ADVERTISEMENT

ಗತಿಬಿಂಬ | ಡಬಲ್‌ ಎಂಜಿನ್‌ ಸರ್ಕಾರ: ನಾಡಿಗೆ ಸಿಕ್ಕಿದ್ದೇನು?

ಕೇಂದ್ರವನ್ನು ಅಂಗಲಾಚುವ ದುಸ್ಥಿತಿ ಬೇಡ; ಬೇಕಿದೆ ನಾಡು–ನುಡಿ ಉಳಿಸುವ ಕಾಯಕ

ವೈ.ಗ.ಜಗದೀಶ್‌
Published 15 ಡಿಸೆಂಬರ್ 2022, 19:30 IST
Last Updated 15 ಡಿಸೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸರ್ಕಾರ ಬೆಳಗಾವಿಯಲ್ಲಿ ವರ್ಷಕ್ಕೊಮ್ಮೆ ನಡೆಸುವ ವಿಧಾನಮಂಡಲ ಅಧಿವೇಶನಕ್ಕೆ ದಿನಗಣನೆ ಶುರುವಾಗಿದೆ. ‘ಕಡೆಗಣಿಸಲ್ಪಟ್ಟಿದ್ದೇವೆ’ ಎಂಬ ನಿಲುವಿಗೆ ಬಂದು ನಿಂತಂತಿರುವ ಉತ್ತರ ಕರ್ನಾಟಕದ ಜನರ ಅಪೇಕ್ಷೆ ಈಡೇರಿಸಿ, ನೀವುಕೂಡ ಕನ್ನಡ ಮಣ್ಣಿನ ಮಕ್ಕಳು ಎಂದು ವಿಶ್ವಾಸ ಮೂಡಿಸುವ ಕೆಲಸ ಇಷ್ಟು ವರ್ಷಗಳಲ್ಲಿ ಆಗಬೇಕಿತ್ತು. ಕರ್ನಾಟಕ ಏಕೀಕರಣಗೊಂಡು 66 ವರ್ಷ ಗತಿಸಿದರೂ ಉತ್ತರ–ದಕ್ಷಿಣ ಭೇದ ಹೋಗಿಲ್ಲ.

ಅಧಿಕಾರ ನಡೆಸಿದ ಎಲ್ಲ ಪಕ್ಷಗಳ ನಾಯಕರು ಕರ್ನಾಟಕದ ಎಲ್ಲ ಪ್ರದೇಶವನ್ನೂ ಸಮನಾಗಿ ನೋಡುವುದಾಗಿ ಹೇಳುತ್ತಾರೆಯೇ ವಿನಾ ಅನುದಾನ, ಅನುಷ್ಠಾನದ ವಿಷಯಕ್ಕೆ ಬಂದರೆ ನೈಜ ಆಸಕ್ತಿಯನ್ನು ತೋರಿದ್ದು ಕಡಿಮೆ. ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗವೆಂದು ಪ್ರತಿಪಾದಿಸಲು, ತಂಟೆಕೋರರಾದ ಕೆಲವು ಮರಾಠಿಗರಿಗೆ ಸಡ್ಡು ಹೊಡೆಯಲು, ಈ ಪ್ರದೇಶದಲ್ಲಿ ಅಭಿವೃದ್ಧಿಯ ಚಹರೆಗಳು ಕಾಣಿಸುವಂತೆ ಮಾಡಬೇಕೆಂಬ ಸದಿಚ್ಛೆಯಿಂದ ಸುವರ್ಣಸೌಧ ಕಟ್ಟಲಾಯಿತು. ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಧಾನ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಿ ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಕಟ್ಟುವ ಸಂಕಲ್ಪ ಮಾತಿನಲ್ಲೇ ಉಳಿಯಿತು.

ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಅಧಿವೇಶನದ ಹೊತ್ತಿನಲ್ಲಿ ಅಲ್ಲಿನ ಬಿಜೆಪಿ ಪಾಲು ದಾರಿಕೆಯ ಮೈತ್ರಿ ಸರ್ಕಾರವೇ ತಕರಾರು ತೆಗೆದಿದೆ. ಮರಾಠಿಗರನ್ನು ಎತ್ತಿಕಟ್ಟುವುದಕ್ಕಾಗಿ ಮುಖ್ಯಮಂತ್ರಿ ಏಕನಾಥ ಶಿಂದೆಯವರು ಇಬ್ಬರು ಸಚಿವರನ್ನು ನಿಯೋಜಿಸಿದ್ದಾರೆ. ಶಿವಸೇನಾ ಮತ್ತು ಎನ್‌ಸಿಪಿ ಕೂಡ ಇದರ ಪರವಾಗಿ ಧ್ವನಿ ಎತ್ತಿವೆ. ಗಡಿ ವಿವಾದ ಎಂದೋ ಮುಗಿದ ಅಧ್ಯಾಯ. ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ.

ADVERTISEMENT

ಬೆಳಗಾವಿ ಗಡಿ ವಿವಾದ ಕೆದಕುವುದಕ್ಕೂ ಕರ್ನಾಟಕದ ವಿಧಾನಸಭೆ ಚುನಾವಣೆಗೂ ಒಳನಂಟಿರುವುದು ರಹಸ್ಯವಲ್ಲ. ಮರಾಠಿ ಅಸ್ಮಿತೆಯ ರಕ್ಷಕ ಎಂದು ಬಿಂಬಿಸಿಕೊಳ್ಳುವ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿದ್ದರು. ಶಿವಸೇನಾ, ಕಾಂಗ್ರೆಸ್, ಎನ್‌ಸಿಪಿ ಮೈತ್ರಿಕೂಟದ ಸರ್ಕಾರ ಅಲ್ಲಿತ್ತು. ಆಗ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇತ್ತು. ರಾಜಕೀಯಕ್ಕಾಗಿಯೇ ವಿವಾದ ಎಬ್ಬಿಸುವುದೇ ಆದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿರುವಾಗ ಬೆಳಗಾವಿ ತಕರಾರನ್ನು ಮುನ್ನೆಲೆಗೆ ತಂದು, ರಾಡಿ ಎಬ್ಬಿಸಬಹುದಾಗಿತ್ತು. ಅಂತಹ ಕೆಲಸ ಆಗ ನಡೆಯಲಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಅಲ್ಪಕಾಲದಲ್ಲಿ ಈ ವಿವಾದ ಮುನ್ನೆಲೆಗೆ ಬಂದಿದೆ.

ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳಿವೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದರೂ ‘ಟ್ರಿಪಲ್ ಎಂಜಿನ್’ ಸರ್ಕಾರಗಳ ‘ಒಡೆಯ’ರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಬಾಯನ್ನೇ ತೆರೆಯಲಿಲ್ಲ. ಕನ್ನಡ ಸಂಘಟನೆಗಳು, ವಿರೋಧ ಪಕ್ಷಗಳು ಧ್ವನಿ ಎತ್ತಿದ ಮೇಲಷ್ಟೇ ಗೃಹ ಸಚಿವ ಶಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ್ದಾರೆ. 10 ನಿಮಿಷದಲ್ಲೇ ಮುಗಿಸಿದ ಸಭೆಯಲ್ಲಿ, ‘ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು, ಪ್ರಚೋದನಕಾರಿ ಮಾತುಗಳನ್ನು ಆಡಬಾರದು’ ಎಂದು ತಾಕೀತು ಮಾಡಿದ್ದಾರೆ. ಇದನ್ನೆಲ್ಲ ಗಮನಿಸಿದರೆ, ಮೇಲ್ನೋಟಕ್ಕೆ ಇದು ಬಿಜೆಪಿ ಪೋಷಿತ ‘ತಕರಾರು’ ಇದ್ದಂತಿದೆ.

