ADVERTISEMENT

ಜನರಾಜಕಾರಣ | ಪ್ರಜಾತಂತ್ರದ ಬಹುತ್ವ ಕಂಡ ವರ್ಷ

ದೇಶದ ರಾಜ್ಯಗಳು ರಾಷ್ಟ್ರ ರಾಜಕಾರಣದ ಹೊಸ ಕೇಂದ್ರಗಳಾಗಿ ಉದಯಿಸಿವೆ

ಪ್ರೊ. ಸಂದೀಪ್ ಶಾಸ್ತ್ರಿ
Published 2 ಡಿಸೆಂಬರ್ 2024, 0:02 IST
Last Updated 2 ಡಿಸೆಂಬರ್ 2024, 0:02 IST
   

ಚುನಾವಣಾ ರಾಜಕೀಯದ ದೃಷ್ಟಿಕೋನದಿಂದ 2024ನೆಯ ಇಸವಿಯ ಮೇಲೆ ಕಣ್ಣುಹಾಯಿಸಿದರೆ ಖಚಿತವಾದ ಸಂಗತಿಯೊಂದು ಕಾಣುತ್ತದೆ. ಅಂದರೆ, ಪ್ರತಿ ಚುನಾವಣೆಯ ಫಲಿತಾಂಶವೂ ಅನಿಶ್ಚಿತವಾಗಿತ್ತು! ದೇಶದ ಮತದಾರರು, ಬಹುತ್ವದ ಲಾಭ ಏನು ಎಂಬುದನ್ನು ಚುನಾವಣೆಗಳಲ್ಲಿ ಹೇಳಿದರು. 2023ರ ಅಂತ್ಯದಲ್ಲಿ ಬಿಜೆಪಿಯು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಹ್ಯಾಟ್ರಿಕ್ ವಿಜಯ ಸಾಧಿಸಿ 2024ಕ್ಕೆ ಆತ್ಮವಿಶ್ವಾಸದಿಂದ ಪ್ರವೇಶಿಸಿತ್ತು. 

ಜಯದ ರಥವನ್ನು ಹಾಗೆಯೇ ಮುಂದಕ್ಕೆ ಒಯ್ಯುವ ವಿಶ್ವಾಸ (ಕೆಲವರ ಪ್ರಕಾರ ಅತಿಯಾದ ವಿಶ್ವಾಸ) ಬಿಜೆಪಿಯವರಲ್ಲಿ ಇತ್ತು. ಆದರೆ 2024ನೆಯ ವರ್ಷವು ಅಷ್ಟೊಂದು ಉತ್ಸಾಹದೊಂದಿಗೆ ಕೊನೆಗೊಳ್ಳುತ್ತಿಲ್ಲ. ಎನ್‌ಡಿಎ ಮೈತ್ರಿಕೂಟವು ಪ್ರಮುಖವಾದ ಕೆಲವೆಡೆ ಜಯ ಸಾಧಿಸಿದೆ. ಜಾರ್ಖಂಡ್‌ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಂಡ ಸಮಾಧಾನವು ‘ಇಂಡಿಯಾ’ ಮೈತ್ರಿಕೂಟಕ್ಕೆ ಇದೆ. ಆದರೆ ಇತರೆಡೆ ಅದು ಜಯದ ಬಿರುಸನ್ನು ಕಳೆದುಕೊಂಡಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳೂ ಭಾರಿ ಹುರುಪಿನೊಂದಿಗೆ ಪ್ರಚಾರ ಆರಂಭಿಸಿದ್ದವು. ಬಿಜೆಪಿ ನೇತೃತ್ವದ ಎನ್‌ಡಿಎ, ಬಿಜೆಪಿಯ ಸಂಖ್ಯಾಬಲವು ಸಂಸತ್ತಿನಲ್ಲಿ ಹೆಚ್ಚುವುದರೊಂದಿಗೆ ತನಗೆ ಸತತ ಮೂರನೇ ಅವಧಿಗೆ ಹೆಚ್ಚಿನ ಬಹುಮತದೊಂದಿಗೆ ಅಧಿಕಾರ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿತ್ತು. ಇತ್ತ, ಬಲಿಷ್ಠವಲ್ಲದಿದ್ದರೂ, ‘ಇಂಡಿಯಾ’ ಮೈತ್ರಿಕೂಟವನ್ನು ಹಲವು ಅಡ್ಡಿಗಳು, ಪಕ್ಷಾಂತರಗಳ ನಡುವೆ ಒಂದಾಗಿರಿಸುವಲ್ಲಿ ಕಾಂಗ್ರೆಸ್ ಪಕ್ಷವು ಪ್ರಮುಖ ಪಾತ್ರ ವಹಿಸಿತು. ಬಿಜೆಪಿಯ ಚುನಾವಣಾ ಯೋಜನೆಯನ್ನು ಜಾಗರೂಕವಾಗಿ ಸಿದ್ಧಪಡಿಸಲಾಯಿತು. ಬಿಜೆಪಿಯು ತನಗೆ ಲೋಕಸಭೆಯಲ್ಲಿ 370ಕ್ಕೂ ಹೆಚ್ಚು ಸ್ಥಾನಗಳು, ಎನ್‌ಡಿಎಗೆ 400ಕ್ಕೂ ಹೆಚ್ಚು ಸ್ಥಾನಗಳು ಸಿಗಲಿವೆ ಎಂದು ಅಂದಾಜಿಸಿತ್ತು.

