ADVERTISEMENT

ದಿನದ ಸೂಕ್ತಿ: ಪೌರುಷ ಇರಲಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 26 ಜುಲೈ 2020, 2:33 IST
Last Updated 26 ಜುಲೈ 2020, 2:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಾಸ್ತ್ರತೋ ಗುರುತಶ್ಚೈವ ಸ್ವತಶ್ಚೇತಿ ತ್ರಿಸಿದ್ಧಯಃ ।
ಸರ್ವತ್ರ ಪುರುಷಾರ್ಥಸ್ಯ ನ ದೈವಸ್ಯ ಕದಾಚನ ।।

ಇದರ ತಾತ್ಪರ್ಯ ಹೀಗೆ:

’ಶಾಸ್ತ್ರದಿಂದ, ಗುರುವಿನಿಂದ, ತನ್ನಿಂದ – ಹೀಗೆ ಕಾರ್ಯಸಿದ್ಧಿಗಳು ಮೂರು ವಿಧವಾಗಿರುತ್ತವೆ. ಈ ಮೂರು ಕೂಡ ಪೌರುಷ, ಎಂದರೆ ಪುರುಷಪ್ರಯತ್ನಕ್ಕೆ ಸೇರಿರುವಂಥವೇ ಹೊರತು ದೈವಕ್ಕೆ, ಎಂದರೆ ಅದೃಷ್ಟಕ್ಕೆ ಸೇರಿರುವಂಥವಲ್ಲ.‘

ADVERTISEMENT

ನಮ್ಮ ಸಂಸ್ಕೃತಿಯ ಬಗ್ಗೆ ಅಗಾಗ ನಾವು ಕೇಳುವ ಆಕ್ಷೇಪಗಳಲ್ಲಿ ಇದೂ ಒಂದು: ’ಭಾರತೀಯರು ಅದೃಷ್ಟವಾದಿಗಳು.‘ ನಮ್ಮವರು ತಾವು ಮಾಡುವ ಎಲ್ಲ ಕಾರ್ಯಗಳ ಭಾರವನ್ನು ಅದೃಷ್ಟದ ಮೇಲೆ ಹಾಕುತ್ತಾರೆ – ಎನ್ನುವುದು ಈ ಆರೋಪದ ಹಿಂದಿರುವ ನಿಲವು.

ಇಲ್ಲಿ ’ಅದೃಷ್ಟ‘ ಎಂದರೆ ’ದೈವ‘. ದೈವ ಎಂದರೆ ಕಾಣದ ಶಕ್ತಿಗೆ ಸೇರಿದ್ದು; ಇದರಲ್ಲಿ ದೇವರಿಗೆ ಸೇರಿದ್ದು ಎಂಬುದೂ ಸೇರಿಕೊಳ್ಳಬಹುದು.

ಈ ಆರೋಪದಲ್ಲಿ ಹುರುಳಿದೆಯೇ?

ಈ ಸುಭಾಷಿತವೇ ಈ ಪ್ರಶ್ನೆಗೆ ಉತ್ತರದಂತಿದೆ.

ಪುರುಷಪ್ರಯತ್ನವನ್ನು ಭಾರತೀಯ ಸಂಸ್ಕೃತಿಯಲ್ಲಿ ಎಲ್ಲೂ ಕಡಿಮೆ ಮಾಡಿಲ್ಲ; ವೇದ, ರಾಮಾಯಣ–ಮಹಾಭಾರತಗಳಲ್ಲಿ ಪುರುಷಪ್ರಯತ್ನದ ಪ್ರಶಂಸೆ ಹೇರಳವಾಗಿ ಕಂಡುಬರುತ್ತದೆ. ಧರ್ಮಸ್ಥಾಪನೆಗಾಗಿ ದೇವರೇ ಮನುಷ್ಯರೂಪದಲ್ಲಿ ಅವತರಿಸುತ್ತಾನೆ – ಎಂಬುದನ್ನು ನಮ್ಮ ಪರಂಪರೆ ಎತ್ತಿಹಿಡಿದಿದೆ. ಹೀಗಾಗಿ ಪರಂಪರೆಯಲ್ಲಿ ಪುರುಷಪ್ರಯತ್ನಕ್ಕೆ ಗೌರವ ಇದ್ದೇ ಇದೆ.

