ADVERTISEMENT

ದಿನದ ಸೂಕ್ತಿ: ಆಸೆಯ ಬಲೆ

ಎಸ್.ಸೂರ್ಯಪ್ರಕಾಶ ಪಂಡಿತ್
Published 7 ಡಿಸೆಂಬರ್ 2020, 19:30 IST
Last Updated 7 ಡಿಸೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಜಾನನ್‌ ಮಾಹಾತ್ಮ್ಯಂ ಪತತು ಶಲಭೋ ದೀಪದಹನೇ

ಸ ಮೀನೋsಪ್ಯಜ್ಞಾನಾದ್ಬಡಿಶಯುತಮಶ್ನಾತು ಪಿಶಿತಮ್‌ ।

ವಿಜಾನಂತೋಪ್ಯೇತೇ ವಯಮಿಹ ವಿಪಜ್ಜಾಲಜಟಿಲಾನ್‌

ADVERTISEMENT

ನ ಮುಂಚಾಮಃ ಕಾಮಾನಹಹ ಗಹನೋ ಮೋಹಮಹಿಮಾ ।।

ಇದರ ತಾತ್ಪರ್ಯ ಹೀಗೆ:

‘ತಿಳಿಯದೆಯೇ ಪತಂಗದ ಹುಳುವು ಬೆಂಕಿಯಲ್ಲಿ ಬೀಳಲಿ; ಹಾಗೆಯೇ ಮೀನು ಕೂಡ ಅಜ್ಞಾನದಿಂದ ಬೆಸ್ತನ ಗಾಳಕ್ಕೆ ಸಿಕ್ಕಿಸಿದ ಮಾಂಸವನ್ನು ತಿನ್ನಲಿ. ಆದರೆ ಎಲ್ಲವನ್ನೂ ತಿಳಿದ ನಾವು ಕಷ್ಟಪರಂಪರೆಗಳನ್ನು ತರುವ ಆಸೆಗಳನ್ನು ಬಿಡುವುದಿಲ್ಲವಲ್ಲ! ಮೋಹದ ಮಹಿಮೆ ಎಷ್ಟು ಗಹನವಾದದುದು!’

ಆಸೆಯ ಬಲೆಯ ಬಗ್ಗೆ ಸುಭಾಷಿತ ಎಚ್ಚರಿಸುತ್ತಿದೆ. ಬುದ್ಧಿಯಿಲ್ಲದವರು ಆಸೆಯ ಬಲೆಗೆ ಬೀಳುವುದರಲ್ಲಿ ಸ್ವಲ್ಪವಾದರೂ ಅರ್ಥವಿದೆ ಎಂದು ಒಪ್ಪಬಹುದು; ಆದರೆ ಬುದ್ಧಿ ಇರುವ ಮನುಷ್ಯ ಕೂಡ ಈ ಬಲೆಗೆ ಬೀಳುತ್ತಿರುವುದು ಸೋಜಿಗ ಎನ್ನುತ್ತಿದೆ ಅದು.

ಪತಂಗವು ದೀಪದ ಬೆಳಕಿನಿಂದ ಆಕರ್ಷಿತವಾಗುತ್ತದೆ. ದೀಪದ ಸಮೀಪ ಹೋದರೆ ನಾನು ಸುಟ್ಟುಹೋಗುವೆ – ಎಂಬ ತಿಳಿವಳಿಕೆ ಅದಕ್ಕೆ ಇರುವುದಿಲ್ಲ. ಕಾರ್ಯ–ಕಾರಣಸಂಬಂಧವನ್ನು ಅರಿತುಕೊಳ್ಳಲು ಪ್ರಾಣಿ–ಪಕ್ಷಿಗಳಿಗೆ ಸಾಧ್ಯವಿಲ್ಲ; ಹೀಗೆಯೇ ಹಲವರು ಮನುಷ್ಯರಿಗೂ ಇದು ಸಾಧ್ಯವಿಲ್ಲವೆನ್ನಿ!

