ADVERTISEMENT

‘ಲಿಟ್ಲ್‌ ಬಾಯ್’ ಮರೆಯೋಣ, ‘ಡ್ರ್ಯಾಗನ್’ ತಡೆಯೋಣ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:36 IST
Last Updated 16 ಜೂನ್ 2018, 9:36 IST

ಹೀಗೊಂದು ನಾಣ್ಣುಡಿಯಿದೆ. ಶತ್ರುವಿನ ಶತ್ರು ಮಿತ್ರನಾಗಬಲ್ಲ. ಇದು ಯಾವುದೇ ದೇಶದ ವಿದೇಶಾಂಗ ನೀತಿಯ ಮೂಲ ಸೂತ್ರ. ವ್ಯಾಸರ ಮಹಾಭಾರತ ವಿವರಿಸಿದ್ದು, ಕೌಟಿಲ್ಯನ ಅರ್ಥಶಾಸ್ತ್ರ ಬೋಧಿಸಿದ್ದು, ಸುಭಾಷರು ಸೇನೆಕಟ್ಟಿ ನಿರೂಪಿಸಿದ್ದು ಇದನ್ನೇ. ದೇಶದೇಶಗಳ ನಡುವೆ ಮಹಾಸಮರವೇ ಘಟಿಸಲಿ, ಪ್ರಜಾಪ್ರಭುತ್ವ ದೇಶದಲ್ಲಿ ಮತಸಮರವೇ ನಡೆಯಲಿ, ವ್ಯಾಪಾರ-ವ್ಯವಹಾರಗಳಲ್ಲಿ ಪೈಪೋಟಿಯೇ ಏರ್ಪಡಲಿ, ಶತ್ರುವಿನ ಶತ್ರುವಿನೊಂದಿಗೆ ಕೈ ಕುಲುಕಿ, ತಂತ್ರ ರೂಪಿಸುವ ಪರಿಪಾಠವಂತೂ ಚಾಲ್ತಿಯಲ್ಲಿದೆ.

ಅಮೆರಿಕ ಮತ್ತು ಜಪಾನ್ ನಡುವೆ ಸ್ನೇಹ ಕುದುರಿದ್ದು, ಮುರಿದು ಬಿದ್ದದ್ದು, ಇದೀಗ ಮತ್ತಷ್ಟು ಗಟ್ಟಿಯಾಗುತ್ತಿರುವುದನ್ನು ನೋಡಬೇಕಾದ್ದು ಇದೇ ಹಿನ್ನೆಲೆಯಲ್ಲೇ. Late Enemy, Present Friend. ಜಪಾನ್ ಅನೇಕ ಕಾರಣಗಳಿಂದ ಚರ್ಚೆಗಳಲ್ಲಿ ಪ್ರಸ್ತಾಪವಾಗುತ್ತಲೇ ಇರುತ್ತದೆ. ಎಲ್ಲೇ ಪ್ರಕೃತಿ ಅವಘಡಗಳು ಸಂಭವಿಸಲಿ, ಜಪಾನ್ ಉಲ್ಲೇಖ ಬರುತ್ತದೆ.

ನೂತನ ತಂತ್ರಜ್ಞಾನ ಎನ್ನುತ್ತಿದ್ದಂತೇ ಜಪಾನ್ ಆವಿಷ್ಕಾರವೇ ಎಂಬ ಪ್ರಶ್ನೆ ಎದುರಾಗುತ್ತದೆ. ಕಾರ್ಪೊರೇಟ್ ಕಂಪೆನಿಗಳು ಉದ್ಯೋಗಿಗಳ ಸಾಮರ್ಥ್ಯ ವೃದ್ಧಿಸಲು ಯಾವುದೇ ಯೋಜನೆ ರೂಪಿಸಲಿ, ಜಪಾನಿಗರು ಮಾಡದ್ದೇನಲ್ಲವಲ್ಲ ಎಂಬ ಮೂದಲಿಕೆ ಕೇಳುತ್ತದೆ. ಹೀಗೆ ಜಪಾನ್ ಒಂದು ವಿಸ್ಮಯವಾಗಿ, ಮಾದರಿಯಾಗಿ, ಸವಾಲಾಗಿ ಸದಾ ಎದುರು ನಿಲ್ಲುತ್ತದೆ.

