ADVERTISEMENT

ಗತಿಬಿಂಬ | ಚರಿತ್ರೆ ಬದಲಿಸಿದ ಬೊಮ್ಮಾಯಿ

ಇತಿಹಾಸ ತಿರುಚಬಹುದು; ಸತ್ಯವನ್ನು ಸಮಾಧಿಯೊಳಗೆ ಮುಚ್ಚಿಡಲಾಗದು

ವೈ.ಗ.ಜಗದೀಶ್‌
Published 15 ಆಗಸ್ಟ್ 2022, 18:58 IST
Last Updated 15 ಆಗಸ್ಟ್ 2022, 18:58 IST
   

ಚರಿತ್ರೆ ಸೃಷ್ಟಿಸಬಹುದಾದ ಅಪೂರ್ವ ಅವಕಾಶಗಳನ್ನು ಕಳೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇತಿಹಾಸ ತಿರುಚುವ ದಿಕ್ಕಿನತ್ತ ಅಡಿಯಿಟ್ಟರು. ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಹೊತ್ತಿನೊಳಗೆ ಹಿಂತಿರುಗಿ ನೋಡಿದರೆ ವಿವಾದಗಳೇ ವಿಜೃಂಭಿಸಿವೆ. ‘ದ್ವೇಷಚರಿತೆ’ಯನ್ನು ಮುನ್ನೆಲೆಗೆ ತಂದು, ಕೋಮು ವಿಷವನ್ನು ಹೆಪ್ಪುಗಟ್ಟಿಸಿ ಮತಫಸಲು ತೆಗೆಯುವತ್ತಲೇ ಬಿಜೆಪಿ ತಲೆಯಾಳುಗಳು ಅವಿಶ್ರಾಂತವಾಗಿ ತೊಡಗಿಕೊಂಡರು. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ನೋಟದಲ್ಲೇ ಉಳಿದವು.

ಎಸ್.ಆರ್.ಬೊಮ್ಮಾಯಿ ಸೇರಿದಂತೆ ಏಳು ಜನ ಮುಖ್ಯಮಂತ್ರಿಗಳ ಜತೆ ಹತ್ತಿರದ ನಂಟು ಹೊಂದಿದ್ದ ಬಸವರಾಜ ಅವರಿಗೆ ರಾಜಕೀಯ–ಆಡಳಿತಾತ್ಮಕ ಅನುಭವ ಬಹಳಷ್ಟಿದ್ದು, ನಾಡಿನ ದಿಕ್ಕನ್ನೇ ಬದಲಿಸುವ ಅವಕಾಶ ಇದೆ ಎಂದು ‘ಚರಿತ್ರೆ ಸೃಷ್ಟಿಸೋ ಅವಕಾಶ’ ಶೀರ್ಷಿಕೆಯಡಿ ವರ್ಷದ ಹಿಂದೆ ಬರೆದಿದ್ದೆ. ಅವರ ಕೈಗೆ ಅಧಿಕಾರ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇಂತಹದೊಂದು ನಿರೀಕ್ಷೆ ಇದ್ದೀತು.

ತಮ್ಮದೇ ಚರಿತ್ರೆ ಸೃಷ್ಟಿಸುವ ದಾರಿ ಬಿಟ್ಟು ಇತಿಹಾಸ ಬದಲಿಸುವ ಕಾಯಕಕ್ಕೆ ಕೈ ಹಾಕಿದರು; ತಮ್ಮ ಜತೆಗಾರರು ಕೈಹಾಕುವುದನ್ನು ನೋಡುತ್ತಾ ಮೌನಕ್ಕೆ ಶರಣಾದರು. ಸರ್ಕಾರದ ಅಧಿಕೃತ ಆದೇಶವೇ ಇಲ್ಲದೆ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಪುಟ ಸಹೋದ್ಯೋಗಿ ಬಿ.ಸಿ.ನಾಗೇಶ್ ಅವರು ಮುಂದಾದಾಗ ಅದಕ್ಕೆ ಆಕ್ಷೇಪ ಎತ್ತಲಿಲ್ಲ. ಭಗತ್ ಸಿಂಗ್‌ ಪಾಠ ಕೈಬಿಟ್ಟಿದ್ದು, ಜನರಲ್ಲಿ ಸ್ವಾಭಿಮಾನದ ಕೆಚ್ಚು ತುಂಬಿದ ನಾರಾಯಣಗುರು, ದಾಸಶ್ರೇಷ್ಠರಾದ ಕನಕದಾಸರ ಪಾಠಗಳನ್ನು ತಲಾ ಒಂದು ಪ್ಯಾರಾಕ್ಕೆ ಇಳಿಸಿದ ಪ್ರಮಾದ ನಡೆಯಿತು. ಅಂತಹ ಕೆಲಸ ಮಾಡಿಯೇ ಇಲ್ಲ ಎಂದು ಸಚಿವರು ಹೇಳುತ್ತಾ ಬಂದರು; ಈ ಸುಳ್ಳಿಗೆ ಬೊಮ್ಮಾಯಿ ತಲೆಯಾಡಿಸುತ್ತಲೇ ಬಂದರು. ಇತಿಹಾಸವನ್ನೇ ಜನರಿಂದ ಮರೆಮಾಚುವ ಕೆಲಸವೂ ನಡೆಯಿತು.

