ADVERTISEMENT

ಏಕಾತ್ಮವಾದ ಹಾಗೂ ಸರ್ವಾತ್ಮಭಾವ: ಶ್ರೀಧರ ಭಟ್ಟ ಐನಕೈ ಲೇಖನ

ಶ್ರೀಧರ ಭಟ್ಟ ಐನಕೈ
Published 22 ಜನವರಿ 2026, 14:03 IST
Last Updated 22 ಜನವರಿ 2026, 14:03 IST
<div class="paragraphs"><p>ಯೆಡತೊರೆ ಶ್ರೀಗಳು</p></div>

ಯೆಡತೊರೆ ಶ್ರೀಗಳು

   
ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಇದೇ ಜನವರಿ 29 ರಿಂದ 31 ರವರೆಗೆ 'ವಿವೇಕದೀಪ್ತಿ' ಎಂಬ ಮಹಾಭಿಯಾನವನ್ನು ಹಾಗೂ 'ದಕ್ಷಿಣಾಸ್ಯದರ್ಶಿನಿ' ಎಂಬ ವೈಜ್ಞಾನಿಕ ಪ್ರಯೋಗಾತ್ಮಕ ಪ್ರದರ್ಶಿನಿಯನ್ನು ಆಯೋಜಿಸಲಾಗುತ್ತಿದೆ. ತನ್ನಿಮಿತ್ತ ಈ ಲೇಖನ.

ವಿಶುದ್ಧವಿಜ್ಞಾನಘನಾನ್ ಶುಚಿಸ್ವಾಂತಾನ್ ಜಗದ್ಗುರೂನ್ |

ನಮಾಮಿ ಭಗವತ್ಪಾದಾನ್ ತ್ರಯ್ಯಂತಾಬ್ಜ ದಿವಾಕರಾನ್ ||

ADVERTISEMENT

ತೋರುತ್ತಿರುವ ಈ ವಿಶ್ವದ ಮೂಲ, ಜೀವದ ತತ್ವ, ಸಂಸಾರದ ಸ್ವರೂಪ ಹಾಗೂ ಜೀವನದ ಪರಮ ಗುರಿ ಇವುಗಳನ್ನು ನಿರೂಪಿಸುವ ಅಥವಾ ವಿಮರ್ಶಿಸುವ ದರ್ಶನವನ್ನು ವೇದಾಂತ ಎಂದು ಕರೆಯುವರು. ಪುರುಷಾರ್ಥ ಸಾಧನೆಯ ಆದ್ಯ ಆವಶ್ಯಕತೆ ಈ ಮಾನವಜನ್ಮ. ಆದರೆ ಅದರ ಸಿದ್ಧಿಗೆ ಅದಷ್ಟೇ ಸಾಲದು. ಜನ್ಮದ ಜೊತೆಗೆ ಧರ್ಮವೂ ಬೇಕು.

ಧರ್ಮದಿಂದ ಅರ್ಥಸಿದ್ಧಿ, ಅರ್ಥದಿಂದ ಬಯಕೆ. ಇವುಗಳನ್ನು ತ್ರಿವರ್ಗವೆಂದು ವಿಭಾಗಿಸಿ, ಕೊನೆಯದಾದ ಮೋಕ್ಷವನ್ನು ಅಪವರ್ಗವೆಂದು ಶಾಸ್ತ್ರಕಾರರಾದ ಜ್ಞಾನಿಗಳು ವಿಭಾಗಿಸಿ ಲೋಕೋಪಕಾರವನ್ನು ಮಾಡಿದ್ದಾರೆ.

ಮಾನವನ ಪರಮಪುರುಷಾರ್ಥ ಪರಮಾನಂದ, ಅರ್ಥಾತ್ ದುಃಖದಿಂದ ಬಿಡುಗಡೆ. ಅದು ಆತ್ಮನ ಯಥಾರ್ಥ ಜ್ಞಾನದಿಂದ ಮಾತ್ರ ಸಾಧ್ಯ. 'ತರತಿ ಶೋಕಮಾತ್ಮವಿತ್' (ಆತ್ಮಜ್ಞಾನಿಯು ದುಃಖವನ್ನು ಕಳೆದುಕೊಳ್ಳುತ್ತಾನೆ) ಎನ್ನುತ್ತದೆ ಉಪನಿಷತ್ತು. ಆತ್ಮನ ಯಥಾರ್ಥಜ್ಞಾನವೆಂದರೇನು ಎಂಬುದನ್ನು ಉಪನಿಷತ್ತುಗಳು ಅನೇಕ ರೀತಿಯಲ್ಲಿ ಬೋಧಿಸುತ್ತವೆ. ಪರಮತಾತ್ಪರ್ಯವನ್ನು 'ಬ್ರಹ್ಮ ಸತ್ಯಂ ಜಗನ್ಮಮಿಥ್ಯಾ ಜೀವೋ ಬ್ರಹ್ಮೈವ ನಾಪರಃ' ಎಂಬ ಒಂದೇ ವಾಕ್ಯದಲ್ಲಿ ಸಂಗ್ರಹಿಸಬಹುದು. ಬ್ರಹ್ಮ ಎಂದರೆ ಇರವು, ಅರಿವು ಮತ್ತು ಆನಂದರೂಪವಾದ ಒಂದು ಬೃಹದ್ ವಸ್ತು. ಅದೊಂದೇ ಸತ್ಯ ಮತ್ತು ಅದೇ ನಿತ್ಯ. ಅದರ ಹೊರತಾಗಿ ಇರುವಂತೆ ತೋರುವ ಪದಾರ್ಥಗಳಾವುವೂ ಸತ್ಯವಲ್ಲ. ಉಳಿದೆಲ್ಲವೂ ಕೇವಲ ಹುಸಿ ತೋರಿಕೆ. ಜೀವನೂ ಬ್ರಹ್ಮಕ್ಕಿಂತ ಬೇರೆಯಲ್ಲ, ತನ್ನ ಅಜ್ಞಾನದಿಂದಾಗಿ ತಾನು ಅಲ್ಪನೆಂದುಕೊಂಡಿದ್ದಾನೆ ಅಷ್ಟೆ. ಕುಂತೀಪುತ್ರನಾದ ಕರ್ಣನು ತಾನು ರಾಧೆಯ ಮಗ ಸೂತಪುತ್ರ ಎಂದುಕೊಂಡಿದ್ದ. ಯಾವಾಗ ಶ್ರೀಕೃಷ್ಣನು 'ನೀನು ಕುಂತೀಪುತ್ರ' ಎಂದು ಮನವರಿಕೆ ಮಾಡಿದಾಗಲೇ ಅವನಿಗೆ ಭ್ರಾಂತಿಯು ತೊಲಗಿ ನಿಜವಾಗಿ ತಾನಾರೆಂಬ ಅರಿವಾಯಿತು. ಅದರೊಡನೆ ತಾನು ಸೂತಪುತ್ರನೆಂಬ ಕೀಳರಿಮೆಯೂ ಹೋಯಿತು.

ಅದೇ ರೀತಿ ಉಪನಿಷತ್ತು ನಮಗೆ 'ತತ್ತ್ವಮಸಿ' ಮುಂತಾದ ಉಪದೇಶಗಳ ಮೂಲಕ ನೀವು ಅಲ್ಪರಲ್ಲ, ಅಮೃತದ ಪುತ್ರರು. ಆನಂದಸಾಗರರು.' ಎಂದು ಉಪದೇಶಿಸುತ್ತದೆ. ಅವಿರತ ಸಾಧನೆಗಳಿಂದ ಮನಃಶುದ್ಧಿಯನ್ನು ಪಡೆದುಕೊಂಡ ಜ್ಞಾನಿಗಳು ಇಂತಹ ಉಪದೇಶದಿಂದ ತಮ್ಮೆಲ್ಲ ತಪ್ಪು ತಿಳಿವಳಿಕೆಯನ್ನು ಕಳೆದುಕೊಂಡು ಸತತ ಅಭ್ಯಾಸ, ಸಾಧನೆಯ ಮೂಲಕ ಸ್ವರೂಪಾನುಭವವನ್ನು ಪಡೆದುಕೊಂಡು ಪರಮಾನಂದ ಸ್ವರೂಪರೇ ಆಗುತ್ತಾರೆ. ಇದುವೇ ನಿಜವಾದ ವೇದಾಂತಶಾಸ್ತçದ ಪರಮ ಪ್ರಯೋಜನವಾಗಿರುವುದು.

