ADVERTISEMENT

ನಾಡಕುಸ್ತಿಯ ಹಾಡು – ಪಾಡು

ಗಿರೀಶದೊಡ್ಡಮನಿ
Published 16 ಅಕ್ಟೋಬರ್ 2018, 1:55 IST
Last Updated 16 ಅಕ್ಟೋಬರ್ 2018, 1:55 IST
ಕುಸ್ತಿ ಚಿತ್ರಗಳು: ಸವಿತಾ ಬಿ. ಆರ್‌.
ಕುಸ್ತಿ ಚಿತ್ರಗಳು: ಸವಿತಾ ಬಿ. ಆರ್‌.   

ಆ ಹುಡುಗನ ವಯಸ್ಸು ಇಪ್ಪತ್ತರ ಆಸುಪಾಸು. ಸ್ಪೋರ್ಟ್ಸ್‌ ಬೈಕ್‌ ಮೇಲೆ ಶರವೇಗದಿಂದ ಸುತ್ತುವುದೆಂದರೆ ಎಲ್ಲಿಲ್ಲದ ಖುಷಿ. ಕೈಯಲ್ಲಿ ಸ್ಮಾರ್ಟ್‌ಫೋನ್, ಕಣ್ಣಿಗೆ ತಂಪು ಕನ್ನಡಕ. ಟಿಪ್ ಟಾಪ್ ಡ್ರೆಸ್‌ ಹಾಕಿಕೊಂಡು ಹೆಗಲಿಗೊಂದು ಬ್ಯಾಕ್‌ಪ್ಯಾಕ್‌ ಏರಿಸಿಕೊಂಡು ಪ್ರತಿದಿನ ಡಿಗ್ರಿ ಕಾಲೇಜಿಗೆ ಹೋಗಿ ಬರ್ತಾನೆ. ಸಂಜೆ ಕಾಲೇಜಿನಿಂದ ಸೀದಾ ಗರಡಿ ಮನೆಗೆ ಬರುವ ಹುಡುಗ, ಅಖಾಡದ ಪುಟ್ಟ ಕೋಣೆಯ ಒಳಗೆ ಹೊಕ್ಕುತ್ತಾನೆ.

ನಾಲ್ಕೈದು ನಿಮಿಷಗಳ ಹೊರಬರುವ ಆತನ ದೇಹದ ಮೇಲೆ ತುಂಡು ಲಂಗೋಟಿ ಬಿಟ್ಟರೆ ಬೇರೇನೂ ಇರುವುದಿಲ್ಲ. ಪಕ್ಕದ ಬಾವಿಯಲ್ಲಿ ಕೈ ಕಾಲು ತೊಳೆದು, ಅಖಾಡದತ್ತ ಹೋಗಿ ಮಟ್ಟಿಗೆ ನಮಸ್ಕರಿಸುತ್ತಾನೆ. ಅಲ್ಲೇ ಪಕ್ಕದಲ್ಲಿ ಇಟ್ಟಿರುವ ಸಲಕರಣೆಗಳನ್ನು ಬಳಸಿ ವ್ಯಾಯಾಮ ಶುರು ಮಾಡಿಕೊಳ್ಳುತ್ತಾನೆ. ಅರ್ಧಗಂಟೆಯಲ್ಲಿ ದಂಡೆ, ಸಾಮು, ಬಸ್ಕಿಗಳನ್ನು ಪೂರೈಸುವಷ್ಟರಲ್ಲಿ ಮೈಯಿಂದ ಧಾರಾಕಾರವಾಗಿ ಬೆವರು ಹರಿಯುತ್ತದೆ. ಆಗ ಮಟ್ಟಿ ಅಖಾಡಕ್ಕೆ ಹೆಜ್ಜೆ ಇಡುತ್ತಾನೆ. ಸಲಿಕೆಯಿಂದ ಮಣ್ಣು ಖುರಾಯಿಸಿ ಹದಗೊಳಿಸುತ್ತಾನೆ. ಮುಂದೆ ಸಹ ಪೈಲ್ವಾನರೊಂದಿಗೆ ಪಟ್ಟುಗಳ ಅಭ್ಯಾಸ ಆರಂಭ. ಒಂದೆರಡು ಗಂಟೆಗಳ ನಂತರ ಅಖಾಡದಿಂದ ಹೊರಬಂದು ಉಸ್ತಾದರ(ಗುರು) ಕಾಲು ಮುಟ್ಟಿ ನಮಸ್ಕರಿಸಿ ಸ್ನಾನದ ಕೋಣೆಯತ್ತ ಹೊರಡುತ್ತಾನೆ. ತನ್ನ ’ಮಾಡರ್ನ್ ಲುಕ್‌’ನೊಂದಿಗೆ ಹೊರಬಂದು, ಬೈಕ್ ಏರಿ ಗಾಳಿಯನ್ನು ಸೀಳಿಕೊಂಡು ಮನೆಯತ್ತ ಮರಳುತ್ತಾನೆ.