ಹಾಗೆ ನೋಡಿದರೆ, ಜಪಾನ್ ಒಂದು ನತದೃಷ್ಟ ಗಾಯಾಳು ದೇಶ. ಜ್ವಾಲಾಮುಖಿ, ಭೂಕಂಪ, ಅಗ್ನಿ ಅವಘಡಗಳು, ಪ್ರವಾಹ, ತುಫಾನು, ಭೀಕರ ಯುದ್ಧ, ರಕ್ತಪಾತ ಎಲ್ಲವನ್ನೂ ಹೆಚ್ಚೇ ಅನುಭವಿಸಿದ ರಾಷ್ಟ್ರ. ಎರಡನೇ ಮಹಾಯುದ್ಧದಲ್ಲಿ ಜಪಾನಿಗೆ ಬಿದ್ದ ಏಟು ಅಂತಿಂತದ್ದಲ್ಲ. ವಿಸ್ತರಣೆಯ ದಾಹ, ದರ್ಪ, ಜಪಾನ್ ತಲೆಹೊಕ್ಕು ಅದು ತೈವಾನ್, ಕೊರಿಯಾ, ಚೀನಾದ ಹಲವು ಭಾಗಗಳನ್ನು ಆಕ್ರಮಿಸಿಕೊಂಡು ಅಮೆರಿಕವನ್ನೂ ಪರ್ಲ್ ಹಾರ್ಬರ್‌ನಲ್ಲಿ ಕೆಣಕಿ ಸಂಕಷ್ಟಕ್ಕೆ ಸಿಲುಕಿ ಹೋಯಿತು.

ಹಿಂದೆ ಮುಂದೆ ಯೋಚಿಸದ ಅಮೆರಿಕ, ಹಿರೋಷಿಮಾ, ನಾಗಸಾಕಿಯ ಮೇಲೆ ಅಣುಬಾಂಬುಗಳನ್ನು ಉದುರಿಸಿ ಹೋದಾಗ, ಜಪಾನ್ ಭಸ್ಮವಾಯಿತು. ಅಕ್ಷರಶಃ ಬೂದಿಯಿಂದ ಎದ್ದು ಭವಿಷ್ಯ ಬರೆದುಕೊಳ್ಳಬೇಕಾದ ಸ್ಥಿತಿ. ಎರಡನೇ ಮಹಾಯುದ್ಧ, ಜಪಾನ್ ಪಾಲಿಗೆ ಮಾಗದ ಗಾಯವಾಗಿ ಉಳಿದುಹೋದರೆ, ಪ್ರಕೃತಿ ಮುನಿದು ಮೈಮುರಿದಾಗೆಲ್ಲಾ ಜಪಾನ್ ಪಾಲಿಗೆ ಮೂಗೇಟು ತಪ್ಪಲಿಲ್ಲ.

ಇತಿಹಾಸದುದ್ದಕ್ಕೂ ಅದೆಷ್ಟು ಪ್ರಕೃತಿ ಅವಘಡಗಳು! ಆದರೂ ಜಪಾನ್ ಕುಗ್ಗಲಿಲ್ಲ, ಹೊಡೆತ ತಿಂದು ಉರುಳಿ ಬಿದ್ದಾಗಲೆಲ್ಲಾ ಸಾವರಿಸಿಕೊಂಡು ಮೇಲೆದ್ದಿದೆ. ಆರ್ಥಿಕ ಶಕ್ತಿಯಾಗಿ ಬೆಳೆದು ಉತ್ತುಂಗ ತಲುಪಿ, ಜರ್ರನೆ ಕುಸಿದಿದೆ. ಬಿದ್ದು ಏಳುವ ಆಟ ಜಪಾನಿಗೆ ಅಭ್ಯಾಸವಾಗಿ ಹೋಗಿದೆ. ಜಪಾನಿನ ಈ ಏಳು ಬೀಳಿನ ಆಟದಲ್ಲಿ ಈ ಎಪ್ಪತ್ತು ವರ್ಷಗಳ ಕಾಲ ಅದರ ಜೊತೆಗಿದ್ದದ್ದು ಅಮೆರಿಕ.
ಜಪಾನ್ - ಅಮೆರಿಕ ನಡುವಿನ ಹಗೆತನ, ನಂತರ ಟಿಸಿಲೊಡೆದ ಬಾಂಧವ್ಯ, ಅದಕ್ಕೆ ಪೂರಕವಾಗಿ ನಿಂತ ಸಂಗತಿಗಳನ್ನು ನೋಡಬೇಕಾದರೆ ಕಳೆದ 70 ವರ್ಷಗಳ ಇತಿಹಾಸವನ್ನು ಕೆದಕಬೇಕು.

