ಮಂಗಳಗ್ರಹಕ್ಕೆ ಒಂದು ವಿಚಿತ್ರ ಗುಣ ವಿದೆ. ಅದು ಕೆಲವರನ್ನು ಗಪ್ಪೆಂದು ಅಮುಕಿ ಹಿಡಿದುಬಿಡುತ್ತದೆ. ಅಮೆ ರಿಕದ ಹತ್ತಿ ಗಿರಣಿಯ ಮಾಲಿಕ ಪರ್ಸಿವಾಲ್ ಲೊವೆಲ್ ಎಂಬಾತನನ್ನು 1900ರಲ್ಲಿ ಅದು ಹೀಗೇ ಹಿಡಿದಿತ್ತು. ಸುಮಾರು 23 ವರ್ಷಗಳ ಕಾಲ ಹಿಡಿದೇ ಇತ್ತು. ಮಂಗಳನತ್ತ ಆತ ಅದೆಷ್ಟು ಆಕರ್ಷಿತನಾಗಿದ್ದ ಅಂದರೆ ತನ್ನ ಸಂಪತ್ತಿನ ಬಹು ಪಾಲನ್ನೆಲ್ಲ ಸುರಿದು ಅಂದಿನ ಕಾಲದ ಅತಿ ದೊಡ್ಡ ಟೆಲಿಸ್ಕೋಪನ್ನು ನಿರ್ಮಿಸಿದ.
ಅರಿಝೋನಾ ಮರುಭೂಮಿಯ ಒಂದು ದಿಬ್ಬಕ್ಕೆ ‘ಮಂಗಳ ಗುಡ’್ಡ ಎಂದು ಹೆಸರಿಟ್ಟು ಅಲ್ಲೇ ಒಂದು ವೇದ ಶಾಲೆಯನ್ನು ಕಟ್ಟಿದ. ದಿನದ ಹೆಚ್ಚಿನ ಭಾಗ ಆತ ಟೆಲಿಸ್ಕೋಪ್‌ನಲ್ಲಿ ಕಣ್ಣಿಟ್ಟು, ಅಲ್ಲಿ ಕಂಡಿದ್ದನ್ನೆಲ್ಲ ಟಿಪ್ಪಣಿ ಮಾಡತೊಡಗಿದ.
ಅವನಿಗೆ ಮಂಗಳ ಗ್ರಹದ ಮೇಲೆ ಅಷ್ಟೆಲ್ಲ ಆಸಕ್ತಿ ಬರಲು ಕಾರಣವೂ ಇತ್ತು. ಇಟಲಿಯ ಇನ್ನೊಬ್ಬ ಮಂಗಳವ್ಯಸನಿ ಗ್ಯೊವಾನಿ ಶ್ಯಾಪರೆಲ್ಲಿ ಎಂಬಾತ 1877ರಲ್ಲಿ ಮಂಗಳ ಗ್ರಹ ಭೂಮಿಗೆ ತೀರ ಸಮೀಪ ಬಂದಿದ್ದಾಗ ದೂರದರ್ಶಕ ಕೊಳವೆ ಹಿಡಿದು ಹಗಲೂ ರಾತ್ರಿ ಕಣ್ಣಿಟ್ಟು ನೋಡಿದ್ದ. ಅಲ್ಲಿ ಅಪಾರ ಹಳ್ಳಕೊಳ್ಳಗಳು ಹಾಸು ಹೊಕ್ಕಾಗಿವೆ ಎಂದು ಘೋಷಿಸಿ, ಅವುಗಳ ಕುರಿತು ಒಂದು ಪುಸ್ತಕ ಬರೆದಿದ್ದ. ಹಳ್ಳಕೊಳ್ಳ ಇದ್ದುದು ನಿಜವೇ ಆಗಿದ್ದರೂ ಆ ಪುಸ್ತಕವನ್ನು ಇಂಗ್ಲಿಷಿಗೆ ತರ್ಜುಮೆ ಮಾಡುವಾಗ ಒಂದು ಚಿಕ್ಕ ಎಡವ ಟ್ಟಾಗಿತ್ತು. ಇಟಾಲಿಯನ್ ಭಾಷೆಯಲ್ಲಿ ಹಳ್ಳ ಕೊಳ್ಳಗಳಿಗೆ ‘ಕನಾಲಿ’ ಎನ್ನುತ್ತಾರೆ. ಅದನ್ನು ‘ಕ್ಯಾನಲ್’ ಅಂದರೆ ಕಾಲುವೆಗಳು ಎಂದು ತರ್ಜುಮೆ ಮಾಡಲಾಗಿತ್ತು. ಕಾಲುವೆ ಎಂದರೆ ಬುದ್ಧಿಜೀವಿಗಳು ನಿರ್ಮಿಸಿದ್ದು ಎಂತಲೇ ಆಗುತ್ತದೆ ತಾನೆ?
