146 ಕೋಟಿ ಜನರ ಶುಭ ಹಾರೈಕೆಗಳ ಜೊತೆಗೆ ಶುಭಾಂಶು ಶುಕ್ಲಾ (ಶುಕ್ಸ್) ಕಕ್ಷೆಗೆ ಹೊರಟಿದ್ದಿದ್ದರೆ ಇಷ್ಟು ಹೊತ್ತಿಗೆ ಭೂಮಿಯ ಗುರುತ್ವ ವಲಯವನ್ನು ದಾಟಿ, ನಾಳೆ ಬಾಹ್ಯಾಕಾಶ ನಿಲ್ದಾಣವನ್ನು (ಇಂಟರ್‌ನ್ಯಾಶನಲ್ ಸ್ಪೇಸ್ ಸ್ಟೇಶನ್–ISS) ತಲುಪಿರುತ್ತಿದ್ದರು. ಆದರೆ ಪಯಣ ಮುಂದಕ್ಕೆ ಹೋಗಿದೆ. ಮುಂದಿನ ಮುಹೂರ್ತ ಎಂದೇ ಬರಲಿ, ಖಾಸಗಿ ನೌಕೆಯ ಮೇಲೆ ಪಯಣಿಸಲಿರುವ ಮೊದಲ ಭಾರತೀಯ ಬಾಹ್ಯಾಕಾಶ ಯಾತ್ರಿ ಇವರಾಗುತ್ತಾರೆ. ನಮ್ಮ ಸರ್ಕಾರ ಇವರಿಗೆಂದು ₹550 ಕೋಟಿ ಶುಲ್ಕವನ್ನು ಕಟ್ಟಿದೆ. ಅದೇನೂ ದೊಡ್ಡ ಮೊತ್ತವಲ್ಲ. ಏಕೆಂದರೆ ಇನ್ನೆರಡು ವರ್ಷಗಳ ನಂತರ ನಮ್ಮದೇ ‘ಗಗನಯಾನ್’ ನೌಕೆಯಲ್ಲಿ ಮೇಲೇರಲೆಂದು ಆಯ್ಕೆಯಾದ ನಾಲ್ವರಲ್ಲಿ ಇವರೇ ಮೊದಲ ‘ಅನುಭವಿ’ ಪಯಣಿಗರಾಗಲಿದ್ದಾರೆ.
ಭಾರತದ ಮಟ್ಟಿಗೆ ರಾಕೇಶ್ ಶರ್ಮಾ ನಂತರ ಇವರು ಎರಡನೆಯ ಗಗನಯಾತ್ರಿಯಾದರೂ, ಇಂದು ಬಾಹ್ಯಾಕಾಶ ತಲುಪಿದ್ದಿದ್ದರೆ ಜಾಗತಿಕ ಲೆಕ್ಕದಲ್ಲಿ ಕ್ಯಾಪ್ಟನ್ ಶುಕ್ಲಾ 725ನೆಯವರಾಗುತ್ತಿದ್ದರು. ಇದು ನಿಖರ ಸಂಖ್ಯೆಯಲ್ಲ; ಅಮೆರಿಕದ ಲೆಕ್ಕದಲ್ಲಿ ನೆಲದಿಂದ 80 ಕಿ.ಮೀ. (50 ಮೈಲ್) ಆಚಿನದು ಬಾಹ್ಯಾಕಾಶ ಎನಿಸುವುದರಿಂದ, ಅಲ್ಲಿಗೆ ಇದುವರೆಗೆ 721 ಜನರು ಹೋಗಿ ಬಂದಿದ್ದಾರೆ.
