ADVERTISEMENT

ದಿನದ ಸೂಕ್ತಿ| ಶುದ್ಧತೆಯ ಫಲ

ಎಸ್.ಸೂರ್ಯಪ್ರಕಾಶ ಪಂಡಿತ್
Published 31 ಡಿಸೆಂಬರ್ 2020, 2:20 IST
Last Updated 31 ಡಿಸೆಂಬರ್ 2020, 2:20 IST
meditation
meditation   

ಅದ್ಭಿರ್ಗಾತ್ರಾಣಿ ಶುಧ್ಯಂತಿ ಮನಃ ಸತ್ಯೇನ ಶುಧ್ಯತಿ ।

ವಿದ್ಯಾತಪೋಭ್ಯಾಂ ಭೂತಾತ್ಮಾ ಬುದ್ಧಿರ್ಜ್ಞಾನೇನ ಶುಧ್ಯತಿ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಶರೀರದ ಅವಯವಗಳು ನೀರಿನಿಂದ ನಿರ್ಮಲವಾಗುತ್ತವೆ; ಸತ್ಯದಿಂದ ಮನಸ್ಸು ಶುದ್ಧವಾಗುತ್ತದೆ. ವಿದ್ಯೆಯಿಂದಲೂ ತಪಸ್ಸಿನಿಂದಲೂ ಜೀವಾತ್ಮನೂ, ಜ್ಞಾನದಿಂದ ಬುದ್ಧಿಯೂ ಸ್ವಚ್ಛವಾಗುತ್ತದೆ.’

ಕೊಳೆ ಎಂಬುದು ಪ್ರತಿಕ್ಷಣವೂ ನಮ್ಮ ಮೇಲೆ ದಾಳಿ ಮಾಡುತ್ತಲೇ ಇರುತ್ತದೆ. ಅದು ನಮ್ಮ ಶರೀರದ ಮೇಲೂ ಮಾಡುತ್ತಿರುತ್ತದೆ, ಮನಸ್ಸಿನ ಮೇಲೂ ಮಾಡುತ್ತಿರುತ್ತದೆ, ಬುದ್ಧಿಯ ಮೇಲೂ ಮಾಡುತ್ತಿರುತ್ತದೆ. ಹೀಗೆ ನಿರಂತರವಾಗಿ ಸಂಗ್ರಹವಾಗುತ್ತಲೇ ಇರುವ ಕೊಳೆಯಿಂದ ಮುಕ್ತರಾಗುವ ವಿಧಾನ ಹೇಗೆ ಎಂಬುದನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ.

ನಾವು ದಿನವೂ ಸ್ನಾನ ಮಾಡುತ್ತೇವೆ. ಇದಕ್ಕೆ ಕಾರಣ ಸ್ಪಷ್ಟ. ಮೈಮೇಲೆ ಕೊಳೆ ಸಂಗ್ರಹವಾಗುತ್ತಿರುತ್ತದೆ. ಅದನ್ನು ಶುದ್ಧಿ ಮಾಡಬಲ್ಲ ಶಕ್ತಿ ನೀರಿಗೆ ಇದೆ. ಹೀಗಾಗಿಯೇ ನಾವು ಸ್ನಾನವನ್ನು ತಪ್ಪಿಸುವುದಿಲ್ಲ. ಶರೀರಕ್ಕೆ ಅಂಟುವ ಕೊಳೆಗೆ ಕಾರಣಗಳೂ ಹಲವು. ಶರೀರ ಚಟುವಟಿಕೆಯಲ್ಲಿರುವಾಗ ಸಹಜವಾಗಿಯೇ ಬೆವರುತ್ತೇವೆ. ಅದೂ ಕೊಳೆಗೆ ಕಾರಣ. ಆಧುನಿಕ ಕಾಲದಲ್ಲಿ ಕೊಳೆಗೆ ದೊಡ್ಡ ಕಾರಣ ಎಂದರೆ ಪರಿಸರಮಾಲಿನ್ಯ.