ಬೆಳಗಾವಿ ಜಿಲ್ಲೆಯ ಬಹುಪಾಲು ಕ್ಷೇತ್ರಗಳ ಗೆಲುವಿಗೆ ಯಡಿಯೂರಪ್ಪನವರ ಶಕ್ತಿ ಪ್ರಮುಖವಾಗಿತ್ತು. ಈ ಬಾರಿ ಅವರು ಸಾರಥಿಯಾಗಿರುವುದಿಲ್ಲ. ಬೆಳಗಾವಿ ರಾಜಕಾರಣದಲ್ಲಿ ತನ್ನದೇ ಪ್ರಭಾವ ಹೊಂದಿದ್ದ ಉಮೇಶ ಕತ್ತಿ ನಿಧನರಾಗಿದ್ದರಿಂದ ಅವರ ಬಲವೂ ಇಲ್ಲ. ಸಚಿವ ಸಂಪುಟದಿಂದ ಹೊರಗಿರುವ ರಮೇಶ ಜಾರಕಿಹೊಳಿ ನಿಷ್ಕ್ರಿಯರಾಗಿದ್ದಾರೆ. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಅವರನ್ನು ಬೊಮ್ಮಾಯಿ ನೇತೃತ್ವದ ಸರ್ಕಾರ ಬರುತ್ತಿದ್ದಂತೆ ಕೈಬಿಡಲಾಯಿತು. ಹೀಗಾಗಿ, ಬೆಳಗಾವಿಯ 18 ಕ್ಷೇತ್ರಗಳಲ್ಲಿ ಅರ್ಧದಷ್ಟಲ್ಲಾದರೂ ಬಿಜೆಪಿಯನ್ನು ಗೆಲುವಿನ ದಡಕ್ಕೆ ಮುಟ್ಟಿಸುವವರಿಲ್ಲ. ಆದ್ದರಿಂದ ಗಡಿ ವಿವಾದ ಸೃಷ್ಟಿಸಲಾಯಿತೇ ಎಂಬ ಅನುಮಾನವೂ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಮಹದಾಯಿ ಯೋಜನೆ ಜಾರಿ ಮಾಡಲಾಗುವುದು ಎಂದು ಯಡಿಯೂರಪ್ಪ ಘೋಷಿಸಿದ್ದರು. 2019ರ ಲೋಕಸಭೆ ಚುನಾವಣೆ ವೇಳೆ ‘ಬಿಜೆಪಿಯನ್ನು ಗೆಲ್ಲಿಸಿದರೆ, ಕರ್ನಾಟಕದಲ್ಲಿ ಕೂಡ ಬಿಜೆಪಿ ಅಧಿಕಾರ ಹಿಡಿಯಲಿದೆ. ಡಬಲ್ ಎಂಜಿನ್ ಸರ್ಕಾರದಿಂದ ಸಕಲವೂ ಕರ್ನಾಟಕಕ್ಕೆ ಹರಿದುಬರಲಿವೆ’ ಎಂದು ಮೋದಿ–ಶಾ ವಾಗ್ದಾನ ಮಾಡಿದ್ದರು. ‘ಮಹದಾಯಿ ಯೋಜನೆಗೆ ಇದ್ದ ಅಡೆತಡೆ ನಿವಾರಣೆಯಾಗಿದೆ, ಚುನಾವಣೆ ಮುಗಿಯುತ್ತಲೇ ಯೋಜನೆ ಜಾರಿಯಾಗಲಿದೆ’ ಎಂದು ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ‘ಪತ್ರ’ವೊಂದನ್ನು ಪ್ರದರ್ಶಿಸಿದ್ದರು. ಅಧಿಕಾರ ಹಿಡಿದು ಮೂರೂವರೆ ವರ್ಷವಾಗಿದ್ದು, ಮಹಾರಾಷ್ಟ್ರ ಸೇರಿದಂತೆ ಟ್ರಿಪಲ್ ಎಂಜಿನ್‌ಗಳಿದ್ದರೂ ಮಹದಾಯಿ ಯೋಜನೆ ಎಲ್ಲಿತ್ತೋ ಅಲ್ಲೇ ನಿಂತಿದೆ.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದಾಗಿ ಹೇಳಿ ಆರು ತಿಂಗಳು ಕಳೆದರೂ ಕೇಂದ್ರ ಸಚಿವ ಸಂಪುಟದ ಮುಂದೆ ಕಡತವೇ ಮಂಡನೆಯಾಗಿಲ್ಲ. ಮೇಕೆದಾಟು ಯೋಜನೆಯನ್ನು ಪ್ರಶ್ನಿಸಿರುವ ತಮಿಳುನಾಡು ಸರ್ಕಾರದ ತಕರಾರು ಅರ್ಜಿಯ ವಿಚಾರಣೆ ಶುರುವಾಗಿಯೇ ಇಲ್ಲ. ಇದೆಲ್ಲದರ ಮಧ್ಯೆಯೇ, ಕರ್ನಾಟಕ–ತಮಿಳುನಾಡು ಮಧ್ಯದ ದಕ್ಷಿಣ ಪಿನಾಕಿನಿ ಜಲವ್ಯಾಜ್ಯದ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸದ ಬಗ್ಗೆ ಸುಪ್ರೀಂ ಕೋರ್ಟ್‌ ನವೆಂಬರ್‌ನಲ್ಲೇ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಮತ್ತೆ ವಿಚಾರಣೆಗೆ ಬಂದ ವೇಳೆ, ಮೂರು ತಿಂಗಳಿನಲ್ಲಿ ನ್ಯಾಯಮಂಡಳಿ ರಚಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಕರ್ನಾಟಕಕ್ಕೆ ನ್ಯಾಯವೆಂಬುದು ಮರೀಚಿಕೆಯೇ ಸೈ.

