ADVERTISEMENT

ದಿನದ ಸೂಕ್ತಿ: ನಡೆ ನುಡಿಯಲ್ಲಿ ಶುದ್ಧವಾಗಿರಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 27 ಅಕ್ಟೋಬರ್ 2020, 19:31 IST
Last Updated 27 ಅಕ್ಟೋಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೃಷ್ಟಿಪೂತಂ ನ್ಯಸೇತ್ಪಾದಂ ವಸ್ತ್ರಪೂತಂ ಪಿಬೇಜ್ಜಲಮ್‌ ।

ಶಾಸ್ತ್ರಪೂತಂ ವದೇದ್ವಾಣೀಂ ಮನಃಪೂತಂ ಸಮಾಚರೇತ್‌ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಕಣ್ಣುಗಳಿಂದ ನೋಡಿ ಶುದ್ಧವಾಗಿರುವ ಸ್ಥಳದಲ್ಲಿಯೇ ಹೆಜ್ಜೆಯನ್ನು ಇಡಬೇಕು. ಬಟ್ಟೆಯಿಂದ ಶೋಧಿಸಿದ ನೀರನ್ನೇ ಕುಡಿಯಬೇಕು. ಶಾಸ್ತ್ರದಿಂದ ಶುದ್ಧಗೊಂಡ ಮಾತನ್ನೇ ಆಡಬೇಕು. ಮನಸ್ಸಿನಿಂದ ಶುದ್ಧವಾಗಿರುವ, ಎಂದರೆ ಮನಸ್ಸಿಗೆ ಒಪ್ಪಿಗೆಯಾದುದನ್ನೇ ಆಚರಿಸಬೇಕು.’

ಜೀವನದಲ್ಲಿ ಎಚ್ಚರವಾಗಿದ್ದರೆ ತೊಂದರೆಗಳು ಎದುರಾಗುವುದು ಕಡಿಮೆ. ಎಚ್ಚರವಾಗಿರುವುದು ಎಂದರೆ ಹೇಗೆ? ನಮ್ಮ ಪ್ರತಿ ಕೆಲಸವನ್ನು ಪರೀಕ್ಷಿಸಿಕೊಳ್ಳುವುದು; ಎಂದರೆ ಅದು ಶುದ್ಧವಾಗಿದೆಯೆ, ಅಶುದ್ಧವಾಗಿದೆಯೆ – ಎಂದು ತೂಗಿ ನೋಡುವುದು. ಇಂಥ ಪರೀಕ್ಷಕಬುದ್ಧಿ ನಮಗೆ ಇದ್ದುದೇ ಆದರೆ ತೊಂದರೆಗಳು ಎದುರಾಗುವುದಿಲ್ಲ; ಅಷ್ಟೇ ಅಲ್ಲ, ನಮ್ಮ ಕೆಲಸಗಳೂ ಚೆನ್ನಾದ ರೀತಿಯಲ್ಲಿಯೇ ನಡೆಯುತ್ತವೆ. ಇದನ್ನೇ ಸುಭಾಷಿತ ಹೇಳುತ್ತಿರುವುದು.

ನಡೆಯುವುದು ಅನಿವಾರ್ಯ; ನಡೆಯುವವರು ಎಡುವುವುದೂ ಸಹಜ. ಆದರೆ ಎಚ್ಚರಿಕೆಯಿಂದ ನಡೆಯುವಂಥ ಅಭ್ಯಾಸವನ್ನು ರೂಢಿಸಿಕೊಂಡರೆ ಆಗ ಬೀಳುವ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಸುಭಾಷಿತ ಹೀಗಾಗಿಯೇ ಹೇಳುತ್ತಿರುವುದು, ಕಣ್ಣಿನಿಂದ ಚೆನ್ನಾಗಿ ಪರೀಕ್ಷಿಸಿದ ಜಾಗದಲ್ಲಿಯೇ ಹೆಜ್ಜೆಯನ್ನು ಇಡತಕ್ಕದ್ದು.