1945ರಲ್ಲಿ ಅಮೆರಿಕದ ‘ಲಿಟ್ಲ್‌ ಬಾಯ್’ (ಅಣುಬಾಂಬ್ ಹೆಸರು) ಹಿರೋಷಿಮಾದ ಮೇಲೆ ಜಿಗಿದಾಗ ಕೇವಲ ಜಪಾನ್ ಅಲ್ಲ, ಇಡೀ ವಿಶ್ವವೇ ನಡುಗಿ ಹೋಗಿತ್ತು. ಪರಿಣಾಮ ಸಾವುನೋವುಗಳಾದವು, ಕೈಗಾರಿಕೆಗಳು ನೆಲಕಚ್ಚಿದವು, ಸಂಪನ್ಮೂಲಗಳೂ ಖೋತಾ. ಜಪಾನ್ ಅಮೆರಿಕದ ವಶವಾಯಿತು. 1945-52ರ ವರೆಗೆ ಸುಮಾರು ಏಳು ವರ್ಷ ಜಪಾನ್ ಅಮೆರಿಕದ ಸ್ವಾಧೀನದಲ್ಲಿತ್ತು.
ನಂತರ ಸ್ವಾತಂತ್ರ್ಯಗೊಂಡಿತಾದರೂ ಅದು ಅಮೆರಿಕದ ಮೇಲೆ ಅಸ್ತ್ರ ಹಿಡಿದು ಹೊರಡಲಿಲ್ಲ.

ಮಹಾಯುದ್ಧದಿಂದ ಜಪಾನ್ ಪಾಠ ಕಲಿತಿತ್ತು. ಬಂಡೆಗೆ ಹಣೆ ಗುದ್ದುವ ವ್ಯರ್ಥ ಪ್ರಯತ್ನಕ್ಕೆ ಮುಂದಾಗದೇ, ಬೇರೆಯದೇ ಮಾರ್ಗ ಹಿಡಿಯಿತು. ಜಪಾನ್ ತೊರೆಯುವ ಮೊದಲು ಅಮೆರಿಕ, ಜಪಾನ್ ಸಂವಿಧಾನದಲ್ಲಿ ಪರಿಚ್ಛೇದ ಒಂಬತ್ತನ್ನು ಸೇರಿಸಿ, ಜಪಾನ್ ಎಂದಿಗೂ ಪೂರ್ಣಪ್ರಮಾಣದಲ್ಲಿ ಸಜ್ಜುಗೊಂಡ ಸೈನ್ಯವನ್ನು ಹೊಂದುವಂತಿಲ್ಲ ಎಂದು ಕೈಕಟ್ಟಿಯೇ ಹೋಗಿತ್ತು. ಜಪಾನ್ ಮರುಯೋಚಿಸದೇ, ಅಮೆರಿಕದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡು, ತನ್ನ ರಕ್ಷಣೆಯ ಪೂರ್ಣ ಹೊಣೆಯನ್ನು ಅಮೆರಿಕದ ಹೆಗಲಿಗೆ ಹಾಕಿತು. ಅಮೆರಿಕ ‘ನಾನು ನಾಯಕ’ ಎಂದು ಬೀಗಿತು.

