ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ದಿನ ದಿನಕ್ಕೂ ಕಳೆಗಟ್ಟುತ್ತಿದ್ದು, ಪ್ರವಾಸಿಗರಿಗೆ ನಗರದ ದೀಪಾಲಂಕಾರ ವೀಕ್ಷಣೆಯ ಸೌಲಭ್ಯ ನೀಡಲೆಂದು ವಿಶೇಷವಾಗಿ ಸಂಚರಿಸುತ್ತಿರುವ ಅಂಬಾರಿ ಡಬಲ್ ಡೆಕ್ಕರ್ ಬಸ್‌ಗಳ ಮೇಲ್ಭಾಗದ ಸೀಟ್‌ಗಳು (ಅಪ್ಪರ್ ಡೆಕ್) ಅ.21ರವರೆಗೂ ಸಂಪೂರ್ಣ ಬುಕಿಂಗ್ ಆಗಿವೆ.
ಅ.3ರಂದು ವಿಶೇಷ ಸಂಚಾರ ಆರಂಭಿಸಿರುವ 6 ಅಂಬಾರಿ ಬಸ್‌ಗಳು ದಿನವೂ 18 ಟ್ರಿಪ್‌ಗಳಲ್ಲಿ ಸಂಚರಿಸುತ್ತಿವೆ. 15 ದಿನಗಳಿಂದ ದಸರಾ ಪ್ರಯಾಣದ ಆನ್‌ಲೈನ್ ಬುಕಿಂಗ್ ನಡೆದಿದೆ. ಓಪನ್ ಟಾಪ್ ವ್ಯವಸ್ಥೆ ಹೊಂದಿರುವ ಬಸ್‌ನಲ್ಲಿ ಕುಳಿತು ಪ್ರವಾಸಿಗರು ನಗರದ ಸೌಂದರ್ಯವನ್ನು ಸವಿಯುತ್ತಿದ್ದಾರೆ.
ದೀಪಾಲಂಕಾರ ಮುಗಿಯುವವರೆಗೂ ಅಂದರೆ, ಅ.23ರವರೆಗೂ ವಿಶೇಷ ಪ್ರಯಾಣ ಲಭ್ಯವಿದ್ದು, ಬಸ್‌ನಲ್ಲಿರುವ ಕೆಳಗಿನ ಸೀಟ್‌ಗಳು (ಲೋವರ್ ಡೆಕ್) ಶೇ 50ರಷ್ಟು ಭರ್ತಿಯಾಗಿವೆ. ಅ.22 ಮತ್ತು 23ರಂದು ಮೇಲ್ಭಾಗದ ಸೀಟ್‌ಗಳೂ ಲಭ್ಯವಿದ್ದು, ಆನ್‌ಲೈನ್ ಮೂಲಕ ಕಾಯ್ದಿರಿಸಬಹುದು.
ಬಸ್ ಸಂಚಾರದ ಮಾರ್ಗ: ಅಂಬಾರಿ ಡಬಲ್ ಡೆಕ್ಕರ್ ಬಸ್‌ನ ನಗರ ಸಂಚಾರವು ಹೋಟೆಲ್ ಮಯೂರ ಹೊಯ್ಸಳದಿಂದ ಆರಂಭವಾಗಲಿದ್ದು, ಹಳೆ ಡಿಸಿ ಕಚೇರಿ, ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್, ಓರಿಯೆಂಟಲ್ ಕೇಂದ್ರ ಗ್ರಂಥಾಲಯ, ರಾಮಸ್ವಾಮಿ ಸರ್ಕಲ್, ಸಂಸ್ಕೃತ ಪಾಠಶಾಲೆ, ಅರಮನೆ ದಕ್ಷಿಣ ದ್ವಾರ, ಜಯಮಾರ್ತಾಂಡ ಗೇಟ್, ಹಾರ್ಡಿಂಜ್ ಸರ್ಕಲ್, ಕೆ.ಆರ್.ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದಿಕ್ ವೈದ್ಯಕೀಯ ಆಸ್ಪತ್ರೆ, ರೈಲ್ವೆ ನಿಲ್ದಾಣ ರಸ್ತೆ ಮೂಲಕ ಹೋಟೆಲ್ ಮಯೂರ ಹೊಯ್ಸಳಕ್ಕೆ ವಾಪಸ್ ಆಗಲಿದೆ.