ಡಬಲ್ ಎಂಜಿನ್ ಸರ್ಕಾರದ ಭ್ರಮೆಗೆ ಬಿದ್ದ ಕನ್ನಡಿಗರು 2019ರಲ್ಲಿ 25 ಸಂಸದರನ್ನು ಗೆಲ್ಲಿಸಿದರು. ನಾಡಿನ ಹಿತಕ್ಕೆ ಹಕ್ಕೊತ್ತಾಯ ಮಂಡಿಸಬೇಕಾದ ಸಂಸದರು ಚೇಷ್ಟೆಯಲ್ಲಿ ನಿರತರಾಗಿದ್ದಾರೆ. ತಮ್ಮದೇ ಪಕ್ಷದ ಶಾಸಕ ಬಸ್ ನಿಲ್ದಾಣಕ್ಕೆ ಅರಮನೆ ಆಕಾರ ಕೊಟ್ಟರೆ, ಸಂಸದ ಪ್ರತಾಪ ಸಿಂಹ ಗುಂಬಜ್‌ ಒಡೆಯುವ ಹೋರಾಟಕ್ಕೆ ಧುಮುಕುತ್ತಾರೆ. ‘ದರ್ಗಾದೊಳಗೆ ಶಿವಲಿಂಗ ಇದೆ; ಪೂಜೆ ಮಾಡಬೇಕು’ ಎಂದು ಪೊಲೀಸರಿಗೆ ಧಮಕಿ ಹಾಕಿದ ಕೇಂದ್ರ ಸಚಿವ ಭಗವಂತ್ ಖೂಬಾ ದರ್ಗಾಕ್ಕೆ ನುಗ್ಗಲು ಯತ್ನಿಸುತ್ತಾರೆ. ಹಳೆಯ ವೈಷಮ್ಯದಿಂದ ನಡೆದ ಕೊಲೆಯನ್ನು ಧರ್ಮ ಯುದ್ಧವನ್ನಾಗಿ ಪರಿವರ್ತಿಸಿದ ಬಿ.ವೈ.ರಾಘವೇಂದ್ರ, ಒಂದು ಸಮುದಾಯದ ಮೇಲೆ ದಾಳಿ ನಡೆವಾಗ ಸುಮ್ಮನೆ ನಿಲ್ಲುತ್ತಾರೆ.

