ಸ್ವಾತಂತ್ರ್ಯಾನಂತರದಲ್ಲಿ ದೇಶದ ಸಾರ್ವಜನಿಕ ಜೀವನವು ಕಂಡಿರುವ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವವು ಇಂದು (ಡಿ. 25) ನಡೆಯಲಿದೆ. ಅತ್ಯಂತ ಬಹುಮುಖಿ ವ್ಯಕ್ತಿತ್ವವನ್ನು ಹೊಂದಿದ್ದ, ದೇಶದ ಅತ್ಯುತ್ತಮ ಸಂಸದೀಯ ಪಟುಗಳಲ್ಲಿ ಒಬ್ಬರಾಗಿದ್ದ, ಮಹಾನ್ ಪ್ರಜಾತಂತ್ರವಾದಿಯಾಗಿದ್ದ, ಭಾರತದ ಭದ್ರತೆ, ಆರ್ಥಿಕ ಸಮೃದ್ಧಿ ಮತ್ತು ಸರ್ವಾಂಗೀಣ ವಿಕಾಸವನ್ನು ಖಾತರಿಪಡಿಸುವ ಬದ್ಧತೆಯನ್ನು ಹೊಂದಿದ್ದ ವಾಜಪೇಯಿ ಅವರ ಜೀವನವನ್ನು ಅವಲೋಕಿಸಲು ಇದು ಸುಸಂದರ್ಭ.
1998ರಲ್ಲಿ ಕೇಂದ್ರ ಸರ್ಕಾರದ ನೇತೃತ್ವ ಹೊತ್ತಿದ್ದ ವಾಜಪೇಯಿ ಅವರು ಭಾರತವನ್ನು ಅಣ್ವಸ್ತ್ರ ಶಕ್ತ ರಾಷ್ಟ್ರವನ್ನಾಗಿಸುವ ಪ್ರಮುಖ ತೀರ್ಮಾನವೊಂದನ್ನು ತೆಗೆದುಕೊಂಡಾಗ, ಅವರ ಧೈರ್ಯ, ದೂರದೃಷ್ಟಿ ಮತ್ತು ಬದ್ಧತೆ ಎಂಥದ್ದು ಎಂಬುದರ ನೋಟ ಲಭಿಸಿತ್ತು. ರಾಷ್ಟ್ರದ ಭದ್ರತೆಗೆ ಆದ್ಯತೆ, ಅರ್ಥವ್ಯವಸ್ಥೆಯನ್ನು ಮುಕ್ತಗೊಳಿಸುವುದು, ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ಹಲವು ವಲಯಗಳಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿ ಆರು ವರ್ಷಗಳ ಅಧಿಕಾರ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳು ಸ್ಪಷ್ಟ ಆಲೋಚನೆಗಳು ಮತ್ತು ಬಲಿಷ್ಠ ನೀತಿಗಳ ಕಾರಣದಿಂದಾಗಿ ನೆನಪಿನಲ್ಲಿ ಉಳಿಯುತ್ತವೆ.
ಅಣ್ವಸ್ತ್ರ ಹೊಂದುವುದರ ಪರಿಣಾಮವಾಗಿ ದೇಶವು ಅಮೆರಿಕ ಹೇರುವ ದಿಗ್ಬಂಧನಕ್ಕೆ ಗುರಿಯಾಗಬೇಕಾಗುತ್ತದೆ ಎಂಬುದು ಗೊತ್ತಿದ್ದರೂ, ಸವಾಲನ್ನು ಎದುರಿಸಿ ನಿಂತ ವಾಜಪೇಯಿ, ಭಾರತವು ನಿಜಕ್ಕೂ ಸುರಕ್ಷಿತವಾಗುವಂತೆ ಖಾತರಿಪಡಿಸಿದರು. ಅದೇ ರೀತಿಯಲ್ಲಿ, ಆರ್ಥಿಕ ಹಾಗೂ ವಿದೇಶಾಂಗ ವ್ಯವಹಾರಗಳ ವಿಚಾರದಲ್ಲಿ ಅವರು ಇರಿಸಿದ ಹೆಜ್ಜೆಗಳು, ವಿವಿಧ ದೇಶಗಳ ಒಕ್ಕೂಟದಲ್ಲಿ ಭಾರತಕ್ಕೆ ಮಹತ್ವದ ಸ್ಥಾನ ದೊರೆಯುವಂತೆ ಮಾಡಿದವು. 1998ರ ಮಾರ್ಚ್ 22ರಂದು ರಾಷ್ಟ್ರಪತಿಯವರು ಸರ್ಕಾರ ರಚಿಸುವಂತೆ ಆಹ್ವಾನ ನೀಡಿದ ನಂತರ ವಾಜಪೇಯಿ ಅವರ ಭಾಷಣದ ಸ್ಮರಣೀಯ ಮಾತೊಂದು ದೇಶದ ಬಗ್ಗೆ ಅವರು ಹೊಂದಿದ್ದ ಆಲೋಚನೆಯನ್ನು ಸ್ಪಷ್ಟಪಡಿಸುತ್ತದೆ:
‘ರಾಮಕೃಷ್ಣ ಪರಮಹಂಸರು ಒಬ್ಬರಿಗೆ ಹೇಳಿದ್ದರು. ಜೀವನ ದೋಣಿಯಿದ್ದಂತೆ. ಅದು ಸಹಜವಾಗಿಯೇ ನೀರಿನ ಮೇಲಿರಬೇಕು. ಆದರೆ ದೋಣಿಗೆ ನೀರು ನುಗ್ಗಿ, ಅದು ಮುಳುಗುವಂತೆ ಮಾಡಲು ಬಿಡಲಾಗದು. ಸ್ವದೇಶಿ ವಿಚಾರವಾಗಿ ನಾನು ಮತ್ತು ನನ್ನ ಸಹವರ್ತಿಗಳು ಹೇಳುವುದು ಇದನ್ನೇ. ದೇಶವು ಸಹಜವಾಗಿಯೇ ಜಗತ್ತಿನಲ್ಲಿ ಒಂದಾಗಿ ಇರಬೇಕು. ಆದರೆ ಈಗ ಜಾಗತಿಕ ಮಾರುಕಟ್ಟೆಗಳನ್ನು ಅಪ್ಪಳಿಸುತ್ತಿರುವ ಪ್ರವಾಹ ನಮ್ಮನ್ನು ಮುಳುಗಿಸಲು ಬಿಡಲಾಗದು. ಬದಲಾಗಿ, ಅದೇ ಪ್ರವಾಹವು ನಮಗೆ ಅನುಕೂಲಕರವಾಗುವಂತೆ ಮಾಡಬೇಕು. ಹೀಗಾಗಿ, ನಮ್ಮ ಅರ್ಥವ್ಯವಸ್ಥೆಯ ದೋಣಿಯನ್ನು ನಾವು ಇನ್ನಷ್ಟು ಬಲಿಷ್ಠವಾಗಿಸೋಣ. ಭಾರತೀಯರ ಉತ್ಪಾದಕ ಶಕ್ತಿಯನ್ನು ಬಳಸಿ ನಾವು ಈ ಕೆಲಸವನ್ನು ಸಾಧ್ಯವಾದಷ್ಟೂ ಕಡಿಮೆ ಅವಧಿಯಲ್ಲಿ ಮಾಡೋಣ’.
ದೇಶದ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಇದೊಂದು ಅದ್ಭುತ ಆಲೋಚನೆಯಾಗಿತ್ತು. ಕೇಂದ್ರದ ಈಗಿನ ಸರ್ಕಾರವು ‘ಭಾರತದಲ್ಲೇ ತಯಾರಿಸಿ’ ಮತ್ತು ‘ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಗಳ ಮೂಲಕ ಭಾರಿ ಯಶಸ್ಸು ಕಂಡಿರುವುದು ರಾಮಕೃಷ್ಣರ ಬೋಧನೆಯ ಸಾರವನ್ನು, ವಾಜಪೇಯಿ ಅವರ ಕಿವಿಮಾತನ್ನು ಗ್ರಹಿಸುವಲ್ಲಿ ಈಗಿನ ನಾಯಕತ್ವದ ಸಾಮರ್ಥ್ಯವನ್ನು ಮಾತ್ರವೇ ತೋರಿಸುತ್ತಿಲ್ಲ. ಬದಲಿಗೆ, ವಾಜಪೇಯಿ ಅವರ ಕನಸನ್ನು ಸಾಕಾರಗೊಳಿಸುವ ಈಗಿನ ನಾಯಕತ್ವದ ಶಕ್ತಿಯನ್ನೂ ತೋರಿಸುತ್ತಿದೆ. ವಾಜಪೇಯಿ ಅವರು ಸಲಹೆ ನೀಡಿದ 25 ವರ್ಷಗಳಲ್ಲಿ ಭಾರತವು ಜಗತ್ತಿನ ಐದನೆಯ ಅತಿದೊಡ್ಡ ಅರ್ಥವ್ಯವಸ್ಥೆ ಆಗಿರುವುದಷ್ಟೇ ಅಲ್ಲದೆ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯೂ ಆಗಿದೆ.