ಈ ಪ್ರಯೋಜನವು ಅಷ್ಟು ಸುಲಭವಾಗಿ ಜನಸಾಮಾನ್ಯರಿಗೆ ದಕ್ಕುವಂಥದ್ದಲ್ಲ ಅಥವಾ ಪಡೆದುಕೊಳ್ಳುವಂಥದ್ದಲ್ಲ. ಅನೇಕಾನೇಕ ಜನ್ಮಗಳಿಂದ ಕಲೆಹಾಕಿದ ಸಕಲ ಮನೋಮಾಲಿನ್ಯವನ್ನು ಕಳೆದುಕೊಳ್ಳಬೇಕು. ಶ್ರವಣಮನನಾದಿ ಸಾಧನಗಳಿಂದ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಇದಕ್ಕಾಗಿ ವೈರಾಗ್ಯ ಏಕಾಂತವಾಸ ಎಲ್ಲವೂ ಬೇಕು. ಇಷ್ಟಾದರೂ ಈ ಫಲಪ್ರಾಪ್ತಿಗೆ ಅನೇಕ ವರ್ಷಗಳಷ್ಟೇ ಅಲ್ಲ, ಅನೇಕ ಜನ್ಮಗಳೂ ಬೇಕಾದಾವು. ಇದು ಕೆಲವರಿಗಷ್ಟೇ ಕೈಗೆಟಕುವ ಹಣ್ಣು. ಹೀಗಿರುವಾಗ ಇಂಥ ಉಪನಿಷದ್ದರ್ಶನ ಜನಸಾಮಾನ್ಯರಾದ ನಮಗೆ ಏಕೆ ಬೇಕು? ಇದರಿಂದ ದೇಶಕ್ಕಾಗಲಿ ಸಮಾಜಕ್ಕಾಗಲಿ ಏನು ಪ್ರಯೋಜನ? ಇದರಿಂದ ಏನಾದರೂ ಪ್ರಯೋಜನ ಇದೆಯೋ? ಈ ದರ್ಶನವನ್ನು ಸಾರ್ವತ್ರಿಕಗೊಳಿಸಬೇಕಾದ ಅವಶ್ಯಕತೆಯಿದೆಯೇ? ಮುಂತಾದ ಪ್ರಶ್ನೆಗಳು ಫಲೈಕದೃಷ್ಟಿಯುಳ್ಳ ಸಾಮಾನ್ಯಜನರಲ್ಲಿ ಮೂಡುವುದು ಸಹಜ. ಆದ್ದರಿಂದ ವೇದಾಂತವಿದ್ಯೆಯು ಸಾಮೂಹಿಕವಾಗಿಯೂ ಖಂಡತವಾಗಿಯೂ ಅತ್ಯಂತ ಸಹಕಾರಿ, ಉಪಕಾರಿ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ.

ಪ್ರತಿಯೊಬ್ಬ ವ್ಯಕ್ತಿಯೂ ಸುಖಾಪೇಕ್ಷಿ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಸಾಮಾನ್ಯವಾಗಿ ನಾವು ಹಾಗೆ ಭಾವಿಸಿದ್ದೇವೆ. ಸುಖಾಪೇಕ್ಷೆ ಮನುಷ್ಯನ ಹುಟ್ಟುಸ್ವಭಾವ. ಜನ್ಮಾರಭ್ಯ ಸುಖಕ್ಕಾಗಿಯೇ ಪ್ರಯತ್ನಿಸುತ್ತಿದ್ದರೂ ಮಾನವನಿಗೆ ಯಶಸ್ಸು ಸಿಗುತ್ತಿಲ್ಲ. ಅನೇಕ ಬಾರಿ ಮುಗ್ಗರಿಸುತ್ತಾನೆ. ಒಮ್ಮೊಮ್ಮೆ ತಾಳ್ಮೆಯನ್ನೇ ಕಳೆದುಕೊಳ್ಳುತ್ತಾನೆ. ದುಃಖಪಡುತ್ತಾನೆ. ನಾನಾ ರೀತಿಯ ಗೊಂದಲಗಳಿಗೆ ಒಳಗಾಗುತ್ತಾನೆ. ಆಗಾಗ ಮತ್ತೊಬ್ಬರೊಡನೆ ಘರ್ಷಣೆಗೂ ಇಳಿಯುತ್ತಾನೆ.

ಸುಖ ಯಾವುದರಿಂದ ದೊರಕುತ್ತದೆ? ಸುಖವನ್ನು ಬಯಸುವವನ ಸ್ವರೂಪ ಸ್ವಭಾವಗಳೇನು ಎಂಬುದರ ಬಗ್ಗೆ ಸರಿಯಾದ ಜ್ಞಾನವಿಲ್ಲದಿರುವುದೇ ಇದಕ್ಕೆ ಮೂಲಕಾರಣ. ತನ್ನ ಪ್ರಯತ್ನದ ಸ್ವರೂಪ, ಉದ್ದೇಶಗಳ ಸರಿಯಾದ ಪರಿಚಯವಿಲ್ಲದೆ ಲೋಕದಲ್ಲಿ ವ್ಯವಹರಿಸುವುದೆಂದರೆ ಅರಗಿನ ಮನೆಯಲ್ಲಿ ಕೊಳ್ಳಿಯಾಟವಾಡಿದಂತೆ. ಹಾವಿನ ಹುತ್ತಕ್ಕೆ ಕೈಹಾಕುವ ಮೊದಲು ಗರುಡಮಂತ್ರವನ್ನು ತಿಳಿದಿರಬೇಕು ಎನ್ನುತ್ತದೆ ಮಂತ್ರಶಾಸ್ತ್ರ. ತತ್ವಜ್ಞಾನವನ್ನು ಪಡೆದು ಲೋಕವ್ಯವಹಾರಕ್ಕಿಳಿದರೆ ಅಂಥವನಿಗೆ ಲೋಕವೊಂದು ಆಟದ ಮನೆಯಾದೀತು. ಅವನ ಜೀವನ ಆನಂದಮಯವಾದೀತು. ಅವನು ಲೋಕದಲ್ಲಿ ಮಹಾನ್ ವ್ಯಕ್ತಿಯೂ ಆದಾನು. ಜನಕ, ವಿದುರ, ಧರ್ಮವ್ಯಾಧ, ರೇಕ್ವ ಮುಂತಾದವರ ಕಥೆಯನ್ನು ನಾವು ಇತಿಹಾಸದ ಪುಟಗಳಿಂದ ತಿಳಿದಿದ್ದೇವೆ.

ಪ್ರಪಂಚದ ಸ್ವರೂಪಗುಣಗಳನ್ನು ಅರಿತವನಿಗೆ ಜೀವನವೇ ಒಂದು ಕಲೆಯಾಗುತ್ತದೆ. ನಮಗೆ ಲಭ್ಯವಾದ ವಸ್ತುಗಳನ್ನು ರಮಣೀಯವಾಗುವಂತೆ ಯಥೋಚಿತವಾಗಿ ಜೋಡಿಸುವುದೇ ಕಲೆ. ಕವಿಯು ಪದಗಳನ್ನು, ಚಿತ್ರಕಾರನು ಬಣ್ಣವನ್ನು, ಸಂಗೀತಜ್ಞನು ಸ್ವರಗಳನ್ನು ಹೀಗೆ ಜೋಡಿಸಿಯೇ ಕಲೆಯನ್ನು, ಅದ್ಭುತ ಲೋಕವನ್ನು ಸೃಷ್ಟಿಸುತ್ತಾನೆ. ಸಮದರ್ಶಿಯಾದ ವೇದಾಂತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಸುತ್ತಮುತ್ತಲಿನ ಎಲ್ಲ ವಸ್ತುಗಳನ್ನೂ ಕಲೆಯನ್ನಾಗಿಸಿ ಆನಂದಪಡುತ್ತಾನೆ. ಅವನಿಗೆ ತ್ಯಾಜ್ಯವಾದುದಾಗಲಿ ಉಪಾದೇಯವಾದುದಾಗಲಿ ಯಾವುದೂ ಇಲ್ಲ. ಅವನಿಂದ ಲೋಕಕ್ಕಾಗಲಿ ಲೋಕದಿಂದ ಅವನಿಗಾಗಲಿ ಯಾವುದೇ ಭೀತಿಯಿಲ್ಲ. ನಾಚಿಕೆ, ಕೀಳರಿಮೆಯೇ ಮುಂತಾದವುಗಳಿಲ್ಲ. ಅವನು ಕಾಡಿನಲ್ಲಿರಲಿ, ನಾಡಿನಲ್ಲಿರಲಿ ತಾನೂ ಸುಖಿಯಾಗಿದ್ದು ಇತರರಿಗೂ ಸುಖವನ್ನು ನೀಡುತ್ತಾನೆ. ಇಂಥವರಿಂದ ಕೂಡಿದ ಸಮಾಜದಲ್ಲಿಯೇ ಶಾಂತಿ ನೆಲೆಸುತ್ತದೆ.