ಜಪಾನ್ ತನ್ನ ಅಷ್ಟೂ ಶಕ್ತಿಯನ್ನು ಕೈಗಾರಿಕಾ ಪ್ರಗತಿಗೆ ಮೀಸಲಿಟ್ಟಿತು. ರಕ್ಷಣಾ ವೆಚ್ಚಕ್ಕೆಂದು ಹೆಚ್ಚು ಹಣ ತೆಗೆದಿಡುವ ಅವಶ್ಯಕತೆ ಇರಲಿಲ್ಲವಾಗಿ, ತನ್ನೆಲ್ಲಾ ಬಂಡವಾಳವನ್ನು ಉದ್ಯಮಗಳಲ್ಲಿ ತೊಡಗಿಸಿತು. ಜಪಾನ್ ನಾಯಕರು ‘ಆದಾಯ ದ್ವಿಗುಣ’ ಯೋಜನೆಗಳಿಗೆ ಚಾಲನೆ ಇತ್ತರು. ಆರ್ಥಿಕ ಶಕ್ತಿಯಾಗಿ ಬೆಳೆದು ನಿಲ್ಲಬೇಕೆಂಬ ಏಕಮಾತ್ರ ಗುರಿ ಜಪಾನ್ ಮುಂದಿತ್ತು. ಯುದ್ಧದ ಸೋಲು ಜಪಾನಿಗರ ಆತ್ಮಸಾಕ್ಷಿಯನ್ನು ಕೆಣಕಿತ್ತು. ರಾಷ್ಟ್ರೀಯಪ್ರಜ್ಞೆ ಮೊನಚುಗೊಂಡಿತ್ತು. ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಎಲ್ಲ ಕೈಗಳೂ ಒಂದಾದವು.

ಕುಟುಂಬಗಳು ಉಳಿತಾಯ ಮಾಡುವುದರಲ್ಲಿ ಸ್ಪರ್ಧೆಗೆ ಬಿದ್ದವು. ಶಿಕ್ಷಣ ಸಂಸ್ಥೆಗಳು ಉನ್ನತ ಗುಣಮಟ್ಟದ ಶಿಕ್ಷಣ ನೀಡಲು ಟೊಂಕಕಟ್ಟಿ ನಿಂತವು. ನೌಕರ ವರ್ಗ ಆಲಸ್ಯವನ್ನು ಕೊಡವಿಯಾಗಿತ್ತು. ಕೇವಲ ಒಂಬತ್ತು ವರ್ಷಗಳಲ್ಲಿ ಜಪಾನ್ ತನ್ನ ಯುದ್ಧಪೂರ್ವ ಆರ್ಥಿಕ ಸ್ವಾಸ್ಥ್ಯವನ್ನು ಗಳಿಸಿಕೊಂಡಿತು. ನಂತರದ ಎರಡು ದಶಕಗಳಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕಶಕ್ತಿಯಾಗಿ ಜಪಾನ್ ಹೊರಹೊಮ್ಮಿತು.

ಜಪಾನ್ ಬೆಳವಣಿಗೆಯ ವೇಗ, ನಿಜಕ್ಕೂ ಸೋಜಿಗವೇ. ದ್ವೀಪರಾಷ್ಟ್ರದ ಮಾನಸಿಕತೆ, ತಾನು ಎಲ್ಲರಿಂದ ಹೊರಗುಳಿದು ಬಿಡುತ್ತೇನೆಂಬ ಅಭದ್ರತೆಯ ಭಾವ, ಜಪಾನನ್ನು ಸುಮ್ಮನಿರಲು ಬಿಡಲಿಲ್ಲ. ಜೊತೆಗೆ ಜಪಾನಿಗರಲ್ಲಿ ಒಂದು ವಿಶಿಷ್ಟ ಗುಣವಿದೆ. ಯಾವುದೇ ವಿಚಾರ, ಆಲೋಚನೆ, ಸಿದ್ಧಾಂತ, ಸಂಸ್ಕೃತಿ, ತಂತ್ರಜ್ಞಾನ ತನ್ನದಕ್ಕಿಂತ ಶ್ರೇಷ್ಠ ಮಟ್ಟದ್ದು ಎಂದು ಕಂಡರೆ ಜಪಾನಿಗರು ಅದನ್ನು ಮುಕ್ತವಾಗಿ ಒಪ್ಪಿಕೊಂಡು, ತಮ್ಮದನ್ನಾಗಿಸಿಕೊಂಡು ಬಿಡುತ್ತಾರೆ. ಜೊತೆಗೊಂದಿಷ್ಟು ಹೊಸತನವನ್ನು ಸೇರಿಸಿ, ‘ಮೇಡ್‌ ಇನ್ ಜಪಾನ್’ ಮಾಡಿಬಿಡುತ್ತಾರೆ.  ಬೌದ್ಧಧರ್ಮ ಭಾರತ, ಕೊರಿಯಾ ಮೂಲಕ ಜಪಾನ್ ಸೇರಿತು.

