ADVERTISEMENT

ಸೀಮೋಲ್ಲಂಘನ ಅಂಕಣ | ಒಪ್ಪಂದದ ಹೊತ್ತಿಗೆ, ಸಿದ್ಧವಿತ್ತು ಸುತ್ತಿಗೆ

ಸುಧೀಂದ್ರ ಬುಧ್ಯ
Published 2 ಜುಲೈ 2025, 0:35 IST
Last Updated 2 ಜುಲೈ 2025, 0:35 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

‘ಅಮೆರಿಕದೊಂದಿಗಿನ ಪರಮಾಣು ಒಪ್ಪಂದದ ನಿಯಮಗಳಿಗೆ ಇರಾನ್‌ ಒಪ್ಪಿಗೆ ನೀಡಿದೆ. ಶಾಂತಿ ಸ್ಥಾಪನೆಯ ದಿಸೆಯಲ್ಲಿ ಗಂಭೀರ ಮಾತುಕತೆ ನಡೆಯುತ್ತಿವೆ’ ಎಂದು ಮೇ 15ರಂದು ಕೊಲ್ಲಿ ರಾಷ್ಟ್ರಗಳ ಪ್ರವಾಸದಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕತಾರ್‌ನಲ್ಲಿ ಹೇಳಿದ್ದರು. ಆದರೆ, ಜೂನ್‌ 22ರಂದು ಇರಾನಿನ ಮೂರು ಪ್ರಮುಖ ಪರಮಾಣು ಘಟಕಗಳ ಮೇಲೆ ಅಮೆರಿಕ ‘ಬಂಕರ್‌ ಬಸ್ಟರ್‌’ ಬಾಂಬ್‌ ದಾಳಿ ನಡೆಸಿತು. ವೈಮಾನಿಕ ದಾಳಿಯ ಆ ಕಾರ್ಯಾಚರಣೆಯನ್ನು ‘ಮಿಡ್‌ನೈಟ್‌ ಹ್ಯಾಮರ್‌’ ಎಂದು ಕರೆಯಲಾಯಿತು.  

ಒಂದು ತಿಂಗಳ ಅವಧಿಯಲ್ಲಿ ಪರಮಾಣು ಒಪ್ಪಂದದ ಮಾತುಕತೆಯ ಮೇಜಿನಿಂದ ಯುದ್ಧದ ಅಂಗಳಕ್ಕೆ ಇರಾನ್‌ ಬಂದು ನಿಂತಿತ್ತು. ಇಸ್ರೇಲ್‌ ಜೊತೆಗೆ ಹನ್ನೆರಡು ದಿನಗಳ ಕಾಲ ಸೆಣಸಿದ ಇರಾನ್‌, ಕೊನೆಗೆ ಕತಾರ್‌ನಲ್ಲಿದ್ದ ಅಮೆರಿಕದ ಸೇನಾ ಘಟಕದ ಮೇಲೆ ಯಾವ ಹಾನಿಯನ್ನೂ ಮಾಡದ ಕ್ಷಿಪಣಿಗಳನ್ನು ತೂರಿಬಿಟ್ಟಿತು. ಕದನ ವಿರಾಮದ ಘೋಷಣೆಯಾಯಿತು. ಪಶ್ಚಿಮ ಏಷ್ಯಾದ ಆಗಸ ಶಾಂತವಾಯಿತು.  

ADVERTISEMENT

ಇಸ್ರೇಲ್‌ ಮತ್ತು ಇರಾನ್ ನಡುವಿನ ಈ ಸಂಘರ್ಷ, ಕೆಲವು ಸಂಗತಿಗಳನ್ನು ಸ್ಪಷ್ಟಗೊಳಿಸಿತು. ಇಸ್ರೇಲಿನ ಬೇಹುಗಾರಿಕಾ ಸಂಸ್ಥೆ ‘ಮೊಸಾದ್‌’ ಹಾಗೂ ಇಸ್ರೇಲಿನ ಸೇನೆ, ಶತ್ರುಗಳನ್ನು ಗುರಿಯಾಗಿಸಿಕೊಂಡು ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು. ಇಸ್ರೇಲಿನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು (ಐರನ್‌ ಡೋಮ್)‌ ಭೇದಿಸುವುದು ಅಸಾಧ್ಯವೇನಲ್ಲ ಎನ್ನುವುದನ್ನೂ ಇರಾನ್‌ ಸಾಧಿಸಿ ತೋರಿಸಿತು.

ಬಂಡುಕೋರರಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟು ಪರೋಕ್ಷ ಯುದ್ಧವನ್ನು ಇರಾನ್ ನಡೆಸಬಹುದೇ ವಿನಾ, ನೇರ ಯುದ್ಧದಲ್ಲಿ ತೊಡಗುವಷ್ಟು ಅದು ಶಕ್ತವಾಗಿಲ್ಲ ಎನ್ನುವುದು ಜಾಹೀರಾಯಿತು. ತನ್ನ ಉದ್ದೇಶ ಈಡೇರಿಸಿಕೊಳ್ಳಲು ಯಾವ ಕ್ಷಣದಲ್ಲಾದರೂ ನಿಲುವು, ಯೋಜನೆ ಹಾಗೂ ಕಾರ್ಯತಂತ್ರಗಳನ್ನು
ಅಮೆರಿಕ ಬದಲಿಸಬಲ್ಲದು ಎನ್ನುವುದು ಜಗತ್ತಿಗೆ ಮತ್ತೊಮ್ಮೆ ಸ್ಪಷ್ಟವಾಯಿತು.

ಕದನ ವಿರಾಮದ ನಂತರ ಸದ್ಯಕ್ಕೆ ನಮ್ಮ ಮುಂದಿರುವುದು, ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧ ಆಕಸ್ಮಿಕವಾಗಿ ನಡೆದದ್ದೇ ಎನ್ನುವ ಪ್ರಶ್ನೆ. ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಜಟಾಪಟಿ ಹೊಸದೇನಲ್ಲ. ಇಸ್ರೇಲಿನ ಆಕ್ರಮಣಕಾರಿ ನಿಲುವು, ಪ್ರಾಂತೀಯವಾಗಿ ಹಿಡಿತ ಸಾಧಿಸಬೇಕೆಂಬ ಇರಾನಿನ ಹೆಬ್ಬಯಕೆ ಹಾಗೂ ತೈಲ ಸಂಪದ್ಭರಿತ ಭೂಭಾಗಗಳು ತನ್ನ ಪ್ರಭಾವ ವಲಯದಲ್ಲೇ ಇರಬೇಕು ಎನ್ನುವ ಅಮೆರಿಕದ ಮಹತ್ವಾಕಾಂಕ್ಷೆ, ಪಶ್ಚಿಮ ಏಷ್ಯಾವನ್ನು ಸಂಘರ್ಷದ ಕೂಪವಾಗಿಸಿದೆ. 

ಕಳೆದ ಹತ್ತು ವರ್ಷಗಳಲ್ಲಿ ಪಶ್ಚಿಮ ಏಷ್ಯಾದ ರಾಜಕೀಯ ಸಮೀಕರಣ ಹೇಗೆಲ್ಲ ಬದಲಾಯಿತು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಸಂಘರ್ಷ ಆಕಸ್ಮಿಕವೇ ಅಲ್ಲವೇ ಎನ್ನುವ ಪ್ರಶ್ನೆಗೆ ಉತ್ತರ ದೊರಕಬಹುದು. ಇರಾನ್‌ನ ಅಣ್ವಸ್ತ್ರ ಯೋಜನೆ ಕುರಿತು ಸತತವಾಗಿ ಮಾತನಾಡುವುದರ ಜೊತೆಗೆ, ಅಣುಬಾಂಬ್‌ ಹೊಂದಲು ಪ್ರಯತ್ನಿಸುತ್ತಿರುವ ಇರಾನ್‌ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವೆಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸಾಕಷ್ಟು ಬಾರಿ ಪ್ರತಿಪಾದಿಸಿದ್ದಾರೆ. 2012ರ
ಸೆಪ್ಟೆಂಬರ್‌ನಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನದಲ್ಲಿ ಬಾಂಬ್‌ ಚಿತ್ರವೊಂದನ್ನು ಹಿಡಿದು, ಇರಾನ್‌ನ ಅಣ್ವಸ್ತ್ರ ಯೋಜನೆ ಯಾವ ಹಂತದಲ್ಲಿದೆ, ಇರಾನ್‌ ಅಣ್ವಸ್ತ್ರ ಹೊಂದುವುದರಿಂದ ಪಶ್ಚಿಮ ಏಷ್ಯಾದ ರಾಜಕೀಯ ಚಿತ್ರಣ ಹೇಗೆ ಬದಲಾಗುತ್ತದೆ ಹಾಗೂ ಯಾವ ದೇಶಗಳಿಗೆ ಇದರಿಂದ ಅಪಾಯ ಎಂಬುದನ್ನು ನೆತನ್ಯಾಹು ವಿಶ್ವದ ಗಮನಕ್ಕೆ ತಂದಿದ್ದರು.