ADVERTISEMENT

‘ಆಧುನಿಕ ಭಾರತದ ಶಿಲ್ಪಿ’ ಎಂದು ಅಟಲ್ ಬಿಹಾರಿ ವಾಜಪೇಯಿ ಅವರಿಂದ ಮೆಚ್ಚುಗೆ ಪಡೆದಿದ್ದ ಜವಾಹರಲಾಲ್ ನೆಹರೂ ಹಾಗೂ ನವಕರ್ನಾಟಕದ ಮುಂಗೋಳಿ ಎಂದು ಕರೆಸಿಕೊಂಡ ಟಿಪ್ಪು ಸುಲ್ತಾನ್ ಅವರ ಚಿತ್ರವನ್ನುಸ್ವಾತಂತ್ರ್ಯೋತ್ಸವದ ಜಾಹೀರಾತಿನಲ್ಲಿ ಕೈಬಿಟ್ಟರು. ಈ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಅನಾಮಧೇಯ ಹೋರಾಟಗಾರರಿಗೆ ನಮನ ಸಲ್ಲಿಸಿದ್ದೇವೆ. ದೇಶದ ಉದ್ದಗಲ ರಸ್ತೆಗಳು, ಕಟ್ಟಡಗಳಿಗೆ ನೆಹರೂ ಹೆಸರು ಇಟ್ಟಿದ್ದರಲ್ಲವೇ? ಈಗ ಇವರಿಗೆ ಅಭದ್ರತೆ ಏಕೆ ಕಾಡುತ್ತಿದೆ’ ಎಂದಿದ್ದಾರೆ. ‘ದೇಶ ವಿಭಜನೆಗೆ ನೆಹರೂ ಕಾರಣರಾಗಿದ್ದಕ್ಕೆ ಅವರ ಫೋಟೊವನ್ನು ಉದ್ದೇಶಪೂರ್ವಕವಾಗಿ ಬಿಟ್ಟಿದ್ದೇವೆ’ ಎಂದು ಬಿಜೆಪಿ ಶಾಸಕ ಎನ್. ರವಿಕುಮಾರ್ ಹೇಳಿದ್ದಾರೆ.

ಬ್ರಿಟನ್ ಸಂಸತ್‌ನಲ್ಲಿ 1947ರ ಜುಲೈ 18ರಂದು ಅಂಗೀಕಾರಕೊಂಡ ‘ಇಂಡಿಯನ್ ಇಂಡಿಪೆಂಡೆನ್ಸ್ ಆ್ಯಕ್ಟ್– 1947’ರಲ್ಲೇ ಎರಡು ದೇಶದ ಉಲ್ಲೇಖ ಇದೆ. ಎರಡು ದೇಶವಾಗದೇ ಇದ್ದರೆ ಸ್ವಾತಂತ್ರ್ಯ ಕೊಡಲು ಬ್ರಿಟಿಷರು ಒಪ್ಪುತ್ತಲೇ ಇರಲಿಲ್ಲ. ನೆಹರೂ ಜತೆಗೆ ಅಂದು ಸರ್ಕಾರದಲ್ಲಿದ್ದಸರ್ದಾರ್ ವಲ್ಲಭಭಾಯಿ ಪಟೇಲ್‌, ಹೊರಗಿದ್ದ ಗಾಂಧೀಜಿ ಕೂಡ ಕಾರಣರು ಎಂಬುದು ಇತಿಹಾಸ. ವಿಭಜನೆಗೆ ನೆಹರೂ ಕಾರಣರೆಂಬ ವಾದವನ್ನೇ ಒಪ್ಪೋಣ. ಪ್ರಧಾನಿ ಮೋದಿಯವರು 2015ರ ಡಿಸೆಂಬರ್‌ 25ರಂದು ಯಾವುದೇ ಆಹ್ವಾನ ಹಾಗೂ ಪೂರ್ವನಿಗದಿತ ಕಾರ್ಯಕ್ರಮ ಇಲ್ಲದೇ ಪಾಕಿಸ್ತಾನಕ್ಕೆ ಹೋಗಿ, ಅಲ್ಲಿನ ಪ್ರಧಾನಿಯಾಗಿದ್ದ ನವಾಜ್ ಷರೀಫರ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಬಂದಿದ್ದರು. ನೆಹರೂ ಬಗೆಗಿನ ನಿಲುವು ಮೋದಿಯವರಿಗೂ ಅನ್ವಯಿಸಬೇಕಲ್ಲವೇ?

