ADVERTISEMENT

ವೆನಿಜುವೆಲಾ ಬಿಕ್ಕಟ್ಟಿನ ಮೂಲವೆಲ್ಲಿ?

ನವ ಶೀತಲ ಸಮರದ ಈ ಅಂಗಳದಲ್ಲಿ ರಾಜಕೀಯ ಪ್ರತಿಷ್ಠೆ ಮೇಲುಗೈಯಾಗಿದೆ

ಸುಧೀಂದ್ರ ಬುಧ್ಯ
Published 19 ಫೆಬ್ರುವರಿ 2019, 20:00 IST
Last Updated 19 ಫೆಬ್ರುವರಿ 2019, 20:00 IST
   

ಒಮ್ಮೆ ಊಹಿಸಿಕೊಳ್ಳಿ, ನಾವು ದಿನನಿತ್ಯ ಬಳಸುವ ವಸ್ತುಗಳ ಬೆಲೆ 19 ದಿನಗಳಿಗೊಮ್ಮೆ ದುಪ್ಪಟ್ಟಾಗುತ್ತಾ ಹೋದರೆ ಏನಾದೀತು? ತಿಂಗಳ ಸಂಬಳ ಬರುವ ಮೊದಲೇ ಬೆಲೆ ಏರಿಕೆಯ ಬಿಸಿ ಮೈ ಕೈ ಸುಡುತ್ತದೆ. ಆಳುವವರ ಮೇಲೆ ಸಿಟ್ಟು ಬರುತ್ತದೆ. ಪ್ರತಿಭಟನೆ, ಬಂಧನ, ಅಶ್ರುವಾಯು ಪ್ರಯೋಗ ದಿನದ ವಾರ್ತೆಯಾಗಿ ಪರಿಣಮಿಸುತ್ತವೆ. ದೇಶದ ಸಹವಾಸವೇ ಸಾಕೆಂದು ಮೂಟೆ ಕಟ್ಟೋಣ ಎಂದುಕೊಂಡರೆ ಮರುಕ್ಷಣವೇ, ಯಾವ ದೇಶ ಒಳಗೆ ಕರೆದುಕೊಂಡೀತು ಎಂಬ ಪ್ರಶ್ನೆ ದಿಗಿಲು ಮೂಡಿಸುತ್ತದೆ. ಈ ಎಲ್ಲವೂ ವೆನಿಜುವೆಲಾದಲ್ಲಿ ಆಗುತ್ತಿವೆ.

ಒಂದು ಕಾಲಘಟ್ಟದಲ್ಲಿ ದಕ್ಷಿಣ ಅಮೆರಿಕದ ಶ್ರೀಮಂತ ರಾಷ್ಟ್ರ ಎನಿಸಿಕೊಂಡ ವೆನಿಜುವೆಲಾ ಇದೀಗ ಆಂತರಿಕ ಕ್ಷೋಭೆಯಿಂದ ಕೆಂಡವಾಗಿ ಮಾರ್ಪಟ್ಟಿದೆ. ಆಡಳಿತಾರೂಢರು ಚುನಾವಣಾ ಅಕ್ರಮ ನಡೆಸಿ ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಸರ್ಕಾರದ ಯೋಜನೆಗಳಿಗೆ ಹಣದ ಕೊರತೆ ಉಂಟಾಗಿದೆ. ನಿರುದ್ಯೋಗ, ಬಡತನ, ಹಣದುಬ್ಬರ ಜನರ ಬವಣೆ ಹೆಚ್ಚಿಸಿವೆ. ಜನ ಸಾಗರೋಪಾದಿಯಲ್ಲಿ ದೇಶ ತೊರೆದು ನೆರೆರಾಷ್ಟ್ರಗಳತ್ತ ಹೊರಟಿದ್ದಾರೆ. ಸಂಕಷ್ಟದಲ್ಲಿರುವ ವೆನಿಜುವೆಲಾ ನವ ಶೀತಲ ಸಮರದ ಭೂಮಿಕೆಯಾಗಿಯೂ ಬಳಕೆಯಾಗುತ್ತಿದೆ.