ಇರಾನ್‌ ಅಣ್ವಸ್ತ್ರ ಯೋಜನೆ ಕುರಿತು ಇಸ್ರೇಲ್‌ ನಿರಂತರವಾಗಿ ಕಣ್ಗಾವಲು ನಡೆಸಿತ್ತು ಹಾಗೂ ಆ ಯೋಜನೆಯನ್ನು ವಿಫಲಗೊಳಿಸಲು ವಿಜ್ಞಾನಿಗಳ ಹತ್ಯೆಯೂ ಸೇರಿದಂತೆ ಸಾಧ್ಯವಿದ್ದ ಎಲ್ಲ ಪ್ರಯತ್ನ
ಗಳನ್ನೂ ಮಾಡುತ್ತಿತ್ತು.

2015ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮ ನೇತೃತ್ವದ ಆಡಳಿತ, ಇರಾನ್‌ ಜೊತೆಗೆ ಪರಮಾಣು ಒಪ್ಪಂದಕ್ಕೆ ಮುಂದಾಯಿತು. ಆದರೆ, ಟ್ರಂಪ್‌ ಅವರು ಅಧ್ಯಕ್ಷರಾದ ಬಳಿಕ 2018ರಲ್ಲಿ ಈ ಒಪ್ಪಂದದಿಂದ ಅಮೆರಿಕ ಹೊರಗೆ ಬಂತು. ಇರಾನ್‌ನೊಂದಿಗಿನ ಒಪ್ಪಂದ ಕಡಿದುಕೊಂಡ ಅಮೆರಿಕ, ಇಸ್ರೇಲ್‌ ಪರ ನಿಲುವು ಪ್ರಕಟಿಸಿತು. ಇರಾನ್‌ ವಿರುದ್ಧ ಆರ್ಥಿಕ ದಿಗ್ಬಂಧನವನ್ನೂ ಹೇರಲಾಯಿತು. ಅಧ್ಯಕ್ಷರಿಗೆ ಹಿರಿಯ ಸಲಹೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಟ್ರಂಪ್‌ ಅವರ ಅಳಿಯ‌ ಜರೇಡ್ ಕುಶ್ನರ್, ಇಸ್ರೇಲ್‌ ಮತ್ತು ಅರಬ್‌ ರಾಷ್ಟ್ರಗಳನ್ನು ಹತ್ತಿರ ತರುವ ಪ್ರಯತ್ನ ಮಾಡಿದರು.