ಎಂಥ ವಿಸ್ಮಯ ನೋಡಿ: ಬೆಂಗಳೂರಿನಿಂದ ತುಮಕೂರಿಗೆ ಹೋದಷ್ಟೇ ದೂರವನ್ನು ಲಂಬವಾಗಿ ಮೇಲಕ್ಕೆ ಕ್ರಮಿಸಿದರೆ ಅದು ಬಾಹ್ಯಾಕಾಶ! ಹಾಗಿದ್ದರೆ, ಮುಂದೊಂದು ದಿನ ಬೆಂಗಳೂರಿನ ಒಂದು ಮೆಟ್ರೊ ನಿಲ್ದಾಣವನ್ನು ಬಾಹ್ಯಾಕಾಶದಲ್ಲೂ ಕಟ್ಟಬಹುದೇ ಎಂದು ನೀವು ಕೇಳಬಹುದು. ಕಟ್ಟಿದರೂ ಅದು ಅಲ್ಲಿ ನಿಂತಲ್ಲೇ ನಿಲ್ಲುವ ಬದಲು, ಗಂಟೆಗೆ 28 ಸಾವಿರ ಕಿ.ಮೀ. ವೇಗದಲ್ಲಿ ಭೂಪ್ರದಕ್ಷಿಣೆ ಹಾಕುತ್ತಿರುತ್ತದೆ. ನಿಂತಲ್ಲೇ ನಿಲ್ಲಬೇಕೆಂದರೆ (ನಿಂತಂತೆ ಕಾಣಬೇಕೆಂದರೆ) ಅದನ್ನು ಸುಮಾರು 36 ಸಾವಿರ ಕಿ.ಮೀ. ಎತ್ತರದ ಭೂಸ್ಥಿರ ಕಕ್ಷೆಯಲ್ಲಿ ಕಟ್ಟಿ ನಿಲ್ಲಿಸಬೇಕಾಗುತ್ತದೆ.
ಶುಭಾಂಶು ತಲುಪಬೇಕಿದ್ದ ‘ಐಎಸ್‌ಎಸ್’ ನಿಲ್ದಾಣ ನಮ್ಮಿಂದ ಕೇವಲ 400 ಕಿ.ಮೀ. ಎತ್ತರದಲ್ಲಿ ಸುತ್ತುತ್ತಿದೆ. ಅದು, ಬೆಂಗಳೂರಿನಿಂದ ಗೋಕರ್ಣ/ಗೋವಾಕ್ಕೆ ಹೋದಷ್ಟೇ ದೂರ. ಹಾಗಾಗಿ ಗೋವಾಕ್ಕೆ ಹೋದಷ್ಟೇ ಸಲೀಸಾಗಿ ಈಗೀಗ ಎಷ್ಟೊಂದು ಪಯಣಿಗರು ಅಲ್ಲಿಗೆ ಹೋಗುತ್ತಿದ್ದಾರೆ. ಸ್ಪೇಸ್ ಎಕ್ಸ್, ಬ್ಲೂ ಆರಿಜಿನ್ ಮುಂತಾದ ಖಾಸಗಿ ಕಂಪನಿಗಳ ನೌಕೆಯಲ್ಲಿ ಕಳೆದ ಎರಡು ತಿಂಗಳಲ್ಲಿ 21 ಮಂದಿ, ಅವರಲ್ಲೂ ಹತ್ತು ಜನರು ಮೊದಲ ಬಾರಿ ಹೋಗಿ ಬಂದಿದ್ದಾರೆ. ಅವರಲ್ಲಿ ಬೆಲಾರೂಸ್‌ನ ಗಗನಸಖಿ ಮರ್ಯಾನಾ, ವಿಯೆಟ್ನಾಂ ಮೂಲದ ಅಮೆರಿಕದ ಅತ್ಯಾಚಾರ ಸಂತ್ರಸ್ತೆ ಅಮಾಂಡಾ ಎಂಗುಯೆನ್ ಕೂಡ ಇದ್ದಾರೆ. ಏಪ್ರಿಲ್ 14ರಂದು ಎಲ್ಲ ಆರು ಮಹಿಳೆಯರೇ ಬಾಹ್ಯಾಕಾಶ ಯಾನ ಮಾಡಿ (ಅಂದರೆ 100 ಕಿ.