'ತಾನು ಇಂಥವನು ಎಂದು ತನ್ನ ನಿಜರೂಪವನ್ನು ಅರಿತವನಿಗೆ ಯಾವುದೇ ಆಸೆಗಳಿರುವುದಿಲ್ಲ. ಅಂಥವನು ತನ್ನ ಹಾಗೂ ತನ್ನವರ ಆಸೆಗಳನ್ನು ಈಡೇರಿಸಲು ಶರೀರವನ್ನು ದುಡಿಸುವುದಿಲ್ಲ' ಎನ್ನುತ್ತದೆ ಉಪನಿಷತ್ತು.

ಕಾಳ್ಳಿಚ್ಚು ಹಬ್ಬಿದರೆ ಕಾಡಿಗೆ ಕಾಡೇ ಸುಟ್ಟು ಭಸ್ಮವಾಗುತ್ತದೆ. ಸಾವಿರಾರು ಮರಗಳನ್ನು ನಾಶಪಡಿಸುವ ಆ ಕಾಳ್ಗಿಚ್ಚಿನ ಹುಟ್ಟಿಗೆ ಮಾತ್ರ ಎರಡೇ ಎರಡು ಮರಗಳ ಘರ್ಷಣೆ ಕಾರಣವಾಗಿರುತ್ತದೆ. ಇದೇ ರೀತಿ ಸಮಾಜವನ್ನೇ ನಾಶಮಾಡುವ ಅಶಾಂತಿ, ಕಲಹಗಳಿಗೆ ಮೂಲ ಕಾರಣ ಯಾರೋ ಇಬ್ಬರಲ್ಲಿ ಉಂಟಾದ ಘರ್ಷಣೆಯಾಗಬಹುದು. ಅವರೊಳಗಿನ ರಾಗದ್ವೇಷಗಳು ಕಾರಣವಾಗಲೂಬಹುದು. ತನ್ನನ್ನು ಮುನ್ನಡೆಸುವ ಅಥವಾ ತನ್ನನ್ನು ಬೆಳಗುವ ಆತ್ಮನ ಸ್ವರೂಪಪರಿಚಯ ಪ್ರತಿಯೊಬ್ಬ ಜನಸಾಮಾನ್ಯನಿಗೂ ಇದ್ದಲ್ಲಿ ಇಂಥ ಘರ್ಷಣೆ ಹುಟ್ಟಲೇ ಆಗದು. ಒಮ್ಮೆ ಅಕಸ್ಮಾತ್ತಾಗಿ ಹುಟ್ಟಿದರೂ ಸಮಾಜದಲ್ಲಿ ಅದಕ್ಕೆ ಆಹಾರ ಸಿಗದೆ ಅಲ್ಲಿಯೇ ಆರಿಹೋಗಬಹುದು.

ವ್ಯಕ್ತಿಯೊಬ್ಬ ದೂರದೂರಿಗೆ ಹೋದಾಗ ಅಲ್ಲಿ ತನ್ನ ಊರಿನವನೇ ಆದವನೊಬ್ಬ ಸಿಕ್ಕರೆ ತುಂಬಾ ಸಂತೋಷಪಡುತ್ತಾನೆ. ತನ್ನ ಹಾಗೂ ಅವನ ಪೂರ್ವಜರು ರಕ್ತಸಂಬAಧಿಗಳು ಎಂದು ತಿಳಿದಾಗಲಂತೂ ಅವರಲ್ಲಿ ಒಂದು ರೀತಿಯ ಆತ್ಮೀಯತೆ ಮೂಡುತ್ತದೆ. ಇವನಿಂದ ಅವನಿಗಾಗಲಿ, ಅವನಿಂದ ಇವನಿಗಾಗಲಿ ಯಾವುದೇ ಉಪಕಾರವಾಗದಿದ್ದರೂ 'ನಮ್ಮವನು' ಎಂಬ ಒಂದೇ ಒಂದು ಭಾವನೆ ಅವರ ಸಂಗವನ್ನು ಮಧುರವನ್ನಾಗಿ ಮಾಡುತ್ತದೆ. 'ನನ್ನ' ಎನ್ನುವುದೇ ಇಷ್ಟೊಂದು ಮಧುರವಾಗಿರುವಾಗ ಇದಕ್ಕೂ ಮೂಲವಾದ 'ನಾನು' ಎನ್ನುವುದು ಇನ್ನೆಷ್ಟು ಮಧುರವಾಗಿರಬೇಡ! ಉಪನಿಷತ್ತು ಸಾರುವ ಏಕಾತ್ಮವಾದ ಅಂಥಾದ್ದು. ಅದು ಇಡೀ ಸಮಾಜವನ್ನು, ರಾಷ್ಟ್ರವನ್ನು ನಾನು ಎಂಬ ಪದದ ಅಡಿಯಲ್ಲಿ ತರುತ್ತದೆ. ಆದ್ದರಿಂದಲೇ ಈ ಸನಾತನ ಸಿದ್ಧಾಂತ ರಾಷ್ಟ್ರೀಯ ಭಾವೈಕ್ಯಕ್ಕೆ ಶ್ರೇಷ್ಠವಾದ ಜನೌಷಧ ಮಾತ್ರವಲ್ಲ, ಏಕೈಕ ಉಪನಿಷದುಕ್ತಸಾಧನ. ಇದರಿಂದ ಸ್ವಸ್ಥಸಮಾಜ ನಿರ್ಮಾಣವಾಗುವುದು. ಜಗತ್ತಿನ ಇತಿಹಾಸದಲ್ಲಿ ವಿದ್ಯಾರಣ್ಯರಂಥ ಮಹಾಮಹಿಮರು ಇದನ್ನು ಸಾಧಿಸಿತೋರಿಸಿದ ಉದಾಹರಣೆ ನಮ್ಮ ನಾಡಿನಲ್ಲೇ ಇದೆ.

ಅದ್ವೈತವು ವಾಸ್ತವ. ಸತ್ಯಸ್ಯ ಸತ್ಯ. ಇತರ ಮತಗಳ ಸಾಲಿನಲ್ಲಿ ಅದನ್ನು ಸೇರಿಸಲಾಗದು. ಏಕೆಂದರೆ ಅದ್ವೈತವು ಒಂದು ಮತವಲ್ಲ. ಅದೊಂದು ಸಿದ್ಧಾಂತ. ಯಾರೊಬ್ಬರ ಅಭಿಪ್ರಾಯ ಅಥವಾ ನಂಬಿಕೆಯ ಮೇಲೆ ಅದು ನಿಂತಿದ್ದಲ್ಲ. ಅದು ಅನನುಭವ. ಅಲ್ಪಾನುಭವ, ಏಕಪಕ್ಷಾನುಭವ ಇವುಗಳಿಂದ ಬಹಳ ದೂರವಾದದ್ದು. ಶ್ರುತಿ, ಯುಕ್ತಿ, ಅನುಭವಗಳ ನಿಜಾಂಶದ ರಸಘಟ್ಟಿ, ಎರಡು ಎರಡು ಸೇರಿದರೆ ನಾಲ್ಕಾಗುತ್ತದೆ ಎಂಬ ಸಿದ್ಧಾಂತದಂತೆ ಅದ್ವೈತವು ಎಲ್ಲ ದೇಶಕಾಲಗಳಲ್ಲಿಯೂ ಅಕಂಪ್ಯ, ದೃಢ. ಆದ್ದರಿಂದ ನಾವೆಲ್ಲ ಒಂದು ಎಂಬುದನ್ನು ಹೊಸದಾಗಿ ಭಾವಿಸಬೇಕಾದ್ದಿಲ್ಲ. ಈ ಸತ್ಯಕ್ಕೆ ಮುಸುಕಿದ ಅಜ್ಞಾನದ ಕೊಳೆಯನ್ನು ಮಾತ್ರ ತೊಳೆದರೆ ಸಾಕು. ಅದು ತನ್ನಷ್ಟಕ್ಕೆ ತಾನೆ ಬೆಳಗುತ್ತದೆ. ಇದೇ ವಿವೇಕದೀಪ್ತಿ.