ವಾಜಪೇಯಿ ಅವರ ಈ ನಿಲುವು ದೇಶದ ಅರ್ಥವ್ಯವಸ್ಥೆಯ ಎಲ್ಲ ಅಂಗಗಳನ್ನು ಉತ್ತೇಜಿಸುವ ಕೆಲಸ ಮಾಡಿತು. ಆಗ ನಿದ್ರಾವಸ್ಥೆಯಲ್ಲಿದ್ದಂತೆ ಕಾಣುತ್ತಿದ್ದ ದೈತ್ಯಶಕ್ತಿ ಎಚ್ಚೆತ್ತುಕೊಳ್ಳಲು ಆರಂಭವಾಯಿತು. ಅಭಿವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆಯ ವಿಚಾರದಲ್ಲಿ ವಾಜಪೇಯಿ ಅವರಿಗೆ ಸಮಗ್ರವಾದ ದೃಷ್ಟಿಕೋನ ಇತ್ತು. ದೇಶದ ಉತ್ತರ ಮತ್ತು ದಕ್ಷಿಣವನ್ನು ಹಾಗೂ ಪೂರ್ವ ಮತ್ತು ಪಶ್ಚಿಮವನ್ನು ಬೆಸೆಯಲು ಸುವರ್ಣ ಚತುಷ್ಪಥ ಯೋಜನೆಯ ಅಡಿ ಎಕ್ಸ್‌ಪ್ರೆಸ್ ಹೆದ್ದಾರಿಗಳ ನಿರ್ಮಾಣಕ್ಕೆ ಅವರು ನೀಡಿದ ಒತ್ತು ನಿಜಕ್ಕೂ ಅದ್ಭುತ.
ವಿಮಾನಯಾನ ಮತ್ತು ಅಂತರರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಕೂಡ ಅವರು ಗಮನಹರಿಸಿದರು. 1999ರ ಜನವರಿ 1ರಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸುವಾಗ ಅವರು, ಮುಂಬೈ, ದೆಹಲಿ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣಗಳಿಗೆ ಕಾರ್ಪೊರೇಟ್ ರೂಪ ನೀಡುವ ಬದ್ಧತೆ ಸರ್ಕಾರಕ್ಕಿದೆ ಎಂದು ಘೋಷಿಸಿದರು. ‘ಅಂತರರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣಗಳ ನಿರ್ಮಾಣದತ್ತ ಇದು ಮೊದಲ ಹೆಜ್ಜೆ’ ಎಂದು ಅವರು ಹೇಳಿದರು. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೆಯ ಟರ್ಮಿನಲ್ ವಿಶ್ವದ ಅತ್ಯುತ್ತಮ ಟರ್ಮಿನಲ್‌ಗಳಲ್ಲಿ ಒಂದು ಎಂದು ಜಗತ್ತಿನ ಎಲ್ಲೆಡೆ ಜನ ಪ್ರಶಂಸೆಯ ಮಾತು ಆಡುವಾಗ, ನಾವು ದೂರದರ್ಶಿತ್ವ ಹೊಂದಿದ್ದ ವಾಜಪೇಯಿ ಅವರನ್ನು ನೆನಪಿಸಿಕೊಳ್ಳಬೇಕು.
ನವ ಭಾರತವನ್ನು ಕಟ್ಟುವಲ್ಲಿ ಅವರ ಬದ್ಧತೆ ಹೇಗಿತ್ತೆಂದರೆ, 1999ರ ಜನವರಿ 2ರಂದು ಅವರು ರಾಷ್ಟ್ರೀಯ ಏಕೀಕೃತ ಹೆದ್ದಾರಿ ಯೋಜನೆಗೆ ಚಾಲನೆ ನೀಡಿದರು. ಅದನ್ನು ಅವರು ‘ಸ್ವತಂತ್ರ ಭಾರತದಲ್ಲಿ ಕೈಗೆತ್ತಿಕೊಂಡ ಅತ್ಯಂತ ಉದ್ದದ, ಅತಿದೊಡ್ಡದಾದ ಮತ್ತು ಅತ್ಯಂತ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆ’ ಎಂದು ಬಣ್ಣಿಸಿದ್ದರು. ‘ಇದು ನಮ್ಮ ತಲೆಮಾರು ದೇಶದ ಮುಂದಿನ ತಲೆಮಾರಿಗೆ ನೀಡುವ ಅತ್ಯಂತ ಮೌಲ್ಯಯುತವಾದ ಉಡುಗೊರೆ’ ಎಂದು ಬಣ್ಣಿಸಿದ್ದರು. ಯೋಜನೆಯು ಗುಜರಾತನ್ನು ಅಸ್ಸಾಂ ಜೊತೆ, ಕನ್ಯಾಕುಮಾರಿಯನ್ನು ಕಾಶ್ಮೀರದ ಜೊತೆ ಬೆಸೆಯಲಿದೆ ಎಂದಿದ್ದರು. ಇಂದಿನ ಕೇಂದ್ರ ಸರ್ಕಾರವು ವಾಜಪೇಯಿ ಅವರ ಕನಸುಗಳನ್ನು ಈಡೇರಿಸುವ ಕೆಲಸ ಮಾಡುತ್ತಿದೆ.