ಅಮೆರಿಕದ ಪ್ರಯತ್ನಕ್ಕೆ ಪ್ರತಿಯಾಗಿ ಇರಾನ್‌ ಕೂಡ ತನ್ನದೇ ಕಾರ್ಯತಂತ್ರವನ್ನು ರೂಪಿಸಿತು. ಅದು ಲೆಬನಾನ್, ಸಿರಿಯಾ, ಯೆಮೆನ್ ಮತ್ತು ಇರಾಕ್‌ನಲ್ಲಿ ತನ್ನ ಅನಧಿಕೃತ ಸೇನೆಯ ಜಾಲವನ್ನು ರಚಿಸುವ ಮೂಲಕ, ನಾಲ್ಕು ದೇಶಗಳನ್ನು ಪರೋಕ್ಷವಾಗಿ ನಿಯಂತ್ರಿಸುವ ಕೆಲಸಕ್ಕೆ ಮುಂದಾಯಿತು. ಶತಕೋಟಿ ಡಾಲರ್‌ ಮೊತ್ತವನ್ನು ತನ್ನ ಪರ ನಿಲ್ಲಬಲ್ಲ ಬಂಡುಕೋರ ಗುಂಪುಗಳನ್ನು ಬೆಳೆಸಲು ಮೀಸಲಿಟ್ಟಿತು. ಹಿಜ್ಬುಲ್ಲಾ, ಹಮಾಸ್‌ ಹಾಗೂ ಹುಥಿ ಪಡೆ ಶಕ್ತವಾಯಿತು.

2020ರಲ್ಲಿ ನಡೆದ ಖಾಸಿಮ್‌ ಸುಲೇಮನಿ ಹತ್ಯೆ ಇರಾನ್‌ ತಂತ್ರಗಾರಿಕೆಗೆ ಮೊದಲ ಹೊಡೆತ ಕೊಟ್ಟಿತು. ಅಮೆರಿಕದ ವಿರುದ್ಧ ನಿಲ್ಲಲು ರಷ್ಯಾ ಹಾಗೂ ಚೀನಾದ ಛತ್ರಿಯಡಿ ಇರಾನ್‌ ಸೇರಿಕೊಂಡಿತು. ಉಕ್ರೇನ್‌ ಯುದ್ಧ ಆರಂಭವಾದಾಗ, ರಷ್ಯಾಕ್ಕೆ ಇರಾನ್‌ ಡ್ರೋನ್‌ಗಳನ್ನು ಪೂರೈಸಿತು.

2021ರಲ್ಲಿ ಜೋ ಬೈಡೆನ್‌ ಅಮೆರಿಕದ ಅಧ್ಯಕ್ಷರಾದ ಬಳಿಕ, ಪರಮಾಣು ಒಪ್ಪಂದದ ಮಾತುಕತೆಗೆ ಮತ್ತೊಮ್ಮೆ ಚಾಲನೆ ನೀಡಲಾಯಿತು. ಆದರೆ, ಅದಾಗಲೇ ಅಮೆರಿಕದ ಆರ್ಥಿಕ ದಿಗ್ಬಂಧನ ವನ್ನು ಜೀರ್ಣಿಸಿಕೊಂಡಿದ್ದ ಇರಾನ್‌, ಬೈಡೆನ್ ಆಡಳಿತ ಮುಂದಿಟ್ಟ ಎಲ್ಲ ಷರತ್ತುಗಳಿಗೂ ಗೋಣು
ಅಲ್ಲಾಡಿಸಲಿಲ್ಲ. ಮಾತುಕತೆ ಮುರಿದುಬಿತ್ತು. ಬೈಡೆನ್‌ ಆಡಳಿತ ದಿಗ್ಬಂಧನವನ್ನು ವಿಸ್ತರಿಸಿತು.

ಮುಸ್ಲಿಂ ಜಗತ್ತಿನ ನಾಯಕತ್ವ ಹಾಗೂ ಪಶ್ಚಿಮ ಏಷ್ಯಾದ ಮೇಲಿನ ಹಿಡಿತ ತನ್ನದಾಗಬೇಕು ಎಂದು ಬಯಸುವ ಇರಾನ್‌ ತನ್ನ ನೆರೆಹೊರೆ ರಾಷ್ಟ್ರಗಳಲ್ಲಿದ್ದ ಬಂಡುಕೋರರಿಗೆ ಶಸ್ತ್ರಾಸ್ತ್ರ ಪೂರೈಸುವ ಕೆಲಸವನ್ನು ಮುಂದುವರಿಸಿತು. ಇತ್ತ, ಅಮೆರಿಕದ ಮಧ್ಯಸ್ಥಿಕೆಯಲ್ಲಿ ಅರಬ್‌ ರಾಷ್ಟ್ರಗಳು ಇಸ್ರೇಲ್‌ ಜೊತೆಗೆ ಸಂಬಂಧ ಸುಧಾರಿಸಿಕೊಳ್ಳಲು ಮುಂದಾದವು. ಮುಖ್ಯವಾಗಿ ಸೌದಿ ಅರೇಬಿಯಾ ಹಾಗೂ ಇಸ್ರೇಲ್‌ ನಡುವಿನ ಮಾತುಕತೆಗೆ ವೇದಿಕೆ ಸಿದ್ಧವಾಯಿತು.

