ADVERTISEMENT

ದಿನದ ಸೂಕ್ತಿ| ಮಹಾತ್ಮನು ಯಾರು?

ಎಸ್.ಸೂರ್ಯಪ್ರಕಾಶ ಪಂಡಿತ್
Published 28 ಡಿಸೆಂಬರ್ 2020, 1:14 IST
Last Updated 28 ಡಿಸೆಂಬರ್ 2020, 1:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಾಂಛಾ ಸಜ್ಜನಸಂಗತೌ ಪರಗುಣೇ ಪ್ರೀತಿರ್ಗುರೌ ನಮ್ರತಾ

ವಿದ್ಯಾಯಾಂ ವ್ಯಸನಂ ಸ್ವಯೋಷಿತಿ ರತಿರ್ಲೋಕಪವಾದಾದ್ಭಯಮ್ ।

ಭಕ್ತಿಃ ಶೂಲಿನಿ ಶಕ್ತಿರಾತ್ಮದಮನೇ ಸಂಸರ್ಗ ಮುಕ್ತಿಃ ಖಲೈಃ

ADVERTISEMENT

ಏತೇ ಯೇಷು ವಸಂತಿ ನಿರ್ಮಲಗುಣಾಸ್ತೇಭ್ಯೋ ಮಹದ್ಭೋ ನಮಃ ।।

ಇದರ ತಾತ್ಪರ್ಯ ಹೀಗೆ:

‘ಸಜ್ಜನರ ಸಹವಾಸದಲ್ಲಿ ಆಸೆ, ಪರರ ಗುಣಗಳಲ್ಲಿ ಪ್ರೀತಿ, ಗುರುವಿನಲ್ಲಿ ವಿಧೇಯತೆ, ವಿದ್ಯೆಯಲ್ಲಿ ಆಸಕ್ತಿ, ತನ್ನ ಹೆಂಡತಿಯಲ್ಲಿ ಸುಖ ಪಡುವಿಕೆ, ಲೋಕಾಪವಾದದ ದೆಸೆಯಿಂದ ಹೆದರಿಕೆ, ಶಿವನಲ್ಲಿ ಭಕ್ತಿ, ಮನಸ್ಸನ್ನು ನಿಗ್ರಹಿಸಬಲ್ಲ ಶಕ್ತಿ, ದುರ್ಜನನೊಡನೆ ಸಹವಾಸವನ್ನು ಮಾಡದಿರುವುದು – ಈ ಶುದ್ಧವಾದ ಗುಣಗಳು ಯಾರಲ್ಲಿವೆಯೋ ಅವನೇ ಮಹಾತ್ಮ; ಅವನಿಗೆ ನಮಸ್ಕಾರ.’

ಮಹಾತ್ಮರು ಯಾರು – ಎಂಬ ಪ್ರಶ್ನೆಗೆ ಉತ್ತರವನ್ನು ಕೊಡುತ್ತಿರುವಂತಿದೆ, ನೀತಿಶತಕದ ಈ ಪದ್ಯ.

ಇಲ್ಲಿ ಸುಭಾಷಿತ ಹೇಳಿರುವ ಒಂದೊಂದು ಗುಣವನ್ನು ಸಂಪಾದಿಸಿಕೊಂಡು, ಅದನ್ನು ರೂಢಿಯಲ್ಲಿಟ್ಟುಕೊಳ್ಳುವುದೇ ದೊಡ್ಡ ಸಾಧನೆ. ಇನ್ನು ಇಷ್ಟೊಂದು ಗುಣಗಳನ್ನು ಮೈಗೂಡಿಸಿಕೊಂಡವನನ್ನು ಮಹಾತ್ಮ ಎಂದು ಕರೆಯುವುದು ಯುಕ್ತವೇ ಹೌದು.