ಹೌದು; ಇದು ಮೈಸೂರಿನ ಕುಸ್ತಿಪಟುಗಳ ಬದಲಾದ ಜೀವನಶೈಲಿಯ ಒಂದು ಉದಾಹರಣೆ. ದಸರಾ ಹಬ್ಬ ಸಮೀಪಿಸುತ್ತಿದ್ದಂತೆಯೇ ಇಲ್ಲಿಯ ಗರಡಿಮನೆಗಳು ಜೀವ ಪಡೆಯುತ್ತವೆ. ಅಪ್ಪ, ಅಜ್ಜ, ಮುತ್ತಜ್ಜನ ಪರಂಪರೆಯನ್ನು ಉಳಿಸಲು, ತಮ್ಮ ಮೈ ಹದಗೊಳಿಸಿಕೊಳ್ಳಲು ಈಗಿನ ಯುವಕರೂ ಗರಡಿ ಮಣ್ಣಿನಲ್ಲಿ ಬೆರೆಯುತ್ತಿದ್ದಾರೆ. ‘ಪೈಲ್ವಾನರಿಗೆ ವಿದ್ಯಾಭ್ಯಾಸ ತಲೆಗೆ ಹತ್ತುವುದಿಲ್ಲ’ ಎಂಬ ಪುರಾತನ ನಂಬಿಕೆಯನ್ನು ಹುಸಿಗೊಳಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

ADVERTISEMENT

ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಈ ಹುಡುಗರಿಗೆ ತಕ್ಕ ಪ್ರೋತ್ಸಾಹ ಸಿಗುತ್ತಿದೆಯೇ? ನಾಡಕುಸ್ತಿಯೆಂಬ ಪುರಾತನ ಕಲೆ, ಸಂಸ್ಖೃತಿಯ ದೀವಟಿಗೆಯನ್ನು ಹೊತ್ತು ಮುಂದೆ ಸಾಗಲು ಉತ್ಸುಕರಾಗಿರುವ ಯುವಪಡೆಯ ಕೈಗಳಿಗೆ ಶಕ್ತಿ ತುಂಬುವ ಕೆಲಸ ನಡೆಯುತ್ತಿದೆಯೇ? ಎಂಬ ಪ್ರಶ್ನೆಗಳಿಗೆ ಸಿಗುವುದು ನಿರಾಶೆಯ ಉತ್ತರಗಳೇ ಹೆಚ್ಚು.

ಇಲ್ಲಿಯ ಪೈಲ್ವಾನರಾದ ಪ್ರವೀಣಕುಮಾರ್, ಚೇತನ್ ಚಿರತೆ, ಸುಪುತ್ರ, ಶಂಕರ್ ಚಕ್ರವರ್ತಿ ಮತ್ತಿತರರು ಕುಸ್ತಿಯೊಂದಿಗೆ ಓದನ್ನೂ ಯಶಸ್ವಿಯಾಗಿ ನಿರ್ವಹಿಸಿದವರು. ಜೊತೆಗೆ ರಾಷ್ಟ್ರಮಟ್ಟದಲ್ಲಿ ಮಿಂಚಿ ಈಗ ಉತ್ತಮ ಉದ್ಯೋಗಗಳನ್ನೂ ಕಂಡುಕೊಂಡಿದ್ದಾರೆ.