‘ಮೈಸೂರು ಹುಲಿ’ ಎಂದೇ ಬ್ರಿಟಿಷರಿಂದ ಕರೆಸಿಕೊಂಡು, ಅವರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಟಿಪ್ಪು ಸುಲ್ತಾನ್‌ನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯಲು ಬಿಜೆಪಿಗರಿಗೆ ಮನಸ್ಸೇ ಇಲ್ಲ. ಬ್ರಿಟಿಷರನ್ನು ದೇಶದಿಂದ ಒದ್ದೋಡಿಸಲು ಫ್ರಾನ್ಸ್‌ನ ನೆಪೋಲಿಯನ್ ಜತೆಗೆ ಪತ್ರ ವ್ಯವಹಾರ ನಡೆಸಿದ್ದ ಟಿಪ್ಪು, ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧಗಳನ್ನು ನಡೆಸಿದವ. ಬಾಯಾರಿ ಬಂದವರು ಯಾವ ಜಾತಿಯವರು ಎಂದು ನೋಡಿ ನೀರನ್ನು ಕೊಡುವ ದರಿದ್ರ ಜಾತಿ ವ್ಯವಸ್ಥೆ ಈ ದೇಶದಲ್ಲಿದೆ; ಬ್ರಿಟಿಷರ ತೊತ್ತಾಗಿ ಅಪಾರ ಸಂಪತ್ತು ಲೂಟಿ ಹೊಡೆದವರು ಇದ್ದಾರೆ. ಅಂತಹ ದೇಶದಲ್ಲಿ, ‘ಬ್ರಿಟಿಷರಿಗೆ ಶರಣಾಗಲಾರೆ, ಯುದ್ಧದಲ್ಲಿ ಗೆದ್ದೇ ತೀರುವೆ’ ಎಂದು ಪಣತೊಟ್ಟ ವೀರ ಟಿಪ್ಪು, ತನ್ನ ಮಕ್ಕಳನ್ನೇ ಒತ್ತೆಯಿಡುವಷ್ಟು ನಾಡಪ್ರೇಮಿಯಾಗಿದ್ದ. ಆತ ತಂದ ಸುಧಾರಣೆಗಳು ಭವಿಷ್ಯದ ಭಾರತಕ್ಕೆ ಅಡಿಗಲ್ಲಾ ಗಿದ್ದವು. ಟಿಪ್ಪುವನ್ನು ಒಪ್ಪದವರು, ವಿ.ಡಿ.ಸಾವರ್ಕರ್ ಅವರನ್ನು ‘ವೀರ’ ಎಂದು ಬಣ್ಣಿಸುತ್ತಾರೆ. 1913ರಲ್ಲಿ ಬ್ರಿಟಿಷ್‌ ಸರ್ಕಾರಕ್ಕೆ ಸಾವರ್ಕರ್ ಬರೆದ ಕ್ಷಮಾಪಣೆ ಪತ್ರ ಇನ್ನೂ ಕೇಂದ್ರ ಪತ್ರಾಗಾರ ಇಲಾಖೆಯಲ್ಲಿದ್ದೀತು. ‘ನಾವು ಜೈಲಿನಲ್ಲಿರುವಷ್ಟು ದಿನ ಮಹಾರಾಣಿಯವರ ಸಾವಿರಾರು ಭಾರತೀಯ ಪ್ರಜೆಗಳಿಗೆ ನಿಜವಾದ ಹರ್ಷ ಸಾಧ್ಯವಿಲ್ಲ. ಯಾಕೆಂದರೆ ರಕ್ತ ಸಂಬಂಧ ಹೆಚ್ಚು ಗಟ್ಟಿ... ನಾನು ಯಾವುದೇ ರೀತಿಯಲ್ಲಾದರೂ ಸರ್ಕಾರದ ಸೇವೆ ಮಾಡಲು ಸಿದ್ಧನಿದ್ದೇನೆ’ ಎಂದು ಕ್ಷಮಾಪಣೆ ಪತ್ರದಲ್ಲಿ ಬರೆದಿದ್ದರು. ಗಾಂಧೀಜಿಯವರನ್ನು ಕೊಂದ ನಾಥೂರಾಮ್ ಗೋಡ್ಸೆ, ಸಾವರ್ಕರ್‌ ಅವರ ಶಿಷ್ಯ ಎಂದು ದಾಖಲೆಗಳು ಹೇಳುತ್ತವೆ. ಈ ಹೊತ್ತಿಗೂ ಸಾವರ್ಕರ್‌, ಗೋಡ್ಸೆ, ನಾರಾಯಣ ಆಪ್ಟೆ ಜತೆಗಿರುವ ಫೋಟೊಗಳು ಬಹಳಷ್ಟು ಸಿಗುತ್ತವೆ. ಬ್ರಿಟಿಷರ ವಿರುದ್ಧ ನೆಹರೂ, ಟಿಪ್ಪು ಸುಲ್ತಾನ್ ಹೋರಾಡಲಿಲ್ಲ ಬಿಡಿ. ಸಾವರ್ಕರ್ ಎಲ್ಲಿ ಹೋರಾಡಿದ್ದರು? ದೇಶದ ಕ್ರಾಂತಿಕಾರಿಗಳು, ಅಂದಿನ ಕಾಂಗ್ರೆಸ್ ಪಕ್ಷವು ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದಾಗ, ಸಾವರ್ಕರ್‌ ಹಿಂದೂ ಮಹಾಸಭಾ ಸ್ಥಾಪಿಸಿ ತಮ್ಮದೇ ಆದ ಕೆಲಸ ಮಾಡುತ್ತಿದ್ದುದು ಇತಿಹಾಸ. ಅನಾಮಧೇಯ ಹೋರಾಟಗಾರರೆಂದರೆ ಇವರೇ ಇರಬೇಕು!