ಲೊವೆಲ್ ಅದೇ ಭ್ರಮೆಯಲ್ಲಿ ಮಂಗಳನನ್ನು ನೋಡುತ್ತ, ಅಲ್ಲಿನ ರಚನೆಗಳನ್ನು ವಿವರಿಸಿದ. ಅಸ್ಪಷ್ಟ ದಟ್ಟ ಛಾಯೆ ಇರುವ ಪ್ರದೇಶಗಳಲ್ಲಿ ಅರಣ್ಯಗಳು ಮತ್ತು ಜಲಾಯಶಗಳನ್ನು ಊಹಿಸಿ ನಕ್ಷೆ ಬರೆದ. ಧ್ರುವಪ್ರದೇಶದ ಬಿಳಿ ಹಿಮರಾಶಿಯ ಅಂಚಿನಿಂದ ಕೆಲವು ಅಂಕುಡೊಂಕು ಗೆರೆಗಳನ್ನು ಎಳೆದ. ಅಲ್ಲಿ ಕಾಣುವ ಕಪ್ಪು ಛಾಯೆಗಳಲ್ಲಿ ‘ನೈಸರ್ಗಿಕ’ ಮತ್ತು ‘ಕೃತಕ’ ಎಂಬ ಎರಡು ವಿಭಾಗಗಳನ್ನು ಮಾಡಿದ. ಬುದ್ಧಿಜೀವಿಗಳು ನಿರ್ಮಿಸಿದ ಬೃಹತ್ ಕಾಲುವೆಗಳನ್ನೂ ಓಯಸಿ ಸ್‌ಗಳನ್ನೂ ಊಹಿಸಿ ಗುರುತಿಸಿದ. ಆತನ ಅಧ್ಯಯನದ ಅವಧಿಯಲ್ಲಿ ಭೂಮಿಯ ಮೇಲೂ ಬೃಹತ್ ನೀರಾವರಿ ಯೋಜನೆಗಳು ರೂಪುಗೊ ಳ್ಳುತ್ತಿದ್ದವು. ಸೂಯೆಝ್ ಕಾಲುವೆ (1869), ಕೊರಿಂಥ್ ಕಾಲುವೆ (1893), ಪನಾಮಾ ಕಾಲುವೆ (1914), ಭಾರೀ ಅಣೆಕಟ್ಟುಗಳು ನಿರ್ಮಾಣವಾಗುತ್ತ ನಿಸರ್ಗದ ಮೇಲೆ ಮನುಷ್ಯನ ವಿಜಯದ ಸಾಧನೆಗಳು ಚರ್ಚಿತವಾ ಗುತ್ತಿದ್ದವು.