ಹಾಗಾದರೆ ವೆನಿಜುವೆಲಾದ ಇಂದಿನ ಸಂಕಟಕ್ಕೆ ಕಾರಣವೇನು? ಇತಿಹಾಸದ ಪುಟಗಳನ್ನು 90ರ ದಶಕದ ಕೊನೆಯ ಭಾಗಕ್ಕೆ ಸರಿಸಿದರೆ ಕಾರಣ ಸ್ಪಷ್ಟವಾಗುತ್ತದೆ. 1998ರಲ್ಲಿ ವೆನಿಜುವೆಲಾದ ಚುಕ್ಕಾಣಿ ಹಿಡಿದ ಹುಗೋ ಚಾವೇಸ್ ಮಹತ್ವಾಕಾಂಕ್ಷಿ ನಾಯಕ. 1998ರಿಂದ 2013ರವರೆಗೆ ಅಧಿಕಾರದಲ್ಲಿದ್ದ ಚಾವೇಸ್ ವೆನಿಜುವೆಲಾವನ್ನು ಸಮಾಜವಾದದ ಪ್ರಯೋಗಶಾಲೆಯನ್ನಾಗಿ ಮಾಡಿದವರು. ಅವರ ಅವಧಿಯಲ್ಲಿ ಕೈಗಾರಿಕೆಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಶಿಕ್ಷಣ ವ್ಯವಸ್ಥೆ ಸುಧಾರಿಸಿತು. ನಿರುದ್ಯೋಗ ಪ್ರಮಾಣ ಅರ್ಧದಷ್ಟು ಕಡಿಮೆಯಾಯಿತು. ತಲಾವಾರು ಆದಾಯ ದ್ವಿಗುಣಗೊಂಡಿತು. ಕೆಲವೇ ವರ್ಷಗಳಲ್ಲಿ ಶೇ 50ರಷ್ಟು ಜನ ಬಡತನದ ರೇಖೆಯಾಚೆ ಮಧ್ಯಮ ವರ್ಗಕ್ಕೆ ಜಿಗಿದರು.

ADVERTISEMENT

2003-04ರ ಸಮಯದಲ್ಲಿ ತೈಲ ಬೆಲೆ ಹೆಚ್ಚಾಯಿತು. ವೆನಿಜುವೆಲಾದ ತೈಲ ಉತ್ಪಾದನೆಯೂ ಗರಿಷ್ಠ ಮಟ್ಟ ತಲುಪಿತು. ಚಾವೇಸ್ ಪಾಲಿಗೆ ಇದು ವರವಾಯಿತು. ಕೂಡಲೇ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಆರಂಭಿಸಿದರು. ದೂರಗಾಮಿ ಪರಿಣಾಮ ಅವಲೋಕಿಸದೆ ಸಾಮಾಜಿಕ- ಆರ್ಥಿಕ ಸುಧಾರಣೆಯ ಬಹಳಷ್ಟು ಯೋಜನೆಗಳನ್ನು ಮನಸೋಇಚ್ಛೆ ತಂದರು. ಏರುಗತಿಯ ಜನಮನ್ನಣೆ, ಕೈಬಿಡದ ಅಧಿಕಾರ ಅವರನ್ನುಸರ್ವಾಧಿಕಾರದತ್ತ ಎಳೆದುತಂದಿತು. 2009ರಲ್ಲಿ ಚಾವೇಸ್ ಅಮೆರಿಕದ ವಿರುದ್ಧ ತೊಡೆತಟ್ಟಿದರು. ಇದರಿಂದ ಅವರಿಗೆ ಹೀರೊ ಇಮೇಜ್ ಬಂತು. ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಅವರನ್ನು ‘ದಿ ಡೆವಿಲ್’ ಎಂದು ವಿಶ್ವಸಂಸ್ಥೆಯಲ್ಲಿ ಕರೆದಿದ್ದು ದೊಡ್ಡ ಚರ್ಚೆಗೆ ಗ್ರಾಸವಾಯಿತು.