ವಾಸ್ತವವಾಗಿ ಉಪನಿಷತ್ತುಗಳು ತಿಳಿಸಿದ ಹಾಗೆ ಒಂದೇ ಒಂದು ಮಹಾಚೇತನ ಎಲ್ಲವನ್ನೂ ಆವರಿಸಿಕೊಂಡಿದೆ. ಎಲ್ಲವುದಕ್ಕೂ ಅದೇ ಆಧಾರವಾಗಿದೆ. ಎಲ್ಲವೂ ಅದೇ ಆಗಿದೆ. ಅದನ್ನು ಬಿಟ್ಟು ಇನ್ನೇನೂ ಇಲ್ಲ. ನಾವೆಲ್ಲರೂ ಅದೇ ಸ್ವರೂಪವೇ ಆಗಿದ್ದೇವೆ. 'ಇದು ಈ ದರ್ಶನದ ಒಳ ತಿರುಳು. ಹಾಗಾದರೆ ಇದರಿಂದಾಗುವ ಪ್ರಯೋಜನವೇನು ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ. ಪ್ರಯೋಜನವಿಲ್ಲದ ಕೆಲಸಕ್ಕೆ ಅದಾವ ಮೂರ್ಖನೂ ಕೈ ಹಾಕಲಾರನಷ್ಟೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಸತ್ಯವನ್ನು ಅರಿಯುವುದರಲ್ಲಿ ಯಾವ ಯಾವ ಪ್ರಯೋಜನಗಳಿವೆಯೋ ವೇದಾಂತಜ್ಞಾನದಿಂದ ಆ ಎಲ್ಲ ಪ್ರಯೋಜನಗಳಿವೆ.

ಮಾನವನು ಸ್ವಾಭಾವಿಕವಾಗಿಯೇ ಸತ್ಯಾನ್ವೇಷಿ. ಅಸತ್ಯವಸ್ತುಗಳನ್ನು ಸತ್ಯತ್ವಬುದ್ಧಿಯಿಂದಲೇ ಬಯಸುತ್ತಾನೆ. ಅದ್ವೈತ ದರ್ಶನವು ಅವನಿಗೆ ಪಾರಮಾರ್ಥಿಕ ಸತ್ಯವನ್ನು ಅನುಭವಕ್ಕೆ ತಂದುಕೊಡುವುದರಿಂದ ಅದೆಷ್ಟು ಮಹತ್ವದ್ದೆಂದು ಹೊಸತಾಗಿ ಹೇಳಬೇಕಾಗಿಲ್ಲ. ಸತ್ಯದ ಅರಿವು ಅವನಿಗೆ ಮಂಗಳಮಯವಾದ ಶಾಂತಿಯನ್ನು ನೀಡುತ್ತದೆ. ಅದ್ವೈತವು ಶಾಂತವೂ ಶಿವಸ್ವರೂಪವೂ ಆದದ್ದೆಂದು ಮಾಂಡೂಕ್ಯ ಉಪನಿಷತ್ತು ಹೇಳುತ್ತದೆ. ಮಾನವನ ಮನಸ್ಸು ಹಲವು ಬಗೆಯ ಗೊಂದಲಗಳ ಗೂಡು, ಆಶೆ-ಭಯ, ಕೋಪ-ಅಸೂಯೆ, ರಾಗ-ದ್ವೇಷ ಇವೆಲ್ಲವೂ ಸೇರಿ ಆ ಮನಸ್ಸನ್ನು ರಣಭೂಮಿಯನ್ನಾಗಿ ಮಾಡಿವೆ. ಅಲ್ಲಿ ಕ್ಷಣ ಕ್ಷಣವೂ ಒಳಗೊಳಗೆ ನಾನಾ ರೀತಿಯ ದ್ವಂದ್ವ ಯುದ್ಧ ನಡೆಯುತ್ತಲೇ ಇರುವುದು. ಶಾಂತಿ ಸಮಾಧಾನಗಳಿಲ್ಲದೇ ಅಶಾಂತಿಯ ಅವಾಂತರದ ತೋಟವಾಗಿರುವುದು. ಇವುಗಳಿಂದ ಆತನಿಗೆ ಮುಕ್ತಿ ಸಿಗಬೇಕಾದರೆ ಆತ ಅದ್ವೈತಾನುಭವವನ್ನು ಪಡೆಯಬೇಕು. 'ತತ್ರ ಕೋ ಮೋಹಃ ಕಃ ಶೋಕಃ ಏಕತ್ವಮನುಪಶ್ಯತಃ' ಏಕತ್ವವನ್ನು ನೋಡುವವನಿಗೆ ಶೋಕ ಮೋಹಗಳಲ್ಲಿ ಎನ್ನುತ್ತದೆ ಉಪನಿಷತ್ತು. 'ಎಲ್ಲವೂ ನಾನೇ' ಎಂಬ ಏಕಾತ್ಮವಾದ ಅವನ ಸ್ವಾಭಾವಿಕ ನಿಲುವಾಗಬೇಕು. ಆಗ ಶೋಕಮೋಹಗಳಾಗಲಿ ಭಯ ದುಃಖಗಳಾಗಲಿ ಉಂಟಾಗಲಾರವು. ಏಕೆಂದರೆ ಈ ಭಾವನೆಗಳೆಲ್ಲ ಎರಡನೆಯ ವಸ್ತುವನ್ನು ಅಪೇಕ್ಷಿಸುತ್ತವೆ. ನಮಗೆ ಭಯ ಬರುವುದಿದ್ದರೆ ಎರಡನೆಯ ವಸ್ತುವಿನಿಂದ ಮಾತ್ರ. ಇಬ್ಬರಿದ್ದರೆ ತಾನೇ ಜಗಳ, ಮನಸ್ತಾಪ. ನಮ್ಮ ಆಶೆ, ಮೋಹಗಳು ನಮಗಿಂತ ಭಿನ್ನವಾದ ವಸ್ತುವಿನ ಮೇಲೆಯೇ ಇರುವುದಾಗಿದೆ. ನಮ್ಮ ಪಾಲಿಗೆ ವಿಶ್ವದಲ್ಲಿ ನಮ್ಮನ್ನು ಬಿಟ್ಟು ಇನ್ನೊಂದು ವಸ್ತುವೇ ಇಲ್ಲದಿರುವಾಗ ಎಲ್ಲಿಂದ ಭಯ? ಯಾರ ಮೇಲೆ ಆಶೆ? 'ಸರ್ವಂ ಖಲ್ವಿದಂ ಬ್ರಹ್ಮ' ಎನ್ನುವಂತೆ ಅವನಿಗೆ ಎಲ್ಲವೂ ಬ್ರಹ್ಮವಾಗಿ ಅಂದರೆ ಎಲ್ಲವೂ ಆನಂದಮಯವಾಗಿಯೇ ಅನುಭವಕ್ಕೆ ಬರುತ್ತದೆ. ಆಗ ರಾಗದ್ವೇಷ ಅಸೂಯೆಗಳಿಗೆ ಅವಕಾಶವೇ ಇಲ್ಲ. ರಾಗದ್ವೇಷರಹಿತವಾದ ವ್ಯಕ್ತಿಗಳಿಂದ ಕೂಡಿದ ಸಮಾಜದಲ್ಲಿ ಮಾತ್ರ ಸುಖಶಾಂತಿಗಳು ನೆಲೆಸುತ್ತವೆ. ಹೀಗಾಗಿ ಉಪನಿಷತ್ತುಗಳು ತಿಳಿಸುತ್ತವೆ. ಮೊದಲು ನೀನು ನಿನ್ನನ್ನು ಅರಿಯಲು ಪ್ರಯತ್ನಿಸು, ನಿನ್ನೊಳಗೆ ಶಾಂತಚಿತ್ತನಾಗಿ ಯೋಚಿಸು, ನಿಜವಾಗಿ ನಾನು ಯಾರು, ನನ್ನಲ್ಲಿ ಏನಿದೆ, ಯಾಕಾಗಿ ನನ್ನ ಹುಟ್ಟು ಇತ್ಯಾದಿ.