ಮಂಗಳನ ವಿಶಾಲ ಪ್ರದೇಶದಲ್ಲೆಲ್ಲ ಭಣಗು ಡುವ ಒಣ ನೆಲವೇ ಇದ್ದುದರಿಂದ ಲೊವೆಲ್ ಕೊಡುತ್ತಿದ್ದ ವೀಕ್ಷಣಾ ವರದಿಗಳಿಂದ ಏನೆಲ್ಲ ಬಗೆಯ ಊಹಾಪೋಹಗಳು ಎದ್ದವು. ಮಂಗಳ ಗ್ರಹ ಒಣಗುತ್ತಿದೆ. ಅಲ್ಲಿನ ಜೀವಿಗಳು ಪಾಪ, ಬಿಸಿಲಲ್ಲಿ ಬೇಯುತ್ತ, ಸಾವಿನಂಚಿನ ಗ್ರಹವನ್ನು ಹೇಗಾದರೂ ಉಳಿಸಿಕೊಳ್ಳಲು ಹೋರಾಡುತ್ತಿವೆ. ಏನೆಲ್ಲ ಶ್ರಮಪಟ್ಟು ಧ್ರುವ ಪ್ರದೇಶದ ಹಿಮವನ್ನು ಕರಗಿಸಿ ನದಿಗಳನ್ನಾಗಿ, ಕಾಲುವೆಗಳನ್ನಾಗಿ ನೀರು ಹರಿಸುತ್ತಿರುವ ಪ್ರಚಂಡ ಜೀವಿಗಳ ಬಗ್ಗೆ ಮರುಕ, ಭಯ ಎಲ್ಲ ಮೂಡಿದವು. ಭಯ ಏಕೆಂದರೆ ಅವರು ಕೊನೆಯ ಆಸರೆಯಾಗಿ ಎಲ್ಲಿ ನೆಗೆದು ಭೂಮಿಗೆ ಬಂದುಬಿಟ್ಟರೆ?
ಆ ದಿನಗಳಲ್ಲೇ ಹೊಸ ವೈಜ್ಞಾನಿಕ ಕಥಾ ಸಾಹಿತ್ಯವೂ ಸೃಷ್ಟಿಯಾಗತೊಡಗಿದ್ದವು. ಎಚ್.ಜಿ. ವೆಲ್ಸ್, ಜಾನ್ ಕಾರ್ಟರ್, ಎಡ್ಗರ್ ರೈಸ್ ಬರೊ ಇವರೆಲ್ಲರ ಕಾಲ್ಪನಿಕ ಪ್ರವಾಸ ಸಾಹಿತ್ಯಗಳು ಅಪಾರ ಜನಪ್ರಿಯತೆ ಪಡೆದವು. ಅನ್ಯಲೋಕದ ಜೀವಿಗಳು, ಅದರಲ್ಲೂ ಮಂಗಳ ಜೀವಿಗಳು ಬರಲಿವೆ ಅಥವಾ ಬಂದೇಬಿಟ್ಟಿವೆ ಎಂಬ ವದಂತಿ ಗಳೂ ಹಬ್ಬಿದ್ದವು. ವೆಲ್ಸ್ 1899ರಲ್ಲಿ ಬರೆದ ‘ವಾರ್ ಆಫ್ ದಿ ವರ್ಲ್ಡ್ಸ್’ (ಗ್ರಹಗಳ ಕದನ) ಎಂಬ ಕಾದಂಬರಿಯಂತೂ ಮನೆಮಾತಾಗಿತ್ತು. 1902ರಲ್ಲಿ ಫ್ರೆಂಚ್ ವಿಧವೆಯೊಬ್ಬಳು ಅನ್ಯಲೋ ಕದ ಜೀವಿಯೊಂದಿಗೆ ಮುಖಾಮುಖಿ ನಡೆಸುವ ಮೊದಲ ವ್ಯಕ್ತಿಗೆ ಒಂದು ಲಕ್ಷ ಫ್ರಾಂಕ್ ಬಹು ಮಾನ ಘೋಷಿಸಿದಳು. ‘ಮಂಗಳ ಜೀವಿಗಳನ್ನು ಬಿಟ್ಟು’ ಎಂಬ ಕರಾರು ಅದರಲ್ಲಿತ್ತು; ಏಕೆಂದರೆ, ಹೇಗಿದ್ದರೂ ಮಂಗಳಜೀವಿಗಳು ಬಂದೇ ಬರು ತ್ತಾರಲ್ಲ ಎಂಬ ದೃಢ ನಂಬಿಕೆ ಎಲ್ಲರಲ್ಲಿತ್ತು.