3 ಅವಧಿಯಲ್ಲಿ ಬುಕಿಂಗ್: ‘ಪ್ರತಿ ದಿನ ಸಂಜೆ 6.30, ರಾತ್ರಿ 7.30 ಮತ್ತು ರಾತ್ರಿ 9.30ರ ಸಮಯಕ್ಕೆ ಹೊರಡುವ ಬಸ್‌ಗಳನ್ನು ಬುಕ್ ಮಾಡಬಹುದು. ಮೇಲ್ಭಾಗದ ಸೀಟ್‌ಗಳಿಗೆ (5 ವರ್ಷ ಮೇಲ್ಪಟ್ಟ) ಒಬ್ಬರಿಗೆ ₹500 ಹಾಗೂ ಕೆಳ ಭಾಗದ ಸೀಟ್‌ಗಳಿಗೆ ₹250 ಶುಲ್ಕ ನಿಗದಿಯಾಗಿದ್ದು, 1 ಗಂಟೆ ಪ್ರಯಾಣ ಅವಧಿಯಾಗಿದೆ. ಮಧ್ಯೆ ಎಲ್ಲಿಯೂ ಪ್ರಯಾಣಿಕರಿಗೆ ಇಳಿದು ಹೋಗುವ ಅವಕಾಶವಿಲ್ಲ. ಹೆಚ್ಚು ಬೇಡಿಕೆ ಬಂದಾಗ, ಕೆಲ ನಿಯಮಗಳೊಂದಿಗೆ ಅಪರ್ ಡೆಕ್‌ನಲ್ಲಿ ನಿಂತು ಪ್ರಯಾಣಿಸಲು 6 ಮಂದಿಗೆ ಮ್ಯಾನುವಲ್ ಟಿಕೆಟ್‌ಗಳನ್ನು ಸಂಚಾರ ಆರಂಭ ಸ್ಥಳದಲ್ಲಿ ನೀಡಲಾಗುತ್ತದೆ’ ಎಂದು ಕೆಎಸ್‌ಟಿಡಿಸಿ ಮೈಸೂರು ಸಾರಿಗೆ ವಿಭಾಗದ ವ್ಯವಸ್ಥಾಪಕ ಕೆ.ಆರ್.ಮಧುರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಟಿಕೆಟ್ ಕಾಯ್ದಿರಿಸಲು ಹಾಗೂ ಸಂಸ್ಥೆಯ ಇತರ ಪ್ರಯಾಣ ಯೋಜನೆ ಸೌಲಭ್ಯಗಳ ಮಾಹಿತಿ ಪಡೆಯಲು ಕೆಎಸ್‌ಟಿಡಿಸಿ ವೆಬ್‌ಸೈಟ್: https://www.kstdc.co ಭೇಟಿ ನೀಡಬಹುದು’ ಎಂದು ಮಾಹಿತಿ ನೀಡಿದರು.
ದೀಪಾಲಂಕಾರ ವೀಕ್ಷಣೆಗಾಗಿ ವಿಶೇಷ ಟ್ರಿಪ್ ಲೋವರ್ ಡೆಕ್‌ನಲ್ಲಿ ಶೇ 50 ಸೀಟ್ ಲಭ್ಯ ಅಪರ್ ಡೆಕ್ ₹500, ಲೋವರ್ ಡೆಕ್ ₹250 ಶುಲ್ಕ
‘ಬೇರೆ ದಿನವೂ ಬಸ್ ಬಳಕೆಗೆ ಚಿಂತನೆ’
‘ಅಂಬಾರಿ ಡಬಲ್ ಡೆಕ್ಕರ್ ಬಸ್‌ಗಳು ಐಷಾರಾಮಿಯಾಗಿದ್ದು ರಸ್ತೆಯಲ್ಲಿ ಚಲಿಸಲು ಕನಿಷ್ಠ 22 ಅಡಿ ಎತ್ತರದವರೆಗೂ ರೂಟ್ ಕ್ಲಿಯರೆನ್ಸ್ ಇರಬೇಕು. ನಮ್ಮಲ್ಲಿ 6 ಬಸ್‌ಗಳಿದ್ದು 5 ಬಸ್‌ಗಳು ದಸರಾದಲ್ಲಷ್ಟೇ ಬಳಕೆಯಾಗುತ್ತಿದ್ದು ಆರ್‌ಟಿಒ ಡಿಪೋದಲ್ಲಿ ನಿಲ್ಲಿಸಲಾಗುತ್ತಿದೆ. ಇದನ್ನು ಬೇರೆ ದಿನವೂ ಬಳಕೆ ಮಾಡುವ ಚಿಂತನೆ ನಡೆಯುತ್ತಿದೆ’ ಎಂದು ಕೆ.ಆರ್.ಮಧುರಾಜ್ ತಿಳಿಸಿದರು. ‘ಈಗ ಒಂದು ಬಸ್ ಅರಮನೆ ಬಳಿಯಿಂದ ನಿಗದಿತ ಮಾರ್ಗದಲ್ಲಿ ಪ್ರಯಾಣಿಕರ ಭರ್ತಿ ಆಧರಿಸಿ ಸಂಚರಿಸುತ್ತಿದೆ. ವಿಶಾಲವಾದ ಜಾಗ ಮರಗಳ ಅಡೆತಡೆ ಇಲ್ಲದಿರುವುದು ಸೆಸ್ಕ್ ಆರ್.ಟಿ.ಒ ಮುಂತಾದ ಪ್ರಾಧಿಕಾರಗಳ ಅನುಮತಿ ದೊರೆತರೆ ಮಾರ್ಗಗಳನ್ನು ಹೆಚ್ಚಿಸಬಹುದು. ಉಳಿದ ಬಸ್‌ಗಳನ್ನು ಬಳಸಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.