ಅನೇಕ ಹೈಟೆಕ್ ಆಸ್ಪತ್ರೆಗಳು ನತದೃಷ್ಟ ರೋಗಿಗಳನ್ನು ಬದುಕಿಸಲೂ ಆಗದೆ, ಸಾಯಲೂಬಿಡದೆ ಕುಟುಂಬದ ಮೇಲೂ ಲಕ್ಷಾಂತರ ಸಾಲ ಬೀಳುವಂತೆ ಮಾಡುತ್ತಿವೆ. ಈಗ ಕೊಂಚ ನೆಮ್ಮದಿ ನೀಡುವ ಕೆಲಸವೊಂದು ಕರ್ನಾಟಕ ಸರ್ಕಾರದಿಂದ ಆಗಿದೆ. ನನ್ನ ಸಾವು ಹೇಗಿರಬೇಕು ಎಂಬುದರ ಕುರಿತು ನಾವು ಇಂದೇ ಮರಣಪತ್ರವನ್ನು ಬರೆದಿಡಬಹುದು. ಅದನ್ನು ನೋಂದಣಿ ಮಾಡಿಸಬಹುದು.
ನೊಬೆಲ್ ಪ್ರಶಸ್ತಿ ಪುರಸ್ಕೃತ ಜೀವವಿಜ್ಞಾನಿ ವೆಂಕಿ ರಾಮಕೃಷ್ಣನ್ ಬರೆದ ‘ನಾವೇಕೆ ಸಾಯುತ್ತೇವೆ?’ (ವೈ ವಿ ಡೈ?) ಹೆಸರಿನ ಪುಸ್ತಕ ಹೋದ ತಿಂಗಳು ಜಯಪುರ ಮತ್ತು ಕೋಲ್ಕತ್ತ ಸಾಹಿತ್ಯ ಸಮಾವೇಶಗಳಲ್ಲಿ ಬಹಳಷ್ಟು ಚರ್ಚೆಗೆ ಬಂತು. ಸಾಹಿತ್ಯ ಸಮಾವೇಶಗಳಲ್ಲಿ ಇಂಥ ವಿಷಯಗಳಿಗೂ ಆದ್ಯತೆ ಸಿಗುತ್ತಿದೆ ಎನ್ನುವುದೇ ವಿಶೇಷ. ವೆಂಕಿಯವರು ಇಲ್ಲಿಗೆ ಬಂದು, ಸಾವಿನ ನಾನಾ ಬಗೆಯ ವೈಚಿತ್ರ್ಯಗಳ ಕುರಿತು ಅನೇಕ ಸೊಗಸಾದ, ನಿಚ್ಚಳ ವಿಡಿಯೊ ಸಂದರ್ಶನ ನೀಡಿದ್ದಾರೆ. ಸಾವನ್ನು ಮುಂದೂಡುವ ಮತ್ತು ಅಷ್ಟೂ ವರ್ಷ ಆರೋಗ್ಯದ ಜೀವನ ನಡೆಸುವ ಬಗ್ಗೆ ಎಲ್ಲ ಹಿರಿಯರಿಗೂ ಆಸಕ್ತಿ ಇದೆ. ಜಗತ್ತಿನ ಎಲ್ಲ ಶ್ರೀಮಂತರೂ ಅದನ್ನೇ ಬಯಸುತ್ತಾರೆ. ಇಲಾನ್ ಮಸ್ಕ್ ‘ನಾನು ಮಂಗಳಲೋಕದಲ್ಲೇ ಸಾಯಲು ಬಯಸುತ್ತೇನೆ, ಆದರೆ ಅಲ್ಲಿನ ನೆಲಕ್ಕೆ ಧೊಪ್ಪೆಂದು ಅಪ್ಪಳಿಸಿ ಅಲ್ಲ’ ಎಂದು ಹೇಳಿದ್ದಾರೆ. ಅದು ಡಬಲ್ ಕನಸು. ಮಂಗಳ ಲೋಕಕ್ಕೆ ಹೋಗಬೇಕು; ಅಲ್ಲಿ ದೀರ್ಘ ವಾಸ್ತವ್ಯ ಹೂಡಬೇಕು ಎಂಬಂಥ ಜೋಡಿ ಕನಸನ್ನು ಜಗತ್ತಿನ ಅತಿ ಶ್ರೀಮಂತ ಮಾತ್ರ ಕಾಣಲು ಸಾಧ್ಯ. ಆದರೆ ಎಲ್ಲ ಶ್ರೀಮಂತರೂ ಸುದೀರ್ಘ, ಸುಖಮಯ ಜೀವನ ನಡೆಸಲು, ಆ ಕುರಿತು ಸಂಶೋಧನೆಗೆ ಹಣ ಹೂಡಲು ಬಯಸುತ್ತಾರೆ. ಅದು ಸಹಜವೇ ತಾನೆ? ಯುವಕರಾಗಿದ್ದಾಗ ಧನಿಕರಾಗಬೇಕು ಎಂಬ ಕನಸು; ಧನಿಕರಾದ ನಂತರ ಯುವಕರಾಗಬೇಕು ಎಂಬ ಯಯಾತಿಯ ಕನಸು!
