ADVERTISEMENT

ಪ್ರಪಂಚದ ವ್ಯಾಪಾರದ ಒಳಗುಟ್ಟು

ಡಾ. ಗುರುರಾಜ ಕರಜಗಿ
Published 10 ಅಕ್ಟೋಬರ್ 2018, 20:01 IST
Last Updated 10 ಅಕ್ಟೋಬರ್ 2018, 20:01 IST

ಪ್ರಪಂಚದ ವ್ಯಾಪಾರದ ಒಳಗುಟ್ಟು
ಆಹ! ಈ ಮೋಹಗಳೊ ನೇಹಗಳೊ ದಾಹಗಳೊ |
ಊಹಿಸೆಯ ಸೃಷ್ಟಿಯಲಿ ಹೃದಯವಿಹುದೆಂದು ? ||
ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ |
ಈ ಹರಿಬದೊಳಗುಟ್ಟೊ ? – ಮಂಕುತಿಮ್ಮ || 42 ||

ಪದ-ಅರ್ಥ : ನೇಹಗಳೊ = ಸ್ನೇಹಗಳೊ, ಊಹಿಪೆಯ = ಊಹಿಸುವೆಯಾ ಹರಿಬದೊಳಗುಟ್ಟೊ=ಹರಿಬ (ವ್ಯಾಪಾರ) + ಒಳಗುಟ್ಟೊ.

ವಾಚ್ಯಾರ್ಥ: ಪ್ರಪಂಚದಲ್ಲಿ ತೋರುವ ಈ ಮೋಹಗಳು, ಸ್ನೇಹಗಳು, ದಾಹಗಳು ಇವನ್ನೆಲ್ಲ ಕಂಡವನು ಈ ಸೃಷ್ಟಿಯಲ್ಲಿ ಹೃದಯವಿದೆಯೆಂದು ಊಹಿಸಬಲ್ಲನೇ? ಹೋಹೋ, ಹಾಹಾ ಎಂದು ನಮ್ಮನ್ನು ಬೆರಗುಗೊಳಿಸುವುದೇ ಈ ಸೃಷ್ಟಿ ವ್ಯಾಪಾರದ ಒಳಗುಟ್ಟೋ?

ADVERTISEMENT

ವಿವರಣೆ: ಮೇಲ್ನೋಟಕ್ಕೆ ಇದೊಂದು ಕುಹಕದ ಮಾತೆಂದು ತೋರಬಹುದು. ಜಗತ್ತಿನಲ್ಲಿ ತೋರಿಬರುವ ಈ ಸಂಬಂಧಗಳನ್ನು, ಬಾಂಧವ್ಯಗಳನ್ನು ಕಂಡಾಗ ಇದೊಂದು ಹೃದಯವಿಲ್ಲದ ಪ್ರಪಂಚ ಎನ್ನಿಸುವುದೇ? ಬರೀ ನಮಗೆ ಆಗಾಗ ಸುಖ, ದು:ಖಗಳನ್ನು ನೀಡಿ ನಮ್ಮನ್ನು ತಬ್ಬಿಬ್ಬುಗೊಳಿಸುವುದೇ ಈ ಪ್ರಪಂಚ ವ್ಯಾಪಾರದ ಒಳಗುಟ್ಟೊ? ಇಲ್ಲಿ ಪ್ರಶ್ನೆ ಇರುವುದನ್ನು ಗಮನಿಸಬೇಕು. ಇದು ಹೀಗೆಯೇ ಇದೆಯೆಂದು ಡಿ.ವಿ.ಜಿ ಹೇಳುವುದಿಲ್ಲ. ಹೀಗೆ ಇದ್ದಿರಬಹುದೆ? ಎಂದು ನಮ್ಮನ್ನು ವಿಚಾರಕ್ಕೆ ಹಚ್ಚುತ್ತಾರೆ. ಉತ್ತರವನ್ನು ನಮ್ಮ ನಮ್ಮ ಅನುಭವದ, ತಿಳುವಳಿಕೆಯ ಆಧಾರದ ಮೇಲೆ ಕಂಡುಕೊಳ್ಳಬೇಕು.

