ADVERTISEMENT

ದಿನದ ಸೂಕ್ತಿ: ಮಾತಿನ ಪಾಪಗಳು

ಎಸ್.ಸೂರ್ಯಪ್ರಕಾಶ ಪಂಡಿತ್
Published 12 ಅಕ್ಟೋಬರ್ 2020, 19:31 IST
Last Updated 12 ಅಕ್ಟೋಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಾರುಷ್ಯಮನೃತಂ ಚೈವ ಪೈಶುನ್ಯಂ ಚಾಪಿ ಸರ್ವಶಃ ।

ಅಸಂಬದ್ಧಪ್ರಲಾಪಶ್ಚ ವಾಙ್ಮಯಂ ಸ್ಯಾಚ್ಚತುರ್ವಿಧಮ್‌ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಅಪ್ರಿಯವಾದ ಮಾತು, ಸುಳ್ಳು, ಚಾಡಿ, ಅಸಂಗತವಾದ ಹರಟೆ – ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

ಮಾತು ಒಳಿತನ್ನೂ ಮಾಡಬಹುದು; ಕೆಡುಕನ್ನೂ ಮಾಡಬಹುದು. ಅದು ಹಲವರ ಜೀವನವನ್ನು ಉದ್ಧಾರಮಾಡುವಂತೆ, ಹಲವರ ಜೀವನವನ್ನು ತೊಂದರೆಗೂ ಒಡ್ಡಬಹುದು. ಒಳಿತನ್ನು ನಾವು ಪುಣ್ಯಕಾರ್ಯ ಎಂದು ಕರೆಯಬಹುದು; ಕೆಡುಕನ್ನು ಪಾಪಕರ್ಮ ಎಂದು ಕರೆಯಬಹುದು. ಸುಭಾಷಿತ ಇಲ್ಲಿ ಹೇಳುತ್ತಿರುವುದು ಮಾತಿನಿಂದ ಆಗುವ ಪಾಪಕರ್ಮಗಳನ್ನು ಕುರಿತು.

ಮಾತನ್ನು ಪ್ರಿಯವಾಗಿಯೂ ಆಡಬಹುದು, ಅಪ್ರಿಯವಾಗಿಯೂ ಆಡಬಹುದು. ಅಪ್ರಿಯಮಾತನ್ನು ಕೇಳುವವನು ಬೇಸರಕ್ಕೋ ದುಃಖಕ್ಕೋ ತುತ್ತಾಗಬಹುದು; ಅವನು ನೆಮ್ಮದಿಯನ್ನೂ ಕಳೆದುಕೊಳ್ಳಬಹುದು.

ಸುಳ್ಳು ಏನೆಲ್ಲ ಅನಾಹುತಗಳನ್ನು ಉಂಟುಮಾಡಬಲ್ಲದು ಎಂಬುದನ್ನು ಪಟ್ಟಿಮಾಡುವುದು ಸುಲಭವಲ್ಲ. ಅದು ಕುಟುಂಬಗಳನ್ನು ನಾಶಮಾಡಬಲ್ಲದು, ಸ್ನೇಹ–ಬಾಂಧವ್ಯಗಳನ್ನು ಒಡೆಯಬಹುದು; ಸುಳ್ಳು ಎಂಥವರನ್ನೂ ಮೋಸಮಾಡಬಹುದು. ಸತ್ಯವನ್ನೇ ದೇವರು ಎಂಬ ಹೇಳಿಕೆಗಳು ನಮ್ಮ ಸಂಸ್ಕೃತಿಯಲ್ಲಿ ತುಂಬ ಇವೆ. ಸುಳ್ಳನ್ನು ಯಾವ ನೆಲೆಯಲ್ಲಿ ಕಾಣಲಾಗಿದೆ ಎಂದು ಇದರಿಂದ ಊಹಿಸಬಹುದು. ಹೌದು, ಸುಳ್ಳು ನಿಜವಾಗಿಯೂ ರಾಕ್ಷಸಶಕ್ತಿಯೇ; ಅದರ ಉದ್ದೇಶವೇ ನಾಶ.

ಚಾಡಿ ಎಂಬ ಮಾತಿನ ದೋಷಕ್ಕೆ ಎರಡು ಆಯಾಮಗಳು ಇರುತ್ತವೆ. ಚಾಡಿಗೆ ಯಾರು ವಸ್ತುವೋ ಮತ್ತು ಯಾರು ಮಾಧ್ಯಮವೋ – ಅವರಿಬ್ಬರೂ ಇದರಿಂದ ಅಪಾಯಕ್ಕೆ ಒಳಗಾಗುತ್ತಾರೆ. ಹೀಗಾಗಿ ಚಾಡಿಯನ್ನು ಕೇಳಲು ಚೆನ್ನಾಗಿರುತ್ತದೆ ಎಂದು ನಾವೇನಾದರೂ ಅದಕ್ಕೆ ಕಿವಿಯನ್ನು ಕೊಟ್ಟರೆ ಅದರ ಮೋಸಕ್ಕೆ ನಾವೂ ತುತ್ತಾಗಬೇಕಾಗುತ್ತದೆ. ಚಾಡಿಕೋರನ ವ್ಯಕ್ತಿತ್ವಕ್ಕೂ ಧೂರ್ತತನಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಹೀಗಾಗಿಯೇ ಸುಭಾಷಿತ ಚಾಡಿಯನ್ನೂ ಪಾಪ ಎಂದೇ ಘೋಷಿಸುತ್ತಿದೆ.

ಅಸಂಬಂದ್ಧವಾದ ಹರಟೆ. ಬಹುಶಃ ಇದು ನಮ್ಮ ಕಾಲದ ಮಹಾಮಾರಿ ಎಂದೆನಿಸುತ್ತದೆ. ಮಾತಿನ ಅಪಮೌಲ್ಯ ನಮ್ಮ ಕಾಲದಲ್ಲಿ ಧಾರಾಳವಾಗಿ ನಡೆದಿದೆ; ಅದು ಲೋಕಸಭೆ–ವಿಧಾನಸಭೆಗಳಲ್ಲಿರಬಹುದು, ಸಾಮಾಜಿಕ ಜಾಲತಾಣಗಳಿರಬಹುದು, ಟಿವಿ ಮುಂತಾದ ಮಾಧ್ಯಮಗಳಲ್ಲಿರಬಹುದು; ರಾಜಕಾರಣಿಗಳ ಮಾತಾಗಿರಬಹುದು, ಸ್ನೇಹಿತರ ಸಂಭಾಷಣೆ ಆಗಿರಬಹುದು – ಅಸಂಬಧ್ಧವಾದ ಹರಟೆ ಎಲ್ಲೆಲ್ಲೂ ಮಿಂಚುತ್ತಿರುತ್ತದೆ. ಇದರಿಂದ ಶಕ್ತಿಹ್ರಾಸ ಮಾತ್ರವಲ್ಲ, ಬುದ್ಧಿವೈಕಲ್ಯವೂ ಒದಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.