ಮೀ. ಎತ್ತರದ ‘ಕಾರ್ಮಾನ್ ಗಡಿ’ಯನ್ನು ದಾಟಿ ಕ್ಷೀಣಗುರುತ್ವದಲ್ಲಿ ಹನ್ನೊಂದು ನಿಮಿಷ ತೇಲಾಡಿ) ಬಂದಿದ್ದಾರೆ. ಹಾಗೆಂದು ಶೂನ್ಯ ಗುರುತ್ವದ ಪಯಣವನ್ನು ತೀರಾ ಹಗುರವಾಗಿ ಪರಿಗಣಿಸಬೇಡಿ. ಅದರಲ್ಲೂ 400 ಕಿ.ಮೀ. ಎತ್ತರದ ಅಟ್ಟಣಿಗೆಗೆ ಹೋಗಬೇಕೆಂದರೆ ಭಾರೀ ತರಬೇತಿ, ತಾಳ್ಮೆ, ಸ್ಥೈರ್ಯ ಎಲ್ಲ ಬೇಕು. ಎಂಟು ದಿನಗಳ ವಾಸಕ್ಕೆಂದು ಹೋದ ಸುನಿತಾ ವಿಲಿಯಮ್ಸ್ ಹಿಂದಿರುಗಿ ಬರಲಾರದೆ 286 ದಿನ ಅಲ್ಲೇ ಉಳಿದಿದ್ದರಲ್ಲ?
ಬಾಹ್ಯಾಕಾಶ ನಿಲ್ದಾಣ ಎಂದ ಮಾತ್ರಕ್ಕೇ ಅಲ್ಲಿ ಕೂತು ಇಡೀ ಭೂಮಿಯ ಉಂಡೆಯನ್ನು ನೋಡಬಹುದು ಎಂದೆಲ್ಲ ಊಹಿಸಿದರೆ ತಪ್ಪಾಗುತ್ತದೆ. ‘ಐಎಸ್‌ಎಸ್’ ಕಿಟಕಿಯಿಂದ ಇಡೀ ಭಾರತ ಕೂಡ ಒಂದೇ ನೋಟದಲ್ಲಿ ಸಿಗಲಾರದು. ಗೋವಾದಿಂದ ಚೆನ್ನೈವರೆಗಿನ ಒಂದು ಫೋಟೊ ತೆಗೆಯಬಹುದು. ಈಗಂತೂ ಮೋಡ ಮುಸುಕಿರುವುದರಿಂದ ಅದೂ ಸಾಧ್ಯವಿಲ್ಲ. ಆದರೆ ಎಲ್ಲ ಖಂಡಗಳೂ ಸರಸರ ಓಡುತ್ತಿರುತ್ತವೆ. ಪ್ರತಿ ಒಂದೂವರೆ ಗಂಟೆಗೆ ಭೂಮಿಯ ಒಂದು ಪ್ರದಕ್ಷಿಣೆ ಹಾಕುತ್ತ 24 ಗಂಟೆಗಳಲ್ಲಿ ಆರು ಸೂರ್ಯೋದಯ, ಆರು ಸೂರ್ಯಾಸ್ತಗಳನ್ನು ನೋಡುವುದು ಮೊದಮೊದಲು ತುಂಬ ರೋಚಕ ಎನಿಸುವುದಂತೂ ನಿಜ. ಹಗಲು– ರಾತ್ರಿ, ಏಕಾದಶಿ, ಅಮಾವಾಸ್ಯೆ ಎಂಬ ನಮ್ಮೆಲ್ಲ ಲೆಕ್ಕಾಚಾರಗಳೂ ಅಲ್ಲಿ ತಲೆಕೆಳಗು.