ಆಗ ನಡೆದದ್ದು ಇಸ್ರೇಲ್‌ ಮೇಲಿನ ಹಮಾಸ್‌ ದಾಳಿ! ಆ ದಾಳಿಗೆ ಇರಾನ್‌ ಪ್ರಚೋದನೆಯಿತ್ತು
ಎನ್ನುವುದು ನಂತರ ಬಹಿರಂಗವಾಯಿತು. ಇಂತಹದೊಂದು ದಾಳಿಯಾದರೆ ಅಮೆರಿಕದ ಜೊತೆಗಿನ ಸಂಬಂಧ ಇನ್ನಷ್ಟು ಕೆಡುತ್ತದೆ, ಇಸ್ರೇಲಿನ ಜೊತೆ ಸಂಘರ್ಷ ಏರ್ಪಡುತ್ತದೆ ಎನ್ನುವುದು ತಿಳಿದಿದ್ದರೂ ಹಮಾಸ್ ಅನ್ನು ಬೆಂಬಲಿಸುವ ಕೆಲಸವನ್ನು ಇರಾನ್ ಮಾಡಿತು. ಹಿಜ್ಬುಲ್ಲಾವನ್ನು ಬಳಸಿ ಲೆಬನಾನ್‌ ಭಾಗದಿಂದ ಇಸ್ರೇಲಿನ ಮೇಲೆ ದಾಳಿಯಾಗುವಂತೆ ನೋಡಿಕೊಂಡಿತು. ಆ ಮೂಲಕ ಇರಾನ್‌ ಎಡವಿತು.

ತನ್ನ ಮೇಲೆ ನಡೆದ ದಾಳಿಯ ಬಳಿಕ ಇಸ್ರೇಲ್‌, ಹಿಜ್ಬುಲ್ಲಾ ನಾಯಕರನ್ನು ಗುರಿಯಾಗಿಸಿ ಕೊಂಡಿತು. ಅದರ ಶಸ್ತ್ರಾಗಾರಗಳನ್ನು ನಾಶ ಮಾಡಿತು. ಯೆಮೆನ್‌ನಲ್ಲಿ ಸಕ್ರಿಯವಾಗಿರುವ ಹುಥಿ ಉಗ್ರರ ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿತು. ಸಿರಿಯಾದಲ್ಲಿ ಇರಾನ್‌ ಪರ ಇದ್ದ ಬಷರ್‌ ಅಲ್‌ ಅಸ್ಸಾದ್‌ ಆಡಳಿತ ಅಂತ್ಯಗೊಂಡಿತು. ಈ ಬೆಳವಣಿಗೆಗಳಿಂದ ಇರಾನ್‌ ಅಸಹಾಯಕ ಸ್ಥಿತಿಗೆ ತಲುಪಿತು. ಅಣು ಒಪ್ಪಂದಕ್ಕೆ ಟ್ರಂಪ್‌ ಆಡಳಿತ ಹೊಸ ಕರಾರುಗಳನ್ನು ಜೋಡಿಸಿತು. ಇರಾನ್‌ ತನ್ನ ಅಣ್ವಸ್ತ್ರ ಯೋಜನೆಯನ್ನು ಚುರುಕುಗೊಳಿಸಿತು. ಬರೀ ಅಣು ಒಪ್ಪಂದದಿಂದ ಇರಾನ್‌ ಅಣ್ವಸ್ತ್ರ ಹೊಂದದಂತೆ ತಡೆಯಬಹುದೇ ಎಂಬ ಪ್ರಶ್ನೆಯೂ ಎದ್ದಿತು.

