ADVERTISEMENT

ಆಯುಧಪೂಜೆ: ಋಣಮುಕ್ತಿಗೆ ದಾರಿ

ರಾಮಸುಬ್ರಾಯ ಶೇಟ್
Published 4 ಅಕ್ಟೋಬರ್ 2022, 0:00 IST
Last Updated 4 ಅಕ್ಟೋಬರ್ 2022, 0:00 IST
ಆಯುಧಪೂಜೆ
ಆಯುಧಪೂಜೆ   

ಮಾನವನು ಗರ್ಭಾವಸ್ಥೆಯಿಂದಲೇ ಒಂದಲ್ಲಾ ಒಂದು ಋಣದಲ್ಲಿ ಬದುಕಬೇಕಾಗುತ್ತದೆ. ಅಮ್ಮನ ಔದಾರ್ಯದಿಂದ ಭೂಮಿಯ ಮೇಲೆ ಬೆಳೆಯುತ್ತಿದ್ದಂತೆ ಪ್ರತಿಯೊಂದು ಹಂತದಲ್ಲಿಯೂ ಪರಾವಲಂಬಿಯಾಗಿಯೇ ಇರುತ್ತಾನೆ; ತಾಯಿಯ ಸಂರಕ್ಷಣೆ, ತಂದೆಯ ಪೋಷಣೆ, ಗುರುಗಳಿಂದ ಅರಿವು, ಉದ್ಯೋಗದಾತರಿಂದ ವೃತ್ತಿ – ಹೀಗೆ ಜೀವಿತದುದ್ದಕ್ಕೂ ಇತರರ→ಆಶ್ರಯದಲ್ಲಿಯೇ ಬದುಕುತ್ತಾನೆ. ಈ ರೀತಿಯ ಋಣದ ಭಾರದಲ್ಲಿ ಬದುಕುತ್ತಿರುವ ಮಾನವನಿಗೆ ಆಯುಧಪೂಜೆಯು ಋಣವನ್ನು ತೀರಿಸುವ ಒಂದು ಸಾಧನ ಮತ್ತು ಅವಕಾಶ.

ನವರಾತ್ರಿಯ ಆಶ್ವಿಜಶುದ್ಧ ನವಮಿಯನ್ನು ‘ಆಯುಧಪೂಜೆ’ ಎಂದು ಆಚರಿಸಿದರೂ ಅದು ಕೇವಲ ಶಸ್ತ್ರಾಸ್ತ್ರಗಳ ಪೂಜೆಗೆ ಸೀಮಿತವಾದುದಲ್ಲ. ನಾವು ಪ್ರಯೋಜನ ಪಡೆಯುವ ಎಲ್ಲ ಪದಾರ್ಥಗಳ ಮಹತ್ವವನ್ನು ಸಂಭ್ರಮಿಸುವ ಸಂದರ್ಭ. ಭಾರತದ ಭವ್ಯ ಪರಂಪರೆಯಲ್ಲಿ ಉಪಕಾರ ಸ್ಮರಣೆಗೆ ಹೆಚ್ಚು ಅದ್ಯತೆ ಇದೆ. ನಮ್ಮ ವಿಜಯಕ್ಕೆ ಕಾರಣವಾಗುವ ಬಿಲ್ಲು, ಬಾಣ, ಕತ್ತಿ, ಬಂದೂಕು – ಇವುಗಳನ್ನು ಪೂಜಿಸುವುದು ರಾಜಮಹಾರಾಜರ ಪಾರಂಪರಿಕ ಸಂಪ್ರದಾಯವಾದರೂ, ಇದರ ಅರ್ಥವ್ಯಾಪ್ತಿಯು ಅಗಾಧವಾದ ವಿಸ್ತಾರವನ್ನು ಹೊಂದಿದೆ. ಒಬ್ಬ ರಾಜನಿಗೆ ಅಥವಾ ಯೋಧನಿಗೆ ಆಯುಧವೇ ಪ್ರಧಾನವಾದರೆ, ಒಬ್ಬ ಕೃಷಿಕನಿಗೆ ನೇಗಿಲು ಎತ್ತು ಗಾಡಿಗಳು ಪ್ರಧಾನ ಸಾಧನಗಳು. ಒಬ್ಬ ವಾಹನ
ಚಾಲಕನಿಗೆ ವಾಹನವೇ ಅನ್ನನೀಡುವ ಸಾಧನ. ಹಾಗೆಯೇ ವ್ಯಾಪಾರಿಗೆ ಅಳತೆ ಮಾಡುವ ಸಾಧನಗಳು ಮುಖ್ಯವಾದವು. ಇವುಗಳಿಗೆಲ್ಲಾ ಪ್ರತಿನಿತ್ಯ ಪೂಜಿಸುವ ಪರಿಪಾಠವಿದ್ದರೂ, ಈ ದಿನ ವಿಶೇಷ ರೀತಿಯಲ್ಲಿ ಪೂಜಿಸಿ ಕೃತಜ್ಞತೆ ಸಲ್ಲಿಸುವ ಶ್ರೇಷ್ಠ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದೇವೆ. ನಮ್ಮ ಪೂರ್ವಜರು ಎಷ್ಟೋ ಕಾಲದ ಅನುಭವಗಳಿಂದ, ಪ್ರಯೋಗಗಳಿಂದ, ಸಾಧಕಬಾಧಕಗಳಿಂದ ತಿಳಿದು ಶಾಸ್ತ್ರದ ಆಧಾರದ ಮೇಲೆ ನಿಯಮಗಳನ್ನು ರೂಪಿಸಿದ್ದಾರೆ. ಪ್ರತಿಯೊಂದೂ ಎಲ್ಲರ ಒಳಿತಿಗಾಗಿಯೇ ಇದೆಯೇ ವಿನಾ ಕೆಲವೇ ಜನರ ಒಳಿತಿಗಾಗಿ ಅಲ್ಲ.