ನಾವೂ ಅಲ್ಲಿದ್ದರೆ ಪದೇ ಪದೇ ತಲೆಕೆಳಗು! ಶುಭಾಂಶು ಅಲ್ಲಿ ಯೋಗಾಸನ ಹಾಕಲಿದ್ದಾರೆ. ಶೂನ್ಯ ಗುರುತ್ವದಲ್ಲಿ ಮೂಳೆ, ಸ್ನಾಯುಗಳ ಬಿಗಿತಗಳ ಏರಿಳಿತ ಹೇಗಾಗುತ್ತದೆ ಎಂಬುದರ ವೈಜ್ಞಾನಿಕ ಪರೀಕ್ಷೆ ಮಾಡುತ್ತಾರಂತೆ. ಅವರ ಉಡಾಣ ನಾಲ್ಕು ತಿಂಗಳ ಬದಲು ನಾಲ್ಕು ದಿನ ಮಾತ್ರ ತಡವಾಗಿದ್ದಿದ್ದರೆ ‘ಅಂತರರಾಷ್ಟ್ರೀಯ ಯೋಗ ದಿನ’ಕ್ಕೆ (ಜೂನ್ 21) ಸರಿಯಾಗಿ ಅಷ್ಟೆತ್ತರದಲ್ಲಿ ಯೋಗ ಪ್ರದರ್ಶನ ಮಾಡಬಹುದಿತ್ತು. ಹಿಂದೆ ಸೋವಿಯತ್ ರಷ್ಯಾದ ‘ಸಲ್ಯೂತ್7’ ನೌಕೆಯಲ್ಲಿ ಪಯಣಿಸಿದ ರಾಕೇಶ್ ಶರ್ಮಾ ಕೂಡ ಯೋಗಾಸನ ಹಾಕಿ, ರಷ್ಯನ್ ಗಗನಯಾತ್ರಿಗಳನ್ನು ಅವಾಕ್ಕಾಗಿಸಿದ್ದರು. ಅಂದಿನ (1985ರ) ಮಟ್ಟಿಗೆ ಅದು ‘ಅತ್ಯಂತ ಕೌತುಕದ ಮೆಡಿಕಲ್ ಪ್ರಯೋಗ’ ಎಂದು ನಾಸಾ ವರದಿ ಮಾಡಿತ್ತು.
ಅತ್ಯಲ್ಪ ಗುರುತ್ವದಲ್ಲಿ ಏನೇನು ಹೇಗೆ ಹೇಗೆ ವರ್ತಿಸುತ್ತವೆ ಎಂಬುದರ ಕುರಿತು ನೂರಾರು ತಮಾಷೆಯ ‘ವೈಜ್ಞಾನಿಕ’ ಪ್ರಯೋಗಗಳು ಬಾಹ್ಯಾಕಾಶ ಅಟ್ಟಣಿಗೆಗಳಲ್ಲಿ ನಡೆದಿವೆ. ಅಲ್ಲಿ ಮೋಂಬತ್ತಿ ಉರಿಸಿದರೆ ಗೋಲಾಕಾರದ ಜ್ವಾಲೆ ಹೊಮ್ಮುತ್ತದೆ; ಬಾಯಿ ಮುಕ್ಕಳಿಸಿ ಉಗುಳಿದರೆ ಅದೂ ಚೆಂಡಿನಂತೆ ಅಥವಾ ಮುತ್ತಿನ ಉಂಡೆಯಂತೆ ಮುಖದ ಎದುರೇ ತೇಲಾಡುತ್ತದೆ ಎಂಬುದು ನಮಗೆಲ್ಲ ಗೊತ್ತು. ಅದರಾಚೆಗೆ, ಮಕ್ಕಳಿಗೂ ಮುದ ನೀಡುವ ಯೋ–ಯೋ ಎಂಬ ಗಿರಗಿಟ್ಟೆಯನ್ನು ಸುತ್ತಿಸಿದ್ದೇನು, ಹಸಿರುಪಾಚಿಯನ್ನು ಹಾವಿನಂತೆ ಓಡಾಡಿಸಿದ್ದೇನು, ಹಂದಿಮೂತಿಯ, ಎಂಟು ಕಾಲುಗಳ ಟಾರ್ಡಿಗ್ರಾಡ್ ಎಂಬ ಅತಿಸೂಕ್ಷ ಗಾತ್ರದ ಮುದ್ದು ಜೀವಿಗಳ ಪ್ರಣಯಕೇಳಿಯ ಪರೀಕ್ಷೆ ಮಾಡಿದ್ದೇನು… ಪಟ್ಟಿ ಸಾಕಷ್ಟು ಉದ್ದ ಇದೆ.