ಜಪಾನಿಗರು ಬುದ್ಧ ತಮ್ಮವನೇ ಎಂಬಂತೆ ಅಪ್ಪಿಕೊಂಡರು. ಆಧುನಿಕ ವಿಜ್ಞಾನ ಡಚ್ಚರಿಂದ ಬಂತು, ಜಪಾನಿಗರು ನೀರೆರೆದು ಬೆಳೆಸಿದರು. ಉನ್ನತ ತಂತ್ರಜ್ಞಾನವನ್ನು ಅಮೆರಿಕ ಹೊತ್ತುತಂತು, ಜಪಾನ್ ಅಮೆರಿಕವನ್ನು ಮೀರಿದ ನೈಪುಣ್ಯ ಸಾಧಿಸಿತು. ಇದೆಲ್ಲದರ ಜೊತೆ ಕೊಳ್ಳುಬಾಕ ಮನಸ್ಥಿತಿಯ ಅಮೆರಿಕದ ಮಾರುಕಟ್ಟೆ ಜಪಾನ್ ಬೆಳವಣಿಗೆಗೆ ಹೇಳಿ ಮಾಡಿಸಿದಂತಿತ್ತು. ವಾಚು, ಟಿ.ವಿ, ವಿ.ಸಿ.ಆರ್, ಎಲೆಕ್ಟ್ರಾನಿಕ್ ಶೇವರ್, ಎಲ್ಲವೂ ಮೇಡ್ ಇನ್ ಜಪಾನ್ ಮುದ್ರೆ ಒತ್ತಿಕೊಂಡು ಅಮೆರಿಕ ಮಾರುಕಟ್ಟೆಯಲ್ಲಿಳಿದವು.

ಜೊತೆಗೆ ಯುದ್ಧದಾಹಿಯಾದ ಅಮೆರಿಕ, ಸೋವಿಯತ್ ರಷ್ಯಾ, ಯುರೋಪ್ ದೇಶಗಳು ತಮ್ಮ ಸೈನ್ಯಕ್ಕೆ ಹೆಚ್ಚಿನ ಶಕ್ತಿ ತುಂಬಲು ಪೈಪೋಟಿಗೆ ಬಿದ್ದವು. ಜಪಾನ್ ಅವಕಾಶವನ್ನು ಬಳಸಿಕೊಂಡಿತು. ಕಂಪ್ಯೂಟರ್ ಕ್ಷೇತ್ರದಲ್ಲಿ ಆದ ಕ್ಷಿಪ್ರ ಬೆಳವಣಿಗೆಗಳೂ ಜಪಾನ್ ನಾಗಾಲೋಟಕ್ಕೆ ಪೂರಕವಾದವು. ಐಬಿಎಮ್ ನಂತಹ ಅಮೆರಿಕದ ದಿಗ್ಗಜ ಸಂಸ್ಥೆಯೇ ಜಪಾನ್ ಜೊತೆ ಸೆಣಸಾಡಿ ಸೊರಗಿತು.
ಮೊದಮೊದಲು ಜಪಾನ್, ಇತರರು ರೂಪಿಸಿದ ವಿನ್ಯಾಸ, ಕಲ್ಪನೆಗಳಿಗೆ ಹೊಸತನ ತುಂಬಿ, ಗುಣಮಟ್ಟದೊಂದಿಗೆ ರಾಜಿಯಾಗದೇ,  ಕಡಿಮೆ ಬೆಲೆಯ ಚೀಟಿಹಚ್ಚಿ ಮಾರುಕಟ್ಟೆಗೆ ಬಿಡುತ್ತಿತ್ತು.

