ADVERTISEMENT

ದಿನದ ಸೂಕ್ತಿ: ದುಷ್ಟರಿದ್ದಾರೆ ಎಚ್ಚರ!

ಎಸ್.ಸೂರ್ಯಪ್ರಕಾಶ ಪಂಡಿತ್
Published 30 ಆಗಸ್ಟ್ 2020, 0:50 IST
Last Updated 30 ಆಗಸ್ಟ್ 2020, 0:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಲಾಂತರೇ ಹ್ಯನರ್ಥಾಯ ಗೃಧ್ರೋ ಗೇಹೋಪರಿ ಸ್ಥಿತಃ ।

ಖಲೋ ಗೃಹಸಮೀಪಸ್ಥಃ ಸದ್ಯೋsನರ್ಥಾಯ ದೇಹಿನಾಮ್‌ ।।

ಇದರ ತಾತ್ಪರ್ಯ ಹೀಗೆ:

ADVERTISEMENT

’ಮನೆಯ ಮೇಲೆ ಹದ್ದು ಕುಳಿತರೆ ಕಾಲಾಂತರದಲ್ಲಿ ಕೆಡಕು ಸಂಭವಿಸಬಹುದು. ದುಷ್ಟನು ಮನೆಯ ಹತ್ತಿರವಿದ್ದರೆ ಸಾಕು, ಆ ಕೂಡಲೇ ಕೆಡಕು ಸಂಭವಿಸುತ್ತದೆ.‘

‘ದುಷ್ಟನನ್ನು ಕಂಡರೆ ದೂರ ಇರು‘ ಎಂಬುದನ್ನು ಸುಭಾಷಿತ ಹೇಳುತ್ತಿದೆ.

ನಮ್ಮಲ್ಲಿ ಕೆಲವೊಂದು ನಂಬಿಕೆಗಳಿವೆ; ಅದರಲ್ಲಿ ಶಕುನಗಳೂ ಸೇರಿವೆ. ರಸ್ತೆಯನ್ನು ದಾಟುವಾಗ ಬೆಕ್ಕು ಅಡ್ಡ ಬಂದರೆ ಅನಾಹುತ ಸಂಭವಿಸುತ್ತದೆ; ಮೈಮೇಲೆ ಹಲ್ಲಿ ಬಿದ್ದರೆ ಏನೋನೋ ಕೆಟ್ಟ ಫಲಗಳನ್ನು ಅನುಭವಿಸಬೇಕಾಗುತ್ತದೆ; ಎಡಗಣ್ಣು ಹಾರಿದರೆ ಹೀಗಾಗುತ್ತದೆ, ಬಲಗಣ್ಣು ಹಾರಿದರೆ ಹಾಗಾಗುತ್ತದೆ – ಇಂಥ ಹಲವು ನಂಬಿಕೆಗಳು ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿವೆ. ಇವೇ ಶಕುನಗಳು. ಹೀಗೆ ನಂಬುವುದು ಸರಿಯೋ ತಪ್ಪೋ – ಇಲ್ಲಿನ ಚರ್ಚೆಗೆ ಅಪ್ರಸ್ತುತ. ಆದರೆ ಈ ನಂಬಿಕೆಗಳಂತೂ ಇವೆ. ಸುಭಾಷಿತ ಅಂಥ ನಂಬಿಕೆಯ ಎಳೆಯನ್ನು ಹಿಡಿದು ಒಂದು ಸಂದೇಶವನ್ನು ನೀಡುತ್ತಿದೆ.