ಪುರುಷಪ್ರಯತ್ನಕ್ಕೆ ಸಾಧನವಾಗಿರುವ ಮೂರು ಶಕ್ತಿಗಳನ್ನು ಈ ಸುಭಾಷಿತ ಕಾಣಿಸಿದೆ: ’ಶಾಸ್ತ್ರದಿಂದ, ಗುರುವಿನಿಂದ, ತನ್ನಿಂದ‘.

ಶಾಸ್ತ್ರದಿಂದ ನಮಗೆ ಒದಗುವ ಪೌರುಷ ಎಂದರೆ ನಾವು ಶಿಕ್ಷಣದಿಂದ ಪಡೆಯುವ ಶಕ್ತಿ ಎಂದಿಟ್ಟುಕೊಳ್ಳಲಾದೀತು. ನಾವು ಪಡೆದಿರುವ ವಿದ್ಯೆ ನಮಗೆ ಧೈರ್ಯವನ್ನೂ ಶಕ್ತಿಯನ್ನೂ ವಿವೇಕವನ್ನೂ ಕೊಡಬೇಕು. ಶಾಸ್ತ್ರ ಎನ್ನುವಂಥದ್ದು ಒಬ್ಬರ ವಿವೇಕಸಂಗ್ರಹ ಅಲ್ಲ, ಅದು ಹಲವರ ಜೀವನವಿವೇಕದರ್ಶನದ ಸಾಗರ. ಇದನ್ನು ನಾವು ನಮ್ಮ ಶಕ್ತಿಯಾಗಿಸಿಕೊಳ್ಳಬೇಕು.

ಗುರುವೂ ನಮಗೆ ಒದಗುವ ಶಕ್ತಿ. ಗುರು ಯಾವ ರೂಪದಲ್ಲೂ, ಯಾರ ರೂಪದಲ್ಲೂ ಒದಗಬಹುದು; ಪುಸ್ತಕವೂ ಆಗಬಹುದು; ವ್ಯಕ್ತಿಯೂ ಆಗಬಹುದು; ತತ್ತ್ವವೂ ಆಗಬಹುದು; ಹೆಂಡತಿಯೂ ಆಗಬಹುದು, ಗಂಡನೂ ಆಗಬಹುದು; ಮಗನೂ ಆಗಬಹುದು. ನಮ್ಮ ನಡಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ, ನಾವು ತಪ್ಪು ಹೆಜ್ಜೆಗಳನ್ನಿಟ್ಟಾಗ ಎಚ್ಚರಿಸುವವನೇ ದಿಟವಾದ ಗುರು. ಇಂಥ ಗುರು ನಮ್ಮ ಪುರುಷಪ್ರಯತ್ನಕ್ಕೆ ಒದಗುವ ಶಕ್ತಿಯೇ ಹೌದು.

’ನನ್ನಿಂದ‘ ಎಂದರೆ ನಮ್ಮ ಪ್ರಯತ್ನವೇ ದಿಟವಾದ ಪುರುಷಪ್ರಯತ್ನ; ಇದೇ ದಿಟವಾದ ಪೌರುಷ. ಶಾಸ್ತ್ರಾಭ್ಯಾಸವಾಗಲೀ ಗುರುಸಾಮೀಪ್ಯವಾಗಲೀ ದಕ್ಕಿಸಿಕೊಳ್ಳುವುದು ಕೂಡ ನಮ್ಮ ಪ್ರಯತ್ನದ ಭಾಗವಾಗಿಯೇ ಇರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಇಲ್ಲಿ ಇನ್ನೊಂದು ಸುಭಾಷಿತದಲ್ಲಿ ಪುರುಷಪ್ರಯತ್ನವನ್ನು ’ಬೀಜಶಕ್ತಿ‘ಯಾಗಿ ಕಾಣಿಸಿರುವುದು ಸೊಗಸಾಗಿದೆ:

ಯಥಾ ಬೀಜಂ ವಿನಾ ಕ್ಷೇತ್ರಮುಪ್ತಂ ಭವತಿ ನಿಷ್ಫಲಮ್ ।
ತಥಾ ಪುರುಷಕಾರೇಣ ವಿನಾ ದೈವಂ ನ ಸಿದ್ಧ್ಯತಿ ।।

’ಬೀಜವೇ ಇಲ್ಲದೆ ಹೊಲವನ್ನು ಉತ್ತರೆ, ಅದು ನಿಷ್ಫಲವಾಗುತ್ತದೆ. ಹೀಗೆಯೇ ಪುರುಷಪ್ರಯತ್ನವಿಲ್ಲದಿದ್ದರೆ ದೈವವು ಫಲವನ್ನೀಯುವುದಿಲ್ಲ.‘