ಅದೇ ಕಾರಣದಿಂದಲೇ ವಿವಿಧ ದೇಶಗಳಲ್ಲಿ ಇಂದು 700ಕ್ಕೂ ಹೆಚ್ಚು ಬಯೊಟೆಕ್ ಕಂಪನಿಗಳು ವೃದ್ಧಾಪ್ಯವನ್ನು ಮುಂದೂಡುವ ವಿಷಯದಲ್ಲಿ ಸಂಶೋಧನೆ ನಡೆಸುತ್ತಿವೆ. ಈ ಕ್ಷೇತ್ರದಲ್ಲಿ ಖ್ಯಾತಿ ಪಡೆದ ವಿಜ್ಞಾನಿಗಳೆಲ್ಲ ಕಂಪನಿಗಳ ಷೇರುದಾರರೇ ಆಗಿದ್ದಾರೆ. ಯಾರು ಏನು ಸಂಶೋಧನೆ ಮಾಡುತ್ತಿದ್ದಾರೆ, ಯಾವ ಕಂಪನಿ ಯಶಸ್ಸಿನತ್ತ ಹೆಜ್ಜೆ ಹಾಕುತ್ತಿದೆ ಎಂಬುದನ್ನು ಹುಡುಕುವುದು ಸುಲಭದ ಸಂಗತಿ ಅಲ್ಲ. ಪತ್ರಕರ್ತರಿಗಂತೂ ಸಾಧ್ಯವಿಲ್ಲ. ಈ ಕ್ಷೇತ್ರದಲ್ಲಿ ಪಳಗಿದವರನ್ನೇ ಕೇಳೋಣವೆಂದರೆ ಬಂಡವಾಳ ಹೂಡಿದವರು ಈಗಲೇ ಬಾಯಿ ಬಿಡುವುದಿಲ್ಲ. ಬಾಯಿ ಬಿಟ್ಟವರನ್ನು ನಂಬುವಂತಿಲ್ಲ. ಈ ಸಂದಿಗ್ಧದಲ್ಲಿ ನೆರವಿಗೆ ಬಂದವರು ವೆಂಕಿ ರಾಮಕೃಷ್ಣನ್. ಅವರು ಬಂಡವಾಳ ಹಾಕಿಲ್ಲ. ಆದರೆ ಈಗಿನ ಸಂಶೋಧನೆಗಳನ್ನು ತಜ್ಞದೃಷ್ಟಿಯಿಂದ ನೋಡಿ ಈ ಪುಸ್ತಕವನ್ನು ಬರೆದಿದ್ದಾರೆ. ಅದರ ಬಗ್ಗೆ ಅವರೊಂದಿಗೆ ನಡೆಸಿದ ಅನೇಕ ಸಂದರ್ಶನಗಳಲ್ಲಿ ಮಧ್ಯೆ ಮಧ್ಯೆ ವೆಂಕಿಯ ತಮಾಷೆಯ (ಪ್ರಾಯಶಃ ಪುಸ್ತಕದಲ್ಲಿ ಹೇಳಿಲ್ಲದ) ಮಾತುಗಳೂ ಬಂದಿವೆ. ಉದಾ: 100-150 ವರ್ಷ ಬದುಕುವ ಉಪಾಯ ಸಿಕ್ಕೇ ಬಿಟ್ಟಿತು ಅನ್ನಿ; ಅದು ಒಳ್ಳೆಯದೆಂದು ಹೇಳುತ್ತೀರಾ? ‘ಟ್ರಂಪ್, ಪುಟಿನ್ ಅಂಥವರು ಆಗಲೂ ಆಳ್ವಿಕೆ ನಡೆಸುವುದನ್ನು ಜನರು ಬಯಸುತ್ತಾರಾ’ ಎಂದು ಕೇಳಿದ್ದಾರೆ.