ಮನೆಯ ಮೇಲೆ ಹದ್ದು ಕುಳಿತುಕೊಂಡರೆ ಅದು ಆ ಮನೆಯವರಿಗೆ ಮುಂದೆ ಎದುರಾಗುವ ಕೇಡನ್ನು ಸೂಚಿಸುತ್ತದೆ ಎನ್ನುವುದು ಕೂಡ ಅಂಥ ನಂಬಿಕೆಗಳಲ್ಲಿ ಒಂದು. ಈ ಶಕುನಗಳ ಒಂದು ಗುಣ ಎಂದರೆ ಅವುಗಳ ಪರಿಣಾಮ ಸದ್ಯಕ್ಕೇ ಪ್ರಕಟವಾಗುತ್ತದೆ ಎಂದೇನೂ ಇಲ್ಲ; ಅದು ಈಗಲೇ ನಡೆಯಬಹುದು, ಅಥವಾ ಮುಂದೆ ಎಂದೋ ನಡೆಯಬಹುದು. ಹೀಗೆ ಹದ್ದು ಮನೆಯ ಮೇಲೆ ಕುಳಿತುಕೊಂಡದ್ದರ ಶಕುನಫಲವೂ ಸದ್ಯದಲ್ಲಿಯೇ ಕಂಡುಬರುತ್ತದೆ ಎಂದು ಹೇಳುವಂತಿಲ್ಲ; ಆದರೆ ದುಷ್ಟಮನುಷ್ಯ ನಮ್ಮ ಮನೆಯ ಹತ್ತಿರ ಸುಳಿದಾಡಿದರೂ ಸಾಕು, ಕೂಡಲೇ ಅದರ ದುಷ್ಫಲವನ್ನು ನಾವು ಅನುಭವಿಸಲೇಬೇಕಾಗುತ್ತದೆ ಎನ್ನುತ್ತಿದೆ ಸುಭಾಷಿತ.

ಇಲ್ಲಿ ಸುಭಾಷಿತ ಎರಡು ವಿದ್ಯಮಾನಗಳನ್ನು ಪರಸ್ಪರ ಹೋಲಿಸಿ, ಒಂದರ ಫಲದ ತೀವ್ರತೆಯನ್ನು ಹೇಳಿರುವುದರ ಹಿಂದಿರುವ ಮನೋಧರ್ಮವನ್ನು ನಾವು ಗುರುತಿಸಬೇಕು.

ದುಷ್ಟತನದ ಫಲವನ್ನು ನಾವು ಆ ಕೂಡಲೇ ಅನುಭವಿಸಬೇಕಾಗುತ್ತದೆ. ಬೆಳೆಯನ್ನು ಬೆಳೆಸಲು ನಾವು ತುಂಬ ಶ್ರಮ ವಹಿಸಬೇಕಾಗುತ್ತದೆ; ಆದರೆ ಕಳೆಯನ್ನು ಬೇಡ ಎಂದು ಹಂಬಲಿಸಿದರೂ, ನಮ್ಮ ಆರೈಕೆಯೂ ಇಲ್ಲದೆ, ಹುಲುಸಾಗಿ ತಾನೇ ತಾನಾಗಿ ಬೆಳೆಯುತ್ತದೆ. ಹೀಗೆಯೇ ಕೆಟ್ಟತನ ಬೇಗ ಹರಡುತ್ತದೆ; ಅದರ ರಾಕ್ಷಸಶಕ್ತಿಯೇ ಅಂಥದ್ದು. ಹೀಗಾಗಿ ನಾವು ಅದರೊಂದಿಗೆ ತುಂಬ ಎಚ್ಚರಿಕೆಯಿಂದ ವ್ಯವಹಾರ ನಡೆಸಬೇಕು. ಅದರ ಸಂಪರ್ಕದಿಂದ ದೂರವೇ ಉಳಿಯಬೇಕು. ದುಷ್ಟರಿಂದ ಕೇವಲ ಕೊರನಾಕಾಲದಲ್ಲಿ ಮಾತ್ರವಲ್ಲ, ಎಲ್ಲ ಕಾಲದಲ್ಲೂ ದೂರವಿರಿ ಎಂದು ಸುಭಾಷಿತ ಎಚ್ಚರಿಕೆ ಕೊಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.