ADVERTISEMENT

ಮೈಸೂರು: ‘ಅರಮನೆ’ಗೆ 18 ಸಾವಿರ ಹೊಸ ಬಲ್ಬ್‌ಗಳ ‘ಸಿಂಗಾರ’

ನವರಾತ್ರಿಯಲ್ಲಿ ಹೊಂಬಣ್ಣದ ಮೆರುಗು; ಲಕ್ಷ ವಿದ್ಯುತ್‌ ದೀಪಗಳ ಸೊಬಗು

ಮೋಹನ್ ಕುಮಾರ ಸಿ.
Published 6 ಸೆಪ್ಟೆಂಬರ್ 2025, 5:36 IST
Last Updated 6 ಸೆಪ್ಟೆಂಬರ್ 2025, 5:36 IST
<div class="paragraphs"><p>ಮೈಸೂರಿನ ಅರಮನೆಯ ಆವರಣದ ಜಯಮಾರ್ತಾಂಡ ದ್ವಾರದಲ್ಲಿ ಶುಕ್ರವಾರ ಹಾಳಾಗಿದ್ದ ವಿದ್ಯುತ್‌ ಬಲ್ಬ್‌ಗಳನ್ನು ಬದಲಿಸುತ್ತಿರುವ ಕಾರ್ಮಿಕರು ಪ್ರಜಾವಾಣಿ ಚಿತ್ರ</p></div>

ಮೈಸೂರಿನ ಅರಮನೆಯ ಆವರಣದ ಜಯಮಾರ್ತಾಂಡ ದ್ವಾರದಲ್ಲಿ ಶುಕ್ರವಾರ ಹಾಳಾಗಿದ್ದ ವಿದ್ಯುತ್‌ ಬಲ್ಬ್‌ಗಳನ್ನು ಬದಲಿಸುತ್ತಿರುವ ಕಾರ್ಮಿಕರು ಪ್ರಜಾವಾಣಿ ಚಿತ್ರ

   

ಮೈಸೂರು: ಅರಮನೆ ನಗರಿಯ ಪ್ರಧಾನ ಆಕರ್ಷಣೆಯಾದ ಅಂಬಾವಿಲಾಸ ಅರಮನೆಯು ಜಗಮಗಿಸಲು 18ಸಾವಿರ ಹೊಸ ವಿದ್ಯುತ್‌ ಬಲ್ಬ್‌ಗಳ ಅಳವಡಿಕೆ ಕಾರ್ಯ ಐದು ದಿನಗಳಿಂದ ಭರದಿಂದ ನಡೆದಿದೆ. 

ಅರಮನೆ ಮಂಡಳಿಯ ಎಲೆಕ್ಟ್ರಿಕಲ್‌ ವಿಭಾಗದ 12 ಸಿಬ್ಬಂದಿ, ಒಂದು ವರ್ಷದಲ್ಲಿ ಮಳೆ– ಗಾಳಿಯಿಂದ ಹಾಳಾದ ವಿದ್ಯುತ್‌ ಬಲ್ಬ್‌ಗಳನ್ನು ತೆರವುಗೊಳಿಸಿ, ಹೊಸ ಬಲ್ಬ್‌ಗಳನ್ನು ಅಳವಡಿಸುತ್ತಿದ್ದಾರೆ. 

ADVERTISEMENT

ಅರಮನೆಯ ಮುಖ್ಯ ಕಟ್ಟಡ, ಒಳಾಂಗಣವಲ್ಲದೇ  ಬಲರಾಮ, ವರಾಹ, ಜಯಮಾರ್ತಾಂಡ ದ್ವಾರ ಗಳು, ಆವರಣದ ಎಲ್ಲ ದೇಗುಲಗಳು, ಕೋಟೆ ಸೇರಿದಂತೆ ಎಲ್ಲ ಭಾಗಗಳಿಗೂ ವಿದ್ಯುತ್‌ ದೀಪ ಅಳವಡಿಸಲಾಗುತ್ತಿದೆ.  ‌ 

ಅರಮನೆಯ ತೂಗುವ ದೀಪಗಳಲ್ಲಿ ಒಡೆದ ಗಾಜುಗಳನ್ನು ತೆರವುಗೊಳಿಸುವ, ವೈರಿಂಗ್‌ ಸರಿಪಡಿಸುವ ಕೆಲಸವನ್ನು ಕಾರ್ಮಿಕರು ಮುಗಿಸಿದ್ದಾರೆ. ಎತ್ತರ ದೀಪದ ಕಂಬಗಳಿಗೆ ಕ್ರೇನ್‌ನ ಅಟ್ಟಣಿಗೆಯಲ್ಲಿ ದುರಸ್ತಿಗೊಳಿಸುತ್ತಿರುವುದು ಶುಕ್ರವಾರ ಕಂಡುಬಂತು.  

ಕೆಟ್ಟಿದ್ದ ಅಲಂಕೃತ ದೀಪಗಳ ಬದಲಾವಣೆ: ಒಳಾಂಗಣದಲ್ಲಿ ಮಸಿ ತುಂಬಿದ್ದ ಅಲಂಕೃತ ದೀಪಗಳ ಗಾಜುಗಳನ್ನು ಜೋಪಾನವಾಗಿ ಕೆಳಗಿಳಿಸಿ ಮಸಿ ಒರೆಸಿ ಹೊಳೆಯುವಂತೆ ಮಾಡಲಾಗಿದ್ದು, ಹಾಳಾದವನ್ನು ಬದಲಿಸಲಾಗಿದೆ. 

