ಮೈಸೂರು: ‘ದಸರಾ ಅಂಗವಾಗಿ ಸೆ.22ರಿಂದ ಅ.1ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8.30ರವರೆಗೆ ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಸಮೀಪದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಕನ್ನಡ ಪುಸ್ತಕಗಳ ಪ್ರದರ್ಶನ ಹಾಗೂ ರಿಯಾಯಿತಿ ಮಾರಾಟ ಮೇಳ ಆಯೋಜಿಸಲಾಗಿದೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ತಿಳಿಸಿದರು.
ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘22ರಂದು ಬೆಳಿಗ್ಗೆ 10.30ಕ್ಕೆ ಚಾಮುಂಡಿಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ, ಪ್ರಾಧಿಕಾರದಿಂದ ಪ್ರಕಟಿಸಿರುವ ಹಾಗೂ ಶಿವಾನಂದ ವಿರಚಿತ ಬಾನು ಮುಷ್ತಾಕ್ ಅವರ ಬದುಕು–ಬರಹ ಕುರಿತ ‘ಬುಕರ್ ಬಾನು’ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡುವರು. ಸಂಜೆ 5ಕ್ಕೆ ಮೇಳವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ ಉದ್ಘಾಟಿಸುವರು’ ಎಂದು ಮಾಹಿತಿ ನೀಡಿದರು.
‘ಮೇಳದ ಪೂರ್ವಭಾವಿಯಾಗಿ ‘ಪುಸ್ತಕ ರಥ’ವು ನಗರದಾದ್ಯಂತ ಸಂಚರಿಸಿ ಜಾಗೃತಿ ಮೂಡಿಸಲಿದ್ದು, ಸೆ.20ರಂದು ಬೆಳಿಗ್ಗೆ 11ಕ್ಕೆ ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆ ಎದುರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಚಾಲನೆ ನೀಡುವರು’ ಎಂದು ತಿಳಿಸಿದರು.
90 ಮಳಿಗೆಗಳು:
‘90 ಮಳಿಗೆಗಳಿಗೆ ನಮಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. 135ಕ್ಕೂ ಹೆಚ್ಚು ಮಳಿಗೆಗಳಿಗೆ ಬೇಡಿಕೆ ಬಂದಿದೆ. ಅರ್ಜಿಗಳನ್ನು ಪರಿಶೀಲಿಸಿ ಅವಕಾಶ ಕಲ್ಪಿಸಲಾಗುವುದು. ಮಳಿಗೆಗಳನ್ನು ಉಚಿತವಾಗಿ ಕೊಡಲಾಗುತ್ತಿದೆ. ಅದನ್ನು ನೋಡಿಕೊಳ್ಳುವವರಿಗೆ ಮಧ್ಯಾಹ್ನದ ಊಟ, ಸಂಜೆ ಉಪಾಹಾರವನ್ನೂ ಕೊಡಲಾಗುವುದು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಮೇಳದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ’ ಎಂದರು.
‘50ಸಾವಿರಕ್ಕೂ ಹೆಚ್ಚು ಪ್ರಕಟಣೆಗಳು ಮೇಳದಲ್ಲಿರಲಿವೆ. 28 ಪುಸ್ತಕ ಬಿಡುಗಡೆಗೊಳ್ಳಲಿದ್ದು, ನಿತ್ಯ ಬೆಳಿಗ್ಗೆ 11.30ಕ್ಕೆ ಆ ಕಾರ್ಯಕ್ರಮ ನಡೆಯಲಿದೆ’ ಎಂದು ಹೇಳಿದರು.
