ADVERTISEMENT

ದಸರಾ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ

ವಿವಿಧ ಜಿಲ್ಲೆಗಳ 4,500 ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2018, 16:52 IST
Last Updated 10 ಅಕ್ಟೋಬರ್ 2018, 16:52 IST
ದಸರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕ್ರೀಡಾಜ್ಯೋತಿ ಎತ್ತಿಹಿಡಿದರು. ಜಿ.ಟಿ.ದೇವೇಗೌಡ, ಗೋವಿಂದರಾಜ್, ಎಂ.ಆರ್.ಪೂವಮ್ಮ, ಎನ್‌.ಮಹೇಶ್, ಸುರೇಶ್‌ ಇದ್ದಾರೆ
ದಸರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕ್ರೀಡಾಜ್ಯೋತಿ ಎತ್ತಿಹಿಡಿದರು. ಜಿ.ಟಿ.ದೇವೇಗೌಡ, ಗೋವಿಂದರಾಜ್, ಎಂ.ಆರ್.ಪೂವಮ್ಮ, ಎನ್‌.ಮಹೇಶ್, ಸುರೇಶ್‌ ಇದ್ದಾರೆ   

ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ಆಯೋಜಿಸಿರುವ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ದೊರೆತಿದ್ದು, ಚಾಮುಂಡಿ ವಿಹಾರ ಕ್ರೀಡಾಂಗಣ ಹಾಗೂ ಇತರ ತಾಣಗಳಲ್ಲಿ ಕ್ರೀಡಾಪಟುಗಳ ಕಲವರ ಮೂಡಿಬಂದಿದೆ.

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಅಂತರರಾಷ್ಟ್ರೀಯ ಅಥ್ಲೀಟ್ ಎಂ.ಆರ್‌.ಪೂವಮ್ಮ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

‘ದಸರಾ ಸಿ.ಎಂ ಕಪ್‌ ಕ್ರೀಡಾಕೂಟಕ್ಕೆ ಚಾಲನೆ ದೊರೆತಿದೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಕಟಿಸಿದರು. ಅ.16ರ ವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ 31 ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ 4,500 ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.

ADVERTISEMENT

ದಸರಾ ಕ್ರೀಡಾಕೂಟದ ಕ್ರೀಡಾಜ್ಯೋತಿಯ ಯಾತ್ರೆಗೆ ಬುಧವಾರ ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಲಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಕ್ರೀಡಾಜ್ಯೋತಿ ರಿಲೇ ನಡೆದು ಸಂಜೆ 3.30ಕ್ಕೆ ನಜರಾಬಾದ್‌ನ ನಿಂಬುಜಾಂಬ ದೇವಸ್ಥಾನಕ್ಕೆ ತರಲಾಯಿತು.

ಕ್ರೀಡಾಕೂಟದ ಉದ್ಘಾಟನೆ ವೇಳೆ ಕ್ರೀಡಾಪಟುಗಳಾದ ಸಂಧ್ಯಾ, ಶಿವಲಿಂಗಮ್ಮ ಮತ್ತು ನೈದಿಲೆ ಅವರು ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತಂದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜ್ಯೋತಿಯನ್ನು ಪೂವಮ್ಮ ಅವರಿಗೆ ಹಸ್ತಾಂತರಿಸಿದರು. ಆ ಬಳಿಕ ಕ್ರೀಡಾಂಗಣದಲ್ಲಿರುವ ಜ್ಯೋತಿ ಬೆಳಗಿಸಲಾಯಿತು.

ಅಥ್ಲೀಟ್‌ಗಳಾದ ಧನುಷಾ ಮತ್ತು ದಿಲೀಪ್‌ ಅವರು ಕ್ರೀಡಾಪಟುಗಳ ಪರವಾಗಿ ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆ ವತಿಯಿಂದ ಪೂವಮ್ಮ ಅವರನ್ನು ಸನ್ಮಾನಿಸಲಾಯಿತು.

ಎಂಟು ವಿಭಾಗದ ‌ಕ್ರೀಡೆಗಳಿಗೆ ಬುಧವಾರ ಚಾಲನೆ ಲಭಿಸಿತು. ಅಥ್ಲೆಟಿಕ್ ಕೂಟ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅ.14 ರಿಂದ 16ರವರೆಗೆ ನಡೆಯಲಿದೆ. ಈಜು ಸ್ಪರ್ಧೆ ಚಾಮುಂಡಿವಿಹಾರ ಈಜುಕೊಳದಲ್ಲಿ ಅ.13 ರಿಂದ 15ರ ವರೆಗೆ ಆಯೋಜಿಸಲಾಗಿದೆ.

ಪಥಸಂಚಲನ: ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳು ಅಕರ್ಷಕ ಪಥಸಂಚಲನ ನಡೆಸಿದರು. ಬಾಕ್ಸಿಂಗ್‌, ಫೆನ್ಸಿಂಗ್, ಫುಟ್‌ಬಾಲ್‌, ಜಿಮ್ನಾಸ್ಟಿಕ್ಸ್, ಹ್ಯಾಂಡ್‌ಬಾಲ್, ಕೊಕ್ಕೊ, ಟೇಕ್ವಾಂಡೊ ಮತ್ತು ವಾಲಿಬಾಲ್ ಕ್ರೀಡೆಗಳಲ್ಲಿ ಪಾಲ್ಗೊಂಡಿರುವ ಸ್ಪರ್ಧಿಗಳು ಪಥಸಂಚಲನದಲ್ಲಿ ಭಾಗವಹಿಸಿದರು.

ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಎನ್‌.ಮಹೇಶ್, ಕ್ರೀಡಾ ಇಲಾಖೆ ಆಯುಕ್ತ ಡಾ.ಎನ್‌.ಶಿವಶಂಕರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್, ಅನಂತರಾಜು, ಶಾಸಕ ಅಶ್ವಿನ್‌ ಕುಮಾರ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್‌, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಭಾಗವಹಿಸಿದ್ದರು.

ಯುವ ಪ್ರತಿಭೆಗಳಿಗೆ ವೇದಿಕೆ: ದಸರಾ ಕ್ರೀಡಾಕೂಟದ ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ಸಂತಸ ಉಂಟುಮಾಡಿದೆ. ನಾನು ದಸರಾದಲ್ಲಿ ಒಮ್ಮೆಯೂ ಪಾಲ್ಗೊಂಡಿಲ್ಲ ಎಂದು ಪೂವಮ್ಮ ಹೇಳಿದರು.

ಇಂತಹ ಕೂಟಗಳು ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ತೋರಿಸಲು ಉತ್ತಮ ವೇದಿಕೆ ಎನಿಸಿದೆ. ಕ್ರೀಡೆಯಲ್ಲಿ ಸೋಲು–ಗೆಲುವು ಇದ್ದೇ ಇದೆ. ಇಲ್ಲಿಗೆ ಬಂದ ಎಲ್ಲರಿಗೂ ಗೆಲ್ಲಲು ಸಾಧ್ಯವಿಲ್ಲ. ಸೋತವರು ತಮ್ಮ ತಪ್ಪು ತಿದ್ದಿಕೊಂಡು ಮುಂದಿನ ಬಾರಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

‘ಮುಂಬರುವ ದೋಹಾ ಏಷ್ಯನ್‌ ಚಾಂಪಿಯನ್‌ಷಿಪ್‌ ಮೇಲೆ ಗಮನ ಹರಿಸಿದ್ದೇನೆ. ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.