ADVERTISEMENT

Mysuru Dasara | ಜಂಬೂಸವಾರಿ ಮೊದಲ ತಾಲೀಮು ಯಶಸ್ವಿ

ದಸರಾ: ಅರಮನೆ ಆವರಣದಲ್ಲಿ ವಿವಿಧ ಪೊಲೀಸ್ ತುಕಡಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 5:46 IST
Last Updated 10 ಅಕ್ಟೋಬರ್ 2024, 5:46 IST
ಮೈಸೂರು ಅರಮನೆ ಆವರಣದಲ್ಲಿ ಬುಧವಾರ ನಡೆದ ಜಂಬೂಸವಾರಿ ತಾಲೀಮಿನಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು
ಮೈಸೂರು ಅರಮನೆ ಆವರಣದಲ್ಲಿ ಬುಧವಾರ ನಡೆದ ಜಂಬೂಸವಾರಿ ತಾಲೀಮಿನಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು   

ಮೈಸೂರು: ದಸರಾ ಅಂಗವಾಗಿ ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಬುಧವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ‘ಜಂಬೂಸವಾರಿ ಮೆರವಣಿಗೆಯ ಮೊದಲ ತಾಲೀಮು’ ಯಶಸ್ವಿಯಾಗಿ ನಡೆಯಿತು. ಇದರೊಂದಿಗೆ, ಅ.12ರಂದು ಜರುಗಲಿರುವ ವಿಜಯದಶಮಿ ಮೆರವಣಿಗೆಗೆ ಕೊನೆಯ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಶನಿವಾರ ಮಧ್ಯಾಹ್ನ 1.41ರಿಂದ 2.10ರವರೆಗೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡುವರು. ಅಂದು ಸಂಜೆ 4ರಿಂದ 4.30ರೊಳಗೆ ಗಜಪಡೆಯ ನಾಯಕ ‘ಅಭಿಮನ್ಯು’ ಮೇಲೆ ಕಟ್ಟಲಾಗುವ ಚಿನ್ನದ ಅಂಬಾರಿಯಲ್ಲಿ ನಾಡದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ತಾಲೀಮನ್ನು ನಡೆಸಲಾಗುತ್ತಿದೆ.

ಜಂಬೂಸವಾರಿಯಂದು ಅರಮನೆ ಆವರಣದಲ್ಲಿ ಅಂಬಾರಿ ಆನೆ ಮುಂದೆ ಪೊಲೀಸ್ ತುಕಡಿ, ಅಶ್ವದಳ, ಪೊಲೀಸ್ ಬ್ಯಾಂಡ್ ವಾದನದ ತಂಡ ಮೊದಲಾದವು ಯಾವ ಕ್ರಮಾಂಕದಲ್ಲಿ ಸಾಗಬೇಕೆಂಬ ಬಗ್ಗೆ ಪುಷ್ಪಾರ್ಚನೆಯ ತಾಲೀಮು ನಡೆಸಲಾಯಿತು.

ADVERTISEMENT

ಸಿಡಿಮದ್ದು: ‘ನಿಶಾನೆ’ ಆನೆ ಧನಂಜಯ, ‘ನೌಫತ್’ ಗೋಪಿ, ಸಾಲಾನೆಗಳು ಯಾವ ಕ್ರಮಾಂಕದಲ್ಲಿ ಸಾಗಬೇಕೆಂದು ಈಗಾಗಲೇ ನಿರ್ಧರಿಸಲಾಗಿದ್ದು, ಅದರಂತೆ ಆನೆಗಳು ಸಾಗಿದವು. ಅಂಬಾರಿ ಆನೆ ಅಭಿಮನ್ಯು ಕುಮ್ಕಿ ಆನೆಗಳಾದ ಲಕ್ಷ್ಮಿ ಹಾಗೂ ಹಿರಣ್ಯಾ ಜೊತೆ ಪುಷ್ಪಾರ್ಚನೆ ಸ್ಥಳಕ್ಕೆ ಬಂದಿತು. ಪರೇಡ್ ಕಮಾಂಡರ್ ಆದ ಅಶ್ವದಳ ಕಮಾಂಡೆಂಟ್ ವಿ.ಶೈಲೇಂದ್ರ ಕುದುರೆ ಮೇಲೆ ಬಂದು ಪರೇಡ್ ಆರಂಭಕ್ಕೆ ಗಣ್ಯರಿಂದ ಅನುಮತಿ ಕೇಳಿದರು. ಅನುಮತಿ ಸಿಗುತ್ತಿದ್ದಂತೆ ರಾಷ್ಟ್ರಗೀತೆಗೆ ಕಮಾಂಡ್ ಕೊಡುತ್ತಿದ್ದಂತೆಯೇ ವೇದಿಕೆಯಲ್ಲಿದ್ದ ಶಾಸಕ ಟಿ.ಎಸ್.ಶ್ರೀವತ್ಸ, ಡಿಸಿಪಿಗಳಾದ ಎಂ.ಮುತ್ತುರಾಜ್, ಜಾಹ್ನವಿ, ಸಿಎಆರ್ ಡಿಸಿಪಿ ಮಾರುತಿ, ಎಸಿಪಿಗಳಾದ ಶಾಂತಮಲ್ಲಪ್ಪ, ಅಶೋಕ್ (ಸಿಎಆರ್), ಅರಮನೆ ಭದ್ರತಾ ವಿಭಾಗದ ಎಸಿಪಿ ಚಂದ್ರಶೇಖರ್ ಅಭಿಮನ್ಯು ಆನೆ ಮೇಲೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಕೋಟೆ ಮಾರಮ್ಮ ದೇವಾಲಯದ ಮೈದಾನದಲ್ಲಿ ಸಿಡಿಮದ್ದು ಸಿಡಿಸುವ ತಂಡ 7 ಫಿರಂಗಿಗಳಲ್ಲಿ ತಲಾ 3 ಸುತ್ತಿನಂತೆ 21 ಬಾರಿ ಸಿಡಿಮದ್ದು ಸಿಡಿಸಿದರು.