ಬಾನು ಮುಷ್ತಾಕ್ ಬದುಕು ಕುರಿತ ಚರ್ಚೆ:
‘23ರಂದು ಸಂಜೆ 4ಕ್ಕೆ ಬಾನು ಮುಷ್ತಾಕ್ ಬದುಕು ಕುರಿತ ಚರ್ಚೆ ನಡೆಯಲಿದ್ದು, ವಸುಧೇಂದ್ರ, ಪ್ರೀತಿ ನಾಗರಾಜ್, ಮಂಜುಳಾ ಕಿರುಗಾವಲು, ಸಿದ್ದರಾಮ ಹೊನ್ಕಲ್ ಪಾಲ್ಗೊಳ್ಳುವರು. 24ರಂದು ರಾಯಚೂರಿನ ಕೆ.ವಿ. ಪ್ರಭಾ ಮತ್ತು ತಂಡದಿಂದ ಭಾವಗೀತೆ ಗಾಯನ ನಡೆಯಲಿದೆ. 25ರಂದು ಕವಿಗೋಷ್ಠಿ ಮತ್ತು ಕುಂಚ–ಕಾವ್ಯ ಗಾಯನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ, ಲಲಿತಕಲಾ ಅಕಾಡೆಮಿ ಹಾಗೂ ಸಂಗೀತ ನೃತ್ಯ ಅಕಾಡೆಮಿಯಿಂದ ಆಯೋಜಿಸಲಾಗಿದೆ. 26ರಂದು ಮೈಸೂರಿನ ಜಿ.ಆರ್. ಶ್ರೀವತ್ಸ ಮತ್ತು ತಂಡದವರು ಜನಪದ ಗೀತೆಗಳ ಕಾರ್ಯಕ್ರಮ ನೀಡುವರು’ ಎಂದು ತಿಳಿಸಿದರು.
‘27ರಂದು ಯುವರಾಜ ಕಾಲೇಜು ವಿದ್ಯಾರ್ಥಿಗಳಿಂದ ನನ್ನ ಮೆಚ್ಚಿನ ಪುಸ್ತಕ ಓದು ಕಾರ್ಯಕ್ರಮ ನಡೆಯಲಿದೆ. 28ರಂದು ಮೈಸೂರಿನ ವೃಕ್ಷ ಟ್ರಸ್ಟ್ ವತಿಯಿಂದ ರಂಗಗೀತೆಗಳ ಗಾಯನ, 29ರಂದು ‘ಬಸವಣ್ಣ ಮತ್ತು ಕನಕದಾಸರು: ತೌಲನಿಕ ಅಧ್ಯಯನ’ ಎಂಬ ವಿಚಾರಸಂಕಿರಣವನ್ನು ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದೆ. 30ರಂದು ಕೃಷ್ಣಮೂರ್ತಿ ಮತ್ತು ತಂಡದಿಂದ ‘ಕಂಸವಧೆ’ ಯಕ್ಷಗಾನ ಪ್ರಸಂಗ ನಡೆಯಲಿದೆ’ ಎಂದು ವಿವರಿಸಿದರು.
‘ಸಾಹಿತಿಗಳೊಂದಿಗೆ ಸೆಲ್ಫಿ ಫೋಟೊಗೆ ಅವಕಾಶ ಕಲ್ಪಿಸಲಾಗಿದೆ. 23ರಂದು ಎಲ್.ಎನ್. ಮುಕುಂದರಾಜ್ ಹಾಗೂ ವಸುಧೇಂದ್ರ, 24ರಂದು ಸುಕನ್ಯಾ ಮಾರುತಿ, 25ರಂದು ಎಂ.ಎನ್. ನರಸಿಂಹಮೂರ್ತಿ, 26ರಂದು ಮಲ್ಲಿಕಾ ಘಂಟಿ, 27ರಂದು ಶಂಕರ್ ಅಶ್ವತ್ಥ್, 28ರಂದು ಪ್ರೊ.ಎಂ. ಕೃಷ್ಣೇಗೌಡ, 29ರಂದು ಅರವಿಂದ ಮಾಲಗತ್ತಿ, 30ರಂದು ಟಿ.ವಿ. ವೆಂಕಟಾಚಲಶಾಸ್ತ್ರಿ ಪಾಲ್ಗೊಳ್ಳುವರು. ನಿತ್ಯ ಸಂಜೆ 4.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗದ ನಿರ್ದೇಶಕ ನಂಜಯ್ಯ ಹೊಂಗನೂರು, ಪುಸ್ತಕ ಮೇಳ ಉಪ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.