‘ಕಳೆದ ವರ್ಷಕ್ಕಿಂತ ಎರಡು ಸಾವಿರ ಕಡಿಮೆ ಬಲ್ಬ್‌ ಈ ಬಾರಿ ಹಾಳಾಗಿವೆ. 1 ಲಕ್ಷ ಬಲ್ಬ್‌ಗಳಲ್ಲಿ ಕೆಟ್ಟಿದ್ದವನ್ನು ಗುರುತಿಸಿರುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ. ಸುಣ್ಣ–ಬಣ್ಣದ ಕೆಲಸವೂ ನಡೆದಿದೆ’ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು. ‌

‘ನವರಾತ್ರಿ ವೇಳೆ ಅರಮನೆಯಲ್ಲಿ ವಾಡಿಕೆಯಂತೆ ಸಂಜೆ 7ರಿಂದ ರಾತ್ರಿ 10ರವೆರೆಗೆ ವಿದ್ಯುತ್‌ ದೀಪಾಲಂಕಾರ ಜಗಮಗಿಸಲಿದೆ. ಸರಬರಾಜಿನಲ್ಲಿ ವ್ಯತ್ಯಯ ವಾಗದಂತೆ ಅಗತ್ಯ ಕ್ರಮವನ್ನು ಅರಮನೆಯ ವಿದ್ಯುತ್‌ ವಿಭಾಗ ವಹಿಸಿದೆ’ ಎಂದು ಮಾಹಿತಿ ನೀಡಿದರು. 

ಬುರುಡೆ ಬಲ್ಬ್‌: ‘ಬಲ್ಬ್‌ಗಳು ಬುರುಡೆ ತಿರುಪಿನವಾಗಿದ್ದು, ಕಳವು ಮಾಡುವುದು ಸಾಧ್ಯವಿಲ್ಲ. ಬಿಗಿಯಾಗಿ ಕೂರುವುದರಿಂದ ಗಾಳಿ– ಮಳೆಗೆ ಅಲ್ಲಾಡದಿರುವುದು ವಿಶೇಷ. ದೆಹಲಿಯ ಕಂಪನಿಯೊಂದು ಇದನ್ನು ಪೂರೈಸಿದೆ. 15 ವ್ಯಾಟ್‌ ಸಾಮರ್ಥ್ಯವಿದ್ದು, ಮೈಸೂರು ಲ್ಯಾಂಪ್ಸ್‌ ತಯಾರಿಸುತ್ತಿದ್ದ ‘ಎಂ’ ಆಕಾರದಲ್ಲಿಯೇ ಟಂಗ್‌ಸ್ಟನ್‌ ತಂತಿ ಇರುತ್ತದೆ’ ಎಂದು ಎಲೆಕ್ಟ್ರಿಕಲ್‌ ಎಂಜಿನಿಯರ್ ಸತೀಶ್‌ ತಿಳಿಸಿದರು.

‘ತಲಾ ಸಾವಿರ ಕೆ.ವಿ ಸಾಮರ್ಥ್ಯದ 2 ಟ್ರಾನ್ಸ್‌ಫಾರ್ಮರ್‌ಗಳಿವೆ. 500 ಕೆ.ವಿ ಸಾಮರ್ಥ್ಯದ ಮತ್ತೆರಡು ಟ್ರಾನ್ಸ್‌ಫಾರ್ಮರ್‌ಗಳು ಗೇಟ್‌ಗಳಲ್ಲಿದೆ. ಅರಮನೆಯಲ್ಲಿ ಆರು ವಿದ್ಯುತ್ ವಿಭಾಗಗಳಿದ್ದು (ಬ್ರೇಕರ್ಸ್) ಪ್ರತಿಯೊಂದರಲ್ಲೂ 10 ಉಪ ವಿಭಾಗವಿದೆ. ವಿಭಾಗವಾರು ಪರಿಶೀಲನೆ ಹಾಗೂ ದುರಸ್ತಿ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

ದೆಹಲಿಯ ವಿಶೇಷ ಬುರುಡೆ ಬಲ್ಬ್‌

ಅರಮನೆಗೆ ಬಳಸಲಾಗುವ ಇನ್‌ಕ್ಯಾಂಡಿಸೆಂಟ್‌ ಬಲ್ಬ್‌ಗಳನ್ನು ದೆಹಲಿಯಿಂದ ತರಿಸಲಾಗಿದೆ. ತಿರುಪಿನ ಬುರುಡೆಯ ಬಲ್ಬ್‌ಗಳನ್ನು ಅರಮನೆಗೆಂದೇ ವಿಶೇಷವಾಗಿ ತಯಾರಿಸಲಾಗುತ್ತದೆ. ಇವುಗಳನ್ನು ಕದಿಯಲಾಗದು! 

ಈ ಮೊದಲು 20 ವಾಟ್‌ನ ಬಲ್ಬ್‌ಗಳನ್ನು ಅಳವಡಿಸಲಾಗುತ್ತಿತ್ತು. ಮೈಸೂರು ಲ್ಯಾಂಪ್ಸ್‌ ಕಾರ್ಖಾನೆಯ ಬಲ್ಬ್‌ಗಳನ್ನು ಬಳಸಲಾಗುತ್ತಿತ್ತು. ಆ ಕಾರ್ಖಾನೆಯು ಮುಚ್ಚಿ ದಶಕವಾಗಿದೆ.

ಕಣ್ಣು ಕೋರೈಸುವುದನ್ನು ಕಡಿಮೆ ಮಾಡಲು, ಅರಮನೆಯ ವಾಸ್ತುಶಿಲ್ಪ ಸರಿಯಾಗಿ ಗೋಚರಿಸಲು 15 ವ್ಯಾಟ್‌ಗೆ ಇಳಿಸಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.