ಲೊವೆಲ್‌ನ ನೇರವೀಕ್ಷಣೆ ಮತ್ತು ವೆಲ್ಸ್‌ನ ಕತೆಗಳ ಪ್ರಭಾವದಿಂದ ದೂರದರ್ಶಕ ಯಂತ್ರ ಮತ್ತು ರಾಕೆಟ್ ನಿರ್ಮಾಣದ ಪೈಪೋಟಿಯೇ ಆರಂಭವಾಯಿತು. ಆಕಾಶ ಕಾಯಗಳ ಕುರಿತು ಚರ್ಚೆ, ಸಂವಾದಗಳು ಎಳೆಯರನ್ನು ಆಕರ್ಷಿಸ ತೊಡಗಿದವು. ರಷ್ಯದ ವಿಜ್ಞಾನ ಶಿಕ್ಷಕ ಸಿಲ್ಕೊವ್‌ಸ್ಕಿ ಎಂಬಾತ ಬಂದೂಕಿನ ಪುಡಿಯನ್ನೇ ಇಂಧನದಂತೆ ತುಂಬಿ ಮಂಗಳ ಗ್ರಹಕ್ಕೆ ನೆಗೆದು ಮರುದಾಳಿ ನಡೆಸುವ (1912) ಯೋಜನೆ ರೂಪಿಸಿದ್ದ. ಚಂದ್ರನಿಗಿಂತ ಮಂಗಳನೇ ಎಲ್ಲರ ಕಲ್ಪನೆಗೂ ಸವಾಲಾಗಿತ್ತು. ಮುಂದೆ 1922 ಮತ್ತು 23ರಲ್ಲಿ ಮಂಗಳ ಗ್ರಹ ಭೂಮಿಗೆ ಅತಿ ಸಮೀಪ ಬಂದಿದ್ದಾಗ ಅಮೆರಿಕ ಸರ್ಕಾರ ತನ್ನೆಲ್ಲ ಬಾನುಲಿ ಕೇಂದ್ರಗಳನ್ನೂ ಕೆಲವು ಗಂಟೆಗಳ ಕಾಲ ಸ್ಥಗಿತ ಮಾಡಿತ್ತು. ಮಂಗಳನ ಜೀವಿಗಳು ರೇಡಿಯೊ ಸಂಕೇತ ಕಳಿಸುತ್ತಿದ್ದಾರೆಯೇ ಎಂದು ಆಲಿಸಲು ರೇಡಿಯೊ ತಂತ್ರಜ್ಞರಿಗೆ ಆದೇಶ ನೀಡಿತ್ತು.
ಹತ್ತಿ ಗಿರಣಿಯ ಮಾಲಿಕ ಪರ್ಸಿವಾಲ್ ಲೊವೆಲ್‌ಗೆ ಹತ್ತಿದ ಗೀಳು ಕ್ರಮೇಣ ಹೊಸ ವಿಜ್ಞಾನ ತಂತ್ರಜ್ಞಾನ ಮಾರ್ಗವನ್ನೇ ಸೃಷ್ಟಿಸಿತು. ಆತನ ಊಹೆಗಳೆಲ್ಲ ತಪ್ಪೆಂದೂ ಮಂಗಳದಲ್ಲಿ ಯಾವುದೇ ಕೃತಕ ಕಾಲುವೆಗಳು ಇಲ್ಲವೆಂದೂ ಕ್ರಮೇಣ ಅರಿವಿಗೆ ಬಂತು ನಿಜ. ಮುಂದೆ ನಾಸಾ ವಿಜ್ಞಾನಿಗಳು 1960ರಲ್ಲಿ ಮರಿನರ್ ಸರಣಿಯ ನೌಕೆಗಳನ್ನು ಮಂಗಳನ ಸಮೀಪದ ಅಧ್ಯಯನಕ್ಕೆ ಕಳಿಸಿದ ಮೇಲಂತೂ ಕಾಲುವೆಗಳು ಶಾಶ್ವತವಾಗಿ ಜನಮಾನಸದಿಂದ ಮರೆಯಾದವು. ಹೀಗಿದ್ದರೂ ಖಗೋಲ ವಿಜ್ಞಾನಕ್ಕೆ ಸಮರ್ಥ ನೂಕುಬಲವನ್ನು ನೀಡಿದ ಲೊವೆಲ್‌ನನ್ನು ವಿಜ್ಞಾನಿಗಳು ಮರೆ ಯಲಿಲ್ಲ. ಆತನೇ ಸೂಚಿಸಿದ್ದ ಕೊನೆಯ ಗ್ರಹಕ್ಕೆ ಆತನದೇ ಸಂಕೇತಾಕ್ಷರ (ಪಿಎಲ್) ಜೋಡಿಸಿ ಪ್ಲುಟೊ ಎಂದು ನಾಮಕರಣ ಮಾಡಿದರು.