ರಾಷ್ಟ್ರಗೀತೆಗೆ ಅಭಿಮನ್ಯು ಸೊಂಡಿಲೆತ್ತಿ ಗಣ್ಯರಿಗೆ ನಮಿಸಿತು. ಸಮವಸ್ತ್ರ ಧರಿಸಿದ್ದ ಪೊಲೀಸ್ ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಸೆಲ್ಯೂಟ್ ಮೂಲಕ ಗೌರವ ಸಮರ್ಪಿಸಿದರು. ನಂತರ ಪೊಲೀಸ್ ಬ್ಯಾಂಡ್ ವಾದನಕ್ಕೆ ಅನುಗುಣವಾಗಿ ಪೊಲೀಸ್ ತುಕಡಿಗಳು ಪಥಸಂಚಲನದಲ್ಲಿ ಸಾಗಿದವು. ಅವುಗಳನ್ನು ಅಶ್ವಪಡೆ ಹಿಂಬಾಲಿಸಿತು. ಅಂತಿಮವಾಗಿ ಅಂಬಾರಿ ಆನೆ ಅಭಿಮನ್ಯು ಕುಮ್ಕಿ ಆನೆಯೊಂದಿಗೆ ಹೆಜ್ಜೆ ಹಾಕಿತು.

ಸಿಡಿಮದ್ದು ಸಿಡಿತದ ತಾಲೀಮಿನ ವೇಳೆ ಶಬ್ದಕ್ಕೆ ಹೆದರಿದ್ದ ಕುಮ್ಕಿ ಆನೆ ಹಿರಣ್ಯಾ ಹಾಗೂ ಶ್ರೀರಂಗಪಟ್ಟಣದಲ್ಲಿ ಓಡಾಡಿದ್ದ ಲಕ್ಷ್ಮಿ ಆನೆ ಬುಧವಾರದ ತಾಲೀಮಿನಲ್ಲಿ ಹೆಚ್ಚು ಅಳುಕಿಲ್ಲದೆ ಪಾಲ್ಗೊಂಡು ಗಮನ ಸೆಳೆದವು.

‘ಜಂಬೂಸವಾರಿಯ ಮೊದಲ ತಾಲೀಮು ಯಶಸ್ವಿಯಾಗಿದೆ. ಎಲ್ಲಾ ಆನೆಗಳೂ ಗಾಂಭೀರ್ಯದಿಂದ ವರ್ತಿಸಿವೆ. ಜಂಬೂಸವಾರಿಗೆ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ವನ್ಯಜೀವಿ ವಿಭಾಗದ ಡಿಸಿಎಫ್‌ ಐ.ಬಿ. ಪ್ರಭುಗೌಡ ತಿಳಿಸಿದರು.

ನಾಡಗೀತೆ ವೇಳೆ 21 ಬಾರಿ ಸಿಡಿಮದ್ದು ಸಿಡಿಸಿ ತಾಲೀಮು ವಿಜಯದಶಮಿ ಮೆರವಣಿಗೆಗೆ ಸಜ್ಜಾದ ಗಜಪಡೆ ಶಾಸಕ ಟಿ.ಎಸ್.ಶ್ರೀವತ್ಸ, ಅಧಿಕಾರಿಗಳು ಭಾಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.