ನಂತರ ತನ್ನ ಕಾರ್ಯಶೈಲಿ ಬದಲಿಸಿಕೊಂಡು, ಸಂಶೋಧನಾ ಸಂಸ್ಥೆಗಳಿಗೆ ಆದ್ಯತೆ ನೀಡಿ, ಹೊಸ ಆವಿಷ್ಕಾರಗಳಿಗೆ ತಾನೇ ಮುಂದಾಯಿತು. ಸ್ಟೀಲ್ ಮತ್ತು ಆಟೋಮೊಬೈಲ್‌ನಿಂದ ಹಿಡಿದು ಅದುವರೆಗೆ ಅಮೆರಿಕದ ಹಿಡಿತದಲ್ಲಿದ್ದ ಸೆಮಿಕಂಡಕ್ಟರ್, ಸೂಪರ್ ಕಂಪ್ಯೂಟರ್, ದೂರಸಂಪರ್ಕ ಉಪಕರಣಗಳು ಹೀಗೆ ಎಲ್ಲದರಲ್ಲೂ ಅಮೆರಿಕಕ್ಕೆ ಸಡ್ದು ಹೊಡೆಯಿತು. 1950ರ ಸುಮಾರಿಗೆ ಜಗತ್ತಿನ ಶೇಕಡ 80ರಷ್ಟು ಮೋಟಾರು ವಾಹನಗಳು ಅಮೆರಿಕದಲ್ಲೇ ತಯಾರಾಗುತ್ತಿದ್ದವು. 1981ರ ಹೊತ್ತಿಗೆ ಅದು ಶೇಕಡ 30ಕ್ಕೆ ಕುಸಿಯಿತು.

1986ರ ಹೊತ್ತಿಗೆ ಶೇಕಡ 25ರಷ್ಟು ವಾಹನಗಳನ್ನು ಜಪಾನ್ ತಾನೇ ಮಾರುಕಟ್ಟೆಗೆ ಬಿಡಲು ಆರಂಭಿಸಿತು. ಜನರಲ್ ಮೋಟಾರ್ ಕಂಪೆನಿಯನ್ನು ಹೊರತುಪಡಿಸಿ ಅಮೆರಿಕದ ಇತರ ವಾಹನ ತಯಾರಿಕಾ ಕಂಪೆನಿಗಳು ನೆಲಕಚ್ಚಿದವು.  ಅಮೆರಿಕನ್ನರು ಉದ್ಯೋಗ ಕಳೆದುಕೊಂಡರು. ಅಮೆರಿಕನ್ನರ ಕಾರು ಮೋಹ ನಿಮಗೆ ಗೊತ್ತಿಲ್ಲದ್ದಲ್ಲ. ಕಾರಿಲ್ಲದ ಬದುಕು ಅಮೆರಿಕನ್ನರ ಪಾಲಿಗೆ ನೀರಸ, ಜಡ. ಈ ಕ್ಷೇತ್ರದಲ್ಲಿನ ಜಪಾನ್ ಪಾರಮ್ಯ ಅಮೆರಿಕನ್ನರನ್ನು ಸಿಟ್ಟಿಗೇಳಿಸಿತು. ಜಪಾನ್ ತೆಗಳುವಿಕೆ ಆರಂಭವಾಯಿತು.