ಇದಕ್ಕಾಗಿ ಎಲ್ಲರೂ ಬ್ರಹ್ಮಜ್ಞಾನಿಗಳೇ ಆಗಬೇಕೆಂದೇನೂ ಇಲ್ಲ. ಅದು ಎಲ್ಲರಿಗೂ ಸಾಧ್ಯವೂ ಇಲ್ಲ. ಆದರೆ ಆ ಮಾರ್ಗದಲ್ಲಿ ಸ್ವಲ್ಪ ದೂರ ಕ್ರಮಿಸಿದರೂ ಸಾಕು, ಅವನು ಪ್ರಪಂಚವನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಸಮಾಜದಲ್ಲಿಯ ಯಾವುದೇ ಘರ್ಷಣೆಗೂ ಅವನು ಕಾರಣನಾಗಲಾರ. ಇದರಿಂದ ಆಗುವ ಪ್ರಯೋಜನಗಳು ಹಲವು. ತನಗೆ ತಾನೇ ಶಾಂತವಾಗಿ ಕುಳಿತು ಯೋಚಿಸಿದರೆ ನಿಜವು ತಿಳಿಯುವುದು. ಹೀಗಾಗಿ ಉಪನಿಷತ್ತು ತಿಳಿಸಿದಂತೆ, ವ್ಯಕ್ತಿ ಶುದ್ಧಿಯಿಂದ ಸುತ್ತಮುತ್ತಲಿನ ಪರಿಸರವೂ ಶುದ್ಧವಾಗುವುದು. ನಮ್ಮ ಸುತ್ತಲಿನ ಪರಿಸರವು ಶುಭ್ರವಾದಾಗ ಸಮಜ-ಸಮಾಜ ಎರಡೂ ಸಹ ಸುಧಾರಿಸುವುದು. ಸಮಾಜವು ಸಮೃದ್ಧಿಯಿಂದ ಇದ್ದಾಗ ಮಾತ್ರ ಎಲ್ಲೆಡೆ ಸುಭಿಕ್ಷೆಯುಂಟಾಗಿ ರಾಷ್ಟçದಲ್ಲಿ ಕ್ಷೇಮವು ನೆಲೆಸುವುದು. ಎಲ್ಲಿ ಕತ್ತಲೆ ಇರುತ್ತದೋ ಅಲ್ಲಿ ಭಯವೂ ಇರುತ್ತದೆ. ಬೆಳಕಿದ್ದಲ್ಲಿ ಭಯವಿಲ್ಲ. ಈ ಕತ್ತಲೆ ಎಂಬುದು ಅಜ್ಞಾನ, ತಪ್ಪು ಗ್ರಹಿಕೆ. ಬೆಳಕು ಜ್ಞಾನದ ಸಂಕೇತ. ಎಲ್ಲರೂ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಬೇಕೆಂದು ಬೃಹದಾರಣ್ಯಕ ಉಪನಿಷತ್ತು ಸಾರಿ ಸಾರಿ ಹೇಳುತ್ತದೆ.

ಅಂತಹ ನಿಜವಾದ ಬೆಳಕು ಸಮಾಜದ ಸಮಸ್ತರಿಗೂ ಸಿಗುವ ನಿಟ್ಟಿನಲ್ಲಿ ಅತ್ಯಲ್ಪಕಾಲದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಯಶಸ್ವಿಯಾದವರು ಶ್ರೀ ಶಂಕರಾಚಾರ್ಯರು. ಅವರೇ ನಿಜವಾದ ಲೋಕಹಿತೈಷಿಗಳು. ಅಂತಹ ಮಹಾಮಹಿಮರ ಉಪದೇಶದಿಂದ ಮಾತ್ರ ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಸುಖಶಾಂತಿಯನ್ನು ಕಾಣಲುಸಾಧ್ಯ. ಅಂತಹ ಉಪದೇಶವು ಆಬಾಲವೃದ್ಧರಾದಿಯಾಗಿ ಲಭ್ಯವಾಗಬೇಕೆಂಬುದು ವೇದಾಂತಭಾರತಿಯ ಆಶಯ. ಮಾನವನ ಮನಸ್ಸು ಶುದ್ಧವಾದರೆ ಮಾತ್ರ ಅವನಲ್ಲಿ ಶಾಂತಿ, ಸಮಾಧಾನವು ಭದ್ರವಾಗಿ ನೆಲೆಯೂರುವುದು.

ಅಂತಹ ಅನಿತರಸಾಧಾರಣಶಕ್ತಿ ಶ್ರೀ ಶಂಕರರ ಉಪದೇಶದಲ್ಲಿ ಅಡಗಿದೆ. ಬೆಲ್ಲವೂ ಸಿಹಿಯಾಗಿದೆ, ಸಕ್ಕರೆಯೂ ಸಹಿಯಾಗಿದೆ ಆದರೆ ಸಕಲ ಸುಮಗಳ ಮಕರಂದದ ರಸಸಾರವಾದ ಜೇನುತುಪ್ಪ ಸಿಹಿಯೂ ಪರಮೌಷಧರೂಪವೂ ಆಗಿದೆ. ಅದರ ರುಚಿಯನ್ನು ಸಿಹಿಯನ್ನು ಇನ್ನೊಂದು ಸಿಹಿಗೆ ಹೋಲಿಸಲು ಸಾಧ್ಯವಿಲ್ಲ. ಬೆಲ್ಲದ ಗುಣ ಒಂದು ರೀತಿಯದಾದರೆ, ಜೇನಿನ ಗುಣ ನಾನಾರಸಗಳ ಸಾರವಾಗಿದೆ. ಅಂತೆಯೇ ಭಗವತ್ಪಾದರ ಉಪದೇಶ ಸಕಲ ವೇದೋಪನಿಷತ್ತುಗಳ ಮಕರಂದದ ಸಾರ ಸರ್ವಸ್ವವಾಗಿದೆ. ಆಚಾರ್ಯರು ವೇದೋಪನಿಷತ್ತುಗಳಲ್ಲಿ ಹುದುಗಿದ ರಹಸ್ಯವನ್ನು ಸಕಲ ಮಾನವರ ಶ್ರೇಯೋಭಿವೃದ್ಧಿಗಾಗಿಯೇ ಮೀಸಲಿಟ್ಟಿರುವರು. ಸದಾ ಸರ್ವದಾ ಅದು ಉಪಾದೇಯವಾಗಿದೆ. ಆಯಾ ಜನರ ಮನೋಭಾವವನ್ನು ಮನಗಂಡು ಆದಿ ಶಂಕರರು ಮೂರು ತೆರನಾಗಿ ತಮ್ಮ ಉಪದೇಶವನ್ನು ಹಂಚಿರುವರು. ಆ ಎಲ್ಲ ಉಪದೇಶ ಭಾಷ್ಯ, ಪ್ರಕರಣ, ಸ್ತೋತ್ರಗಳೆಂದು ವಿಭಕ್ತವಾಗಿರುವುದು. ಅದರಲ್ಲಿ ಆದಿ ಗುರುತತ್ವವಾದ ದಕ್ಷಿಣಾಮೂರ್ತ್ಯಷ್ಟಕವು ಸಮಸ್ತ ಉಪನಿಷತ್ತುಗಳ ಸಾರಸಂಗ್ರಹವಾಗಿರುವುದು. ಕಳೆದ ಎರಡು ದಶಕಗಳಿಂದ ದೇಶಾದ್ಯಂತ ರಾಷ್ಟ್ರೀಯ ಭಾವೈಕ್ಯದ ಹಿನ್ನೆಲೆಯಲ್ಲಿ ಲೋಕಕ್ಷೇಮಕ್ಕಾಗಿ ಮೈಸೂರು ಜಿಲ್ಲೆಯ ಕೃಷ್ಣರಾಜನಗರದ ಯಡತೊರೆ ಶ್ರೀ ಮಠದ ಅಂಗಸಂಸ್ಥೆಯಾದ ವೇದಾಂತ ಭಾರತಿ ಸಂಶೋಧನಾ ಸಂಸ್ಥೆಯು ಹಗಲಿರುಳು ಸಾವಿರಾರು ಕಾರ್ಯಕರ್ತರನ್ನು ಸಂಘಟಿಸಿ, ಎಲ್ಲೆಡೆ ಸಾಮೂಹಿಕ ಮಹಾಭಿಯಾನಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ.

ಈ ಸಂಸ್ಥೆಯ ಮಹಾಸಂರಕ್ಷಕರು ಶೃಂಗೇರಿ ಜಗದ್ಗುರು ಮಹಾಸನ್ನಿಧಾನಂಗಳವರು. ಸಂಸ್ಥೆಯ ಸಂರಕ್ಷಕರು, ಮಾರ್ಗದರ್ಶಕರು ಯಡತೊರೆ ಮಠದ ಶ್ರೀ ಶ್ರೀ ಶಂಕರಭಾರತೀ ಮಹಾಸ್ವಾಮಿಗಳು. ಇದೀಗ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಇದೇ ಜನವರಿ 29 ರಿಂದ 31 ರವರೆಗೆ 'ವಿವೇಕ ದೀಪ್ತಿ' ಎಂಬ ಮಹಾಭಿಯಾನವನ್ನು ಹಾಗೂ ದಕ್ಷಿಣಾಸ್ಯದರ್ಶಿನಿ ಎಂಬ ವೈಜ್ಞಾನಿಕ ಪ್ರಯೋಗಾತ್ಮಕ ಪ್ರದರ್ಶಿನಿಯನ್ನು ಆಯೋಜಿಸುತ್ತಿದೆ. ತನ್ನಿಮಿತ್ತ ಈ ಲೇಖನ.