ಬೆಂಗಳೂರಿಗೆ ಈಗ ಬರೋಣ. ಇಲ್ಲೇ ರಾಷ್ಟ್ರ ಮಟ್ಟದ ಖಗೋಲ ಭೌತವಿಜ್ಞಾನ ಸಂಸ್ಥೆ ಇದೆ. ಸಮೃದ್ಧ ವಿಜ್ಞಾನ ಸಂಗ್ರಹಾಲಯ ಇದೆ. ನೆಹರೂ ತಾರಾಲಯ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲೇ ಇಸ್ರೊ ಇದೆ, ಅದರ ಮಾಜಿ ಅಧ್ಯಕ್ಷರು ಗಳು ಇಲ್ಲೇ ಆಗಾಗ ಸುದ್ದಿ ಮಾಡುತ್ತಿದ್ದಾರೆ. ಈಗಂತೂ ಮಂಗಳಯಾನದ ಆರಂಭದ ಯಶಸ್ಸಿನ ಜಯಘೋಷ ಮುಗಿಲಿಗೇರಿದೆ. ಹೀಗಿ ರುವಾಗ ಈ ನಗರದಲ್ಲಿ ಎಷ್ಟು ಜನರಲ್ಲಿ ಟೆಲಿಸ್ಕೋಪ್‌ಗಳಿವೆ ಎಂದು ಕೇಳಿದರೆ ನಿರಾಶೆ ಯಾಗುತ್ತದೆ. ಒಂದು ಮಾತು ನಿಜ: ಇಲ್ಲಿ ಬೆಳ ಕಿನ ಅಪಾರ ಮಾಲಿನ್ಯದಿಂದಾಗಿ ರಾತ್ರಿಯ ಆಕಾ ಶವೆಲ್ಲ ಸದಾಕಾಲ ಮಬ್ಬಾಗಿರುತ್ತದೆ. ಗ್ರಹತಾರೆ ಗಳನ್ನು ನೋಡಬೇಕೆಂದರೆ ಊರಾಚೆ ಹೋಗ ಬೇಕು. ಹಾಗೆಂದು ವಾರಾಂತ್ಯದಲ್ಲಿ ರಿಸಾರ್ಟ್ ಗಳ ಕಡೆ ಹೊರಡುವ ಸಹಸ್ರಾರು ಲಕ್ಷುರಿ ಕಾರುಗಳಲ್ಲಿ ಕ್ಯಾಮೆರಾ, ಟೆಂಟ್, ಥರ್ಮಾಸ್, ಆಂಗ್ಲಿಂಗ್ ಸಲಕರಣೆಗಳ ಮಧ್ಯೆ ಟೆಲಿಸ್ಕೋಪ್ ಇರುತ್ತದೆಯೆ?
ಇದ್ದುದರಲ್ಲಿ ಹವ್ಯಾಸಿಗಳು ಸಾಕಷ್ಟು ಉತ್ತಮ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲೇ ಟೆಲಿ ಸ್ಕೋಪ್ ನಿರ್ಮಿಸುವುದನ್ನು ಕಲಿಸುವ ಎಬಿಎ ಎಎಸ್ ಸಂಘ ಇದೆ. ಖಗೋಲ ವಿಸ್ಮಯಗಳ ಬಗ್ಗೆ ಎಳೆಯರಿಗೆ ಪಾಠ ಹೇಳಲೆಂದೇ ಸಾವಿರ ಸದಸ್ಯರ ಬೆಂಗಳೂರು ಆಸ್ಟ್ರಾನಾಮಿಕಲ್ ಸೊಸೈಟಿ (ಬಿಎಎಸ್) ಹೆಸರಿನ ಸಂಘ ಇದೆ. ಇದರ ಸದಸ್ಯರು ಆಗಾಗ ಶಾಲೆಗಳಿಗೆ ಹೋಗಿ ಮಕ್ಕಳನ್ನು ಒಂದುಗೂಡಿಸಿ ದೂರದ ಊರಿಗೆ ಕರೆದೊಯ್ದು ‘ಸ್ಟಾರ್‌ಪಾರ್ಟಿ’ ಮಾಡುತ್ತಾರೆ. ಇವರಲ್ಲಿ ಹೆಚ್ಚಿ ನವರೆಲ್ಲ ಸಾಫ್ಟ್‌ವೇರ್ ಉದ್ಯೋಗಿಗಳು. ಇವರು ಊರಾಚೆ ನಡೆಸುವ ಸ್ಟಾರ್‌ಪಾರ್ಟಿಗಳಲ್ಲಿ ಮಕ್ಕಳು, ಕೆಲಮಟ್ಟಿಗೆ ಪಾಲಕರು ಇರುತ್ತಾರೆ. ಆದರೆ ಶಿಕ್ಷಕರ ಸಮುದಾಯದಿಂದ ಮಾತ್ರ ಯಾರೊಬ್ಬರೂ ಬರುವುದಿಲ್ಲ ಎನ್ನುತ್ತಾರೆ, ಬಿಎಎಸ್‌ನ ಉತ್ಸಾಹಿ ಕಾರ್ಯಕರ್ತ ಕೀರ್ತಿ ಕಿರಣ್.
