ADVERTISEMENT

ಸ್ಪಂದನ ಅಂಕಣ: ಅಂಡಾಣು ಸಂರಕ್ಷಿಸುವ ಅಗತ್ಯ ಇದೆಯೇ?

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 23:52 IST
Last Updated 19 ಡಿಸೆಂಬರ್ 2025, 23:52 IST
   

ನನ್ನ ತಾಯಿ ಕ್ಯಾನ್ಸರ್‌ನಿಂದ ನಿಧನರಾಗಿ ಎರಡು ವರ್ಷಗಳಾಯಿತು. ನನ್ನ ವಯಸ್ಸು 23. ನಾನು ಒಬ್ಬಳೇ ಮಗಳು. ನನಗೆ ಮುಟ್ಟು ಸರಿಯಾಗಿ ಆಗುವುದಿಲ್ಲ. ತಜ್ಞ ವೈದ್ಯರು ಪರೀಕ್ಷೆ ಮಾಡಿದಾಗ, ಎ.ಎಂ.ಎಚ್‌ ಹಾರ್ಮೋನ್‌ ಪ್ರಮಾಣ ಕಡಿಮೆ ಇರುವುದು ಗೊತ್ತಾಯಿತು. ಈಗಲೇ ಅಂಡಾಣುಗಳನ್ನು ಫ್ರೀಸ್ ಮಾಡಿ ಇಡಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಇದು ಉಪಯುಕ್ತವೇ? 

ಹೆಣ್ಣುಮಗುವೊಂದು ಭ್ರೂಣಾವಸ್ಥೆಯಲ್ಲಿ ಇರುವಾಗಲೇ ಎ.ಎಂ.ಎಚ್‌ ಹಾರ್ಮೋನ್‌ನ (ಆ್ಯಂಟಿ ಮ್ಯುಲೇರಿಯನ್ ಹಾರ್ಮೋನ್‌) ಉತ್ಪಾದನೆ ಆರಂಭವಾಗುತ್ತದೆ. ಆ ಮಗುವಿಗೆ ಮುಂದೆ ಋತುಚಕ್ರದ ಸಮಯದಲ್ಲಿ ಬಿಡುಗಡೆಯಾಗುವ ಅಂಡಾಣುಗಳ ಪ್ರಮಾಣದ ಬಗ್ಗೆ, ಅಂದರೆ ಅಂಡಾಶಯವು ಹೊಂದಿರುವ ಅಂಡಾಣುಗಳ ಮೀಸಲು ಸಾಮರ್ಥ್ಯದ ಬಗ್ಗೆ ನೀವು ಮಾಡಿಸಿರುವ ಪರೀಕ್ಷೆಯು ಒಂದು ಅಂದಾಜು ನೀಡುತ್ತದೆ ಎಂದು ನಿಮ್ಮ ವೈದ್ಯರು ನಿಮಗೆ ಹೇಳಿರಬಹುದು. 

ಎ.ಎಂ.ಎಚ್ ಕಡಿಮೆ ಇರುವುದರಿಂದ, ಭವಿಷ್ಯದಲ್ಲಿ ಮಗು ಮಾಡಿಕೊಳ್ಳಬೇಕೆಂದಾಗ ಉತ್ತಮ ಅಂಡಾಣು ಬಿಡುಗಡೆಯಾಗದೇ ಹೋಗಬಹುದು; ಆಗ ಈ ಮೊದಲೇ ನಿಮ್ಮ ಅಂಡಾಣುಗಳನ್ನು ಶೀತಲೀಕರಣ ತಂತ್ರಜ್ಞಾನದ ಮೂಲಕ ಸಂರಕ್ಷಿಸಿ ಇಟ್ಟುಕೊಂಡಿದ್ದರೆ, ಆ ಮೂಲಕ ಮಗುವನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಅವರು ನಿಮಗೆ ತಿಳಿಸಿರಬಹುದು. ಆದರೆ ಎ.ಎಂ.ಎಚ್ ವರದಿಯೊಂದನ್ನೇ ಆಧಾರವಾಗಿ ಇಟ್ಟುಕೊಂಡು ಅಂಡಾಶಯದ ಮೀಸಲು ಸಾಮರ್ಥ್ಯವನ್ನು ಅಳೆಯಲಾಗದು. ಅದು ಮಹಿಳೆಯ ವಯಸ್ಸು, ಆ್ಯಂಟ್ರಲ್ ಕೋಶಗಳ ಎಣಿಕೆಯ ಸಂಖ್ಯೆ ಮತ್ತು ಎ.ಎಂ.ಎಚ್ ಪರೀಕ್ಷೆಯನ್ನು ಹೇಗೆ, ಎಲ್ಲಿ, ಯಾವ ಲ್ಯಾಬ್‌ನಲ್ಲಿ ಮಾಡಲಾಗಿದೆ ಎನ್ನುವ ಎಲ್ಲ ಅಂಶಗಳನ್ನೂ ಅವಲಂಬಿಸಿರುತ್ತದೆ.

