ADVERTISEMENT

ಮಳೆಯಲಿ, ಸಂಗೀತದ ಜೊತೆಯಲಿ...

ಅರ್ಮಾನ್‌ ಮಲಿಕ್‌ ಗಾಯನಕ್ಕೆ ತನ್ಮಯವಾದ ಮೈಸೂರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 20:06 IST
Last Updated 14 ಅಕ್ಟೋಬರ್ 2018, 20:06 IST
ಗಾನಸುಧೆ ಹರಿಸಿದ ಅನುರಾಧಾ ಭಟ್‌, ಅರ್ಮಾನ್‌ ಮಲಿಕ್‌
ಗಾನಸುಧೆ ಹರಿಸಿದ ಅನುರಾಧಾ ಭಟ್‌, ಅರ್ಮಾನ್‌ ಮಲಿಕ್‌   

ಮೈಸೂರು: ಸಂಗೀತ ಪ್ರೇಮಿಗಳು ಭಾನುವಾರ ರಾತ್ರಿ ಗಾನಸುಧೆಯಲ್ಲಿ ತೇಲಿದರು. ತುಂತುರು ಮಳೆಯ ಸದ್ದು, ಬೆಳಕಿನ ವಯ್ಯಾರ ಕಿವಿಮನವನ್ನು ತನ್ಮಯವಾಗಿಸಿತು.

ಯುವ ದಸರಾ ಕಾರ್ಯಕ್ರಮದಲ್ಲಿ ರೊಮ್ಯಾಂಟಿಕ್‌ ಗೀತೆಗಳ ಮೂಲಕ ಯುವಕರ ಮನಸ್ಸು ಹಾಗೂ ಹೃದಯ ತೋಯಿಸಿದ್ದು ಅರ್ಮಾನ್‌ ಮಲಿಕ್‌ ಹಾಗೂ ಅನುರಾಧಾ ಭಟ್‌.

ತಣ್ಣಗೆ ಬೀಸುತ್ತಿದ್ದ ಗಾಳಿಯಲ್ಲಿ ಚಕ್ರವರ್ತಿ ಸಿನಿಮಾದ ‘ಒಂದು ಮಳೆಬಿಲ್ಲು, ಒಂದು ಮಳೆ ಮೋಡ' ಗೀತೆ ತೇಲಿ ಬರುತ್ತಿದ್ದಂತೆ ಇಡೀ ವಾತಾವರಣ ಬೆಚ್ಚಗಾಯಿತು.

ADVERTISEMENT

‘ನಮಸ್ಕಾರ ಮೈಸೂರು, ಹೇಗಿದ್ದೀರಾ? ಐ ಲವ್ ಕನ್ನಡಿಗಾಸ್’ ಎಂದು ಹೇಳುತ್ತಾ ವೇದಿಕೆ ಏರಿದ ಅರ್ಮಾನ್ ಸುಮಾರು ಎರಡು ಗಂಟೆಗಳವರೆಗೆ ವಿವಿಧ ಗೀತೆಗಳ ಮೂಲಕ ಯುವ ಮನಸ್ಸುಗಳಿಗೆ ಲಗ್ಗೆ ಇಟ್ಟರು.

‘ಮುಂಗಾರು ಮಳೆ-2' ಸಿನಿಮಾದ ‘ಸರಿಯಾಗಿ ನೆನಪಿದೆ ನನಗೆ, ಇದಕ್ಕೆಲ್ಲ ಕಾರಣ ಕಿರುನಗೆ' ಗೀತೆ ಮನಸೂರೆಗೊಂಡಿತು. ಕೆಲವೇ ದಿನಗಳಲ್ಲಿ ತೆರೆ ಕಾಣಲಿರುವ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾದ ‘ನೋಡಿವಳಂದವಾ ಮುದ್ದಿನ ಮಾಲೆ ಚೆಂದವಾ’ ಗೀತೆಯು ಸಂಗೀತ ರಾತ್ರಿಯ ಸೊಬಗು ಹೆಚ್ಚಿಸಿತು. ‘ಕಭೀ ಕಭೀ ಮೆರೆ ದಿಲ್ ಮೇ’ ಗೀತೆ ಹಾಡುತ್ತಾ ಪ್ರೇಕ್ಷಕರತ್ತ ಕೈಬೀಸಿದರು.

ಫ್ರೀಕರ್ಜ್ ಡಾನ್ಸ್ ಅಕಾಡೆಮಿ ಕಲಾವಿದರು ಗಣಪತಿ ಸ್ಮರಣೆ ಜತೆಗೆ ‘ಹರೇ ಕೃಷ್ಣ ಹರೇ ರಾಮ’ ಗೀತೆಗೆ ಹೆಜ್ಜೆ ಹಾಕಿದರು. ಟಗರು ಸಿನಿಮಾದ ‘ಟಗರು ಬಂತು ಟಗರು’ ನೃತ್ಯ ಯುವ ಸಮೂಹವನ್ನು ಮೋಡಿ ಮಾಡಿತು. ಯುವ ಸ್ಕೂಲ್‌ ಆಫ್‌ ಡಾನ್ಸ್‌ ಬಳಗದಿಂದ ನೃತ್ಯ ಕಾರ್ಯಕ್ರಮ ಮೂಡಿಬಂತು.

ಕೆಎಸ್‌ಐಸಿ ಮೈಸೂರು ವತಿಯಿಂದ ಆಯೋಜಿಸಿದ್ದ ಫ್ಯಾಷನ್‌ ಷೋ ಮನಸೂರೆಗೊಂಡಿತು. ರೇಷ್ಮೆ ಸೀರೆ ತೊಟ್ಟ ಯುವತಿಯರ ಜೊತೆ ರೇಷ್ಮೆ ಅಂಗಿ, ಲುಂಗಿ ತೊಟ್ಟ ಯುವಕರು ರ‍್ಯಾಂಪ್‌ ಮೇಲೆ ವಾಕ್ ಮಾಡಿದರು. ಸುಮಾರು 22 ರೂಪದರ್ಶಿಗಳು ವೇದಿಕೆಗೆ ರಂಗು ತಂದರು.

ಯುವ ಸಂಭ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಯಾಗಿದ್ದ ಕಾಲೇಜು ತಂಡಗಳು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.