ಖಗೋಲರಂಗದ ಕಡೆ ಎಳೆಯರನ್ನು ಸೆಳೆಯು ವಲ್ಲಿ ನೆಹರೂ ತಾರಾಲಯ ಸಾಕಷ್ಟು ಕ್ರಿಯಾ ಶೀಲವಾಗಿದೆ. ಬೆಂಗಳೂರಿಗೆ ಮೋಜಿನ ಪ್ರವಾಸಕ್ಕೆ ಬರುವವರಿಗಾಗಿ ಇಲ್ಲಿ ದಿನವೂ ನಕ್ಷತ್ರ ಮಂಡಲದ ಪ್ರದರ್ಶನ ಇರುತ್ತದೆ. ಗ್ರಹಣ, ಶುಕ್ರ ಸಂಕ್ರಮಣದಂಥ ವಿಶೇಷ ಸಂದರ್ಭಗಳಲ್ಲಿ ವಿಶೇಷ ಕಾರ್ಯಕ್ರಮಗಳು ಇರುತ್ತವೆ. ತಾರಾಲ ಯದ ಬಿ.ಎಸ್. ಶೈಲಜಾ ಉಪನ್ಯಾಸಕಿಯಾಗಿ, ಲೇಖಕಿಯಾಗಿ, ರೇಡಿಯೊ ಟಿವಿ ಕಾರ್ಯಕ್ರಮ ಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ಪಾಲ್ಗೊಳ್ಳುತ್ತಾರೆ. ಹತ್ತು ವರ್ಷಗಳ ಹಿಂದೆ ಹತ್ತನೇ ತರಗತಿಯಲ್ಲಿ ಖಗೋಲ ಪಾಠಗಳು ಹೊಸದಾಗಿ ಸೇರ್ಪಡೆ ಯಾದಾಗ ಅನೇಕ ಶಿಕ್ಷಕರ ತಂಡಗಳಿಗೆ ಅವರು ತರಬೇತಿ ನೀಡಿದ್ದರು. ಆದರೆ ಇಷ್ಟೊಂದು ಸಂಖ್ಯೆಯ ಶಾಲೆಗಳಿಗೆ ಬೆಂಗಳೂರಿನ ಒಂದು ತಾರಾಲಯ ಎಲ್ಲಿ ಸಾಕಾಗುತ್ತದೆ ಎಂದು ಅವರು ಕೇಳುತ್ತಾರೆ. ವಿಜ್ಞಾನವನ್ನು ಜನಪ್ರಿಯ ಗೊಳಿಸ ಲೆಂದೇ ಸರ್ಕಾರದ ಧನ ಸಹಾಯ ಪಡೆಯುವ ಎಷ್ಟೊಂದು ಸಂಸ್ಥೆಗಳಿವೆ. ಆದರೆ ಆಕಾಶದ ಕಡೆ ಗಮನ ಕೊಟ್ಟಿದ್ದು ತೀರ ಕಡಿಮೆ. ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯಂತೂ ಎಳೆಯರನ್ನು ಸಂಪರ್ಕಿಸಿದ್ದೇ ಇಲ್ಲ.