ಶರೀರಕ್ಕೆ ಕೊಳೆಯು ಅಂಟುವಂತೆ ಮನಸ್ಸಿಗೂ ಅಂಟುತ್ತದೆ. ಈ ಕೊಳೆಯಿಂದ ಮುಕ್ತಿ ಹೇಗೆ ಎಂದರೆ ಸತ್ಯದಿಂದ ಎನ್ನುತ್ತಿದೆ ಸುಭಾಷಿತ. ಪ್ರತಿಕ್ಷಣವೂ ನಮ್ಮ ಮನಸ್ಸು ಏನೇನೋ ವಿವರಗಳನ್ನು ತುಂಬಿಸಿಕೊಳ್ಳುತ್ತಿರುತ್ತದೆ; ಇದೇ ಅದಕ್ಕೆ ಕೊಳೆಯೂ ಆಗುತ್ತದೆ. ಇದರಲ್ಲಿ ಸತ್ಯ–ಸುಳ್ಳು, ಒಳಿತು–ಕೆಡುಕು – ಹೀಗೆಲ್ಲ ಇರುವುದು ಸಹಜ. ಮನಸ್ಸಿಗೆ ಅಂಟುವ ಎಲ್ಲ ವಿಧದ ಕೊಳೆಯನ್ನೂ ಸತ್ಯ ಎಂಬ ತೀರ್ಥ ಶುದ್ಧಮಾಡುತ್ತದೆ. ಸತ್ಯಕ್ಕಿರುವ ಅಪರಿಮಿತಶಕ್ತಿಯನ್ನು ಹಲವರು ಮಹಾಪುರುಷರು ವಿಶದವಾಗಿ ನಿರೂಪಿಸಿರುವುದುಂಟು.

ಶರೀರ–ಮನಸ್ಸು ಎಂಬ ಪ್ರತ್ಯೇಕತೆ ಇಲ್ಲದೆ ಒಟ್ಟು ನಮ್ಮ ಅಸ್ತಿತ್ವವನ್ನು ಪ್ರತಿನಿಧಿಸುವ ವಿವರವೇ ಜೀವಾತ್ಮ; ಎಂದರೆ ’ನಾವು.’ ನಮಗೆ ಅಂಟುವ ಎಲ್ಲ ವಿಧದ ಕೊಳೆಯನ್ನೂ ವಿದ್ಯೆ ಮತ್ತು ತಪಸ್ಸಿನಿಂದ ಶುದ್ಧವಾಗುತ್ತದೆ. ಇಲ್ಲಿ ವಿದ್ಯೆ ಎಂದರೆ ಅಧ್ಯಾತ್ಮವಿದ್ಯೆ ಎಂಬುದನ್ನು ಮರೆಯಬಾರದು.

ಜ್ಞಾನಕ್ಕೂ ಬುದ್ಧಿಗೂ ವ್ಯತ್ಯಾಸ ಇರುತ್ತದೆ. ಬುದ್ಧಿಗೆ ಕೊಳೆ ಅಂಟುವ ಸಾಧ್ಯತೆ ಇದೆ; ಆದರೆ ಜ್ಞಾನಕ್ಕೆ ಅಂತ ಪರಿಸ್ಥಿತಿ ಎದುರಾಗದು. ಜ್ಞಾನಕ್ಕೆ ಹಿತ–ಅಹಿತ, ಒಳಿತು–ಕೆಡಕು, ಧರ್ಮ–ಅಧರ್ಮಗಳ ವ್ಯತ್ಯಾಸಗಳು ತಿಳಿದಿರುತ್ತವೆ; ಬುದ್ಧಿಗೆ ಅಂಥ ವಿವೇಕ ಇರುವುದಿಲ್ಲ; ಅದರ ಗಮನ ಮಾಹಿತಿಯ ಕಡೆಗಷ್ಟೆ ಇರುತ್ತದೆ.

ಇನ್ನೊಂದು ಸುಭಾಷಿತವನ್ನೂ ಇಲ್ಲಿ ನೋಡಬಹುದು:

ಅದ್ಭಿಃ ಶುಧ್ಯಂತಿ ಗಾತ್ರಾಣಿ ಬುದ್ಧಿರ್ಜ್ಞಾನೇನ ಶುಧ್ಯತಿ ।

ಅಹಿಂಸಯಾ ಚ ಭೂತಾತ್ಮಾ ಮನಃ ಸತ್ಯೇನ ಶುಧ್ಯತಿ ।।

ಎಂದರೆ ’ಶರೀರವು ನೀರಿನಿಂದಲೂ ಬುದ್ಧಿಯು ತತ್ತ್ವಜ್ಞಾನದಿಂದಲೂ ಕರ್ತನಾದ ಮನುಷ್ಯನು ಅಹಿಂಸೆಯಿಂದಲೂ ಪರಿಶುದ್ಧರಾಗುತ್ತಾರೆ.’

ಶುದ್ಧತೆ ಎಂಬುದು ನಮ್ಮ ಇಡಿಯ ವ್ಯಕ್ತಿತ್ವದ ಸಹಜಗುಣವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.