ಆರ್ಥಿಕತೆಯನ್ನು ವಿವಿಧ ಮುಖಗಳಲ್ಲಿ ಬೆಳೆಯಲು ಬಿಡದೆ, ತೈಲೋದ್ಯಮವನ್ನೇ ನೆಚ್ಚಿಕೊಂಡದ್ದು ಅರ್ಥ ವ್ಯವಸ್ಥೆಗೆ ಮಾರಕವಾಯಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿಯುತ್ತಿದ್ದಂತೆಯೇ ದೇಶದ ಅರ್ಥವ್ಯವಸ್ಥೆ ಕುಸಿದು ಬಿತ್ತು. ಆ ಹೊತ್ತಿಗೇ ಚಾವೇಸ್ 58ನೇ ವಯಸ್ಸಿಗೆ ಕ್ಯಾನ್ಸರ್‌ನಿಂದ ನಿಧನರಾದರು. ಉಪಾಧ್ಯಕ್ಷರಾಗಿದ್ದ ಮಡುರೋ 2013ರಲ್ಲಿ ಆಡಳಿತದ ಚುಕ್ಕಾಣಿ ಹಿಡಿದರು.

ಚಾವೇಸ್ ವರ್ಚಸ್ಸು, ಆಕರ್ಷಣೆ ಮಡುರೋ ಅವರಿಗೆ ಇರಲಿಲ್ಲ. ಆರ್ಥಿಕತೆ ಕುಸಿದ ಪರಿಣಾಮ, ಆಡಳಿತದ ವಿರುದ್ಧ ಜನ ಆಕ್ರೋಶಗೊಂಡರು. ಮಡುರೋ ಅಧಿಕಾರ ಉಳಿಸಿಕೊಳ್ಳಲು ಅಪಕ್ವ ನಿರ್ಧಾರಗಳನ್ನು ಕೈಗೊಂಡರು. ವೆನಿಜುವೆಲಾದ ಕರೆನ್ಸಿ ವ್ಯವಸ್ಥೆಗೆ ಕೈಹಾಕಿ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದರು. ಬೊಲೀವರ್ (ವೆನಿಜುವೆಲಾದ ಕರೆನ್ಸಿ) ಮತ್ತು ಡಾಲರ್ ವಿನಿಮಯ ದರ
ವನ್ನು ತಗ್ಗಿಸಲಾಯಿತು. ಸರ್ಕಾರದ ಭಾಗವಾಗಿದ್ದವರು ಮಾತ್ರ ಈ ದರ ಬಳಸಬಹುದೆಂಬ ಕಟ್ಟಲೆ ಬಂತು. ಮಡುರೋ ಆಪ್ತರು ಇದರ ಲಾಭ ಪಡೆದರು. ಆಹಾರ ಸರಬರಾಜಿನ ಸಂಪೂರ್ಣ ಹಿಡಿತ ಹೊಂದಿದ್ದ ಮಿಲಿಟರಿ ಈ ಕರೆನ್ಸಿ ವಿನಿಮಯ ದರದ ಲೋಪ ಬಳಸಿಕೊಂಡಿತು. ಸರ್ಕಾರಿ ವಿನಿಮಯ ದರದಲ್ಲಿ ಆಹಾರ ಆಮದು ಮಾಡಿಕೊಂಡು ಮಾರುಕಟ್ಟೆ ದರದಲ್ಲಿ ಮಾರುವ ಕೆಲಸ ಆರಂಭವಾಯಿತು. ಸೇನೆಯ ಉನ್ನತ ಅಧಿಕಾರಿಗಳು ಹಣವಂತರಾದರು. ಮಡುರೋ ಅಧಿಕಾರದಲ್ಲಿ ಉಳಿಯುವುದು ಸಾಧ್ಯವಾಯಿತು.