ಹೀಗಿದ್ದರೂ ಅಲ್ಲೊಂದು ಇಲ್ಲೊಂದು ಮಿನುಗು ತಾರೆಗಳು ಒಬ್ಬಂಟಿಯಾಗಿ ಖಗೋಲ ಶಿಕ್ಷಣ ಕೇಂದ್ರದಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಕೋಲಾರದ ವಿಎಸ್‌ಎಸ್ ಶಾಸ್ತ್ರಿಯವರು ಬ್ಯಾಂಕ್ ಅಧಿಕಾರಿಯಾಗಿದ್ದರೂ ಶಾಲಾ ಶಿಕ್ಷಕ ರಿಗೆ ತಾವೇ ಆಗಾಗ ತರಬೇತಿ ಶಿಬಿರ ಏರ್ಪಡಿ ಸುತ್ತಿದ್ದಾರೆ. ಭೌತವಿಜ್ಞಾನ ನಿವೃತ್ತ ಪ್ರೊಫೆಸರ್ ಎಚ್.ಆರ್. ರಾಮಕೃಷ್ಣರಾವ್ ಹಾಗೂ ಆಕಾಶ ವಾಣಿಯ ನಿವೃತ್ತ ನಿರ್ದೇಶಕ ಎಚ್.ಆರ್. ಕೃಷ್ಣಮೂರ್ತಿ ಟೆಲಿಸ್ಕೋಪ್ ಇಲ್ಲದೆಯೂ ಬಾನಂಗಳದ ರಂಗೋಲಿಯನ್ನು ಚಿತ್ತಾಕರ್ಷಕ ವಾಗಿ ವರ್ಣಿಸುತ್ತಾರೆ.
‘ಬರಿಗಣ್ಣಲ್ಲಾದರೂ ಆಕಾಶದತ್ತ ನೋಡಿ!’ ಎಂದರೆ ತಲೆ ಎತ್ತಿ ನೋಡುವವರೇ ಕಡಿಮೆ ಎನ್ನು ತ್ತಾರೆ ಶೈಲಜಾ. ಆದರೆ ಪಂಚಾಂಗ ನೋಡಿ, ಅಮಾವಾಸ್ಯೆ, ಗ್ರಹಣ, ರಾಹುಕೇತುಗಳ ಭ್ರಮೆ ಯಲ್ಲಿ ಜನರನ್ನು ಮುಳುಗಿಸಿ ತೇಲಿಸಲೆಂದು ಟಿ.ವಿ ಸ್ಟುಡಿಯೊಗಳಿಗೆ ಲಗ್ಗೆ ಇಡುವ ಜ್ಯೋತಿಷ ಪಂಡಿತರ ಸಂಖ್ಯೆ ಮಾತ್ರ ಹೇರಳ ಇದೆ. ಅವರಿಗೆ ಪದೇ ಪದೇ ಮಣೆ ಹಾಕುವ ಟಿ.ವಿ ಚಾನೆಲ್‌ಗಳ ಪರದಾಟ ಮೊನ್ನೆ ಮಂಗಳಯಾನದ ಉಡ್ಡಾಣದ ಮುಂಚೆ ದಯನೀಯವಾಗಿತ್ತು. ಇಷ್ಟು ದೊಡ್ಡ ನಗರದಲ್ಲಿ, ವಿಜ್ಞಾನದ ರಾಜ ಧಾನಿಯಲ್ಲಿ, ಮಂಗಳಯಾನ ಕುರಿತು ಕನ್ನಡದಲ್ಲಿ ವಿವರಿಸಬಲ್ಲ ಹತ್ತು ಪರಿಣತರು ಅವರಿಗೆ ಸಿಕ್ಕಿರಲಿಲ್ಲ. ಹಾಲ್ಡೊಡ್ಡೇರಿ ಸುಧೀಂದ್ರ, ಟಿ.ಆರ್. ಅನಂತರಾಮು, ಪಿ.ಆರ್. ವಿಶ್ವನಾಥ್, ಯುವ ಹವ್ಯಾಸಿ ಕೀರ್ತಿ ಕಿರಣ್... ಹೀಗೆ ಹೆಚ್ಚೆಂದರೆ ಐದೊ ಆರು ತಜ್ಞರನ್ನು ಮುಂಗಡ ಬುಕ್ಕಿಂಗ್ ಮಾಡುವಲ್ಲಿ ಚಾನೆಲ್‌ಗಳ ಮಧ್ಯೆ ಪೈಪೋಟಿಯೇ ಏರ್ಪಟ್ಟಿತ್ತು. ದೇಶದ ಅತಿ ಹೆಚ್ಚು ಸಂಖ್ಯೆಯ ಖಗೋಲ ತಜ್ಞರಿರುವ ನಗರದಲ್ಲಿ ಆ ಅಮೋಘ ಬ್ರಹ್ಮಾಂಡದ ಬಗ್ಗೆ ಸಮರ್ಥವಾಗಿ ಹೇಳಬಲ್ಲ ಹತ್ತು ಜನ ಯಾಕಿಲ್ಲ ಸರ್ ಎಂದು ಸುವರ್ಣ ವಾಹಿನಿಯ ರಜನಿ ಅಲವತ್ತುಕೊಳ್ಳುತ್ತಿದ್ದರು.