ದೀಪದ ಬೆಳಕಿನಿಂದ ಆಕರ್ಷಿತವಾಗಿ ಪ್ರಾಣವನ್ನೇ ಕಳೆದುಕೊಳ್ಳುವ ಪತಂಗದಂತೆ ಮೀನು ಕೂಡ ಆಸೆಯ ಬಲೆಗೆ ಸಿಕ್ಕಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತದೆ. ಮೀನನ್ನು ಬಲೆಗೆ ಬೀಳಿಸಲು ಬೆಸ್ತ ಮಾಡುವ ಉಪಾಯ ಏನು? ಗಾಳಕ್ಕೆ ಒಂದು ಹುಳುವನ್ನು ಸಿಕ್ಕಿಸುತ್ತಾನೆ; ಗಾಳವನ್ನು ನೀರಿನಲ್ಲಿ ಮುಳುಗಿಸುತ್ತಾನೆ. ನೀರಿನಲ್ಲಿ ಸ್ವತಂತ್ರವಾಗಿ ಈಜಾಡುತ್ತಿರುವ ಮೀನು ಆ ಹುಳುವನ್ನು ನೋಡುತ್ತದೆ. ತನಗೆ ಒಳ್ಳೆಯ ಆಹಾರ ಸಿಕ್ಕಿತೆಂದು ಭ್ರಮಿಸಿ, ಅದನ್ನು ತಿನ್ನಲು ಧಾವಿಸುತ್ತದೆ. ಗಾಳಕ್ಕೆ ಸಿಕ್ಕಿ, ಪ್ರಾಣವನ್ನು ಕಳೆದುಕೊಳ್ಳುತ್ತದೆ. ಬೆಸ್ತನ ಉಪಾಯವನ್ನು ಅರಿಯುವಷ್ಟು ಮೀನಿನ ಬುದ್ಧಿಶಕ್ತಿ ಬೆಳದಿರುವುದಿಲ್ಲ. ಹೀಗಾಗಿ ಸುಲಭದಲ್ಲಿ ಗಾಳಕ್ಕೆ ಸಿಕ್ಕಿಬೀಳುತ್ತದೆ.

ವಿಚಾರಶಕ್ತಿ ಇರದವರನ್ನು ಹೀಗೆ ಬಲೆಗೆ ಬೀಳಿಸುವ ಕೆಲಸವನ್ನು ಸಮಾಜದ ಎಲ್ಲ ವರ್ಗದ ಸ್ವಾರ್ಥಿಗಳೂ ಮಾಡುತ್ತಿರುತ್ತಾರೆ. ರಾಜಕೀಯ, ವ್ಯಾಪಾರ, ಶಿಕ್ಷಣ, ಆರೋಗ್ಯ – ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಜನರಿಗೆ ಆಸೆಗಳನ್ನು ತೋರಿಸಿ ವಂಚಿಸುವವರ ಸಂಖ್ಯೆ ಧಾರಾಳವಾಗಿಯೇ ಇದೆ. ನಾವು ಕೂಡ ಆಸೆಗೆ ಬಲಿಯಾಗುತ್ತವೆ. ಆಸೆಗೆ ಶರಣಾಗುವ ಮೊದಲು ನಾವು ನಮ್ಮ ಬುದ್ಧಿಯನ್ನು ಬಳಸಿ ಆಲೋಚಿಸಬೇಕು. ನಮ್ಮ ಮುಂದೆ ಕಾಣುತ್ತಿರುವ ಆಸೆಯ ಬೆಳಕು ಅದು ನಿಜವೋ ಕೃತಕವೋ ಎಂದು ಕಂಡುಕೊಳ್ಳಬೇಕಾದವರು ನಾವೇ ಅಲ್ಲವೆ? ತಿಂಗಳಿಗೆ ಮೂವತ್ತು ಪರ್ಸೆಂಟ್‌ ಬಡ್ಡಿ ಕೊಡುತ್ತೇವೆ – ಎಂದು ಯಾರಾದರೂ ಹೇಳಿದರೆ ಅದು ಸಾಧ್ಯವೆ – ಎಂದು ನಾವು ಆಲೋಚಿಸಬೇಕಲ್ಲವೆ? ನಾವು ಅಧಿಕಾರಕ್ಕೆ ಬಂದರೆ ಮೂರು ತಿಂಗಳಲ್ಲಿ ಸ್ವರ್ಗವನ್ನೇ ಭೂಮಿಗೆ ತರುತ್ತೇವೆ – ಎಂದು ಭಾಷಣ ಮಾಡುವ ರಾಜಕಾರಣಿಗಳ ಮಾತಿಗೆ ಬಲಿಯಾಗುವವರು ಯಾರು? ಹೀಗೆ ಪ್ರತಿ ಕ್ಷಣವೂ ನಾವು ಪತಂಗದಂತೆ, ಮೀನಿನಂತೆ ಆಸೆಯ ಬಲೆಗೆ ಸಿಕ್ಕಿಬೀಳುತ್ತಲೇ ಇರುತ್ತೇವೆ. ಪ್ರಾಣಿ–ಪಕ್ಷಿಗಳು ಹೀಗೆ ಮೋಹಕ್ಕೆ ಬಲಿಯಾಗುತ್ತವೆ, ಪಾಪ! ಆದರೆ ಬುದ್ಧಿವಂತನಾದ ಮನುಷ್ಯ ಕೂಡ ಹೀಗೆ ಬಲಿಯಾಗುತ್ತಿದ್ದಾನಲ್ಲ – ಎಂದು ಸುಭಾಷಿತ ಆಶ್ಚರ್ಯಪಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.