ಇಲ್ಲಿ ಸುಭಾಷಿತವು ಮಹಾತ್ಮರ ಗುಣವನ್ನು ಆರಂಭಮಾಡಿರುವುದು ಸಜ್ಜನರೊಂದಿಗೆ ಸಹವಾಸವನ್ನು ಮಾಡು ಎನ್ನುವುದರೊಂದಿಗೆ; ಸುಭಾಷಿತ ಕೊನೆಯಾಗಿರುವುದು ದುರ್ಜನರೊಡನೆ ಸಹಾವಾಸವನ್ನು ತ್ಯಾಗಮಾಡು ಎಂದು ಹೇಳುವುದರೊಂದಿಗೆ. ಎರಡರ ತಾತ್ಪರ್ಯ ಒಂದೇ, ನಿಜ. ಆದರೆ ಎರಡನ್ನೂ ಪ್ರತ್ಯೇಕವಾಗಿಯೇ ಹೇಳಿರುವುದು ವಿಶೇಷ. ಸಜ್ಜನರ ಸಂಗ ಮತ್ತು ದುರ್ಜನರ ಸಹವಾಸತ್ಯಾಗ – ಈ ಎರಡರ ಮಧ್ಯೆ ಉಳಿದೆಲ್ಲ ಗುಣಗಳನ್ನೂ ಸೇರಿಸಿರುವುದು ಸ್ವಾರಸ್ಯಕರವಾಗಿದೆ. ನಾವು ಯಾವುದನ್ನು ಸ್ವೀಕರಿಸಬೇಕು ಮತ್ತು ಯಾವುದನ್ನು ಬಿಡಬೇಕು – ಎಂಬ ವಿವೇಕವೇ, ಸ್ಪಷ್ಟತೆಯೇ ಜೀವನದಲ್ಲಿ ತುಂಬ ಮುಖ್ಯವಾದ ಸಂಗತಿ. ಸುಭಾಷಿತ ಅದಕ್ಕೆ ಇಲ್ಲಿ ಒತ್ತನ್ನು ನೀಡುತ್ತಿದೆ.

‘ಪರರ ಗುಣಗಳಲ್ಲಿ ಪ್ರೀತಿ, ಗುರುವಿನಲ್ಲಿ ವಿಧೇಯತೆ, ವಿದ್ಯೆಯಲ್ಲಿ ಆಸಕ್ತಿ, ತನ್ನ ಹೆಂಡತಿಯಲ್ಲಿ ಸುಖ ಪಡುವಿಕೆ, ಲೋಕಾಪವಾದದ ದೆಸೆಯಿಂದ ಹೆದರಿಕೆ,ಶಿವನಲ್ಲಿ ಭಕ್ತಿ, ಮನಸ್ಸನ್ನು ನಿಗ್ರಹಿಸಬಲ್ಲ ಶಕ್ತಿ‘ – ಇವು ಒಂದೊಂದು ಕೂಡ ತುಂಬ ಶ್ರಮದಿಂದ ಸಿದ್ಧಿಸಿಕೊಳ್ಳಬೇಕಾದ ಗುಣಗಳೇ ಹೌದು.

ಬೇರೊಬ್ಬರ ಗುಣಗಳನ್ನು ಇಷ್ಟಪಡುವುದು ಅಷ್ಟು ಸುಲಭವಲ್ಲ; ಅಹಂಕಾರತ್ಯಾಗ ತುಂಬ ಕಷ್ಟ. ನಮಗಿಂತ ಹಿರಿಯರಲ್ಲಿ ವಿಧೇಯರಾಗಿರುವುದು ಕೂಡ ಕಷ್ಟ; ನಾವು ನಮ್ಮ ಹಿರಿಯರಿಗಿಂತ ಹೆಚ್ಚು ಬುದ್ಧಿವಂತರೋ ಹಣವಂತರೋ ಆದರಂತೂ ಇದು ಇನ್ನೂ ಕಷ್ಟ. ಆಕರ್ಷಣೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳವುದು ಕಷ್ಟ. ನನ್ನ ವ್ಯಕ್ತಿತ್ವ ಕೆಡಬಾರದು, ಅದರಿಂದ ನನ್ನ ಹೆಸರು ಅಪಕೀರ್ತಿಯ ಪಾಲಾಗಬಾರದು ಎಂದು ಹೆದರಿ,ಋಜುಮಾರ್ಗದಲ್ಲಿ ನಡೆಯಬಲ್ಲ ಧೀಮಂತಿಕೆಯೂ ಕಷ್ಟ; ಕಾನೂನಿಗೆ ಹೆದರುತ್ತೇವೆ; ಆದರೆ ಅಪಕೀರ್ತಿಗೆ ಹೆದರುವಂಥ ಮಾನಸಿಕತೆಯನ್ನು ದಕ್ಕಿಸಿಕೊಳ್ಳುವುದು ಕಷ್ಟ, ನಮ್ಮಲ್ಲಿ ಸಾಮರ್ಥ್ಯ ಇದ್ದಾಗ ದೇವರನ್ನು ನಂಬುವುದು ಕಷ್ಟವಾಗುತ್ತದೆ, ಎಲ್ಲೆಲ್ಲೂ ನಿರಂತರವಾಗಿ ಚಲಿಸುತ್ತಲೇ ಇರುವ ಮನಸ್ಸನ್ನು ನಿಗ್ರಹಿಸುವುದು ಸುಲಭವಲ್ಲ.

ಇಷ್ಟೆಲ್ಲ ಕಷ್ಟಗಳನ್ನು ಇಷ್ಟಪಟ್ಟು ಸ್ವೀಕರಿಸಿ, ಯಶಸ್ಸನ್ನು ಸಂಪಾದಿಸಿದವನು ಮಹಾತ್ಮನೇ ಹೌದು, ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.