ಗ್ರಹನಕ್ಷತ್ರಗಳ ಬಗ್ಗೆ ಈ ದುಃಸ್ಥಿತಿಯಿದ್ದರೆ ಇತ್ತ ಗ್ರಹ ಕುಂಡಲಿಗಳ ಬಗ್ಗೆ, ಅದೃಷ್ಟ ನಕ್ಷತ್ರಗಳ ಬಗ್ಗೆ, ರುದ್ರಾಕ್ಷಿ ರತ್ನಗಳ ಬಗ್ಗೆ, ವಾಸ್ತುವಿಕಾರಗಳ ಬಗ್ಗೆ ಕತೆಕಟ್ಟಿ ಹೇಳುತ್ತ ಜನರನ್ನು ಮರುಳು ಮಾಡ ಬಲ್ಲ ಢೋಂಗಿ ತಜ್ಞರ ಸಂಖ್ಯೆ ಬೀದಿ ಬೀದಿಯಲ್ಲಿ ಹೆಚ್ಚುತ್ತಿದ್ದಾರೆ. ಅಂಥವರಿಗೆಲ್ಲ ಆದರ್ಶವೆಂಬಂತೆ ಇಸ್ರೊ ಅಧ್ಯಕ್ಷರು ಉಪಗ್ರಹದ ಪ್ರತಿಕೃತಿಗೆ ಪೂಜೆ ಮಾಡಿಸಿದ್ದು ವಿಜ್ಞಾನಾಸಕ್ತರಿಗೆ ನುಂಗಲಾರದ ತುತ್ತಾಗಿತ್ತು. ‘ಮಂಗಳನೌಕೆಯೇನೊ ಕ್ಷೇಮ ವಾಗಿ ಉಡಾವಣೆಯಾಯ್ತು ಆದರೆ ವಿಜ್ಞಾನಿ ಗಳೆಂದರೆ ವಿಚಾರವಂತರೆಂಬ ನಮ್ಮ ನಂಬಿಕೆಗಳ ನ್ನೆಲ್ಲ ಅಧ್ಯಕ್ಷರು ಉಡಾಯಿಸಿಬಿಟ್ರಲ್ರೀ!’ ಎಂದು ತುಮಕೂರಿನ ‘ಪ್ರಜಾವಾಣಿ’ ಓದುಗ ಚಂದ್ರ ಕಾಂತ್ ವಿಷಾದದಿಂದ ಹೇಳುವಂತಾಯಿತು.
ನಾವೆಲ್ಲ ಅಷ್ಟೆಲ್ಲ ಆರಾಧಿಸುವ ಅಮೆರಿಕದಲ್ಲಿ ಮನೆಮನೆಗಳಲ್ಲಿ ಟೆಲಿಸ್ಕೋಪ್‌ಗಳಿರುತ್ತವೆ. ನಮ್ಮಲ್ಲಿ ಕುಜ, ಅಂಗಾರಕಗಳೇನೊ ಮನೆ ಮನೆಯ ಕುಂಡಲಿಗಳಲ್ಲಿದ್ದಾರೆ. ಆದರೆ ಮಂಗಳ ನಮಗೆ ಕೈಗೆಟಕುವ ದಿನ ತುಂಬಾ ದೂರವಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.