ಆರೋಗ್ಯಪೂರ್ಣ ದೀರ್ಘಾಯಸ್ಸಿನ ಬಗ್ಗೆ ಧನಿಕರ ಕಾತರ ಎಷ್ಟಿದೆ ಎಂದರೆ ಆ ರಂಗದಲ್ಲಿ ಇನ್ನೂ ಪೂರ್ತಿ ಸಂಶೋಧನೆ ಆಗಿಲ್ಲದಿದ್ದರೂ ಸರ್ಕಾರಿ ಮಾನ್ಯತೆ ಸಿಕ್ಕಿಲ್ಲವಾದರೂ ಈಗಲೇ ಅಂಥ ಚಿಕಿತ್ಸೆಯನ್ನು ತಮ್ಮ ಮೇಲೆಯೇ ಪ್ರಯೋಗ ಮಾಡಿಕೊಳ್ಳಹೊರಟವರೂ ಇದ್ದಾರೆ; ಅವರಲ್ಲಿ ಸಂಶೋಧನಾನಿರತ ವಿಜ್ಞಾನಿಗಳೂ ಇದ್ದಾರೆ. ಉದಾಹರಣೆಗೆ, ನಮ್ಮ ಜೀವಕೋಶದಲ್ಲಿರುವ ವರ್ಣತಂತುವಿನ ತುದಿಯಲ್ಲಿ ಟೆಲೊಮೆರೇಸ್ ಎಂಬ ಬಾಲ ಇರುತ್ತದೆ. ಪ್ರತಿ ಬಾರಿ ಜೀವಕೋಶ ವಿಭಜನೆ ಆಗುವಾಗ ಟೆಲೊಮೆರೇಸ್ ಬಾಲದ ಒಂದು ಚೂರು ಭಗ್ನವಾಗುತ್ತದೆ. ಪದೇ ಪದೇ ಹೀಗೆ ಆಗುತ್ತ ವಯಸ್ಸಾದಂತೆಲ್ಲ ಟೆಲೊಮೆರೇಸ್ ಮೊಂಡಾಗಿ, ಸಾವು ಸಮೀಪಿಸುತ್ತದೆ. ಆ ಬಾಲಕ್ಕೆ ಇನ್ನಷ್ಟು ನ್ಯೂಕ್ಲಿಯೊಟೈಡ್‌ಗಳನ್ನು ಸೇರಿಸಿ ಅದನ್ನು ಮತ್ತೆ ಸುಸ್ಥಿತಿಗೆ ತರಬಲ್ಲ ಸಂಶೋಧನೆಗಳು ಬಹಳಷ್ಟು ಪ್ರಗತಿ ಸಾಧಿಸಿವೆ. ಲ್ಯಾಬಿನ ಇಲಿಗಳು ಅಂಥ ಚುಚ್ಚುಮದ್ದು ಪಡೆದು ಯೌವನ ಪಡೆಯುತ್ತಿವೆ ಎಂದು ಗೊತ್ತಾಗಿದ್ದೇ ತಡ, ಅದನ್ನು ಮನುಷ್ಯರ ಮೇಲೆ ಪ್ರಯೋಗಿಸಿ ಅದು ಸುರಕ್ಷಿತವೆಂದು ಸರ್ಕಾರಿ ಅನುಮತಿ ಸಿಗುವ ಮೊದಲೇ ಕಳ್ಳಮಾರ್ಗದಲ್ಲಿ ಮಾರುಕಟ್ಟೆಗೆ ಆಗಲೇ ಬಂದಾಗಿದೆ. ‘ನಿಲ್ರೀಪ್ಪಾ, ಅದು ಕ್ಯಾನ್ಸರ್ ಕೋಶಗಳಿಗೂ ಬಲವರ್ಧನೆ ನೀಡುತ್ತದೆ’ ಎಂಬ ಎಚ್ಚರಿಕೆಗೂ ಕ್ಯಾರೇ ಅನ್ನದೆ ಹಣ ಬಾಚಿಕೊಳ್ಳುವವರು ನುಗ್ಗುತ್ತಿದ್ದಾರೆ. ಉದಾಹರಣೆ 2: ಎಳೆಯರ ದೇಹದ ರಕ್ತವನ್ನು ಹಿರಿಯರಿಗೆ ಸೇರಿಸಿದರೆ ಹೊಸ ಚೈತನ್ಯ ಬರುತ್ತದೆಂಬುದು ಗೊತ್ತಾಗಿ ಥಾಮಸ್ ಪರ್ಲ್ಸ್ (Perls) ಹೆಸರಿನ ವಿಜ್ಞಾನಿಯೊಬ್ಬ ತನ್ನ ಮಗನ ರಕ್ತವನ್ನು ತನಗೂ ತನ್ನಪ್ಪನಿಗೂ ಸೇರಿಸಿದ ಕತೆ ಇದೆ. ಈತನ ‘ಲಿವಿಂಗ್‌ಟು100 ಡಾಟ್‌ಕಾಮ್’ಗೆ ಹೋಗಿ ಅಲ್ಲಿರುವ ಪ್ರಶ್ನಾವಳಿಗಳನ್ನು ತುಂಬಿ ನೀವೇ ನಿಮ್ಮ ಆರೋಗ್ಯವಂತ ಆಯಸ್ಸಿನ ಲೆಕ್ಕ ಹಾಕಬಹುದು.