ಇರಾನ್‌ ಅಣುಬಾಂಬ್‌ ಹೊಂದಲು ಹೆಚ್ಚು ಸಮಯ ಬೇಕಿಲ್ಲ. ಶಸ್ತ್ರಾಸ್ತ್ರ ದರ್ಜೆಯ ಯುರೇನಿಯಂ ಉತ್ಪಾದಿಸಲು ಇರಾನಿಗೆ ಕೆಲವು ವಾರಗಳು ಸಾಕು ಎಂದು 2024ರ ಜುಲೈನಲ್ಲಿ ಬೈಡೆನ್‌ ಅವರ ಅವಧಿಯಲ್ಲಿ ಅಮೆರಿಕದ ವಿದೇಶಾಂಗ ಸಚಿವರಾಗಿದ್ದ ಬ್ಲಿಂಕೆನ್‌ ಹೇಳಿದ್ದರು. ಅಮೆರಿಕ, ಇಸ್ರೇಲ್‌ ಹಾಗೂ ಐರೋಪ್ಯ ರಾಷ್ಟ್ರಗಳು ಹಂಚಿಕೊಂಡ ಮಾಹಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಇರಾನ್‌ ಜೊತೆಗೆ ಪರಮಾಣು ಒಪ್ಪಂದ ಮಾಡಿಕೊಳ್ಳಲಾಗುವುದು ಎನ್ನುತ್ತಲೇ ಅಮೆರಿಕ, ಅಣ್ವಸ್ತ್ರ ಹೊಂದುವ ಹಾದಿಯಲ್ಲಿ ಇರಾನ್‌ ಅನ್ನು ಹಿಂದಕ್ಕೆ ತಳ್ಳುವ ಅವಕಾಶಕ್ಕಾಗಿ ಕಾಯತೊಡಗಿತು.

ಜೂನ್‌ 12ರಂದು ಇರಾನ್‌ ಮೇಲೆ ಇಸ್ರೇಲ್‌ ದಾಳಿ ಮಾಡಿತು. ಇರಾನ್‌ ಪ್ರತಿಕ್ರಿಯಿಸಿತು. ಇಸ್ರೇಲ್‌ ಬೆಂಬಲಕ್ಕೆ ಅಮೆರಿಕ ನಿಂತಿತು. ಆದರೆ ರಷ್ಯಾ ಮತ್ತು ಚೀನಾದ ಪ್ರತಿಕ್ರಿಯೆ ಇಸ್ರೇಲ್‌ ದಾಳಿ ಕುರಿತ ಖಂಡನಾ ಹೇಳಿಕೆಗೆ ಸೀಮಿತವಾಯಿತು.

ಉಕ್ರೇನ್‌ ಯುದ್ಧ ಚಾಲ್ತಿಯಲ್ಲಿರುವಾಗ ಹಾಗೂ ಉಕ್ರೇನ್‌ ಅನ್ನು ನಿಗ್ರಹಿಸುವುದೇ ರಷ್ಯಾಕ್ಕೆ
ತ್ರಾಸವಾಗಿರುವಾಗ ಮತ್ತೊಂದು ಸಂಘರ್ಷದಲ್ಲಿ ಅದು ಪಾಲ್ಗೊಳ್ಳಬಹುದು ಎಂದು ನಿರೀಕ್ಷಿಸುವುದಾದರೂ
ಹೇಗೆ? ಇರಾನ್‌ ಜೊತೆಗಿನ ಸಂಬಂಧವನ್ನು ಚೀನಾ ವಾಣಿಜ್ಯ ವ್ಯವಹಾರಗಳಿಗೆ ಸೀಮಿತಗೊಳಿಸಿತು. ಅರಬ್‌ ರಾಷ್ಟ್ರಗಳು ಇರಾನ್‌ ಜೊತೆಗೆ ಅಂತರ ಕಾಯ್ದುಕೊಂಡವು. ಇಸ್ರೇಲ್‌ನ ಸತತ ದಾಳಿಯಿಂದ ಇರಾನ್‌ ಶಕ್ತಿ ಕುಂದಿತು. ಅಮೆರಿಕ ಸುತ್ತಿಗೆ ಹಿಡಿದು ಕಾರ್ಯಪ್ರವೃತ್ತವಾಯಿತು. ಕೊನೆಗೆ ಮುಖ ಉಳಿಸಿಕೊಳ್ಳುವ ಮಾರ್ಗವನ್ನೂ ಇರಾನಿಗೆ ನೀಡಿತು. ಕದನ ವಿರಾಮ ಏರ್ಪಟ್ಟಿತು.