ADVERTISEMENT

2019ರ ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಹೊರತುಪಡಿಸಿದ ಪಕ್ಷಗಳ ಸಂಖ್ಯಾಬಲ 50 ಸ್ಥಾನಗಳಾಗಿದ್ದವು. ಆದರೆ ಈ ಬಾರಿ ಮಿತ್ರಪಕ್ಷಗಳ ಸಂಖ್ಯಾಬಲ 30ರ ಆಸುಪಾಸಿನಲ್ಲಿ ಇರಲಿದೆ ಎಂದು ಬಿಜೆಪಿ ಅಂದಾಜಿಸಿತ್ತು. ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಬಹುವಾಗಿ ಅವಲಂಬಿಸಿತ್ತು. ಅವರೇ ಚುನಾವಣಾ ಪ್ರಚಾರದ ಕೇಂದ್ರವಾಗಿದ್ದರು. ತನಗೆ ಸೋಲೇ ಇಲ್ಲ ಎಂಬ ಚಿತ್ರಣವೊಂದನ್ನು ರೂಪಿಸುವ ಉದ್ದೇಶದಿಂದ ಎನ್‌ಡಿಎ, 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಘೋಷಣೆಯನ್ನು ಮಾಡಿತ್ತು. ರಾಜೀವ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು 1984ರಲ್ಲಿ ತೋರಿದ ಸಾಧನೆಯನ್ನು ಮೀರುವ ಉದ್ದೇಶ ಕೂಡ, 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ನಿಗದಿ ಮಾಡಿಕೊಳ್ಳುವುದರ ಹಿಂದಿತ್ತು.

‘ಇಂಡಿಯಾ’ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪ್ರಮುಖ ಪಾಲುದಾರ ಆಗಿದ್ದರೂ, ಅದು ಪ್ರಬಲ ಶಕ್ತಿಯಾಗಿರಲಿಲ್ಲ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಹಿನ್ನಡೆ ಅನುಭವಿಸಿದ ನಂತರ ಕಾಂಗ್ರೆಸ್ಸಿಗೆ ಮಿತ್ರಪಕ್ಷಗಳ ಬಳಿ ಹೆಚ್ಚಿನ ಚೌಕಾಶಿ ನಡೆಸುವ ಶಕ್ತಿ ಉಳಿದಿರಲಿಲ್ಲ. ‘ಇಂಡಿಯಾ’ ಮೈತ್ರಿಕೂಟದಲ್ಲಿ ಒಂದಿಷ್ಟು ಬದಲಾವಣೆಗಳೂ ಆದವು. ಜೆಡಿಯು ಪಕ್ಷವು ಎನ್‌ಡಿಎ ಜೊತೆ ಸೇರಿಕೊಂಡಿತು, ಟಿಎಂಸಿ ಪಕ್ಷವು ತನಗೆ ಬೇಕಾದಾಗ ‘ಇಂಡಿಯಾ’ ಜೊತೆ ಗುರುತಿಸಿಕೊಳ್ಳುವ, ಬೇಡದಿದ್ದಾಗ ದೂರ ಉಳಿಯುವ ಕೆಲಸ ಮಾಡಿತು. ಬಿಜೆಪಿಯನ್ನು ವಿರೋಧಿಸುವುದು ಮಾತ್ರ ಆ ಪಕ್ಷಗಳನ್ನೆಲ್ಲ ಒಟ್ಟಾಗಿ ಹಿಡಿದಿಟ್ಟ ಅಂಶವಾಗಿತ್ತು. ಪಶ್ಚಿಮ ಬಂಗಾಳ, ಪಂಜಾಬ್‌ನಂತಹ ಪ್ರಮುಖ ರಾಜ್ಯಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳಿಗೆ ಒಮ್ಮತಕ್ಕೆ ಬರಲು ಆಗಲಿಲ್ಲ, ಅವು ಅಲ್ಲಿ ತಾವೇ ಪರಸ್ಪರರ ವಿರುದ್ಧ ಸೆಣಸಿದವು. 