ನಿಸರ್ಗ ಸ್ಥೂಲ ನಿಯಮದ ಪ್ರಕಾರ ದೊಡ್ಡ ಗಾತ್ರದ ಜೀವಿಗಳು ದೀರ್ಘಕಾಲ ಬದುಕುತ್ತವೆ. ಹಣ್ಣಿನ ನೊಣಗಳ ಜೀವಿತಾವಧಿ ಆರು ಗಂಟೆ ಅಷ್ಟೆ. ಭಾರೀ ಗಾತ್ರದ ತಿಮಿಂಗಿಲಗಳು 180-200 ವರ್ಷ ಬದುಕುತ್ತವೆ. ಹಾಗೆಂದು ಈ ನಿಯಮವೂ ಸಾರ್ವತ್ರಿಕ ಏನಲ್ಲ. ಹೆಗ್ಗಣಗಳು 2-3 ವರ್ಷ ಬದುಕುತ್ತವೆ. ಆದರೆ ಅದೇ ಗಾತ್ರದ ಬಾವಲಿಗಳು 40 ವರ್ಷ ಬದುಕುತ್ತವೆ. ತಿಮಿಂಗಿಲಗಳಿಗೆ ಹೋಲಿಸಿದರೆ ಬುಟ್ಟಿಗಾತ್ರದ ಆಮೆಗಳು 400 ವರ್ಷ ಬದುಕುತ್ತವೆ. ವಿಜ್ಞಾನಿಗಳು ದೀರ್ಘಾಯಸ್ಸಿನ ಇಂಥ ಗುಟ್ಟನ್ನು ಬಗೆಯಲೆಂದು ಅತಿ ಚಿಕ್ಕ, ಅತಿಸೂಕ್ಷ್ಮ ಜೀವಿಗಳನ್ನೂ ತಿಮಿಂಗಿಲದ ಅತಿಸೂಕ್ಷ್ಮ ಜೀವಕೋಶವನ್ನೂ ನೋಡುತ್ತಿದ್ದರೆ ಇನ್ನು ಕೆಲವರು ಶತಾಯುಷಿ ಮನುಷ್ಯರ ಜೀವನಕ್ರಮಗಳನ್ನೂ ವಂಶಾವಳಿಗಳನ್ನೂ ವಿಶ್ಲೇಷಣೆ ಮಾಡುತ್ತಿದ್ದಾರೆ. ಇವರ ವರದಿಗಳನ್ನು ಆಧರಿಸಿ ಅಸಂಖ್ಯ ಪುಸ್ತಕಗಳು, ವಿಡಿಯೊ ಪಾಠಗಳು, ಜಾಲತಾಣಗಳು ಸೃಷ್ಟಿಯಾಗಿವೆ. ಮಿತಾಹಾರ, ಸಸ್ಯಾಹಾರ, ವೀಗನ್ ಆಹಾರ, ನಿತ್ಯನಡಿಗೆ, ದಿನದ 24 ಗಂಟೆಗಳಲ್ಲಿ ಐದು ಗಂಟೆಗಳ ಅವಧಿಯಲ್ಲಿ ಮಾತ್ರ ಆಹಾರ ಸೇವನೆ ಮಾಡಬೇಕೆಂಬ ‘ಅರೆಬರೆ ಹಸಿವೆ’ ತಂತ್ರ... ಸಲಹೆಗಳು ನೂರಲ್ಲ, ಇನ್ನೂರಲ್ಲ. ಸ್ವತಃ ವೆಂಕಿ (71) ಕೂಡ ತಮ್ಮ ತಂದೆ ಈ 98ರ ವಯಸ್ಸಿನಲ್ಲೂ ತಮ್ಮ ಬಟ್ಟೆಯನ್ನು ತಾವೇ ಒಗೆದುಕೊಳ್ಳುತ್ತ ದಿನವೂ ಮೂರು ಕಿಲೊಮೀಟರ್ ಕಾಲ್ನಡಿಗೆ ಮಾಡುವ ಬಗ್ಗೆ ಹೇಳಿಕೊಂಡಿದ್ದಾರೆ. ಟಿ.ವಿ, ಮೊಬೈಲ್ ಫೋನ್ ಮುಂದೆ ಒಂಟಿಯಾಗಿ ಜೀವಿಸಬೇಡಿ; ಜನರ ಮಧ್ಯೆ ಲವಲವಿಕೆಯಿಂದ ಇದ್ದರೆ ಸಾವನ್ನು ಮುಂದೂಡಬಹುದು ಎಂಬ ಸಲಹೆ ನೀಡಿದ್ದಾರೆ.