ಆದರೆ ನಾಗರಿಕರ ಸಂಕಷ್ಟ ಬಗೆಹರಿಯಲಿಲ್ಲ. ಅಗತ್ಯ ವಸ್ತುಗಳ ಬೆಲೆ ಏರುತ್ತಾ ಹೋಯಿತು. ಜನ ಬಂಡೆದ್ದರು. ಚುನಾವಣೆಗೆ ಆಗ್ರಹಿಸಿದರು. ಮಡುರೋ ಚುನಾವಣೆಯನ್ನು ಮುಂದೂಡುತ್ತಾ ಬಂದರು. ಜನರ ಆಕ್ರೋಶ ಹಿಂಸಾಚಾರಕ್ಕೆ ತಿರುಗಿದಾಗ ಚುನಾವಣೆ ಘೋಷಿಸಿ, ಆ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿ ಪುನಃ ಅಧಿಕಾರ ಹಿಡಿದರು. ಇದನ್ನು ಅಂತರರಾಷ್ಟ್ರೀಯ ಸಮುದಾಯ ಖಂಡಿಸಿತು. ಅಮೆರಿಕ ಆರ್ಥಿಕ ದಿಗ್ಬಂಧನ ಹೇರಿತು. ಈ ನಡುವೆ, ವೆನಿಜುವೆಲಾದ ನ್ಯಾಷನಲ್ ಅಸೆಂಬ್ಲಿ ನಾಯಕ ವಾನ್ ಗ್ವಾಡೋ ತಮ್ಮನ್ನು ‘ಹಂಗಾಮಿ ಅಧ್ಯಕ್ಷ’ ಎಂದು ಗುರುತಿಸಿಕೊಂಡರು. ವೆನಿಜುವೆಲಾ ಸಂವಿಧಾನ ‘ಅಧ್ಯಕ್ಷ ಕರ್ತವ್ಯಲೋಪ ಎಸಗಿದರೆ, ನಾಯಕತ್ವದ ಕೊರತೆ ಉಂಟಾದರೆ ನ್ಯಾಷನಲ್ ಅಸೆಂಬ್ಲಿಯ ನಾಯಕ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ನಿರ್ವಹಿಸಬೇಕು’ ಎನ್ನುತ್ತದೆ. ಇದನ್ನು ಇದೀಗ ಗ್ವಾಡೋ ಉಲ್ಲೇಖಿಸುತ್ತಿದ್ದಾರೆ. ಅಮೆರಿಕ, ಐರೋಪ್ಯ ರಾಷ್ಟ್ರಗಳು ಗ್ವಾಡೋ ಪರ ನಿಂತಿವೆ. ಹಾಗಾಗಿ ವೆನಿಜುವೆಲಾದಲ್ಲಿ ರಾಜಕೀಯ ಬಿಕ್ಕಟ್ಟು ಕೂಡ ಉದ್ಭವಿಸಿದೆ.

ರಷ್ಯಾ ಮತ್ತು ಚೀನಾ ದೊಡ್ಡ ಮೊತ್ತದ ಹಣವನ್ನು ವೆನಿಜುವೆಲಾದ ತೈಲೋದ್ಯಮದಲ್ಲಿ ತೊಡಗಿಸಿವೆ. ಮಡುರೋ ಈ ರಾಷ್ಟ್ರಗಳಿಗೆ ಆಪ್ತರಾಗಿದ್ದಾರೆ. ಒಂದೊಮ್ಮೆ ಪ್ರಜಾಪ್ರಭುತ್ವದಿಂದ ಸಂಪೂರ್ಣವಾಗಿ ಸರ್ವಾಧಿಕಾರದತ್ತ ವೆನಿಜುವೆಲಾ ಹೊರಳಿದರೆ ಅಮೆರಿಕಕ್ಕೆ ಸೆರಗಿನ ಕೆಂಡವಾಗಿ ಮಾರ್ಪಾಡಾಗುತ್ತದೆ. ಮಡುರೋ ಅಮೆರಿಕದ ವೈರಿ ರಾಷ್ಟ್ರ ಇರಾನ್ ಮತ್ತು ಅಲ್ಲಿನ ಉಗ್ರ ಸಂಘಟನೆ ಹಿಜ್‌ಬುಲ್‌ ಜೊತೆಗೆ ನಿಕಟ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ಅಮೆರಿಕ ತನ್ನ ಹಿತಾಸಕ್ತಿಗೋಸುಗ ವೆನಿಜುವೆಲಾ ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶಿಸಿದೆ.