ಮನಸ್ಸು ನಮ್ಮ ಒಳಗಿದೆ, ವಸ್ತುಗಳು, ವ್ಯಕ್ತಿಗಳು ನಮ್ಮ ಹೊರಗಿವೆ. ಈ ಎರಡರ ನಡುವೆ ನಮ್ಮ ಇಂದ್ರಿಯಗಳಿವೆ. ಇಂದ್ರಿಯಗಳಿಂದ ಜಗತ್ತಿನ ವಸ್ತುಗಳೊಂದಿಗೆ ನಮ್ಮೊಳಗಿನ ಮನಸ್ಸು ಬೆಸೆದುಕೊಂಡು ಸಂಬಂಧ ಕಲ್ಪಿಸುತ್ತದೆ. ಸಂಗ ಸುಖವಾಗಿದ್ದರೆ ಸಂತೋಷ, ಸುಖವಾಗಿರದಿದ್ದರೆ ಅಸಂತೋಷ, ಈ ಸುಖ, ಅಸುಖಗಳು ನಮ್ಮ ಇಂದ್ರಿಯಗಳು ಸೃಷ್ಟಿಸಿದ ಬಂಧಗಳು. ಅವು ನಮಗೆ ಮಾತ್ರ. ಮತ್ತೊಬ್ಬರಿಗೆ ಮತ್ತೊಂದು ಬಂಧ. ಆದ್ದರಿಂದ ಸೃಷ್ಟಿಯಲ್ಲಿ ಕಾಣುವ ಮೋಹಗಳು, ಸ್ನೇಹಗಳು, ದಾಹಗಳು ಎಲ್ಲವೂ ನಮ್ಮ ಇಂದ್ರಿಯಗಳು ತಂದು ತಂದು ಮನಸ್ಸಿನೊಡನೆ ಕಲ್ಪಿಸಿದ ಸೇತುವೆಗಳು. ಅವು ಎಲ್ಲರಿಗೂ ಒಂದೇ ತೆರನಾಗಿ ಇರುವುದು ಸಾಧ್ಯವಿಲ್ಲ.

ಅಂತೆಯೇ ಒಬ್ಬರಿಗೆ ಸುಖವೆನ್ನಿಸಿದ್ದು ಮತ್ತೊಬ್ಬರಿಗೆ ದುಃಖ ತಂದೀತು. ಒಬ್ಬರಿಗೆ ಸ್ನೇಹಿತರಾದವರು ಮತ್ತೊಬ್ಬರಿಗೆ ವೈರಿಗಳಾಗುತ್ತಾರೆ. ಆದ್ದರಿಂದ ಸೃಷ್ಟಿಗೆ ಅದರದೇ ಆದ ಹೃದಯವಿಲ್ಲ. ನಮ್ಮ ಹೃದಯ ಸೃಷ್ಟಿಸಿದ್ದೇ ಪ್ರಪಂಚದ ಹೃದಯ. ನಮ್ಮನ್ನು ಸುಖ, ದು:ಖಗಳಲ್ಲಿ ಹೊರಳಾಡಿಸಿ ಸಂತೋಷ ಅಥವಾ ಅಸಂತೋಷಗೊಳಿಸುವುದು ಸೃಷ್ಟಿಯಲ್ಲ. ಅದು ನಮ್ಮ ಮನಸ್ಸು ಮತ್ತು ಇಂದ್ರಿಯಗಳು ಸಾಧಿಸುವ ಸಾಂಗತ್ಯದ ಫಲ. ಇಂದು ಸುಂದರವಾಗಿರುವುದು ನಾಳೆ ಅಸಹ್ಯವಾಗಿ ತೋರಬಹುದು ಅಥವಾ ಇದು ತಿರುಗುಮುರುಗೂ ಆಗಬಹುದು.

ಒಬ್ಬ ತರುಣ ಸಾಕ್ರೆಟಿಸ್‍ನ ಬಳಿ ಬಂದು ಅತ್ತುಕೊಂಡ, ‘ಸ್ವಾಮೀ ನನ್ನ ಹೆಂಡತಿ ಅತ್ಯಂತ ಕುರೂಪಿ. ಅವಳೊಡನೆ ಹೇಗೆ ಬದುಕಲಿ? ನಮ್ಮದು ಪ್ರೇಮವಿವಾಹ. ಮದುವೆಯಾಗಿ ಐದು ವರ್ಷವಾಯಿತು’. ಸಾಕ್ರೆಟಸ್ ಕೇಳಿದ, ‘ಪ್ರೀತಿಸಿ ಮದುವೆಯಾದಾಗ ಆಕೆ ಸುರಸುಂದರಿಯಂತೆ ಕಂಡಳಲ್ಲವೆ? ಆಕೆ ಸುಂದರಿಯೂ ಅಲ್ಲ, ಕುರೂಪಿಯೂ ಅಲ್ಲ. ಆಗ ನಿನ್ನ ಮನಸ್ಸಿನಲ್ಲಿ ಪ್ರೇಮವಿತ್ತು, ಆಕೆ ಸುಂದರಿಯಾಗಿ ಕಂಡಳು. ಈಗ ಪ್ರೇಮ ಮರೆಯಾಗಿ ಕುರೂಪ ಕಾಣುತ್ತಿದೆ. ಮತ್ತೆ ಮನದಲ್ಲಿ ಪ್ರೇಮತುಂಬಿಕೋ, ಆಗ ಆಕೆಗಿಂತ ಸುಂದರಿ ಯಾರೂ ಇಲ್ಲ’.

ಹೋಹೊ, ಹಾಹಾ ಎನ್ನಿಸುವುದು ನಮ್ಮ ಮನಸ್ಸು ಸೃಷ್ಟಿಸಿದ ಬಂಧಗಳಿಂದ. ಈ ವ್ಯಾಪಾರ ಸೃಷ್ಟಿಯದಲ್ಲ, ನಮ್ಮದೇ - ನಮ್ಮ ಮನಸ್ಸಿನದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.