ಕೊನೆಗೆ ಅಮೆರಿಕನ್ನರ ಕೋಪ ತಣಿಸಲು, ಜಪಾನ್ ಕಂಪೆನಿಗಳು ಅಮೆರಿಕದಲ್ಲೇ ಉತ್ಪಾದನಾ ಘಟಕಗಳನ್ನು ತೆರೆದು, ಅಮೆರಿಕನ್ನರಿಗೆ ಉದ್ಯೋಗ ನೀಡಿದವು. ಜಪಾನ್ ಈ ವೇಳೆಗೆ ಎಷ್ಟು ಬೆಳೆದಿತ್ತೆಂದರೆ, ಅಮೆರಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾಲಕ್ಕೆ ಕೈ ಚಾಚಿದಾಗ ಜಪಾನ್ ಕೈ ಮೇಲಿತ್ತು. ಇಷ್ಟಾದರೂ ಪ್ರಪಂಚದ ಇತರ ದೇಶಗಳೊಂದಿಗಿನ ಜಪಾನ್ ಬಾಂಧವ್ಯ ಕೇವಲ ವ್ಯಾಪಾರಕ್ಕಷ್ಟೇ ಸೀಮಿತವಾಗಿತ್ತು. ಆರ್ಥಿಕ ಶಕ್ತಿಯಾಗಿ ರೂಪುಗೊಂಡಿದ್ದರೂ, ಇತರ ಜಾಗತಿಕ ವಿಷಯಗಳಲ್ಲಿ ಜಪಾನ್ ಆಸಕ್ತಿ ವಹಿಸಲಿಲ್ಲ.

ಜಪಾನ್ ವಿದೇಶಾಂಗ ನೀತಿ ಎಂದರೆ ಅಮೆರಿಕದ ನಿಲುವುಗಳಿಗೆ ಬದ್ಧವಾಗಿರುವುದು ಎಂಬುದಷ್ಟೇ ಆಗಿತ್ತು. ಆ ಕಾರಣಕ್ಕೇ ‘ಜಪಾನ್ ಒಂದು ದೇಶವಲ್ಲ, ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆ’ ಎಂಬ ಮೂದಲಿಕೆ ಕೇಳಿ ಬಂದಿದ್ದು. ಆದರೆ ಇದೀಗ ಜಪಾನ್ ಹೊಸದಿಕ್ಕಿನತ್ತ ನೋಡುತ್ತಿದೆ.  Economic Giant but a Political pygmy ಎಂಬ ಅಪವಾದವನ್ನು ಕೊಡವಿಕೊಂಡು, ಯುದ್ಧೋತ್ತರ ಹೇರಲಾದ ಮಿಲಿಟರಿ ನಿರ್ಬಂಧಗಳಿಂದ ನುಣುಚಿಕೊಂಡು, ರಕ್ಷಣೆಯ ವಿಷಯದಲ್ಲಿ ಅಮೆರಿಕದ ಹಂಗು ತೊರೆದು, ಇತರ ರಾಷ್ಟ್ರಗಳಂತೆ ಎದೆಸೆಟೆಸಿ ನಿಲ್ಲುವ ತುಡಿತ ಅದಕ್ಕಿದೆ.

ಹಾಗಾಗಿಯೇ ಕಳೆದ ಜುಲೈನಲ್ಲಿ ಜಪಾನ್, ತನ್ನ ಸಂವಿಧಾನದ ಪರಿಚ್ಛೇದ ಒಂಬತ್ತಕ್ಕೆ ಹೊಸ ವ್ಯಾಖ್ಯಾನ ನೀಡಿದೆ. ಮೊನ್ನೆ ಅಮೆರಿಕಕ್ಕೆ ಭೇಟಿಯಿತ್ತ ಜಪಾನ್ ಪ್ರಧಾನಿ ಶಿಂಜೊ ಅಬೆ, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಜಪಾನ್ ಬಯಸುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಅದು ಈ ಹೊತ್ತಿಗೆ ಅಮೆರಿಕಕ್ಕೂ ಜರೂರು ಎನಿಸಿದೆ. ಪ್ರಾದೇಶಿಕವಾಗಿ ಏಷ್ಯಾದ ಶಾಂತಿ, ಭದ್ರತೆಗೆ ಚ್ಯುತಿ ಬಂದಾಗ ಹೆಚ್ಚಿನ ಜವಾಬ್ದಾರಿ ಹೆಗಲೇರಿಸಿಕೊಂಡು ಅದನ್ನು ನಿಭಾಯಿಸುವಂತೆ ಅಮೆರಿಕ ಜಪಾನಿಗೆ ಸೂಚಿಸುತ್ತಿದೆ.