ನಮ್ಮ ಹಲವಾರು ಕಾಯಿಲೆಗಳಿಗೆ ಮೂಲವೇ ನಾವು ಕುಡಿಯುವ ನೀರು. ಶುದ್ಧವಲ್ಲದ ನೀರನ್ನು ಕುಡಿದರೆ ಆರೋಗ್ಯ ಕೆಡುವುದು ಖಂಡಿತ. ಈಗಂತೂ ನಾವು ನೀರಿನ ಎಲ್ಲ ಮೂಲಗಳನ್ನೂ ಮಲಿನಗೊಳಿಸಿದ್ದೇವೆ. ಹೀಗಾಗಿಯೇ ಸುಭಾಷಿತ ಹೇಳುವ ಎಚ್ಚರಿಕೆಯನ್ನು ನಾವು ಪಾಲಿಸಲೇ ಬೇಕು. ಅದರ ಜೊತೆಗೆ ಇನ್ನೊಂದು ಎಚ್ಚರಿಕೆಯನ್ನೂ ತೆಗೆದುಕೊಳ್ಳಬಹುದು. ಕೇವಲ ಶೋಧಿಸಿದ ನೀರನ್ನು ಮಾತ್ರವಲ್ಲ, ಕಾಯಿಸಿ, ಆರಿಸಿ, ಶೋಧಿಸಿದ ನೀರನ್ನು ಕುಡಿಯವುದು ಆರೋಗ್ಯಕರವಾದುದು.

ನಾವಾಡುವ ಮಾತು ಅದು ನಮ್ಮ ವ್ಯಕ್ತಿತ್ವದ ಸೂಚಕ ಕೂಡ. ಹೀಗಾಗಿ ಎಚ್ಚರಿಕೆಯಿಂದ ಮಾತನ್ನು ಆಡಬೇಕು. ಲಂಗು–ಲಗಾಮು ಇಲ್ಲದೆ ಏನೇನೋ ಮಾತನಾಡಿ, ಕೇಳುವವರನ್ನು ಹಿಂಸೆಗೆ ಒಳಪಡಿಸಬಾರದು. ನಾವು ಆಡುವ ಮಾತಿಗೆ ಆಧಾರ ಇರಬೇಕು; ಅದು ಶುದ್ಧವಾಗಿಯೂ ಇರಬೇಕು. ಮಾತು ನಮ್ಮ ಪ್ರಪಂಚವನ್ನು ನಿರ್ಮಿಸಬಲ್ಲ ಅಪೂರ್ವ ಶಕ್ತಿಸಾಮಗ್ರಿ. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು ಶಾಸ್ತ್ರದಿಂದ ಶುದ್ಧೀಕರಿಸಿಕೊಂಡ ಮಾತನ್ನೇ ಆಡಬೇಕು ಎಂದು. ಇಲ್ಲಿ ಶಾಸ್ತ್ರ ಎಂದರೆ ವ್ಯಾಕರಣಶಾಸ್ತ್ರವೂ ಆದೀತು; ನಮಗೆ ತಿಳಿವಳಿಕೆಯನ್ನು ನೀಡುವ ಯಾವ ಶಾಸ್ತ್ರವೂ ಆದೀತು.

ಯಾರದೋ ಒತ್ತಡಕ್ಕೆ ಮಣಿದ, ಬಲವಂತಕ್ಕೆ ಶರಣಾಗಿ ಯಾವುದೇ ಕೆಲಸದಲ್ಲಿ ತೊಡಗಿಕೊಂಡರೂ ಅದು ಸಾರ್ಥಕತೆಯನ್ನು ಪಡೆಯದು. ಹೀಗಾಗಿ ನಮ್ಮ ಮನಸ್ಸು ಒಪ್ಪಿದ ಕೆಲಸವನ್ನೇ ಕೈಗೆತ್ತಿಕೊಳ್ಳಬೇಕು. ಸುಭಾಷಿತ ಮಾತನ್ನು ಇನ್ನೊಂದು ವಿಧದಲ್ಲೂ ಅರ್ಥಮಾಡಿಕೊಳ್ಳಲಾದೀತು. ನಾವು ಯಾವುದೇ ಕೆಲಸವನ್ನು ಮನಸ್ಸಿಟ್ಟು, ಎಂದರೆ ತುಂಬುಮನಸ್ಸಿನಿಂದ ಮಾಡಬೇಕು. ಆಗಲೇ ಆ ಕೆಲಸವೂ ತುಂಬುತನ, ಎಂದರೆ ಪೂರ್ಣತೆಯನ್ನು ಪಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.