ಪ್ರಪಂಚದಲ್ಲಿ ವಸ್ತುಗಳ ಪೂರೈಕೆ ಕಡಿಮೆಯಿದ್ದು ಬೇಡಿಕೆ ಹೆಚ್ಚಿದಾಗ ಘರ್ಷಣೆಯುಂಟಾಗುತ್ತದೆ ಎಂಬುದು ಎಲ್ಲ ಕಾಲಕ್ಕೂ ಸತ್ಯವಾದ ಸಂಗತಿ. ಮನುಷ್ಯ ಸ್ವಾಭಾವಿಕವಾಗಿಯೇ ಸುಖವನ್ನು ಬಯಸುತ್ತಾನೆ. ಅವನ ಈ ಸುಖದ ಬಯಕೆಗೆ ಮಿತಿಯಿಲ್ಲ. ಇಡೀ ಪ್ರಪಂಚವೇ ತನಗೆ ಬೇಕು ಎನ್ನುತ್ತಾನೆ. ಇರುವ ಭೂಮಿ ತುಂಬಾ ಚಿಕ್ಕದು. ಅದನ್ನು ಬಯಸುವವರು ಕೋಟಿ ಕೋಟಿ ಮಂದಿ. ಅಂದಮೇಲೆ ಘರ್ಷಣೆ ಅನಿವಾರ್ಯ. ಇಂದ್ರಿಯಗಳ ತೃಪ್ತಿಗಾಗಿ ಮನುಷ್ಯ ಶಬ್ದ, ಸ್ಪರ್ಶ, ರೂಪ ಮುಂತಾದ ವಿಷಯಗಳನ್ನು ಬಯಸುತ್ತಾನೆ. ಪ್ರಪಂಚದಲ್ಲಿ ಈ ವಿಷಯಗಳು ಮಿತವಾಗಿವೆ. ಬಯಸುವವರು ಅಮಿತ. ಆದ್ದರಿಂದಲೇ ನೂಕು ನುಗ್ಗಲು, ಘರ್ಷಣೆ, ಕಲಹ, ಅಶಾಂತಿ. ಇಂಥ ನರಕದಿಂದ ಭೂಮಿಯನ್ನು ಪಾರುಮಾಡಲು ಸಮದರ್ಶಿಯಿಂದ ಮಾತ್ರ ಸಾಧ್ಯ. ಅವನೂ ಇತರರಂತೆ ಸುಖಾನ್ವೇಷಿಯೇ. ಆದರೆ ಅವನು ಸುಖವನ್ನು ಹೊರಗಡೆ ಹುಡುಕುವುದಿಲ್ಲ. ತನ್ನೊಳಗನ್ನೇ ನೋಡುತ್ತಾನೆ. ಆನಂದರೂಪನಾದ ಆತ್ಮನನ್ನೇ ಅನುಭವಿಸುತ್ತಾನೆ. ಇದರಂತೆ ಎಲ್ಲರೂ ಸುಖಕ್ಕಾಗಿ ಹೊರಗೆ ನೋಡದೆ ಆತ್ಮಾಭಿಮುಖರಾದರೆ ಅದೇ ಲೋಕಸಂಗ್ರಹ ಸಮಾಜದಲ್ಲಿಯ ಘರ್ಷಣೆಗೆ ನಾನಾ ಕಾರಣಗಳು ಇರುತ್ತವೆ. ಇಂತಹದ್ದೇ ಕಾರಣ ಅಂತ ಹೇಳಲು ಸಾಧ್ಯವಿಲ್ಲ.

ಒಂದೆಡೆ ಭೂಮಿ, ಧನ, ಸಂಪತ್ತಿಗಾಗಿ ಪರಸ್ಪರ ಯುದ್ಧಗಳು. ಇನ್ನೊಂದು ಕಡೆ ಅಂತಃಕಲಹಗಳು. ಬೇರೆ ಬೇರೆ ಮತಧರ್ಮಗಳು, ಬೇರೆ ಬೇರೆ ಆಚಾರ ವಿಚಾರಗಳು, ಬೇರೆ ಬೇರೆ ದೇವರುಗಳು, ಆ ದೇವರನ್ನು ಕುರಿತಾದ ಉತ್ಸವಾದಿಗಳು, ಬೇರೆ ಬೇರೆ ಪ್ರಾಂತ, ಭಾಷೆ ಇವೆಲ್ಲವೂ ಮೊದಮೊದಲು ವಿಘಟನೆಯಲ್ಲಿ ಆರಂಭವಾಗಿ ಆಮೇಲೆ ಘರ್ಷಣೆಯಲ್ಲಿ ಪರ್ಯವಸಾನವಾಗುತ್ತವೆ. ಅದ್ವೈತದರ್ಶನವು ಇವುಗಳಿಗೆ ಉತ್ತಮ ಔಷಧವಾಗಬಲ್ಲದು. ಅದ್ವೈತದರ್ಶನವು ಪರಮಾತ್ಮನನ್ನು ನಿರಾಕಾರನೆಂದು ಒಪ್ಪುತ್ತದೆ. ಚಿನ್ಮಯನೂ ಅಶರೀರನೂ ಆದ ಆತನಿಗೆ ಉಪಾಸನೆಗಾಗಿಯೇ ನಾನಾ ರೂಪಗಳನ್ನು ಕಲ್ಪಿಸಲಾಗಿದೆ. ಆಯಾ ಸಂಪ್ರದಾಯದಂತೆ ರೂಢಿಯಲ್ಲಿದ್ದ ಕಲ್ಪಿತರೂಪಗಳನ್ನು ಜನರು ಆರಾಧಿಸಬಹುದು. ನಿರಾಕಾರ ವಸ್ತುವನ್ನು ಧ್ಯಾನಿಸುವುದು ಕಷ್ಟಸಾಧ್ಯವೆಂದು ಸಾಮಾನ್ಯರಿಗಾಗಿ ಆಯಾ ಶಾಸ್ತ್ರಗಳು ಅಂಥ ರೂಪವನ್ನು ಚಿತ್ತಶುದ್ಧಿಗಾಗಿ, ಮನೋನೈರ್ಮಲ್ಯ ನಿವಾರಣೆಗಾಗಿ ಕಲ್ಪಿಸಿವೆ. ಹಲವು ಉಪಾಸನಾ ಪದ್ಧತಿಗಳನ್ನು ಸಹ ತಿಳಿಸಿವೆ. ಅದಕ್ಕನುಸಾರವಾಗಿ ಮೂರ್ತಿಗಳನ್ನು ನಿರ್ಮಿಸಲಾಗಿದೆ. ಮೂರ್ತಿಯ ಮೂಲಕ ಭಗವಂತನನ್ನು ಸ್ಮರಣೆಗೆ ತಂದುಕೊಳ್ಳಬೇಕೇ ವಿನಾ ಮೂರ್ತಿಯೇ ಭಗವಂತನಲ್ಲ ಎಂಬ ಎಚ್ಚರ ಸದಾ ಇದ್ದರೆ ಸಾಕು.

ಸಾಮಾನ್ಯವಾಗಿ ಮನೆಗಳಲ್ಲಿ ಮೃತರಾದ ತಂದೆ ತಾಯಿಯರ ಭಾವಚಿತ್ರಗಳನ್ನಿಟ್ಟು ಹಾರಾದಿಗಳಿಂದ ಅಲಂಕರಿಸಿರುತ್ತಾರೆ. ದಿನವೂ ಹೂ ಹಾಕಿ ನಮಸ್ಕಾರಗಳನ್ನು ಮಾಡುತ್ತಾರೆ. ಆದರೆ ಆ ಪಟವೇ ತಮ್ಮ ಮಾತಾಪಿತೃಗಳೆಂದೇನೂ ಅವರು ಭಾವಿಸುವುದಿಲ್ಲ. ಅದೇ ರೀತಿ ಇತರರೂ ನಮ್ಮ ತಂದೆತಾಯಿಯರ ಪಟಕ್ಕೇ ಪೂಜೆ ಮಾಡಬೇಕೆಂದು ಬಯಸುವುದಿಲ್ಲ. ಪಕ್ಕದ ಮನೆಯವನು ತನ್ನ ತಂದೆತಾಯಿಯರ ಪಟಕ್ಕೆ ಪೂಜೆ ಮಾಡುತ್ತಿದ್ದರೆ ಇವರು ಅವನನ್ನು ದ್ವೇಷಿಸುವುದಿಲ್ಲ. ಬಹಿಷ್ಕಾರ ಹಾಕುವುದೂ ಇಲ್ಲ. ಇದೇ ಭಾವನೆ ಮೂರ್ತಿಪೂಜೆಯ ವಿಷಯದಲ್ಲಿಯೂ ಇದ್ದರೆ ವೈಮನಸ್ಯಕ್ಕೆ ಅವಕಾಶವೇ ಇರುವುದಿಲ್ಲ. ಮೂರ್ತಿ ಎನ್ನುವುದು ಕಲ್ಪಿತ, ಸತ್ಯವಲ್ಲ. ಇಂಥ ಸಮತ್ವ ದೃಷ್ಟಿಯನ್ನು ಹೊಂದಿದವನಿಗೆ ನಾನಾದೇವೋಪಾಸನೆ ಯಾವ ಕ್ಲೇಶವನ್ನೂ ಉಂಟು ಮಾಡಲಾರದು. ತಾನು ಪೂಜಿಸುವ ಮೂರ್ತಿಯನ್ನು ಬಿಟ್ಟು ಇತರ ಮೂರ್ತಿಗಳ ಬಗ್ಗೆ ದ್ವೇಷವಾಗಲಿ, ತಿರಸ್ಕಾರವಾಗಲಿ ತಾಳದ ಅವನ ಪೂಜೆ ಇನ್ನಷ್ಟು ಪರಿಶುದ್ಧವಾಗುತ್ತದೆ.