ಬಾಹ್ಯಾಕಾಶ ನಿಲ್ದಾಣದ ಆ ಏಕಾಂತವಾಸದ ನಡುವೆ ಯಾತ್ರಿಗಳಿಗೆ ಮನರಂಜನೆಯೂ ಬೇಕಲ್ಲ? ಅಂಥ ಕತೆಗಳೂ ಇಲ್ಲಿ ಪುಟ ತುಂಬಿಸುವಷ್ಟಿದೆ. ಸ್ಕಾಟ್ ಕೆಲ್ಲಿ ಮತ್ತು ಮಾರ್ಕ್ ಕೆಲ್ಲಿ ಎಂಬಿಬ್ಬರು ಅವಳಿ ಜವಳಿ ಗಗನಯಾತ್ರಿಗಳ ಕತೆ ಕೇಳಿ: ಐಎಸ್‌ಎಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಸ್ಕಾಟ್‌ನ ಜನ್ಮದಿನದ ಉಡುಗೊರೆಯಾಗಿ ಅಣ್ಣ ಮಾರ್ಕ್ 2016ರಲ್ಲಿ ಒಂದಿಡೀ ಗೊರಿಲ್ಲಾ ಛದ್ಮವೇಷವನ್ನೇ ಮೇಲಕ್ಕೆ ಕಳ್ಳಸಾಗಣೆ ಮಾಡಿ ಕಳಿಸಿದ. ‘ಐಎಸ್‌ಎಸ್’ನಲ್ಲಿದ್ದ ಐರೋಪ್ಯ ಬಾಹ್ಯಾಕಾಶ ಸಂಘದ ಟಿಮ್ ಪೀಕ್ ಎಂಬಾತನಿಗೆ ಇದು ಗೊತ್ತಿರಲಿಲ್ಲ. ಸ್ಕಾಟ್ ಮೆಲ್ಲಗೆ ಗೊರಿಲ್ಲಾ ವೇಷ ತೊಟ್ಟು ಜಿಗಿಯುತ್ತ (ಅಲ್ಲಿ ಎಲ್ಲರೂ ಜಿಗಿಯುತ್ತ, ತೇಲುತ್ತಲೇ ಚಲಿಸಬೇಕು ಅನ್ನಿ) ಬಂದಾಗ ಟಿಮ್ ಗಾಬರಿಯಾಗಿ ಕೂಗುತ್ತ ಚೀರುತ್ತ ಓಡಿದ್ದೂ, ಈತ ಆತನನ್ನು ಅಟ್ಟಿಸಿಕೊಂಡು ಈಜಿದ್ದೂ ಭಲೇ ತಮಾಷೆಯ ದೃಶ್ಯವಾಗಿ ಈಗಲೂ ಅದನ್ನು ಯೂಟ್ಯೂಬ್‌ನಲ್ಲಿ ನೋಡಬಹುದು.