ಭಗತ್ ಸಿಂಗ್‌, ಚಂದ್ರಶೇಖರ್ ಆಜಾದ್‌ ಅವರಿಗೆ ಕೇಸರಿ ವಸ್ತ್ರ ಹೊದಿಸಿ, ತಮ್ಮ ನಾಯಕರು ಎಂದು ಬಿಂಬಿಸಿಕೊಳ್ಳುವ ಯತ್ನವನ್ನು ಸಂಘ ಪರಿವಾರ ಮಾಡಿತ್ತು. ಆಜಾದ್‌ ಅವರಿಗೆ ಜನಿವಾರವನ್ನೂ ತೊಡಿಸಿತ್ತು. ಕಮ್ಯುನಿಸ್ಟ್ ಸಿದ್ಧಾಂತವನ್ನು ನೆಚ್ಚಿಕೊಂಡಿದ್ದ ಈ ವೀರರು, ಬ್ರಿಟಿಷರನ್ನು ಓಡಿಸಲು ‘ಹಿಂದೂಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಶನ್‌’ ಅನ್ನು 1927ರಲ್ಲೇ ಕಟ್ಟಿದ್ದನ್ನು ಸಂಘ ಪರಿವಾರದವರು ಮರೆತೇಬಿಟ್ಟಿದ್ದರು. ಬಳಿಕ, ಸರ್ದಾರ್ ಪಟೇಲರನ್ನು ತಮ್ಮ ಹೆಗ್ಗುರುತು ಮಾಡಿಕೊಳ್ಳುವ ಹುನ್ನಾರವೂ ನಡೆಯಿತು. ಅಪ್ಪಟ ರಾಷ್ಟ್ರೀಯವಾದಿಯಾಗಿದ್ದ, ಕಾಂಗ್ರೆಸ್‌ ಪರಂಪರೆಯಲ್ಲಿ ಬೆಳೆದಿದ್ದ ಪಟೇಲರು, ಕೋಮುವಾದಿಯಾಗಿರಲಿಲ್ಲ. ಆರ್‌ಎಸ್‌ಎಸ್‌ ಬಗ್ಗೆ ಭಿನ್ನವಾದ ನಿಲುವನ್ನೇ ಹೊಂದಿದ್ದರು. ಹಾಗಿದ್ದರೂ ಪಟೇಲರ ಪ್ರತಿಮೆ ನಿರ್ಮಾಣದ ಅಭಿಯಾನವನ್ನೇ ನಡೆಸಿ, ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮವರು ಭಾಗಿಯಾಗಿದ್ದಾರೆಂದು ಬಿಂಬಿಸುವ ಯತ್ನವೂ ನಡೆಯಿತು. ಪ್ರತಿಮಾ ರಾಜಕಾರಣವೂ ಅವರಿಗೆ ನಿರೀಕ್ಷಿತ ಫಲ ಕೊಡಲಿಲ್ಲ. ಈಗ ಕಡೆಗೆ ಉಳಿದಿರುವುದು ಸಾವರ್ಕರ್ ಮಾತ್ರ.