ಇಸ್ರೇಲ್‌ ಮತ್ತು ಇರಾನ್‌ ಸಂಘರ್ಷದಲ್ಲಿ ಅಮೆರಿಕ ತನ್ನ ಲೆಕ್ಕಾಚಾರದಂತೆಯೇ ಅಂದುಕೊಂಡಿ
ದ್ದನ್ನು ಸಾಧಿಸಿತೆ? ಇರಾನ್‌ ಅಣ್ವಸ್ತ್ರ ಹೊಂದಲು ಸಾಧ್ಯವಾಗದಂತೆ ಮಾಡಿದ್ದೇವೆ ಎಂದು ದಾಳಿಯ ಬಳಿಕ ಅಮೆರಿಕ ಹೇಳಿದೆ. ಆದರೆ, ಪರಮಾಣು ಶಸ್ತ್ರಕ್ಕೆ ಬೇಕಾದ ಗುಣಮಟ್ಟದ ಯುರೇನಿಯಂ ಅನ್ನು ಇರಾನ್‌ ಈ ಘಟಕಗಳಲ್ಲಿ ಇರಿಸಿರಲಿಲ್ಲ ಎಂಬ ವರದಿಗಳೂ ಬರುತ್ತಿವೆ. ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ, ದಾಳಿಯಿಂದ ಅಮೆರಿಕ ಮಹತ್ವದ್ದೇನನ್ನೂ ಸಾಧಿಸಿಲ್ಲ ಎಂದಿದ್ದಾರೆ. ಪರಮಾಣು ಯೋಜನೆಯನ್ನು ಮುಂದುವರಿಸುವ ಮಾತನ್ನಾಡಿದ್ದಾರೆ. ಹಾಗಾಗಿ, ಸಂಘರ್ಷ ಮುಗಿಯಿತು ಎನ್ನಲಾಗದು.

ಇರಾನ್‌ ಜೊತೆಗಿನ ಮಾತುಕತೆಗೆ ಅಮೆರಿಕ ಚಾಲನೆ ಕೊಟ್ಟಿರುವುದು ಹಾಗೂ ಆರ್ಥಿಕ ನೆರವಿನ ಭರವಸೆ ನೀಡಿರುವ ಸುದ್ದಿಯೂ ವರದಿಯಾಗಿದೆ. ದಿಗ್ಬಂಧನವನ್ನು ವಿಸ್ತರಿಸಿ ಪರಮಾಣು ಒಪ್ಪಂದಕ್ಕೆ ಬದ್ಧವಾಗುವಂತೆ ಒತ್ತಡ ಹೇರುವ ತಂತ್ರವೂ ಮುಂದುವರಿಯಬಹುದು. ಒಂದೊಮ್ಮೆ ಪರಮಾಣು ಒಪ್ಪಂದ ಏರ್ಪಟ್ಟರೂ ಅಣ್ವಸ್ತ್ರ ಹೊಂದುವ ಬಯಕೆಯನ್ನು ಇರಾನ್‌ ಬಿಡುತ್ತದೆ ಎಂದು ಹೇಳಲಾಗದು. ಹಾಗಾಗಿ, ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ, ಸಂಧಾನ, ಒಪ್ಪಂದ ಎಂಬ ಚಕ್ರದ ಚಲನೆಯಂತೂ ಚಾಲ್ತಿಯಲ್ಲಿರುತ್ತದೆ ಎನ್ನುವ ಸಾಧ್ಯತೆಯೇ ಸತ್ಯಕ್ಕೆ ಹೆಚ್ಚು ಸಮೀಪವಾದುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.