ಚಿತ್ರ: ಇರ್ಷಾದ್‌ ಮಹಮ್ಮದ್‌

ಅಗತ್ಯ ಪ್ರೋತ್ಸಾಹ ಬೇಕಿದೆ
‘ನಾಡಕುಸ್ತಿಯು ಬಹಳ ಮಹತ್ವದ್ದು. ಆರೋಗ್ಯ, ಸಂಸ್ಕೃತಿ, ನಾಡಿನ ವೈಭವದ ಪ್ರತೀಕವಾದದ್ದು. ನಾವು ಆಡುತ್ತಿದ್ದ ಕಾಲದಲ್ಲಿ ಇದ್ದ ವೈಭವ ಈಗಿಲ್ಲ. ಈಗಿನ ಕೆಲವು ಯುವಕರಿಗೆ ಆಸಕ್ತಿ ಇದೆ. ಆದರೆ, ಅವರಿಗೆ ತಕ್ಕ ಪ್ರೋತ್ಸಾಹ ಸಿಗುತ್ತಿಲ್ಲ. ನಾಡಕುಸ್ತಿ ಸ್ಪರ್ಧೆಗಳಲ್ಲಿ ಇವತ್ತಿಗೂ 200, 300 ಅಥವಾ 500 ರೂಪಾಯಿ ಬಹುಮಾನಗಳನ್ನು ಕೊಡುತ್ತಾರೆ. ಇದು ಯಾವ ನ್ಯಾಯ. ಅದು ಹುಡುಗರ ಒಂದು ಲಂಗೋಟಿ, ಚಡ್ಡಿ ಖರ್ಚಿಗೂ ಇದು ಸಾಕಾಗುವುದಿಲ್ಲ. ಪರ ಊರಿನ ಪೈಲ್ವಾನರಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಕರೆತಂದು ಕುಸ್ತಿ ಮಾಡಿಸುವ ಬದಲು ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು. ಉತ್ತಮ ಯೋಜನೆಗಳನ್ನು ಹಾಕಿಕೊಳ್ಳಬೇಕು. ಆಗ ಮೈಸೂರಿನ ಮುಕುಟಪ್ರಾಯವಾದ ನಾಡಕುಸ್ತಿ ಮತ್ತು ಗರಡಿಮನೆಗಳು ಉಳಿಯುತ್ತವೆ. ಉತ್ತಮ ಪಟುಗಳೂ ಪ್ರವರ್ಧಮಾನಕ್ಕೆ ಬರುತ್ತಾರೆ’ ಎಂದು ಮೈಸೂರು ಜಿಲ್ಲಾ ಗರಡಿ ಸಂಘದ ಪದಾಧಿಕಾರಿ ಯಜಮಾನ್ ಎಸ್. ಮಹಾದೇವ ಅವರು ಹೇಳುತ್ತಾರೆ.

ಇವತ್ತು ಕುಸ್ತಿ ಕ್ರೀಡೆಯಲ್ಲಿ ಭಾರತದ ಪೈಲ್ವಾನರು ವಿಶ್ವ ಚಾಂಪಿಯನ್‌ಷಿಪ್, ಒಲಿಂಪಿಕ್ಸ್‌ಗಳಲ್ಲಿ ಪದಕಗಳನ್ನು ಗೆದ್ದು ತರುತ್ತಿ
ದ್ದಾರೆ. ಆದರೆ ಇಂದಿಗೂ ಮಟ್ಟಿ ಕುಸ್ತಿಯ ನಂಟು ಮಾತ್ರ ಅಳಿದಿಲ್ಲ. ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರು ನಾಡ ಕುಸ್ತಿ ಯೆಂದರೆ ಪ್ರಮುಖ ಆಕರ್ಷಣೆ. ಉತ್ತರ ಕರ್ನಾಟಕದ ಜಾತ್ರೆ, ಉತ್ಸವಗಳಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯುವ ಜಂಗೀ ನಿಕಾಲಿ ಕುಸ್ತಿ ಮತ್ತು ಮೈಸೂರಿನ ಭಾಗದ ಮಾರ್ಫಿಟ್‌ ಕುಸ್ತಿಗಳು ಹಳೆ ಸಂಪ್ರದಾಯದ ಕೊಂಡಿಗಳಾಗಿ ಉಳಿದಿವೆ. ಆದರೆ, ಮೈಸೂರಿನ ದಸರಾ ಕುಸ್ತಿಯೆಂದರೆ ಇಡೀ ರಾಜ್ಯದ ಕುಸ್ತಿಪಟುಗಳು ಮೈಕೊಡವಿ ಏಳುತ್ತಾರೆ.