ಈ ಮಧ್ಯೆ ಇನ್ನೊಂದು ಹೊಸ ಸಂಗತಿ ಬೆಳಕಿಗೆ ಬಂದಿದೆ: ಕಳೆದ ವಾರದ ‘ನ್ಯೂ ಸೈಂಟಿಸ್ಟ್’ ಪತ್ರಿಕೆಯ ಮುಖ್ಯ ಲೇಖನದ ಪ್ರಕಾರ, ನಮ್ಮ ಕರುಳಿನಲ್ಲಿ ವಾಸಿಸುವ ಸೂಕ್ಷ್ಮಜೀವಿಗಳೇ ಕೊನೆಗೆ ನಮ್ಮ ಪ್ರಾಣ ಹೀರುತ್ತವೆ. ಬಾಲ್ಯದಿಂದ ದೊಡ್ಡ ಕರುಳಿನಲ್ಲಿ ಕೂತ ಮಿತ್ರಜೀವಿಗಳ ಸಂಖ್ಯೆ ವಯಸ್ಸಾಗುತ್ತ ಹೋದಂತೆ ಕಡಿಮೆಯಾಗುತ್ತ ಅವುಗಳ ಜಾಗದಲ್ಲಿ ಶತ್ರುಜೀವಿಗಳ ಸಂಖ್ಯೆ ಹೆಚ್ಚುತ್ತದೆ. ಕೊನೆಗೆ ನಮ್ಮ ಪ್ರಾಣ ಹೀರಿ, ದಿಢೀರ್ ರಕ್ತದ ಮೂಲಕ ದೇಹಕ್ಕೆಲ್ಲ ವ್ಯಾಪಿಸುತ್ತವೆ. ಮೃತದೇಹ ಊದಿಕೊಳ್ಳುತ್ತದೆ. ದೇಹದೊಳಗಿನ ಆ ಕ್ಷಣದ ಸಮರಾಂಗಣ ರೋಚಕವಾಗಿರುತ್ತದೆ. ಅದನ್ನೂ ಕೊನೆಗೊಳಿಸುವ ಔಷಧ ಸಿದ್ಧವಾಗುತ್ತಿದೆ.
ಏನೋ, ಅಂತೂ ಆರೋಗ್ಯವಂತರಾಗಿ ನೂರು ವರ್ಷ ಬದುಕಬಹುದೆಂದು ನೂರಕ್ಕೆ ನೂರು ಪಾಲು ಗ್ಯಾರಂಟಿ ಕೊಡುವ ಔಷಧ ಬಂತೆಂದು ಊಹಿಸಿಕೊಳ್ಳಿ. ಆಗ ಈಗಿನ ಈ ನರ್ಸಿಂಗ್ ಹೋಮ್‌ಗಳು, ಕ್ಯಾನ್ಸರ್ ಆಸ್ಪತ್ರೆಗಳು, ಹೈಟೆಕ್ ಐಸಿಯುಗಳು, ಹಾರ್ಮೋನ್‌ಪೂರಣ ಥೆರಪಿಗಳು, ಹೊಸ ಮೂಳೆ ಜೋಡಿಸುವ ರೋಬಾಟಿಕ್ ಸರ್ಜರಿಗಳು, ಗಾಲಿಕುರ್ಚಿ ಕಂಪನಿಗಳೂ 100% ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ಬಂದೀತು. ಇವು ತಮ್ಮ ಬಿಸಿನೆಸ್ಸನ್ನು ದೀರ್ಘಕಾಲ ಉಳಿಸಿಕೊಳ್ಳಲು ಇನ್ನೇನೇನು ‘ಔಷಧ’ ಹುಡುಕಿಕೊಳ್ಳುತ್ತವೊ? ಈ ಸಮರಾಂಗಣವೂ ರೋಚಕವೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.