2024ರ ಲೋಕಸಭಾ ಚುನಾವಣೆಯ ಫಲಿತಾಂಶವು ದೇಶದ ಮತದಾರರ ವಿವೇಕ ಮತ್ತು ಪಾಂಡಿತ್ಯಕ್ಕೆ ಇನ್ನೊಂದು ಪುರಾವೆಯನ್ನು ಒದಗಿಸಿಕೊಟ್ಟಿತು. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಸ್ಥಿತಿಗೆ ನಾವು ಒಂದು ದಶಕದ ನಂತರ ಮರಳಿದೆವು. ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ದೊರೆತಿದೆ ಎಂದಷ್ಟೇ ಬಿಜೆಪಿಯು ಸಂಭ್ರಮಿಸಬೇಕಾಯಿತು. ‘ಇಂಡಿಯಾ’ ಮೈತ್ರಿಕೂಟದ ಸಂಖ್ಯಾಬಲ ಹೆಚ್ಚಾಯಿತು. ದೇಶವು ಒಂದು ದಶಕದ ನಂತರ ಅಧಿಕೃತ ವಿರೋಧ ಪಕ್ಷವೊಂದನ್ನು ಹೊಂದುವಂತಾಯಿತು.

ಹಿಂದಿನ ಲೋಕಸಭೆಯಲ್ಲಿ 303 ಸ್ಥಾನಗಳನ್ನು ಹೊಂದಿದ್ದ ಬಿಜೆಪಿಯು ಈ ಬಾರಿಯ ಲೋಕಸಭೆಯಲ್ಲಿ 240 ಸ್ಥಾನಗಳಿಗೆ ಕುಸಿಯುವುದಕ್ಕೆ ಮುಖ್ಯ ಕಾರಣ, ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಸ್ಥಾನಗಳಿಕೆ ಕಡಿಮೆ ಆಗಿದ್ದುದು. ಉತ್ತರಪ್ರದೇಶದಲ್ಲಿಯೇ 29 ಸ್ಥಾನಗಳು ಕಡಿಮೆಯಾದವು. ಆದರೆ ಒಡಿಶಾ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಪಕ್ಷವು ಉತ್ತಮ ಸಾಧನೆ ತೋರಿದ ಕಾರಣಕ್ಕೆ, ಪಕ್ಷದ ಸ್ಥಾನಗಳು 240ಕ್ಕಿಂತ ಕಡಿಮೆ ಆಗಲಿಲ್ಲ. 2024ರ ಲೋಕಸಭಾ ಚುನಾವಣೆಯ ಫಲಿತಾಂಶವು, ಮತದಾರರು ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿದ ‘ಬಹುತ್ವದ ಲಾಭ’ವಾಗಿ ಕಾಣುತ್ತದೆ. ನೆರೆಹೊರೆಯ ರಾಜ್ಯಗಳಲ್ಲಿ ದಾಖಲಾದ ಫಲಿತಾಂಶಗಳು ಬಹಳ ಭಿನ್ನವಾಗಿದ್ದವು. ದೇಶದ ರಾಜ್ಯಗಳು ರಾಷ್ಟ್ರ ರಾಜಕಾರಣದ ಹೊಸ ಕೇಂದ್ರಗಳಾಗಿ ಉದಯಿಸಿದವು.

