರುಗಾಳಿ ಎದ್ದು ರಾಜನ ತೋಟದ ಮರಗಿಡಗಳು ಮುರಿದು ಬಿದ್ದವು. ಈಗ ತೋಟದವರ ಅಪ್ಪಣೆ ಪಡೆದು ಎಂಟು ಕಹಾಪಣಗಳಿಂದ ಹುಡುಗರನ್ನು ನೇಮಿಸಿಕೊಂಡು ಕಟ್ಟಿಗೆ ರಾಶಿಯನ್ನು ಕುಂಬಾರನಿಗೆ ಮಾರಿ ಇಪ್ಪತ್ನಾಲ್ಕು ಕಹಾಪಣ ಗಳಿಸಿದ. ಪ್ರತಿದಿನ ನಗರದ್ವಾರದಲ್ಲಿ ಕಾಡಿನಿಂದ ಹುಲ್ಲು ತರುವ ಜನರಿಗೆ ಕುಡಿಯುವ ನೀರು ಒದಗಿಸುತ್ತಿದ್ದ. ನಿನ್ನ ಋಣ ತೀರಿಸುವುದು ಹೇಗೆ ಎಂದವರು ಕೇಳಿದಾಗ ಮುಂದೆ ಕೇಳುತ್ತೇನೆ ಎನ್ನುತ್ತಿದ್ದ.

ನಗರ ದ್ವಾರಪಾಲಕ ಮರುದಿನ ದೊಡ್ಡ ವ್ಯಾಪಾರಿಯೊಬ್ಬ ಐದು ನೂರು ಕುದುರೆಗಳನ್ನು ವ್ಯಾಪಾರಕ್ಕಾಗಿ ತರುತ್ತಿದ್ದಾನೆ ಎಂದು ತಿಳಿಸಿದ. ಈ ತರುಣ ಎಲ್ಲ ಹುಲ್ಲು ಮಾರುವವರನ್ನು ಕಂಡು ಒಂದು ಕಂತೆ ಹುಲ್ಲನ್ನು ಕೊಡುವುದರೊಂದಿಗೆ ನಾಲ್ಕು ದಿನ ಯಾರಿಗೂ ಹುಲ್ಲು ಮಾರಬಾರದೆಂದು ಕೇಳಿಕೊಂಡ. ಅವರು ಒಪ್ಪಿ ಐದು ನೂರು ಕಂತೆ ಹುಲ್ಲು ತಂದು ಹಾಕಿದರು. ಕುದುರೆ ವ್ಯಾಪಾರಿ ಕುದುರೆಗಳಿಗೆ ಹುಲ್ಲು ಕಾಣದೆ ಕಂಗಾಲಾಗಿ ಈ ತರುಣನ ಬಳಿಗೆ ಬಂದು ಸಾವಿರ ಕಹಾಪಣ ಕೊಟ್ಟು ಹುಲ್ಲು ಖರೀದಿಸಿದ.

ADVERTISEMENT

ಮುಂದಿನ ವಾರ ಸರಕು ಮಾರುವ ಹಡಗು ಬಂದರಿಗೆ ಬಂದಿತು. ತರುಣ ಅಲಂಕಾರವಾದ ರಥವನ್ನು ಬಾಡಿಗೆಗೆ ಕೊಂಡು ಹಡಗಿನ ಸಮೀಪವೇ ಭರ್ಜರಿಯಾದ ಗುಡಾರವನ್ನು ಹಾಕಿಸಿ, ನಾಲ್ಕಾರು ಸೇವಕರನ್ನು ನೇಮಿಸಿಕೊಂಡ. ಯಾವುದೇ ವ್ಯಾಪಾರಿ ಬಂದರೂ ಹಡಗನ್ನು ಪೂರ್ತಿಯಾಗಿ ತಾನು ಕೊಂಡಿರುವುದಾಗಿಯೂ, ಕೇವಲ ತನ್ನ ಹತ್ತಿರ ವ್ಯವಹಾರ ಮಾಡಬೇಕೆಂದು ತಿಳಿಸಲು ಅಪ್ಪಣೆ ಮಾಡಿದ. ನೂರಾರು ವ್ಯಾಪಾರಿಗಳು ಬಂದರು. ಪ್ರತಿಯೊಬ್ಬರಿಂದ ಸಾವಿರ ಕಹಾಪಣಗಳನ್ನು ಒಪ್ಪಂದವಾಗಿ ಪಡೆದು ಮತ್ತೆ ಅವರು ಕೊಂಡ ಸರಕುಗಳ ಮೇಲೆ ಸಾವಿರಾರು ಕಹಾಪಣ ಲಾಭ ಪಡೆದ. ಈ ಒಂದೇ ವ್ಯವಹಾರದಿಂದ ಅವನಿಗೆ ಎರಡು ಲಕ್ಷ ಕಹಾಪಣ ಲಾಭವಾಯಿತು.

ಆ ತರುಣ ತನಗೆ ಪ್ರೇರಣೆ ನೀಡಿದ ಶ್ರೇಷ್ಠಿಯನ್ನು ನೆನೆಸಿಕೊಂಡು ಅವರನ್ನು ಹುಡುಕಿಕೊಂಡು ಹೋದ. ಅವರಿಗೆ ತಾನು ಸತ್ತ ಇಲಿಯಿಂದ ಇಲ್ಲಿಯವರೆಗೆ ಬೆಳೆದ ದಾರಿಯನ್ನು ತಿಳಿಸಿದ, ಕೃತಜ್ಞತೆ ಹೇಳಿದ. ಶ್ರೇಷ್ಠಿಗೆ ಸಂತೋಷ, ಅಭಿಮಾನಗಳೆರಡೂ ಆದವು. ಈ ತರುಣನನ್ನು ಬೇರೆ ಎಲ್ಲಿಯೂ ಬಿಡುವುದು ಸರಿಯಲ್ಲ ಎಂದುಕೊಂಡು ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿ ಅಳಿಯನಿಗೆ ಯಜಮಾನಿಕೆ ಕೊಟ್ಟ. ಮುಂದೆ ಅವನೇ ಹಿರಿಯ ಶ್ರೇಷ್ಠಿಯಾದ. ಇದು ಬುದ್ಧಿವಂತರು ಬದುಕು ಕಟ್ಟಿಕೊಳ್ಳುವ ಪರಿ. ಬುದ್ಧಿ ಇದ್ದವರು ಸತ್ತ ಇಲಿಯಿಂದ ಕೋಟಿ ಗಳಿಸುತ್ತಾರೆ, ಬುದ್ಧಿ ಇಲ್ಲದವರು ಕೋಟಿಗಳನ್ನು ಕಳೆದುಕೊಂಡು ಸತ್ತ ಇಲಿಯಂತಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.