ಆರ್ಥಿಕ ಕ್ಷೇತ್ರದಲ್ಲಿನ ಸ್ಪರ್ಧೆಯ ನಡುವೆಯೇ ಉಭಯ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ಅನಿವಾರ್ಯಕ್ಕೆ ಅಮರಿಕ ಮತ್ತು ಜಪಾನ್ ಸಿಲುಕಿವೆ. ಬಗಲಿಗಿರುವ ಯುದ್ಧಮೋಹಿ ಉತ್ತರ ಕೊರಿಯಾ, ಸೆನ್‍ಕಾಕು ದ್ವೀಪದ ಒಡೆತನಕ್ಕೆ ತೊಡೆ ತಟ್ಟಿರುವ ಚೀನಾವನ್ನು ಅಂಕೆಯಲ್ಲಿಡಲು ಅಮೆರಿಕದ ನೆರವು ಜಪಾನಿಗೆ ಬೇಕಿದೆ.  ರಷ್ಯಾದ ಮಿಲಿಟರಿ ಮತ್ತು ಜಪಾನ್ ಆರ್ಥಿಕತೆ ಎಂಬ ಆಯ್ಕೆಕೊಟ್ಟು ಅಮೆರಿಕಕ್ಕೆ ಈ ಎರಡರಲ್ಲಿ ಹೆಚ್ಚು ಅಪಾಯಕಾರಿ ಯಾವುದು ಎಂದು ಎಂಬತ್ತರ ದಶಕದಲ್ಲಿ ಕೇಳಿದ್ದರೆ ಅಮೆರಿಕನ್ನರ ಉತ್ತರ ಜಪಾನ್ ಆರ್ಥಿಕತೆ ಎಂಬುದೇ ಆಗಿರುತ್ತಿತ್ತು. ಆದರೆ ಇದೀಗ ಆಯ್ಕೆಗಳು ಬದಲಾಗಿವೆ.

ಇಂದು ಅಮೆರಿಕವನ್ನು ನಿದ್ದೆಗೆಡಿಸಿದ್ದರೆ ಅದು ಚೀನಾ ಮಾತ್ರ. ಈಗಾಗಲೇ ಎರಡನೇ ಆರ್ಥಿಕ ಶಕ್ತಿಯಾಗಿ ಬೆಳೆದು ಮುನ್ನುಗ್ಗುತ್ತಿರುವ ಚೀನಾ, ವಿಶ್ವಬ್ಯಾಂಕಿಗೆ ಪರ್ಯಾಯವಾಗಿ ಎಐಐಬಿ (Asia Infrastructure Investment Bank) ಸ್ಥಾಪಿಸಲು ಮುಂದಾಗಿದೆ. ಏಷ್ಯಾದ ಆರ್ಥಿಕತೆ ಚೀನಾ ಕೇಂದ್ರಿತವಾಗುವುದನ್ನು ಅಮೆರಿಕ ತಡೆಯಲೇಬೇಕಿದೆ. ಆ ನಿಟ್ಟಿನಲ್ಲಿ ಜಪಾನ್ ಸಹಾಯಕ್ಕೆ ಬರುತ್ತದೆ. ಹಾಗಾಗಿಯೇ ಇತಿಹಾಸ ಕಠೋರ, ಘಟಿಸಿದ್ದನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ನಾವು ಭವಿಷ್ಯದೆಡೆಗೆ ನೋಡಬೇಕಿದೆ ಎಂದು ಅಮೆರಿಕ - ಜಪಾನ್ ಕೈ ಕುಲುಕಿವೆ. ‘ಲಿಟ್ಲ್‌ ಬಾಯ್’ ಮರೆತು ‘ಡ್ರ್ಯಾಗನ್’ ಹಿಡಿಯುವ ಆಟ ಶುರುವಾಗಿದೆ.
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT