ADVERTISEMENT

ಕ್ರಿಸ್‌ಮಸ್‌ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 19:30 IST
Last Updated 14 ಡಿಸೆಂಬರ್ 2019, 19:30 IST
ವಿಯೆನ್ನಾ ಕ್ರಿಸ್‌ಮಸ್ ವರ್ಲ್ಡ್
ವಿಯೆನ್ನಾ ಕ್ರಿಸ್‌ಮಸ್ ವರ್ಲ್ಡ್   

ಮಿನುಮಿನುಗುತ್ತಾ ಯಕ್ಷಲೋಕವೇ ಧರೆಗೆ ಇಳಿದಿದೆಯೇನೋ ಎನ್ನುವ ಭ್ರಮೆ ಹುಟ್ಟಿಸುವಂತಹ ದೀಪಗಳು, ಬೀದಿ ತುಂಬೆಲ್ಲಾ ಹರಡಿರುವ ಜಿಂಜರ್ ಬ್ರೆಡ್ ಮತ್ತು ಮಲ್ಲ್ಡ್ (ಮಸಾಲೆ ಬೆರೆಸಿ ಕುದಿಸಿದ) ವೈನ್‌ನ ಬೆಚ್ಚಗಿನ ಘಮಲು, ಕ್ಯಾರೋಲ್‌ಗಳನ್ನು ಸುಶ್ರಾವ್ಯವಾಗಿ ಹಾಡುತ್ತಾ ಮೋಡಿ ಮಾಡುವ ಗಾಯಕ ವೃಂದದವರು, ಎಸ್ಕಿಮೋಗಳಂತೆ ಮೈತುಂಬಾ ದಿರುಸು ಧರಿಸಿರುವ ಜನ ಒಂದೇ ಎರಡೇ ಡಿಸೆಂಬರ್ ಮಾಸದಲ್ಲಿ ಬರುವ ಹಬ್ಬದ ಉತ್ಸಾಹದ ಕಿಚ್ಚು ಹೆಚ್ಚಿಸಲು ಕ್ರಿಸ್‌ಮಸ್ ಮಾರುಕಟ್ಟೆಗಿಂತ ಬೇರೆ ಏನೂ ಇಲ್ಲ!

ಜರ್ಮನಿಯಲ್ಲಿ ಹುಟ್ಟಿಕೊಂಡ ಕ್ರಿಸ್‌ಮಸ್ ಮಾರುಕಟ್ಟೆಗಳನ್ನು ಕ್ರೈಸ್ಟ್‌ ಕೈಂಡ್‍ಮಾರ್ಕ್ ಎಂದೂ ಕರೆಯುತ್ತಾರೆ. ಇದನ್ನು ‘ಬೇಬಿ ಜೀಸಸ್ ಮಾರುಕಟ್ಟೆ’ ಎಂದು ಅನುವಾದಿಸಲಾಗುತ್ತದೆ. ಈ ಬೀದಿ ಮಾರುಕಟ್ಟೆಗಳು ಕ್ರಿಸ್‌ಮಸ್ ಆಚರಣೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. 1298ಕ್ಕೂ ಹಿಂದಿನದಾಗಿದ್ದ ವಿಯೆನ್ನಾದ ಮಾರುಕಟ್ಟೆಯು ‘ಡಿಸೆಂಬರ್‌ ಮಾರುಕಟ್ಟೆ’ಗಳ ಪರಂಪರೆಯ ಕೊಂಡಿಯಾಗಿದೆ.

ಮಧ್ಯಯುಗದ ಉತ್ತರಾರ್ಧದಿಂದ ಕ್ರಿಸ್‌ಮಸ್ ಹಬ್ಬದ ಉತ್ಸವಗಳು ಯುರೋಪಿನಾದ್ಯಂತ ಹರಡಿವೆ. ಜರ್ಮನಿ, ಫ್ರಾನ್ಸ್ ಮತ್ತು ಸ್ವಿಡ್ಜರ್ಲೆಂಡ್‌ನ ಅನೇಕ ಪಟ್ಟಣಗಳಲ್ಲಿ ಕ್ರಿಸ್‌ಮಸ್ ಮಾರುಕಟ್ಟೆಗಳು ಸಾಂಪ್ರದಾಯಿಕವಾಗಿ ಪಟ್ಟಣದ ಚೌಕಗಳಲ್ಲಿ ನಡೆಯುತ್ತವೆ. ಯಕ್ಷಿಣಿ ದೀಪಗಳ ಹೊಳಪಿನಲ್ಲಿ ಪ್ರಕಾಶಮಾನವಾಗಿ ಕಂಗೊಳಿಸುವ ತೆರೆದ ಮಳಿಗೆಗಳು ಅದರಲ್ಲಿರುವ ಪ್ರಾದೇಶಿಕ ಆಹಾರ ವಿಶೇಷತೆಗಳು, ಕ್ರಿಸ್‌ಮಸ್ ಪಾನೀಯಗಳಾದ ಮಲ್ಲ್ಡ್ ವೈನ್ ಮತ್ತು ಗ್ಲುಹ್ವೀನ್, ಋತುಮಾನಕ್ಕೆ ಅನುಗುಣವಾದ ಉತ್ಪನ್ನಗಳು ಮತ್ತು ಉಡುಗೊರೆಗಳು ಇದರ ಜೊತೆಗೆ ಹಾಡುಗಾರಿಕೆ ಮತ್ತು ನೃತ್ಯ ಪ್ರದರ್ಶನ ಇವೆಲ್ಲವೂ ಕ್ರಿಸ್‌ಮಸ್ ಹಬ್ಬದ ಆಗಮನಕ್ಕೂ ತುಸು ಮುಂಚೆಯೇ ಕಾಣಬರುತ್ತವೆ. ಸಿಂಗಪುರದಲ್ಲಿ ಅಪ್ರತಿಮವೆನಿಸಿದ ಗಾರ್ಡನ್ಸ್ ಬೈ ದಿ ಬೇ ಯು ಕ್ಯಾರೊಲ್‌ ಹಾಡುಗಾರಿಕೆ, ಬೆಳಕಿನ ಪ್ರದರ್ಶನ ಐಸ್ ಸ್ಕೇಟಿಂಗ್ ರಿಂಕ್ ಮತ್ತು ಫೋಮ್‌ ಹಿಮ ಬೀಳುವಿಕೆ ಮುಂತಾದವುಗಳೊಂದಿಗೆ ವಿಸ್ತರಿಸಿದ ಕ್ರಿಸ್‌ಮಸ್ ಮಾರುಕಟ್ಟೆಯಾಗಿ ಪರಿವರ್ತನೆಗೊಂಡಿದೆ. ಹಾಂಗ್‍ಕಾಂಗ್‍ನಲ್ಲಿ ಸ್ಟಾನ್ಲಿ ಪ್ಲಾಜಾ ಕ್ರಿಸ್‌ಮಸ್ ಮಾರುಕಟ್ಟೆ ವಾರ್ಷಿಕವಾಗಿ ಮೂರು ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತದೆ.

ADVERTISEMENT

ಆದಾಗ್ಯೂ ಅಧಿಕೃತ ಯುರೋಪಿಯನ್ ಮಾರುಕಟ್ಟೆಯಂತೆ ಹಬ್ಬದ ಸಂಭ್ರಮಕ್ಕೆ ಯಾವುದೂ ಸರಿಸಾಟಿಯಾಗುವುದಿಲ್ಲ. ಇತಿಹಾಸ, ಸಂಪ್ರದಾಯಭರಿತ ವಿಶ್ವದ ಪುರಾತನ ಮತ್ತು ಅತ್ಯಂತ ಜನಪ್ರಿಯ ಐದು ಕ್ರಿಸ್‌ಮಸ್ ಮಾರುಕಟ್ಟೆಗಳ ಮಾಹಿತಿ ಇಲ್ಲಿದೆ.

ವಿಯೆನ್ನಾ ಕ್ರಿಸ್‌ಮಸ್ ವರ್ಲ್ಡ್

ಅತ್ಯಂತ ಪ್ರಸಿದ್ಧ ಕ್ರಿಸ್‌ಮಸ್ ಮಾರುಕಟ್ಟೆಗಳಲ್ಲಿ ಒಂದಾದ ವಿಯೆನ್ನಾ ಕ್ರಿಸ್‌ಮಸ್ ವರ್ಲ್ಡ್, ವಿಯೆನ್ನಾದ ಐತಿಹಾಸಿಕ ಸಭಾಂಗಣವಾದ ರಾಥೌಸ್ ಬಳಿಯ ರಥೌಸ್‌ ಪ್ಲಾಟ್ಜ್‌ನಲ್ಲಿದೆ. ಸಾಂಪ್ರದಾಯಿಕ ಆಸ್ಟ್ರಿಯನ್ ಆಹಾರಗಳು, ಕ್ರಿಸ್‌ಮಸ್ ಆಭರಣಗಳು, ಕರಕುಶಲ ವಸ್ತುಗಳು ಮತ್ತು ಪಾನೀಯಗಳನ್ನು ಮಾರುವ 150 ಮಳಿಗೆಗಳಿವೆ. ಇಲ್ಲಿರುವ ಎತ್ತರದ ಕಮಾನಿನ ‘ಗೇಟ್ ವೇ’ಯು ಪ್ರತಿವರ್ಷ ಇಲ್ಲಿನ ಮಳಿಗೆಗಳಿಗೆ ಭೇಟಿ ನೀಡುವ ಸುಮಾರು 30 ಲಕ್ಷ ಜನರನ್ನು ಸ್ವಾಗತಿಸುತ್ತದೆ. ಅದ್ದೂರಿಯಾಗಿ ಅಲಂಕೃತಗೊಂಡಿರುವ ಗ್ರ್ಯಾಂಡ್ ಕ್ರಿಸ್‌ಮಸ್ ಟ್ರೀಯ ಕೆಳಗೆ ಇರುವ ಕ್ರಿಸ್ ಕಿಂಡಲ್ ವೇದಿಕೆಯಲ್ಲಿ ಗಾಯನ ಮತ್ತು ತುತ್ತೂರಿ ವಾದನವನ್ನು ಆಲಿಸಬಹುದು. ಸುಮಾರು 3,000 ಚದರ ಮೀಟರ್‌ನಷ್ಟಿರುವ ಹಿಮದ ಮೈದಾನದ ಸುತ್ತಲೂ ಸ್ಕೇಟ್ ಮಾಡಿ ಆನಂದಿಸಬಹುದು ಮತ್ತು ಉದ್ಯಾನದ ಹಲವಾರು ಹಾದಿಗಳಲ್ಲಿ ಕ್ರಿಸ್‌ಮಸ್ ಕಥೆಗಳ ಆಧಾರದ ಮೇಲೆ ರೂಪಿತವಾದ ಸುಂದರವಾದ ಬೆಳಕಿನ ಚಿತ್ರಗಳನ್ನು ನೋಡಬಹುದು.

ಓಲ್ಡ್ ಟೌನ್ ಸ್ಕ್ವೇರ್ ಮಾರುಕಟ್ಟೆ

ಜೆಕ್ ಗಣರಾಜ್ಯದಲ್ಲಿ ಕ್ರಿಸ್‌ಮಸ್ ಮಾರುಕಟ್ಟೆಗಳು ಹಬ್ಬದ ಮಾಯಾಜಾಲದ ಪ್ರಮುಖ ಅಂಶಗಳಾಗಿವೆ. ಇವುಗಳಲ್ಲಿ ಅತಿದೊಡ್ಡ ಹಾಗೂ ಹೆಚ್ಚು ಜನಪ್ರಿಯ ಮಾರುಕಟ್ಟೆಯು ಓಲ್ಡ್ ಟೌನ್ ಸ್ಕ್ವೇರ್‌ನಲ್ಲಿ ಇರುವಂಥದ್ದು. ಇದು ಜಾನ್ ಹಸ್ ಪ್ರತಿಮೆಯ ಸುತ್ತಲೂ ಹರಡಿಕೊಂಡಿದೆ ಮತ್ತು ಶತಮಾನಗಳಷ್ಟು ಹಳೆಯದಾದ ಗೋಥಿಕ್ ನವೋದಯ ಮತ್ತು ಬರೂಕ್ ವಾಸ್ತುಶಿಲ್ಪದಿಂದ ಆವೃತವಾಗಿದೆ. ಜೆಕ್‍ನ ವಿಶೇಷ ಖಾದ್ಯ ಸುಟ್ಟ ಹಂದಿಮಾಂಸ, ಸಾಸೇಜ್‌ಗಳು, ಜೆಕ್ ಮಫಿನ್‌ಗಳು, ಸ್ಥಳೀಯ ಬಿಯರ್, ಮಲ್ಲ್ಡ್ ವೈನ್ ಮುಂತಾದವುಗಳನ್ನು ಸವಿಯಬಹುದು. ಜಾನಪದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ಮತ್ತು ಜೀವಂತ ಪ್ರಾಣಿಗಳೊಂದಿಗೆ ನೇಟಿವಿಟಿ ದೃಶ್ಯವನ್ನು ಕಾಣಬಹುದು. ರಾತ್ರಿಯಿಡಿ ನಿಮ್ಮ ಗಮನ ಸೆಳೆಯಲು ದೊಡ್ಡ ಮಾರುಕಟ್ಟೆ ಇನ್ನೂ ಸಾಕಾಗದಿದ್ದರೆ ಸ್ವಲ್ಪ ದೂರದಲ್ಲಿರುವ ವೆನ್ಸ್‌ಲಾಸ್ ಸ್ಕ್ವೇರ್ ಕ್ರಿಸ್‌ಮಸ್ ಮಾರುಕಟ್ಟೆಯು ಕೈಯಿಂದ ತಯಾರಿಸಿದ ಸಾಮಾನುಗಳೊಂದಿಗೆ ಕೈಬೀಸಿ ಕರೆಯುತ್ತದೆ.