ಮತಧರ್ಮಗಳ ವಿಷಯವೂ ಅಷ್ಟೆ. ಎಲ್ಲ ಮತಧರ್ಮಗಳೂ ಭಗವಂತನನ್ನು ಸೇರಲು ಇರುವ ನಾನಾ ಮಾರ್ಗಗಳು, ಗುರಿ ಒಂದೇ ಆದರೂ ಮಾರ್ಗಗಳು ಬೇರೆ ಬೇರೆ ಇರಬಹುದು. ಅದು ಪ್ರಯಾಣಿಕರು ಹೊರಟ ಸ್ಥಳವನ್ನವಲಂಬಿಸಿ ಇರುತ್ತದೆ. ಗುರಿ ಸತ್ಯವಾದರೂ ಮಾರ್ಗ ಅಸತ್ಯ. 'ಅಸತ್ಯದಿಂದ ನನ್ನನ್ನು ಸತ್ಯಕ್ಕೆ ಕರೆದೊಯ್ಯು' ಎಂಬ ಸಂದೇಶ ಉಪನಿಷತ್ತಿನದು. ಅಸತ್ಯದಲ್ಲಿದ್ದೇವೆಂಬುದನ್ನೇ ನಾವೀಗ ತೋರಿಸುತ್ತಿದ್ದೇವೆ. ಅಸತ್ಯ- ಒಂದು ಚಕ್ರದ ಪರಿಧಿಯ ಮೇಲೆ ನಿಂತ ಜನರು ಆ ಚಕ್ರದ ಅಕ್ಷದ ಕಡೆ ಹೋಗಬೇಕಾದರೆ ಪ್ರತಿಯೊಬ್ಬರಿಗೂ ಬೇರೆ ಬೇರೆ ದಿಕ್ಕು ಹಾಗೂ ಬೇರೆ ಬೇರೆ ದಾರಿಗಳಾಗುತ್ತವೆ. ಇದು ಸಹಜ. ಗುರಿಯ ಬಗ್ಗೆ ನಮ್ಮ ಲಕ್ಷ್ಯವಿದ್ದಾಗ ಇನ್ನೊಬ್ಬನ ಭಿನ್ನತೆ ನಮ್ಮ ಮನಸ್ಸನ್ನು ಚುಚ್ಚುವುದಿಲ್ಲ. ಆ ಕಡೆ ನಾವು ಲಕ್ಷ್ಯವನ್ನೇ ಹರಿಸುವುದಿಲ್ಲ. ಹೀಗಿರುವಾಗ ಅಂತಃಕಲಹಕ್ಕೆ ಎಡೆಯೆಲ್ಲಿ?

ಅದ್ವೈತದರ್ಶನವು ಹೇಳುತ್ತದೆ- ನೀವು ಬೇರೆಯವರ ಶರೀರ, ಮನಸ್ಸುಗಳನ್ನು ಘಾಸಿಗೊಳಿಸದೆ ನಿಮ್ಮ ಪರಂಪರೆಯಲ್ಲಿ ಬಂದ ಭಗವಂತನ ಆಕಾರವನ್ನು ಪರಂಪರೆಯಲ್ಲಿ ಬಂದ ಕ್ರಮದಂತೆ ಆರಾಧಿಸಿರಿ. ಆದರೆ 'ಅಹಂ ಬ್ರಹ್ಮಾಸ್ಮಿ', 'ನಾನು ಏಕಮೇವಾದ್ವಿತೀಯ ಆನಂದಸ್ವರೂಪನು' ಎಂಬ ದೃಢಾನುಭವ ಸದಾ ನಿಮ್ಮದಾಗಿರಲಿ ಎಂದು. ಏಕಾತ್ಮವಾದದಲ್ಲಿ ವಿಶ್ವಾಸವಿಟ್ಟವನನ್ನು ಮತಧರ್ಮಗಳ ವಿಭಿನ್ನತೆಗಳು ಕದಲಿಸಲಾರವು. ಏಕೆಂದರೆ ಏಕಾತ್ಮವಾದ ಒಂದು ಮತವಲ್ಲ. ಅದೊಂದು ಸಿದ್ಧಾಂತ ಎಂಬುದನ್ನು ಸನಾತನಿಯಾಗಿಯೇ ನೋಡಿದ್ದೇವೆ.

ವೇದಾಂತಸಿದ್ಧಾಂತವು ಸಾಮಾಜಿಕ ಹಾಗೂ ರಾಷ್ಟ್ರೀಯ ಸಮಸ್ಯೆಗೂ ಅದ್ಭುತ ಪರಿಹಾರವನ್ನೊದಗಿಸಬಲ್ಲದು. ನಾವೆಲ್ಲ ಒಂದೇ ಆತ್ಮದ ಬೇರೆ ಬೇರೆ ಶರೀರಗಳೆಂಬ ದೃಢಭಾವನೆ ಬೆಳೆದಾಗ ನಮ್ಮಲ್ಲಿನ ಜಾತಿ, ಮತ, ಪ್ರಾಂತ, ಭಾಷೆಗಳ ಭೇದ ಸಡಿಲವಾಗುತ್ತದೆ. 'ನಾವೆಲ್ಲ ಒಂದೇ ದೇಶದ ಮಕ್ಕಳು, ಅಣ್ಣತಮ್ಮಂದಿರು' ಎಂಬ ಭಾವನೆ ಈ ಕೆಲಸ ಮಾಡದೆ? ಎಂದು ಕೆಲವರಿಗನ್ನಿಸಬಹುದು. ಆದರೆ ನಾವು ಮೊದಲೇ ನೋಡಿದಂತೆ ಈ ಅಣ್ಣತಮ್ಮಂದಿರು ಎಂಬುದು ಭಾವನೆ ಮಾತ್ರ. ಅಂದರೆ ಕೇವಲ ಕಲ್ಪನೆ. ಏಕಾತ್ಮವಾದ ಒಂದು ಸತ್ಯ, ಸಿದ್ಧಾಂತ. ಎರಡನೆಯದಾಗಿ 'ಕುಟುಂಬಕ್ಕೊಂದೇ ಮಗು ಎಂಬ ಘೋಷಣೆ ಕಾರ್ಯರೂಪಕ್ಕೆ ಬರುತ್ತಿರುವ ಈ ಕಾಲದಲ್ಲಿ ಅಣ್ಣ-ತಮ್ಮ, ಅಕ್ಕ-ತಂಗಿ ಮೊದಲಾದ ಶಬ್ದಗಳು ಅರ್ಥವನ್ನೇ ಕಳೆದುಕೊಳ್ಳುತ್ತಿವೆ. ಮುಂದೊಂದು ದಿನ ಇವುಗಳ ಬಳಕೆ ನಿಶ್ಶೇಷವಾಗಿ ನಶಿಸಿಹೋಗಬಹುದು. ಮೂರನೆಯದಾಗಿ ಭೌತಿಕವಾದ ವಿಜೃಂಭಿಸುತ್ತಿರುವ ಇಂದಿನ ಕಾಲದಲ್ಲಿ ಅಣ್ಣ ತಮ್ಮಂದಿರು ಎಂಬ ಭಾವನೆ ಸ್ನೇಹಕ್ಕಿಂತ ಕಲಹಕ್ಕೇ ಹೆಚ್ಚು ಕಾರಣವಾದೀತು. 'ಹುಟ್ಟುತ್ತ ಅಣ್ಣ ತಮ್ಮಂದಿರು, ಬೆಳೆಯುತ್ತ ದಾಯಾದಿಗಳು' ಎಂಬ ಮಾತನ್ನು ನಾವೆಲ್ಲ ಕೇಳಿಯೇ ಇದ್ದೇವೆ. ಆದ್ದರಿಂದ ಸಾಮಾಜಿಕ ಬಂಧ ಬಿಗಿಯಾಗಲು ಏಕಾತ್ಮವಾದವನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ಅದನ್ನೇ ಉಪನಿಷತ್ತು ತಿಳಿಸಿದೆ.