ಈಗಿನ ತಂಡದ ಮುಖ್ಯಸ್ಥೆಯಾಗಿ 56ರ ಹರಯದ ಪೆಗ್ಗಿ ವಿಟ್ಸನ್ ಹೋಗಲಿದ್ದಾರಲ್ಲ? ಅಮೆರಿಕದ ಮಟ್ಟಿಗೆ ಅವರಷ್ಟು ದೀರ್ಘ ಕಾಲ (ಒಟ್ಟು 675 ದಿನಗಳು) ಬಾಹ್ಯಾಕಾಶದಲ್ಲಿ ಕಳೆದವರು ಬೇರೆ ಯಾರೂ ಇಲ್ಲ. ಆಕೆ ಕೂಡ 2017ರ ಉಡ್ಡಾಣದಲ್ಲಿ ತಮಾಷೆಗೆಂದು ಸರಕು ಸಾಗಿಸುವ ಮೂಟೆಯಲ್ಲಿ ಅಡಗಿ ಕೂತರು. ಇತರ ಅಮೆರಿಕನ್ ಸಿಬ್ಬಂದಿ ಅವರಿದ್ದ ಮೂಟೆಯನ್ನು ತಳ್ಳಿಕೊಂಡು ‘ಐಎಸ್‌ಎಸ್’ಗೆ ಅಂಟಿಕೊಂಡಿದ್ದ ರಷ್ಯನ್ ಕಕ್ಷೆಗೆ ಹೋಗಿ ಬಿಚ್ಚಿದರು. ಮೂಟೆಯಿಂದ ಹಠಾತ್ತಾಗಿ ಹಿಗ್ಗಿ ಎದ್ದ ಪೆಗ್ಗಿಯನ್ನು ನೋಡಿ ಕಕ್ಕಾಬಿಕ್ಕಿಯಾದರು. ಕಳೆದ ವರ್ಷ ಸುನಿತಾ ಮತ್ತು ವಿಲ್ಮೋರ್ ಅವರನ್ನು ಭೂಮಿಗೆ ಕರೆ ತರುವ ಸಿದ್ಧತೆಗೆಂದು ಮುಚ್ಚಳ ತೆರೆದಾಗ ಅನ್ಯಲೋಕದ ಜೀವಿಯಂತೆ ಮುಖವಾಡ ಹಾಕಿದ್ದ ನಿಕ್ ಹೇಗ್ ಎಂಬಾತ ಈಜುತ್ತ ಈಚೆ ಬಂದು ವೀಕ್ಷಕರನ್ನು ತಬ್ಬಿಬ್ಬು ಮಾಡಿದ್ದ.
ಅಂಥ ಚೆಲ್ಲಾಟಗಳ ಕತೆ ಹೇಗೂ ಇರಲಿ. ಸೌರಮಂಡಲದ ಏಕೈಕ ಜೀವಂತ ಗ್ರಹವೆನಿಸಿ, ಅದೆಷ್ಟು ಕೋಟಿ ಜೀವಿಗಳನ್ನು ಪೊರೆಯುತ್ತ ತನ್ನಷ್ಟಕ್ಕೆ ಸುತ್ತುತ್ತಿರುವ ಈ ಸುಂದರ ಸಮೃದ್ಧ ಭೂಮಿಯನ್ನು ಏಕಾಂತದಲ್ಲಿ ನೋಡುವುದೇ ಒಂದು ಅಲೌಕಿಕ ಅನುಭವ ತಾನೆ? ಇಲ್ಲಿ ನಾಯಕರೆನಿಸಿದವರು ನಮ್ಮನ್ನೇ ಆಯುಧಗಳನ್ನಾಗಿ ಮಾಡಿ ಬಡಿದಾಡಿಕೊಳ್ಳುತ್ತ ಈ ಅಪೂರ್ವ ‘ಗೃಹ’ದ ಚಿಂದಿ ಉಡಾಯಿಸುತ್ತಿದ್ದಾರಲ್ಲ? ಆ ಎತ್ತರದಲ್ಲಿ ಯೋಗಾಸನ ಹಾಕಿ ಇದನ್ನೆಲ್ಲ ನೋಡುವ ವಿಷಾದ ಯೋಗ ಹೇಗಿರುತ್ತದೊ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.