ಕಲೋನ್ ಕ್ಯಾಥೆಡ್ರಲ್ ಮಾರುಕಟ್ಟೆ

ಇದು ಜರ್ಮನಿಯಲ್ಲಿ ಹೆಚ್ಚು ಜನ ಭೇಟಿ ನೀಡುವ ಕ್ರಿಸ್‌ಮಸ್ ಮಾರುಕಟ್ಟೆಯಾಗಿದ್ದು ವಾರ್ಷಿಕವಾಗಿ 40 ಲಕ್ಷ ಪ್ರವಾಸಿಗರು ಇರುತ್ತಾರೆ. ರೈನ್‍ಲ್ಯಾಂಡ್‌ನ ಅತಿದೊಡ್ಡ ಕ್ರಿಸ್‌ಮಸ್ ಮರದ ಕೆಳಗೆ ಗ್ರ್ಯಾಂಡ್ ಕಲೋನ್ ಕ್ಯಾಥೆಡ್ರಲ್ ಬುಡದಲ್ಲಿ ನಡೆವ ಈ ಮೇಳವು ಸುಮಾರು 150 ವಿಲಕ್ಷಣ ಬುಡೆನ್ಸ್ ಮಾದರಿಯ ಸ್ಟ್ಯಾಂಡ್‌ಗಳನ್ನು ಹೊಂದಿದೆ. ಈ ಕೆಂಪು ಚಾವಣಿಯ ಗುಡಿಸಲುಗಳೇ ಎಲ್ಲಾ ರೀತಿಯ ಕರಕುಶಲ ವಸ್ತುಗಳು, ಉಡುಗೊರೆಗಳು, ಆಹಾರ ಮತ್ತು ಪಾನೀಯಗಳ ಮಾರಾಟ ಮಳಿಗೆಗಳು. ದೊಡ್ಡ ವೇದಿಕೆಯಲ್ಲಿ ನೂರಕ್ಕೂ ಹೆಚ್ಚು ಉಚಿತ ಕ್ರಿಸ್‌ಮಸ್ ಕಾರ್ಯಕ್ರಮಗಳ ಪ್ರದರ್ಶನಗಳು ನಡೆಯುತ್ತವೆ.