ಏಕಾತ್ಮವಾದವನ್ನು ಎಲ್ಲ ರೀತಿಯಿಂದಲೂ ಅನುಷ್ಠಾನಕ್ಕೆ ತರಲು ವ್ಯವಹಾರದಲ್ಲಿ ಸಾಧ್ಯವೇ ಎಂಬುದೇ ಸಮಾಜದ ಮುಂದಿರುವ ಪ್ರಶ್ನೆ. ವ್ಯಾವಹಾರಿಕ ಪ್ರಪಂಚದಲ್ಲಿ ದೈತವಿರಲೇಬೇಕಷ್ಟೆ? ಬಾಯಲ್ಲಿ (ಸಾಧ್ಯವಾದರೆ ಮನಸ್ಸಿನಲ್ಲಿ) ಅದ್ವೈತವೆನ್ನುತ್ತ ಕೃತಿಯಲ್ಲಿ ದೈತಿಗಳಾದರೆ ಇದು ಅಪ್ರಾಮಾಣಿಕತೆಯಲ್ಲವೇ? ಅಲ್ಲವೆನ್ನಬೇಕು. ಏಕೆಂದರೆ ಮನಸ್ಸಿನಲ್ಲಿ ಅದ್ವೈತವು ರೂಢಮೂಲವಾಗಿದ್ದು ಲೋಕವ್ಯವಹಾರಕ್ಕಾಗಿ ಕೃತಿಯಲ್ಲಿ ಜ್ಞಾನಿಯು ದ್ವಿತಿಯಂತೆ ತೋರಿಸಿಕೊಳ್ಳುತ್ತಾನೆ. ಮನುಷ್ಯನು ತನ್ನ ಜೀವನದಲ್ಲಿ ಪಾರಮಾರ್ಥಿಕ-ವ್ಯಾವಹಾರಿಕ ಎಂದು ಎರಡು ವಿಭಾಗಗಳನ್ನು ಮಾಡಿಕೊಳ್ಳಲೇಬೇಕು. ಪಾರಮಾರ್ಥಿಕದ ಬುನಾದಿಯ ಮೇಲೆ ವ್ಯಾವಹಾರಿಕ ಸೌಧವನ್ನು ಕಟ್ಟಬೇಕು. ಇದು ಎಲ್ಲರಿಗೂ ಸಮಾನ. ಹೀಗಾದಾಗ ಸೌಖ್ಯ ಸಿಗುವುದು ಖಂಡಿತ

ನಾಸ್ತಿಕನನ್ನು ಬಿಟ್ಟು ಎಲ್ಲರೂ ಶರೀರಾತಿರಿಕ್ತನಾದ ಆತ್ಮನನ್ನು ಒಪ್ಪುತ್ತಾರೆ. ಆತ್ಮಜ್ಯೋತಿಯ ಅನುಗ್ರಹದಿಂದಲೇ ಯಾವಾಗಲೂ ಎಲ್ಲಾ ಬಗೆಯ ವ್ಯವಹಾರವೂ ನಡೆಯುತ್ತದೆ ಎಂದು ಸ್ಪಷ್ಟವಾಗಿ ಬೃಹದಾರಣ್ಯಕ ಉಪನಿಷತ್ತು (4-3-7) ತಿಳಿಸುತ್ತದೆ. ಇಂತಹ ಆತ್ಮನನ್ನು ನಾಶಮಾಡುವುದಕ್ಕೆ ಯಾರಿಂದಲೂ ಆಗದು. ಈಶ್ವರನಿಗೂ ಶಕ್ಯವಿಲ್ಲ. ಏಕೆಂದರೆ ಆತ್ಮವೇ ಬ್ರಹ್ಮವಾಗಿದೆ. ತನ್ನ ವಿಷಯದಲ್ಲಿ ತನ್ನ ಕ್ರಿಯೆ ನಡೆಯುವುದು ವಿರುದ್ಧವಾಗಿದೆ ಎಂದು ಆಚಾರ್ಯರು ಗೀತಾಭಾಷ್ಯದಲ್ಲಿ (2-17) ತಿಳಿಸಿರುವರು.

ಇದಂ ಸರ್ವಂ ಯದಯಮಾತ್ಮಾ, ಅದ್ವೈತವೇದಂ ಸರ್ವಂ, ಸರ್ವಂ ಖಲ್ವಿದಂ ಬ್ರಹ್ಮ ಇತ್ಯಾದಿ ನೂರಾರು ಶ್ರುತಿವಾಕ್ಯಗಳು ಸಕಲವೂ ಆತ್ಮನೇ, ಆತ್ಮನನ್ನು ಬಿಟ್ಟು ಇನ್ನೊಂದು ವಸ್ತುವಿಲ್ಲವೆಂದು ಸಾರುತ್ತವೆ. ಮಹಾನೀತಿಶಾಸ್ತ್ರಜ್ಞನಾದ ಭತೃಹರಿಯು ಹೇಳುತ್ತಾನೆ. ಅಸತ್ಯೇ ವರ್ತ್ಮನಿ ಸ್ಥಿತ್ವಾ ತತಃ ಸತ್ಯಂ ಸಮೀಹತೇ, ಅಸತ್ಯವಾದ ಮಾರ್ಗದಲ್ಲಿ ನಿಂತು ಸತ್ಯವನ್ನು ಶೋಧಿಸ ತೊಡಗಬೇಕಾಗುತ್ತದೆ. ಶ್ರುತಿಯು ಎಲ್ಲಿಯೂ ಅಭೇದವನ್ನು ನಿಷೇಧಿಸಿಲ್ಲ. ಆದರೆ ಭೇದವನ್ನು ನಿಷೇಧಿಸಿದೆ.

ಒಂದು ಮಣ್ಣಿನ ಮುದ್ದೆಯು ಪರಮಾರ್ಥದಲ್ಲಿ ಮಣ್ಣೇ ಆಗಿದೆ ಎಂದು ತಿಳಿಯುವುದರಿಂದ ಮಣ್ಣಿನ ವಿಕಾರವಾದ ಗಡಿಗೆ, ಹೂಜಿ, ಕೊಡ, ತಟ್ಟೆ ಮುಂತಾದವುಗಳೆಲ್ಲ ತಿಳಿಯಲ್ಪಟ್ಟಂತಾಗುತ್ತದೆ. ಎಲ್ಲವೂ ಮಣ್ಣಿನಿಂದಲೇ ಆದ್ದರಿಂದ ವಿಶೇಷವೇನೂ ಇರುವುದಿಲ್ಲ. ಪರಮಚೈತ್ಯವಾದ ಬ್ರಹ್ಮವನ್ನು ತಿಳಿದರೆ ಪರಮಾರ್ಥದಲ್ಲಿ ಬ್ರಹ್ಮವೇ ಎಂದು ಗೊತ್ತಾಗುವುದರಿಂದ ಎಲ್ಲವನ್ನು ತಿಳಿದಂತೆಯೇ ಆಗುತ್ತದೆ. ಇದು ಸಕಲ ಉಪನಿಷತ್ತುಗಳ ಸಿದ್ಧಾಂತದಿಂದಲೂ, ಅನುಭವಾನುಸಾರಿಯಾದ ಯುಕ್ತಿಯಿಂದಲೂ ನಿರ್ಣೀತವಾಗಿರುವುದರಿಂದ ಆತ್ಮನು ಅದ್ವಿತೀಯನೆಂಬ ದರ್ಶನವೇ ಸಮ್ಯಗ್ ದರ್ಶನ. ಉಳಿದೆಲ್ಲವೂ ಮಿಥ್ಯಾದರ್ಶನ. ಪರಮಾರ್ಥದಲ್ಲಿ ಅವಿದ್ಯೆಯು ತೊಲಗಿದಾಗ ಜೀವನು ಬ್ರಹ್ಮವೇ ಆಗುತ್ತಾನೆ. ಇದು ಏಕಾತ್ಮವಾದದ ತಿರುಳು. ಪರಮಾರ್ಥದಲ್ಲಿ ಅದ್ವೈತ, ವ್ಯವಹಾರದಲ್ಲಿ ದ್ವೈತ, ಅವಿದ್ಯೆ ಅನಿರ್ವಾಚ್ಯವೆಂದು ತಿಳಿದು ವ್ಯವಹರಿಸುವುದು ಪರಮಶ್ರೇಯಸ್ಸಿಗೆ ಕಾರಣವಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.