ಲೋಕಸಭಾ ಚುನಾವಣೆಯಲ್ಲಿ ಆಗಿದ್ದು ವಿಧಾನಸಭಾ ಚುನಾವಣೆಗಳಲ್ಲಿ ಮುಂದುವರಿಯಿತು. ಕಾಂಗ್ರೆಸ್ ಪಕ್ಷದಲ್ಲಿ ಮನೆಮಾಡಿದ್ದ ಅತಿಯಾದ ಆತ್ಮವಿಶ್ವಾಸವು, ಒಂದು ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸೋಲುವಂತೆ ಮಾಡಿತು. (ಹರಿಯಾಣದಲ್ಲಿ) ಜಾಟ್ ಸಮುದಾಯದ ಮತಗಳನ್ನು ಒಗ್ಗೂಡಿಸಲು ನೀಡಿದ ಅತಿಯಾದ ಆದ್ಯತೆಯ ಪರಿಣಾಮವಾಗಿ, ಜಾಟ್ ಹೊರತುಪಡಿಸಿದ ಸಮುದಾಯಗಳು ಬಿಜೆಪಿಯ ಪರವಾಗಿ ಒಗ್ಗೂಡಿದವು, ಜಾಟ್ ಸಮುದಾಯದ ಮತಗಳು ಕಾಂಗ್ರೆಸ್ ಪರವಾಗಿ ಸೀಮಿತ ಪ್ರಮಾಣದಲ್ಲಿ ಒಗ್ಗೂಡಿದವು. ಅಲ್ಲದೆ, ಕಾಂಗ್ರೆಸ್ ಪಕ್ಷವು ಒಳಜಗಳಕ್ಕೆ ಬೆಲೆ ತೆರಬೇಕಾಯಿತು, ಬಿಜೆಪಿಯು ಮೌನವಾಗಿ ತಳಮಟ್ಟದಲ್ಲಿ ನಡೆಸಿದ ಅಭಿಯಾನದ ಪ್ರಯೋಜನವನ್ನು ಪಡೆಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಕಾಂಗ್ರೆಸ್ ಜೊತೆಗಿನ ಮೈತ್ರಿಯ ಮೂಲಕ ಗೆಲುವು ಸಾಧಿಸಿತು. ಹೀಗಿದ್ದರೂ ಅಲ್ಲಿ ಜಮ್ಮು ವಲಯ ಮತ್ತು ಕಾಶ್ಮೀರ ಕಣಿವೆಯಲ್ಲಿನ ಫಲಿತಾಂಶದಲ್ಲಿ ಬಹಳ ಸ್ಪಷ್ಟವಾದ ಅಂತರ ಕಾಣಿಸುತ್ತಿತ್ತು. ಜಮ್ಮು ಪ್ರದೇಶದಲ್ಲಿ ಬಿಜೆಪಿಯು ಉತ್ತಮ ಸಾಧನೆ ತೋರಿತು. ಆದರೆ ಕಾಂಗ್ರೆಸ್ ಪಕ್ಷವು ಇಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿ ತೋರಿಸುವಲ್ಲಿ ಯಶಸ್ಸು ಕಾಣಲಿಲ್ಲ. ಕಾಶ್ಮೀರ ಪ್ರದೇಶದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಉತ್ತಮ ಸಾಧನೆ ತೋರಿತು. 

ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಹೊಸ ಸರ್ಕಾರ ರಚನೆ ಆದ ನಂತರದಲ್ಲಿ, ಅಲ್ಲಿಗೆ ರಾಜ್ಯದ ಸ್ಥಾನವನ್ನು ಮತ್ತೆ ಕೊಡಿಸಲು ಸರ್ಕಾರವು ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಯತ್ನ ನಡೆಸಿತು. ಅಲ್ಲಿ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಡುವಿನ ಸಂಬಂಧದಲ್ಲಿ ಅಡ್ಡಿಯೊಂದು ಎದುರಾಗಿರುವಂತೆ ಕಾಣುತ್ತಿದೆ. ಏಕೆಂದರೆ ಕಾಂಗ್ರೆಸ್ ಪಕ್ಷವು ಅಲ್ಲಿ ಸರ್ಕಾರದ ಭಾಗವಾಗಿಲ್ಲ.