ಮೈಸೂರು ದಸರೆ– ಮಲ್ಲರ ಸಂಗಮ
ದಸರಾ ಕುಸ್ತಿ ಮೈಸೂರಿನಲ್ಲಿಯೇ ನಡೆದರೂ ರಾಜ್ಯದ ಬೇರೆ ಊರುಗಳಲ್ಲಿಯೂ ಇದು ಸಂಚಲನ ಮೂಡಿಸುತ್ತದೆ. ಕುಸ್ತಿ ಸ್ಪರ್ಧೆ ನಡೆಯುವ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿರುವ ಅಖಾಡದ ಸುತ್ತಮುತ್ತಲು ಒಮ್ಮೆ ಓಡಾಡಿದರೆ ಹಲವು ನೋಟಗಳು ಕಾಣುತ್ತವೆ. ಅಲ್ಲಿ ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಳಗಾವಿ, ಮಂಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಮಲ್ಲರು, ಮಹಾರಾಷ್ಟ್ರ, ಹರಿಯಾಣ, ಪಂಜಾಬ್‌, ಉತ್ತರಪ್ರದೇಶದ ಪೈಲ್ವಾನರ ಸಂಗಮ ಎದ್ದು ಕಾಣುತ್ತದೆ.

ಎರಡು ವಿಭಾಗಗಳಲ್ಲಿ ಕುಸ್ತಿಯ ವೈಭವ ತೆರೆದುಕೊಳ್ಳುತ್ತದೆ. ಪ್ರತಿದಿನ ಸಂಜೆ ಮಟ್ಟಿ ಕುಸ್ತಿ ನಡೆದರೆ, ಬೆಳಗಿನ ಅವಧಿಯಲ್ಲಿ ಮ್ಯಾಟ್ ಕುಸ್ತಿ ನಡೆಯುತ್ತದೆ. ಕುಸ್ತಿಯ ಎರಡೂ ಮಾದರಿಗಳಿಗೂ ಮಹತ್ವ ಕೊಡುವ ಉದ್ದೇಶ ಇದರ ಹಿಂದೆ ಇದೆ. ಆದರೆ, ಮೈಸೂರಿನ ಪೈಲ್ವಾನರು ಹೆಚ್ಚು ಪ್ರೀತಿಸುವುದು ಮಟ್ಟಿ ಕುಸ್ತಿಯನ್ನೇ. ಅದಕ್ಕಾಗಿಯೇ ಇಂದಿಗೂ ಇಲ್ಲಿ 50ಕ್ಕೂ ಹೆಚ್ಚು ಗರಡಿಮನೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ದಸರೆ ಸಂದರ್ಭದಲ್ಲಿ ಮಾತ್ರ ಹೆಚ್ಚು ಚಟುವಟಿಕೆಯಿಂದ ಇರುತ್ತವೆ. ವರ್ಷದ ಬಹುತೇಕ ಸಮಯ ಮಕ್ಕಳು ಬರುವುದು ಕಡಿಮೆ.

ನಾಡಕುಸ್ತಿ ಬೆಳೆಯಬೇಕು
‘ಇವತ್ತು ಕುಸ್ತಿಯು ದುಬಾರಿ ವೆಚ್ಚದ ಕ್ರೀಡೆಯಾಗಿದೆ. ಸರಿಯಾದ ಆರ್ಥಿಕ ನೆರವು ನೀಡದಿದ್ದರೆ ನಿರ್ವಹಣೆ ಕಠಿಣ. ಕುಸ್ತಿಯ ಜೊತೆಗೆ ಶಿಕ್ಷಣವೂ ಮುಖ್ಯ. ನನ್ನ ಇಬ್ಬರು ಗಂಡುಮಕ್ಕಳು ಕೂಡ ಉತ್ತಮ ಪೈಲ್ವಾನರಾಗಿದ್ದವರು. ಪದವಿ ಮುಗಿಸಿ ಉದ್ಯೋಗದಲ್ಲಿದ್ದಾರೆ. ಆಸಕ್ತರಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು’ ಎಂದು ಮಹಾದೇವ್ ಸಲಹೆ ನೀಡುತ್ತಾರೆ.