ADVERTISEMENT

ನೀವು ಸ್ವಲ್ಪ ದಿನ ಬಿಟ್ಟು ಇನ್ನೊಮ್ಮೆ ಬೇರೆ ಲ್ಯಾಬ್‌ನಲ್ಲಿ ಎ.ಎಂ.ಎಚ್ ಪರೀಕ್ಷೆ ಮಾಡಿಸಿ. ಜೊತೆಗೆ ತೂಕ ಪರೀಕ್ಷಿಸಿಕೊಳ್ಳಿ. ನಿಮ್ಮ ಎತ್ತರಕ್ಕೆ ತಕ್ಕಂತೆ ತೂಕ ಕಾಯ್ದುಕೊಳ್ಳುವುದು ಮುಖ್ಯ.  ಹೆಚ್ಚು ಪ್ರೋಟೀನ್‌ಯುಕ್ತ ಆಹಾರ, ಹಸಿರುಸೊಪ್ಪು, ತರಕಾರಿಗಳನ್ನು ದಿನನಿತ್ಯ ಸೇವಿಸಿ. ಕನಿಷ್ಠ ಒಂದು ಗಂಟೆಯಾದರೂ ಪ್ರತಿದಿನ ದೈಹಿಕ ಚಟುವಟಿಕೆಯನ್ನು ಮಾಡಿ. ಯಾಕೆಂದರೆ ಮುಂದೆ ತಾಯಿ ಆಗಬೇಕಾದರೂ ಸರಿಯಾದ ತೂಕ, ರಕ್ತದಲ್ಲಿ ಹಿಮೊಗ್ಲೋಬಿನ್ ಮಟ್ಟ ಎಲ್ಲವೂ ಗರ್ಭಪೂರ್ವದಲ್ಲೇ ಸರಿಯಾಗಿ ಇರಬೇಕಾಗುತ್ತದೆ. ಒಂದು ಹೆಣ್ಣುಮಗು ತಾಯಿಯ ಗರ್ಭದಲ್ಲಿ ಇರುವಾಗಲೇ ಅಂಡಾಶಯದ ಕೋಶಿಕೆಗಳು ಮುಂದೆ ಆಕೆ ತರುಣಿಯಾದಾಗ ಎಷ್ಟರಮಟ್ಟಿಗೆ ಇರುತ್ತವೆ ಎಂಬುದು ನಿರ್ಧಾರವಾಗುತ್ತದೆ.

ತಾಯಿಯ ಆರೋಗ್ಯವು ಪ್ರಮುಖವಾಗಿ ಮಕ್ಕಳ ಆರೋಗ್ಯವನ್ನು ಅದರಲ್ಲೂ ಸಂತಾನೋತ್ಪತ್ತಿ ಆರೋಗ್ಯವನ್ನು ನಿರ್ಧರಿಸುತ್ತದೆ. ನೀವು ಉತ್ತಮ ಜೀವನಶೈಲಿಯನ್ನು ಅನುಸರಿಸಿ ಒಳ್ಳೆಯ ಆರೋಗ್ಯವನ್ನು ಹೊಂದಲು ಪ್ರಯತ್ನಿಸಿ. ಚಿಂತಿಸಬೇಡಿ. ಇನ್ನೊಮ್ಮೆ ತಜ್ಞವೈದ್ಯರನ್ನು ಭೇಟಿ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.