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭಾ ಚುನಾವಣೆಯೊಂದಿಗೆ ಈ ವರ್ಷ ಕೊನೆಗೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದೆ. ವಿರೋಧ ಪಕ್ಷಗಳ ‘ಮಹಾ ವಿಕಾಸ ಆಘಾಡಿ’ ನೆಲಕಚ್ಚಿದೆ. ಆಘಾಡಿಯ ಮೂರು ಪಕ್ಷಗಳಾದ ಕಾಂಗ್ರೆಸ್, ಉದ್ಧವ್ ಠಾಕ್ರೆ ಅವರ ಶಿವಸೇನಾ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಬಹಳ ಕಳಪೆ ಸಾಧನೆ ತೋರಿವೆ. ಇದರಿಂದಾಗಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಕ್ಕೆ ದೊಡ್ಡ ಬಹುಮತ ದೊರೆತಿದೆ.

ಜಾರ್ಖಂಡ್‌ನಲ್ಲಿ ಚುನಾವಣಾ ಹಣಾಹಣಿಯು ಬುಡಕಟ್ಟು ಸಮುದಾಯಗಳ ಪ್ರಾಬಲ್ಯದ ಪ್ರದೇಶಗಳು ಹಾಗೂ ಇತರ ಪ್ರದೇಶಗಳಲ್ಲಿನ ಬೆಂಬಲಕ್ಕೆ ಸಂಬಂಧಿಸಿತ್ತು. ‘ಇಂಡಿಯಾ’ ಮೈತ್ರಿಕೂಟವು ಬುಡಕಟ್ಟು ಸಮುದಾಯಗಳ ಪ್ರಾಬಲ್ಯದ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡು, ಇತರ ಪ್ರದೇಶಗಳಲ್ಲಿ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ಒಳ್ಳೆಯ ಸಾಧನೆ ತೋರಿತು. ಜೆಎಂಎಂ ಪಕ್ಷವು ಕಾಂಗ್ರೆಸ್, ಆರ್‌ಜೆಡಿ ಮತ್ತು ಕಮ್ಯುನಿಸ್ಟ್ ಪಕ್ಷಗಳ ಜೊತೆ ಮಾಡಿಕೊಂಡ ಮೈತ್ರಿಯು ಇಲ್ಲಿ ನೆರವಿಗೆ ಬಂತು. ಬುಡಕಟ್ಟು ಸಮುದಾಯಗಳ ಪ್ರಾಬಲ್ಯ ಇಲ್ಲದ ಕಡೆಗಳಲ್ಲಿ ನೆಲೆ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ಸು ಕಂಡಿತಾದರೂ, ಬುಡಕಟ್ಟು ಸಮುದಾಯಗಳ ಪ್ರಾಬಲ್ಯದ ಪ್ರದೇಶಗಳಲ್ಲಿ ಜೆಎಂಎಂ ಹೊಂದಿರುವ ಬೆಂಬಲಿಗರ ನೆಲೆಗೆ ಗಂಭೀರ ಏಟು ನೀಡಲು ಅದಕ್ಕೆ ಸಾಧ್ಯವಾಗಲಿಲ್ಲ. ಅಲ್ಲದೆ, ಜೆಎಂಎಂ ನೇತೃತ್ವದ ಸರ್ಕಾರ ರೂಪಿಸಿದ ಜನಕಲ್ಯಾಣ ಯೋಜನೆಗಳು ‘ಇಂಡಿಯಾ’ ಮೈತ್ರಿಕೂಟದ ನೆರವಿಗೆ ಬಂದವು.

ಒಟ್ಟಾರೆಯಾಗಿ ಹೇಳುವುದಾದರೆ, ಈ ವರ್ಷದಲ್ಲಿ ಹಲವು ಅನಿರೀಕ್ಷಿತ ಬದಲಾವಣೆಗಳು ಕಂಡುಬಂದವು. ಭಾರತದ ಪ್ರಜಾತಂತ್ರದ ಬಹುತ್ವವು 2024ರಲ್ಲಿ ಎದ್ದುಕಾಣುವಂತೆ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.