ಶರನ್ನವರಾತ್ರಿಯ ವಿಶೇಷತೆಯಲ್ಲಿ ದುರ್ಗಾಷ್ಟಮಿಗೆ ಅದರದೇ ಆದ ಮಹತ್ವವಿದೆ. ಜಗನ್ಮಾತೆಯು ಸಜ್ಜನರಿಗೆ ಎಷ್ಟು ಸೌಮ್ಯಳಾಗಿ ಕೃಪೆದೋರುವಳೋ ದುರ್ಜನರಿಗೆ ಅಷ್ಟೇ ಕ್ರೂರಿಯಾಗಿ, ಉಗ್ರರೂಪೀ ಕಾಳಿಯಾಗಿ, ಚಂಡಿಯಾಗಿ, ದುರ್ಗೆಯಾಗುತ್ತಾಳೆ. ಬ್ರಹ್ಮ ವಿಷ್ಣು ಮಹೇಶ್ವರರಿಂದಲೂ ಸಂಹರಿಸಲಾಗದ ಚಂಡ, ಮುಂಡ, ಕೋಲಾಸುರ, ಮಹಿಷಾಸುರ ಮುಂತಾದ ಲೋಕಕಂಟಕರನ್ನು ಸದೆಬಡಿದು ಲೋಕರಕ್ಷಕಳಾಗುತ್ತಾಳೆ. ಹೀಗೆ ದುರ್ಗೆಯನ್ನು ಆರಾಧಿಸಿ ಮರುದಿನ ಆಯುಧಗಳನ್ನೆಲ್ಲಾ ಅಣಿಗೊಳಿಸಿ ಪೂಜಿಸಲಾಗುತ್ತದೆ. ಅದರ ಮರುದಿನ ವಿಜಯದ ಶಮೀಪೂಜೆ ಪೂರೈಸಿ ಗೆಲುವನ್ನು ಸಾಧಿಸುವ ಮಹೋದ್ದೇಶದಿಂದ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಹೀಗೆ ಕೃತಜ್ಞತೆಯನ್ನು ಸಲ್ಲಿಸಿ ಋಣಮುಕ್ತರಾಗುವ ಸತ್ಸಂಪ್ರದಾಯ ಹೊಂದಿದ ನಾವೇ ಧನ್ಯರಲ್ಲವೇ?ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯ ಪೂಜಾ ವಿಧಾನಗಳಿರಬಹುದು; ಆದರೆ ಉದ್ದೇಶ ಮಾತ್ರ ಒಂದೇ.

ADVERTISEMENT

ಮಹಾನವಮಿಯ ಮರುದಿನದ ವಿಜಯದಶಮಿಯಂದು ಶ್ರೀರಾಮನು ರಾವಣನ ಮೇಲೆ ವಿಜಯ ಸಾಧಿಸಿದ್ದು ಎಂಬ ನಂಬಿಕೆಯಿದೆ. ಈ ದಿನವೇ ಪಾಂಡವರು ಅಜ್ಞಾತವಾಸ ಪೂರೈಸಿ ಮರಳಿ ಬಂದಿದ್ದರು ಎಂಬ ಪ್ರತೀತಿಯೂ ಇದೆ. ಒಟ್ಟಾರೆ ಜಗನ್ಮಾತೆಯ ಕೃಪೆ ಇದ್ದರೆ, ಸತ್ಕಾರ್ಯಗಳನ್ನು ಸುಲಭದಿಂದ ಸಾಧಿಸಬಹುದು ಎಂಬ ಬೋಧನೆ ಹಬ್ಬದ ಆಚರಣೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.