ಭಾರತದ ದೃಷ್ಟಿಯಿಂದ ನೋಡುವುದಾದರೆ, ಇರಾಕ್, ಸೌದಿ ಅರೇಬಿಯಾ, ಇರಾನ್ ಬಳಿಕ ಭಾರತಕ್ಕೆ ವೆನಿಜುವೆಲಾದಿಂದ ಹೆಚ್ಚಿನ ತೈಲ ಪೂರೈಕೆಯಾಗುತ್ತಿದೆ. ವೆನಿಜುವೆಲಾದಲ್ಲಿ ಅಂತರ್ಯುದ್ಧ ಆರಂಭವಾದರೆ ನೇರವಾಗಿ ತೈಲ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಒಂದೊಮ್ಮೆ ಯಥಾಸ್ಥಿತಿ ಮುಂದುವರಿದು ಅಮೆರಿಕದ ದಿಗ್ಬಂಧನದ ಕಾರಣದಿಂದ ವೆನಿಜುವೆಲಾ ಭಾರತಕ್ಕೆ ಹೆಚ್ಚಿನ ತೈಲ ಪೂರೈಕೆ ಮಾಡಬೇಕಾದ ಅನಿವಾರ್ಯ ಎದುರಾದರೆ, ನಮ್ಮಲ್ಲಿ ತೈಲ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಹಾಗಾಗಿ ವೆನಿಜುವೆಲಾ ಬಿಕ್ಕಟ್ಟಿನ ಕುರಿತಾಗಿ ಭಾರತ ತಟಸ್ಥ ನಿಲುವು ತಳೆದಿದೆ.

ಒಟ್ಟಿನಲ್ಲಿ, ಪ್ರಜಾಪ್ರಭುತ್ವವನ್ನು ಬಲಗೊಳಿಸುವ, ಆರ್ಥಿಕತೆಗೆ ಶಕ್ತಿ ತುಂಬುವ ಕೆಲಸವನ್ನು ಅಮೆರಿಕ, ಐರೋಪ್ಯ ಒಕ್ಕೂಟ, ರಷ್ಯಾ, ಚೀನಾಗಳು ಒಂದಾಗಿ ಮಾಡಿದರೆ, ವೆನಿಜುವೆಲಾ ಜನರ ಕಷ್ಟದ ದಿನಗಳು ಮುಗಿಯಬಹುದು. ವೆನಿಜುವೆಲಾದ ಶೇಕಡ 75ರಷ್ಟು ನಾಗರಿಕರ ದೇಹದ ತೂಕ, ಆಹಾರದ ಅಭಾವದಿಂದಾಗಿ ಕಳೆದ 2 ವರ್ಷಗಳಲ್ಲಿ 9 ಕೆ.ಜಿಯಷ್ಟು ಕಡಿಮೆಯಾಗಿದೆ ಎನ್ನುತ್ತದೆ ಒಂದು ಸಮೀಕ್ಷೆ. ಈ ಅಂಶವಾದರೂ ಜಗತ್ತಿನ ಹಣವಂತ ರಾಷ್ಟ್ರಗಳ ಕಣ್ಣು ತೆರೆಸಬೇಕು. ರಾಜಕೀಯ ಪ್ರತಿಷ್ಠೆಯನ್ನು ಗೌಣವಾಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.