ದಶಕಗಳ ಹಿಂದೆ ಗರಡಿ ಮನೆಗಳಲ್ಲಿ ಯುವಕರ ದಂಡು ತುಂಬಿ ತುಳುಕುತ್ತಿತ್ತು. ಗರಡಿಗಳ ಪುಟ್ಟ ದ್ವಾರದ ಮೂಲಕ ಒಳಪ್ರವೇಶಿಸುವ ಪ್ರತಿಯೊಬ್ಬನಿಗೂ ಸಮಾಜದಲ್ಲಿ ಗೌರವಯುತವಾಗಿ ಬಾಳುವುದನ್ನು ಮತ್ತು ದುರ್ಬಲರಿಗೆ ರಕ್ಷಣೆ ನೀಡುವುದನ್ನು ಬೋಧಿಸಲಾಗುತ್ತಿತ್ತು. ಆ ಮೂಲಕ ಸಮಾಜದ ಸ್ವಾಸ್ಥ್ಯ ಹೆಚ್ಚಿಸುವ ಕಾರ್ಯವೂ ನಡೆಯುತ್ತಿತ್ತು. ಈಗ ಹಲವು ಅತ್ಯಾಧುನಿಕ ಆಮಿಷಗಳಲ್ಲಿ ಸಿಲುಕಿರುವ ಯುವಜನಾಂಗವನ್ನು ಮತ್ತೆ ಸರಿದಾರಿಗೆ ತರಲು ಕುಸ್ತಿಯಿಂದ ಸಾಧ್ಯವಿದೆ. ಅರಿಶಿನ, ಕುಂಕುಮ, ಕರ್ಪೂರ, ಹರಳೆಣ್ಣೆಗಳ ಮಿಶ್ರಣದಿಂದ ಹದವಾಗುವ ಮಟ್ಟಿಯಲ್ಲಿ ಅಗಾಧ ಶಕ್ತಿಯಿದೆ ಎಂಬ ನಂಬಿಕೆ ಇಲ್ಲಿಯ ಹಿರಿಯರಿಗೆ ಇದೆ. ನಾಡಕುಸ್ತಿಯ ತೊಟ್ಟಿಲು ನಿರಂತರ ತೂಗಲಿ ಎಂಬ ಆಸೆಯೂ ಅವರ ಕಂಗಳಲ್ಲಿದೆ.

ಬೆಳ್ಳಿ ಗದೆಯ ಕನಸು
ಕರ್ನಾಟಕದ ಯಾವುದೇ ಭಾಗದ ಪೈಲ್ವಾನರನ್ನು ಕೇಳಿ ನೋಡಿ. ಮೈಸೂರು ದಸರಾ ಕುಸ್ತಿಯಲ್ಲಿ ಗೆದ್ದ ಬೆಳ್ಳಿಗದೆಯ ಬಗ್ಗೆ ಅತ್ಯಂತ ಖುಷಿಯಿಂದ ಹೇಳುತ್ತಾರೆ.

ದಸರಾ ಕಿಶೋರ, ಕಂಠೀರವ ಪ್ರಶಸ್ತಿಗಳನ್ನು ಜಯಿಸುವುದೆಂದರೆ ಪೈಲ್ವಾನರಿಗೆ ಪ್ರತಿಷ್ಠೆಯ ವಿಷಯ. ಅದಕ್ಕಾಗಿಯೇ ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳಿಂದ, ಸಾಯ್ ವಸತಿ ನಿಲಯಗಳಿಂದ ಕುಸ್ತಿಪಟುಗಳು ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.