ಸ್ಟ್ರಾಸ್‍ಬರ್ಗ್‌ ಮಾರುಕಟ್ಟೆ

1992ರಲ್ಲಿ ಸ್ಟ್ರಾಸ್‍ಬರ್ಗ್‍ನ ಉಪ ಮೇಯರ್‌ ಅವರು ಸ್ಟ್ರಾಸ್‍ಬರ್ಗ್‌ನ ಕ್ರಿಸ್‌ಮಸ್ ಮಾರುಕಟ್ಟೆಯನ್ನು ಕ್ರಿಸ್‌ಮಸ್ ರಾಜಧಾನಿಯನ್ನಾಗಿ ನಾಮಕರಣ ಮಾಡಿದರು. ಈ ಫ್ರೆಂಚ್ ಪಟ್ಟಣವು ನಗರದಾದ್ಯಂತ ವಿವಿಧ ಚೌಕಗಳಲ್ಲಿ ಸುಮಾರು ಒಂದು ಡಜನ್ ಕ್ರಿಸ್‌ಮಸ್ ಮಾರುಕಟ್ಟೆಗಳಿಗೆ ನೆಲೆಯಾಗಿದೆ. ಈ ನಗರವು ರೋಮನ್ ಸಾಮ್ರಾಜ್ಯದ ಭಾಗವಾಗಿದ್ದಾಗ ಮುಖ್ಯ ಮಾರುಕಟ್ಟೆಯು ಸ್ಟ್ರಾಸ್‍ಬರ್ಗ್ ಕೆಥೆಡ್ರಲ್ ಬುಡದಲ್ಲಿ ನಡೆಯಿತು. ಇದು ಯುರೋಪಿನ ಅತ್ಯಂತ ಹಳೆಯ ಕ್ರಿಸ್‌ಮಸ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಕ್ರಿಸ್‌ಮಸ್ ಹಳ್ಳಿಯ ಮಧ್ಯದಲ್ಲಿ ಮೈಲುಗಳಷ್ಟು ಮಿನುಗುವ ದೀಪಗಳಿಂದ ಕೂಡಿರುವ 100 ಅಡಿ ಎತ್ತರದ ನಾರ್ಡಿಕ್ ಪೈನ್ ಮರ ಇದೆ. ಸುಮಾರು 300 ಸ್ಟಾಲ್‌ಗಳಲ್ಲಿ ಪೇಸ್ಟ್ರಿ, ಕೈಯಿಂದ ಮಾಡಿರುವ ಉಡುಗೊರೆಗಳು, ಅಲಂಕಾರ ಸಾಮಾನುಗಳನ್ನು ಮಾರಾಟ ಮಾಡಲಾಗುತ್ತದೆ.

ಬಾಸೆಲ್ ಮಾರುಕಟ್ಟೆ

ಫ್ರಾನ್ಸ್ ಮತ್ತು ಜರ್ಮನಿ ಗಡಿಯಲ್ಲಿ ನೆಲೆಗೊಂಡಿರುವ ಸ್ವಿಸ್ ನಗರ ಬಾಸೆಲ್, ಮೂರು ಪ್ರಮುಖ ಕ್ರಿಸ್‌ಮಸ್ ಮಾರುಕಟ್ಟೆಗಳನ್ನು ಹೊಂದಿದೆ. ಇದರಲ್ಲಿ ಬಾರ್‌ ಫರ್ಜಾ ಪ್ಲಾಟ್ಜ್‌ನ ಹಳೆ ನಗರದಲ್ಲಿರುವ ಒಂದು ಮಾರುಕಟ್ಟೆ ದೊಡ್ಡದಾಗಿದೆ. ಇದರ ಜೊತೆಗೆ ಮುನ್‍ಸ್ಟರ್‌ ಪ್ಲಾಟ್ಜ್‌ ಕ್ಯಾಥೆಡ್ರೆಲ್ ಪಕ್ಕದಲ್ಲಿ ಹೊಸ ಮಾರುಕಟ್ಟೆಯಿದೆ. ಕ್ಲಾರಾ ಪ್ಲಾಟ್ಜ್‌ನ ರೈನ್ ನದಿ ಬಲದಂಡೆಯಲ್ಲಿ ಚಿಕ್ಕ ಮಾರುಕಟ್ಟೆಯಿದೆ. ಈ ಮೂರೂ ಮಾರುಕಟ್ಟೆಗಳು ಒಂದರಿಂದ ಮತ್ತೊಂದಕ್ಕೆ ಸುಲಭವಾಗಿ ನಡೆದು ಹೋಗುವಷ್ಟು ದೂರದಲ್ಲಿದ್ದು ಸುಂದರವಾಗಿ ಅಲಂಕರಿಸಿದ ಬೀದಿಗಳು, ಅಂಗಡಿ ಕಿಟಕಿಗಳು ಮತ್ತು ಮನೆಗಳಿಂದ ಸಂಪರ್ಕವನ್ನು ಹೊಂದಿವೆ. ಬೀದಿಗಳಲ್ಲಿ ಮರದ ಸಣ್ಣ ಅಂಗಡಿಗಳಲ್ಲಿ ಕರಕುಶಲ ವಸ್ತುಗಳು, ಸ್ಠಳೀಯ ಉತ್ಪನ್ನಗಳು ಆಹಾರ ವಿಶೇಷಗಳಾದ ಓಜಿ ಸ್ವಿಸ್ ರಾಕ್ಲೆಟ್ ಮತ್ತು ಪ್ಲಮ್ಕುಚೆನ್ ಎಂಬ ತೆಳುವಾದ ಆಸ್ಟ್ರಿಯನ್ ಪಿಜ್ಜಾಗಳನ್ನು ಮಾರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.