ಹಳದಿ ಎಲೆ ರೋಗದಿಂದ ಅಡಿಕೆ ಬೆಳೆ ಸರ್ವನಾಶವಾಗಿದೆ, ತೊಗರಿ ಕೂಡ ರೋಗಬಾಧೆಗೆ ಸಿಲುಕಿದೆ. ಕಾಫಿ ಬೆಳೆಗಾರರ ಸಂಕಷ್ಟ ಹೇಳತೀರದು. ಕೃಷಿ ಖಾತೆ ಹೊಂದಿರುವ ಸಚಿವೆ ಶೋಭಾ ಕರಂದ್ಲಾಜೆ, ಮತ ಹಾಕಿದವರು ಬದುಕಿದ್ದಾರೆಯೇ ಎಂದು ನೋಡಲು ಇತ್ತ ಸುಳಿಯುವುದಿಲ್ಲ. ಇಂತಹ ಸಂಸದರು–ಸಚಿವರು ಇರುವುದು ಕನ್ನಡಿಗರ ಭಾಗ್ಯ! ಕರ್ನಾಟಕಕ್ಕೆ ಡಬಲ್ ಎಂಜಿನ್ ಸದಾ ಚುಚ್ಚುವ ‘ಗುಂಡುಪಿನ್’.

ಭಯದಿಂದ ವಿನೀತರಾಗಿ ಶಾಲಾ ಮಕ್ಕಳು ಮೇಷ್ಟ್ರ ಮುಂದೆ ನಿಲ್ಲುವಂತೆ ಮೋದಿ–ಶಾ ಎದುರು ನಮ್ಮ ಸಂಸದರು, ಸಚಿವರು ನಿಲ್ಲುತ್ತಾರೆ. ಕರ್ನಾಟಕಕ್ಕೆ ನ್ಯಾಯ ಕೇಳಿ ಸೊಲ್ಲೆತ್ತುವ ಧೈರ್ಯವಾದರೂ ಹೇಗೆ ಬಂದೀತು? ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ
ಯಾಗಿಬಿಟ್ಟಿದೆ. ಕೋಟಿಗಟ್ಟಲೆ ತೆರಿಗೆ ಸಂಗ್ರಹಿಸಿ ಕೊಟ್ಟರೂ, ಭಿಕ್ಷಾಪಾತ್ರೆಯೇ ಗತಿಯಾಗಿದೆ. ಹೀಗಿರುವಾಗ, ‘ವಿಶ್ವ ಗುರು’ವಿನ ಮುಂದೆ ಗುಲಾಮೀತನವೇ ಕಾಯಂ ಆಗುವುದಾದರೆ ಡಬಲ್ ಎಂಜಿನ್ ಏಕೆ ಬೇಕು? ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಪಕ್ಷವಾದರೂ ಆಡಳಿತ ನಡೆಸಲಿ; ನಮ್ಮ ಪಾಲು ಕೊಡುವ, ಯೋಜನೆಗಳಲ್ಲಿ ಕರ್ನಾಟಕದ ಪರವಾಗಿ ನಿಂತು ಬಡಿದಾಡುವ ಸರ್ಕಾರ ಬೇಕೆ ವಿನಾ ಡಬಲ್ ಎಂಜಿನ್‌ನ ಅಡಿ ಸಿಲುಕಿ ಕನ್ನಡ ನಾಡು ನಜ್ಜುಗುಜ್ಜಾಗುವ ಪರಿಸ್ಥಿತಿ ಬೇಡ. ವಿಶ್ವಗುರುವಿನ ಊಳಿಗದ ಬದಲು, ಗಾಂಧೀಜಿ ಕನಸಿನ ರಾಮರಾಜ್ಯವೇ ನಮಗೆ ಬೇಕಾಗಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.