ವಾಜಪೇಯಿ ಅವರ ಸಂಸದೀಯ ಕೌಶಲವು ಬಹುಶ್ರುತವಾಗಿದೆ. ಈ ದೇಶ ಕಂಡ ಮಹಾನ್ ಸಂಸದೀಯ ಪಟುಗಳಲ್ಲಿ ಅವರೂ ಒಬ್ಬರು. ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಅವರು ತೀಕ್ಷ್ಣವಾಗಿ ಮಾತನಾಡುತ್ತಿದ್ದರು, ಟೀಕೆಗಳನ್ನು ಮಾಡುತ್ತಿದ್ದರು, ಹಾಸ್ಯ ಮಾಡುತ್ತಿದ್ದರು. ಆದರೆ ಎಂದಿಗೂ ನಿಂದಿಸುತ್ತಿರಲಿಲ್ಲ. ಅವರ ನಡೆಯಿಂದ ಕಲಿಯುವುದು ಸಂಸದರಿಗೆ ಬಹಳಷ್ಟಿದೆ.
ಕೊನೆಯಲ್ಲಿ ವಾಜಪೇಯಿ ಅವರ ಕಾವ್ಯದ ಬಗ್ಗೆ ಕೆಲವು ಮಾತುಗಳು. ವಾಜಪೇಯಿ ಅವರಿಗೆ ಜನರೊಂದಿಗೆ ಬಹಳ ಆಳವಾದ ಸಂಪರ್ಕ ಹೊಂದಲು ಸಾಧ್ಯವಾಗಿದ್ದಕ್ಕೆ ತಮ್ಮಲ್ಲಿದ್ದ ಮಾತುಗಾರಿಕೆಯೊಂದೇ ಕಾರಣವಾಗಿರಲಿಲ್ಲ. ಕಾವ್ಯವು ವಾಜಪೇಯಿ ವ್ಯಕ್ತಿತ್ವದ ಒಂದು ವಿಸ್ತರಿತ ಭಾಗವಾಗಿತ್ತು. ಬಹಳ ನೆನಪಿನಲ್ಲಿ ಉಳಿಯುವ ಅವರ ಒಂದು ಕವಿತೆ ‘ಊಂಚಾಯಿ’. ಇದನ್ನು ಅವರು ಬರೆದಿದ್ದುದು ತಮಗೆ ಪದ್ಮವಿಭೂಷಣ ಪುರಸ್ಕಾರ ಬಂದಿದ್ದಕ್ಕೆ ದೆಹಲಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ನಂತರ.
ಬಹಳ ಎತ್ತರವಾದ ಪರ್ವತದ ಮೇಲೆ ಮರಗಳು ಬೇರುಬಿಡುವುದಿಲ್ಲ, ಸಸಿಗಳು ಬೆಳೆಯುವುದಿಲ್ಲ, ಹುಲ್ಲು ಉಳಿಯುವುದಿಲ್ಲ ಎಂಬ ಅರ್ಥವನ್ನು ಆ ಕವಿತೆಯ ಆರಂಭಿಕ ಸಾಲುಗಳು ಧ್ವನಿಸುತ್ತವೆ. ಕವಿತೆಯ ಕೊನೆಯಲ್ಲಿ ವಾಜಪೇಯಿ ಅವರು, ‘ನನ್ನವರಲ್ಲದವರನ್ನು ಅಪ್ಪಿಕೊಳ್ಳಲು ಆಗದಷ್ಟು ಎತ್ತರಕ್ಕೆ ನನ್ನನ್ನು ಏರಿಸಬೇಡ ದೇವರೇ’ ಎಂದು ಬರೆದಿದ್ದಾರೆ.
ದೇಶದ ಪ್ರಧಾನಿ ಆಗಿದ್ದಾಗ ವಾಜಪೇಯಿ ಅವರು ತಮ್ಮದೇ ಕವಿತೆಯ ಆಶಯವನ್ನು ಪಾಲಿಸಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು. ಅವರು ತಮ್ಮ ಬೇರುಗಳನ್ನು, ಹಳೆಯ ಸ್ನೇಹಿತರನ್ನು, ಕಷ್ಟದ ಆರಂಭಿಕ ದಿನಗಳನ್ನು ಎಂದಿಗೂ ಮರೆಯಲಿಲ್ಲ. ಅವರು ಎತ್ತರಕ್ಕೆ ಏರಿದರೂ, ಅವರ ಬೇರುಗಳು ನೆಲದಲ್ಲಿ ಭದ್ರವಾಗಿ ಊರಿದ್ದವು. ಈ ಕಾರಣಕ್ಕಾಗಿ ಪ್ರಜಾತಂತ್ರ ಭಾರತವು ಅವರನ್ನು ಯಾವತ್ತಿಗೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.