ತಮ್ಮ ಸರ್ಕಾರ ಕರ್ನಾಟಕವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ ಎಂದು ಬೊಮ್ಮಾಯಿ ಹೇಳಿಕೊಳ್ಳುತ್ತಾರೆ. ಮುಖ್ಯಮಂತ್ರಿ ಬದಲಾವಣೆ ವಿಷಯವನ್ನು ಬಿಜೆಪಿಯ ಮಾಜಿ ಶಾಸಕ ಸುರೇಶ್‌ ಗೌಡ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಕಾಂಗ್ರೆಸ್‌ನವರು ಇದನ್ನು ಹಬ್ಬಿಸುತ್ತಿದ್ದಾರೆ;ಈ ಅಪಪ್ರಚಾರವು ಇನ್ನೂ ಎರಡು ಗಂಟೆ ಹೆಚ್ಚುವರಿ ಕೆಲಸ ಮಾಡಲು ಪ್ರೇರಣೆ ಒದಗಿಸಿದೆ’ ಎಂದರು. ಅಂದರೆ, ಅಭಿವೃದ್ಧಿಯತ್ತ ಪೂರ್ಣಾವಧಿ ಅವರು ತೊಡಗಿಕೊಂಡಿಲ್ಲ ಎಂಬುದು ಇದರರ್ಥವೇ? ಸಂಸದೀಯ ವ್ಯವಹಾರಗಳ (ಅಧಿಕೃತ ವಕ್ತಾರ) ಸಚಿವ ಜೆ.ಸಿ. ಮಾಧುಸ್ವಾಮಿ, ‘ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್ ಮಾಡುತ್ತಿದ್ದೇವೆ ಅಷ್ಟೆ’ ಎಂದು ಹೇಳಿದ್ದಾರೆ. ಈ ಇಬ್ಬರಲ್ಲಿ ಸತ್ಯ ಹೇಳಿದ್ದು ಯಾರು?

ಚರಿತ್ರೆಯನ್ನು ತಿರುಚಬಹುದು; ಆದರೆ, ಸತ್ಯವನ್ನು ಸಮಾಧಿ ಮಾಡಲಾಗದು; ಅದಕ್ಕೆ ಗಾಂಧೀಜಿ ‘ನನ್ನ ಸತ್ಯಾನ್ವೇಷಣೆ’ ಎಂಬ ಹೆಸರಿನಲ್ಲಿ ಆತ್ಮಚರಿತ್ರೆ ಬರೆದರು; ಸತ್ಯವೇ ನನ್ನ ದೇವರು ಎಂದರು. ಸುಳ್ಳನ್ನು ಎಷ್ಟು ಬಾರಿ ಹೇಳಿದರೂ ಅದು ಸತ್ಯವಾಗದು. ಸಮಾಧಿಯೊಳಗೆ ಹೂತಿಟ್ಟರೂ ಸತ್ಯ ಮೊಳಕೆಯೊಡೆದು, ಚಿಗುರು ಪಡೆದು ಎಂದಾದರೊಂದು ಮರವಾಗುತ್ತದೆ. ಅದಕ್ಕೇ ನಮ್ಮ ದೇಶದ ಹಾಗೂ ರಾಜ್ಯದ ಲಾಂಛನದಲ್ಲಿ ‘ಸತ್ಯಮೇವ ಜಯತೆ’ ಎಂಬ ಪದಗಳನ್ನು ಹಿರೀಕರು ಸೇರಿಸಿದ್ದಾರೆ. ಸರ್ಕಾರ ನಡೆಸುವವರಿಗೆ ಇದು ಅರ್ಥವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.