ಹೊಲವನ್ನು ಉಳುವ ಮೊದಲು ಬೀಜವನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಹೀಗೆಯೇ ‘ನಾನು ಏನನ್ನಾದರೂ ಸಾಧಿಸುತ್ತೇನೆ‘ ಎಂಬ ಸಂಕಲ್ಪಶಕ್ತಿ ನಮ್ಮಲ್ಲಿ ಇರಬೇಕಾದ್ದು ಮೊದಲ ಅರ್ಹತೆ. ಪುರುಷಪ್ರಯತ್ನದ ಬೀಜವನ್ನು ಬಿತ್ತಿದ ಮೇಲೆ, ನಮಗೆ ದೈವವೂ ಸಹಾಯಕ್ಕೆ ಒದಗಬಹುದು. ಮೊದಲಿಗೆ ಉಳಬೇಕು, ಬೀಜ ಸಿದ್ಧವಾಗಿರಬೇಕು, ಬಿತ್ತನೆ ನಡೆಸಬೇಕು; ಆಮೇಲೆ ’ದೈವ‘, ಎಂದರೆ ಮಳೆ–ಬಿಸಿಲುಗಳಂಥವು ನಮ್ಮ ಕೈ ಹಿಡಿಯಬಹುದು.

ಪುರುಷಪ್ರಯತ್ನ ಇಲ್ಲದವರನ್ನು ಇನ್ನೊಂದು ಸುಭಾಷಿತ ಚೆನ್ನಾಗಿ ವಿಡಂಬಿಸಿದೆ:

ವಿಹಾಯ ಪೌರುಷಂ ಯೋ ಹಿ ದೈವಮೇವಾವಲಂಬತೇ ।
ಪ್ರಾಸಾದಸಿಂಹವತ್ತಸ್ಯ ಮೂರ್ಧ್ನಿ ತಿಷ್ಠಂತಿ ವಾಯಸಾಃ ।।

‘ಯಾವನು ಪುರುಷಪ್ರಯತ್ನವನ್ನು ಬಿಟ್ಟು ದೈವವನ್ನೇ ನಂಬಿಕೊಂಡಿರುವನೋ, ಅವನ ತಲೆಯ ಮೇಲೆ, ಪ್ರಾಸಾದದ ಸಿಂಹದ ಪ್ರತಿಮೆಯ ಮೇಲೆ ಹೇಗೋ ಹಾಗೆ ಕಾಗೆಗಳು ಕುಳಿತುಕೊಳ್ಳುತ್ತವೆ.‘

ನಮ್ಮಲ್ಲಿ ಪುರುಷಪ್ರಯತ್ನದ ಕಿಚ್ಚು ಇಲ್ಲದಿದ್ದಾಗ ನಮ್ಮ ಪರಿಸ್ಥಿತಿ ಹೇಗಿರುತ್ತದೆ?

ಸಿಂಹಕ್ಕೆ ಮರ್ಯಾದೆ ದೊರೆಯುವುದು ಅದರ ಆಕಾರಕ್ಕೆ ಅಲ್ಲ; ಅದರ ಶಕ್ತಿಗೆ ಮಾತ್ರ. ಆಕಾರಕ್ಕೇ ಮರ್ಯಾದೆ ಸಿಗುವಂತಿದ್ದರೆ ಮನೆಯ ಮುಂದೆ ನಿಲ್ಲಿಸಿರುವ ಸಿಂಹದ ಬೊಂಬೆಗೂ ಮರ್ಯಾದೆ ಸಿಗಬೇಕಿತ್ತು. ಆದರೆ ಆ ಬೊಂಬೆಯ ತಲೆಯ ಮೇಲೆ ಕಾಗೆಗಳು ಕುಳಿತುಕೊಳ್ಳುತ್ತವೆ; ಗಲೀಜನ್ನೂ ಮಾಡುತ್ತವೆ. ಹೀಗೆಯೇ ಪೌರುಷ ಇಲ್ಲದ ಪುರುಷನೂ ಜೀವವಿಲ್ಲದ ಸಿಂಹದಂತೆ ಎಲ್ಲರ ಔದಸೀನ್ಯಕ್ಕೂ ಒಳಗಾಗುವುದರಲ್ಲಿ ಅನುಮಾನವೇ ಇಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.