ADVERTISEMENT

ಅರಮನೆಯಲ್ಲಿ ಇಂದು ವಜ್ರಮುಷ್ಟಿ ಕಾಳಗ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 19:26 IST
Last Updated 21 ಅಕ್ಟೋಬರ್ 2018, 19:26 IST

ಮೈಸೂರು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ನಾದಿನಿ ವಿಶಾಲಾಕ್ಷಿ ಅವರ ನಿಧನದಿಂದ ಸ್ಥಗಿತಗೊಂಡಿದ್ದ ವಿಜಯದಶಮಿ ಕಾರ್ಯಕ್ರಮಗಳು ಅರಮನೆಯಲ್ಲಿ ಸೋಮವಾರ ನಡೆಯಲಿವೆ.

ಬೆಳಿಗ್ಗೆ 9ರಿಂದ 10ರ ವೇಳೆಗೆ ಐತಿಹಾಸಿಕ ವಜ್ರಮುಷ್ಟಿ ಕಾಳಗ ನಡೆಯಲಿದೆ. ಈ ಕಾಳಗಕ್ಕೆ ನಾಲ್ವರು ಜಟ್ಟಿಗಳು ಸಿದ್ಧರಾಗಿದ್ದಾರೆ. ಕರಿಕಲ್ಲುತೊಟ್ಟಿ ಅಂಗಳದಲ್ಲಿ ಬೆಂಗಳೂರಿನ ರಾಘವೇಂದ್ರ ಜಟ್ಟಿ–ಚಾಮರಾಜನಗರ ಪುರುಷೋತ್ತಮ್‌ ಜಟ್ಟಿ ಹಾಗೂ ಮೈಸೂರಿನ ಮಂಜುನಾಥ ಜಟ್ಟಿ–ಚನ್ನಪಟ್ಟಣದ ವಿದ್ಯಾಧರ ಜಟ್ಟಿ ಪೈಪೋಟಿ ನಡೆಸಲಿದ್ದಾರೆ. ಇವರಿಬ್ಬರು ಹಲವು ದಿನಗಳಿಂದ ತಾಲೀಮು ನಡೆಸಿದ್ದಾರೆ. ಜಟ್ಟಿಯ ನೆತ್ತಿಯಿಂದ ರಕ್ತ ಚಿಮ್ಮಿದ ಮೇಲೆ ವಿಜಯಯಾತ್ರೆ ಆರಂಭವಾಗಲಿದೆ.

ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30 ರವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಆಯುಧಗಳಿಗೆ ಉತ್ತರ ಪೂಜೆ, ಬನ್ನಿಮರ ಪೂಜೆ, ವಿಜಯಯಾತ್ರೆ, ಇನ್ನಿತರ ಧಾರ್ಮಿಕ ಕಾರ್ಯಗಳು ನಡೆಯಲಿವೆ.

ADVERTISEMENT

ಅರಮನೆ ಪುರೋಹಿತರು, ಜ್ಯೋತಿಷಿಗಳ ಅಭಿಪ್ರಾಯ ಪಡೆದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ್‌ ಒಡೆಯರ್‌ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಸಲಾಗುತ್ತದೆ. ಯದುವೀರ ಬೆಳ್ಳಿ ರಥದಲ್ಲಿ ವಿಜಯಯಾತ್ರೆ ನಡೆಸಿ ಬನ್ನಿಮರಕ್ಕೆ ಪೂಜೆ ಸಲ್ಲಿಸಲಿದ್ದಾರೆ.

ಇದಕ್ಕಾಗಿ ಗಜಪಡೆಯ ಮೂರು ಆನೆಗಳನ್ನು ಅರಮನೆ ಆವರಣದಲ್ಲಿಯೇ ಉಳಿಸಿಕೊಳ್ಳಲಾಗಿದೆ. ವಿಕ್ರಮ, ಗೋಪಿ ಹಾಗೂ ವಿಜಯಾ ಆನೆಗಳು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿವೆ. ಪಟ್ಟದಾನೆ, ಕುದುರೆ, ಹಸುವಿಗೆ ಪೂಜೆ ಸಲ್ಲಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.